Skip to main content

ರಿಚ್ ಡ್ಯಾಡ್ ಪೂವರ್ ಡ್ಯಾಡ್ ಪುಸ್ತಕದ ಸಾರಾಂಶ ಮತ್ತು ವಿಮರ್ಶೆ


English

 

This is an Amazon affiliate link.



ಪುಸ್ತಕ: ರಿಚ್ ಡ್ಯಾಡ್ ಪೂವರ್ ಡ್ಯಾಡ್. (Rich Dad Poor Dad)

ಲೇಖಕರು: ರಾಬರ್ಟ್ ಟಿ ಕಿಯೊಸಕಿ.

ಮುದ್ರಣ: 2001

ಭಾಷೆ: ಇಂಗ್ಲಿಷ್

ಪುಸ್ತಕದ ಸಂಕ್ಷಿಪ್ತ ಸಾರಾಂಶ:

"ಜನರು ಹಣಕಾಸಿನ ಸಮಸ್ಯೆಗಳೊಂದಿಗೆ ಹೋರಾಡಲು ಮುಖ್ಯ ಕಾರಣವೆಂದರೆ ಅವರು ತುಂಬಾ ವರ್ಷ ಶಾಲೆಗಳಲ್ಲಿ ಕಲಿಯುತ್ತಾರೆ ಆದರೆ ಹಣ ಮತ್ತು ಹೂಡಿಕೆಯ (ಇನ್ವೆಸ್ಟ್ಮೆಂಟ್) ಬಗ್ಗೆ ಏನನ್ನೂ ಕಲಿಯುವುದಿಲ್ಲ. ಇದರಿಂದಾಗಿ, ಜನರು ಹಣವನ್ನು ಗಳಿಸಲು ಕೆಲಸ ಮಾಡಲು ಕಲಿಯುತ್ತಾರೆ. ಆದರೆ ಅವರಿಗೆ ಹಣದಿಂದ ಕೆಲಸ ಮಾಡಿಸಲು ಅಥವಾ ಹಣದಿಂದ ಹಣವನ್ನು ಗಳಿಸಲು ಬರುವುದಿಲ್ಲ."

ಈಗ ನಾವು ಒಂದೊಂದೇ ಪಾಠಗಳನ್ನು ಗಮನಿಸುತ್ತಾ ಹೋಗೋಣ.

ಪರಿಚಯ:

ಬಡತಂದೆಯು ಡಿಪ್ಲೊಮಾ ಮತ್ತು ಪದವೀಧರನಾದರೆ, ಇನ್ನೊಬ್ಬ ಶ್ರೀಮಂತ ತಂದೆಯು, ಹೈ ಸ್ಕೂಲ್ ಡ್ರಾಪೌಟ್!

ಪದವೀಧರ ತಂದೆಯು ತೀರಿಕೊಂಡಾಗ, ಇನ್ನೂ ಹಲವು ಬಿಲ್ಲುಗಳು ಪಾವತಿಸಲು ಬಾಕಿ ಇರುತ್ತದೆ. ಆದರೆ ಅಲ್ಪವಿದ್ಯೆ ಹೊಂದಿದ್ದರೂ ಇನ್ನೊಬ್ಬ ತಂದೆಯು ಹವಾಯಿ ದ್ವೀಪದ ಸಿರಿವಂತರಲ್ಲಿ ಒಬ್ಬನಾಗುತ್ತಾನೆ ಮತ್ತು ತನ್ನ ಮಗನಿಗೆ ತನ್ನ ಸಿರಿವಂತ ಸಾಮ್ರಾಜ್ಯವನ್ನು ಅಂದರೆ ಬಿಸಿನೆಸ್ ಅನ್ನು ವರ್ಗಾಯಿಸುತ್ತಾನೆ.

ಒಬ್ಬರು "ನನ್ನಿಂದ ಅದನ್ನು ಕೊಳ್ಳಲು ಅಥವಾ ಗಳಿಸಲು ಸಾಧ್ಯವಿಲ್ಲ." ಎಂದು ಕೈಚೆಲ್ಲಿ ಕುಳಿತರೆ, ಇನ್ನೊಬ್ಬರು "ನಾನು ಅದನ್ನು ಹೇಗೆ ಪಡೆಯಬಹುದು?" ಎಂದು ಯೋಚಿಸುತ್ತಾರೆ.

ಇಲ್ಲಿ "ಬಡವ ತಂದೆ", "ಶ್ರೀಮಂತ ತಂದೆ" ಎಂಬುದು ಅವರ ಯೋಚನಾ ಶಕ್ತಿ ಹಾಗೂ ವ್ಯವಹಾರ ಜ್ಞಾನದ ಮೇಲೆ ಅವಲಂಬಿತವಾಗಿದೆಯೇ ಹೊರತು, ಅವರ ಆರ್ಥಿಕ ಸ್ಥಾನಮಾನದ ಮೇಲಲ್ಲ. ಇಬ್ಬರ ಬಳಿಯೂ ಹಣವಿತ್ತು, ಆದರೆ ಅದರ ಸದುಪಯೋಗ ಮಾಡಿಕೊಂಡವರು ಈ ರಿಚ್ ಡ್ಯಾಡ್.

ಈ ಪುಸ್ತಕದಲ್ಲಿ ಶ್ರೀಮಂತ ತಂದೆ ಇಬ್ಬರು ಚಿಕ್ಕ ಹುಡುಗರಿಗೆ ತಮ್ಮ ಸ್ವಂತ ಅನುಭವಗಳ ಮೂಲಕ ಹಣದ ಬಗ್ಗೆ ಕೆಲವು ಅಮೂಲ್ಯವಾದ ಪಾಠಗಳನ್ನು ಕಲಿಸುತ್ತಾರೆ. ವ್ಯವಹಾರ ಮತ್ತು ಹೂಡಿಕೆಗಳ ಮೂಲಕ ನಿಮ್ಮ ಸ್ವಂತ ಸಂಪತ್ತನ್ನು ರಚಿಸಲು ನಿಮ್ಮ ಮನಸ್ಸು ಮತ್ತು ನಿಮ್ಮ ಸಮಯವನ್ನು ಹೇಗೆ ಉತ್ತಮವಾಗಿ ಬಳಸುವುದು ಎಂಬುದರ ಕುರಿತು ನಿಸ್ಸಂದೇಹವಾಗಿ ಅರ್ಥಮಾಡಿಕೊಳ್ಳುವುದು ಅತ್ಯಂತ ಮುಖ್ಯವಾದದ್ದು.

ಅದಲ್ಲದೆ ಒಂದೇ ತರಹದ ಕೆಲಸವನ್ನು 365 ದಿನವೂ ಮಾಡುವ, ಜೀವನದ ಕೊನೆಯ ವರೆಗೂ ಹಣ ಗಳಿಸಲು ಒದ್ದಾಡುವ "ರ್ಯಾಟ್ ರೇಸ್" ಅಥವಾ "ಇಲಿಗಳ ಓಟ"ದಿಂದ ಹೊರಬಂದು, ಉತ್ತಮ ಅವಕಾಶಗಳನ್ನು ಸೃಷ್ಟಿಸಿಕೊಂಡು, ಹಣದಿಂದ ಕೆಲಸ ಹೇಗೆ ಮಾಡಿಸುವುದು ಅಥವಾ ದುಪ್ಪಟ್ಟು ಗಳಿಸುವುದನ್ನ ಕಲಿಯಿರಿ, ಹಣದ ಗುಲಾಮ ಆಗಬೇಡಿ. ಎಂಬ ಸಂದೇಶವನ್ನು ಈ ಪುಸ್ತಕ ಹೇಳುತ್ತದೆ.


ರಿಚ್ ಡ್ಯಾಡ್ ಪೂವರ್ ಡ್ಯಾಡ್ ಪುಸ್ತಕದಿಂದ ಕೆಲವು ಜಾಣನುಡಿಗಳು:

  • ನೀನು ನಿನ್ನ ಯೋಚನೆಗಳ ಪ್ರತಿರೂಪ.
  • ಉದ್ಯೋಗ ಅನ್ನೋದು ದೀರ್ಘ ಕಾಲದ ಸಮಸ್ಯೆಗೆ ಕ್ಷಣಿಕ ಪರಿಹಾರ.
  • ಅದೃಷ್ಟ ಬಂದರೂ ಸಹಾ ಗುಲಾಮ, ಗುಲಾಮನೇ!
  • ನಿಮಗೆ ಕಂಪನಿಯನ್ನು ಹೊಂದುವ ಸಾಮರ್ಥ್ಯ ಇದ್ದಾಗ, ಇನ್ನೊಂದು ಕಂಪನಿಯಲ್ಲಿ ಪ್ರಮೋಶನ್ ಗೆ ಯಾಕೆ ಕೆಲಸ ಮಾಡುತ್ತಿರಿ?
  • ಕಾಡಲ್ಲಿ ಕವಲೊಡೆದ ದಾರಿ ಸಿಕ್ಕಿತು, ನಾನು ಕಡಿಮೆ ಜನರು ಹೋದ ದಾರಿಯಲ್ಲಿ ಸಾಗಿದೆ, ಅದು ಇಷ್ಟೆಲ್ಲ ವ್ಯತ್ಯಾಸಕ್ಕೆ ಕಾರಣ ಆಯಿತು.
ಪಾಠ ಸಂಖ್ಯೆ 1: ಶ್ರೀಮಂತರು ಹಣಕ್ಕಾಗಿ ಕೆಲಸ ಮಾಡುವುದಿಲ್ಲ.

ಬಾಲಕ ಕಿಯೋಸಕಿ ತನ್ನ 9 ನೇ ವಯಸ್ಸಿನಲ್ಲಿ ತನ್ನ ಮೊದಲ ಕಂಪನಿಯನ್ನು ಹೇಗೆ ರಚಿಸಿದನು? ಎಂದು ಇಲ್ಲಿ ವಿವರಿಸಲಾಗಿದೆ.

ಲೇಖಕರ ಬಾಲ್ಯ ಸ್ನೇಹಿತ ಮೈಕ್. ಇವನ ತಂದೆಯನ್ನೇ ಕಿಯೋಸಕಿ ಅವರು ತನ್ನ "ರಿಚ್ ಡ್ಯಾಡ್" ಎಂದು ಸಂಭೋದಿಸಿರುವುದು. ಅದೇ ರೀತಿ, "ಪೂವರ್ ಡ್ಯಾಡ್" ಎಂದರೆ ಲೇಖಕರ ಜನ್ಮದಾತ!.

"ಹೆಚ್ಚು ಹಣವನ್ನು ಮಾಡುವುದು ಹೇಗೆ?" ಎಂದು ತಿಳಿಯಲು ಕಿಯೊಸಕಿ ಇವರ ಬಳಿ ಗೆಳೆಯ ಮೈಕ್ ಜೊತೆ ಹೋಗಿದ್ದರು. ಆಗ ಮೈಕ್ ನ ತಂದೆಯು "ನಾನು ಪೆನ್ನು ಕಾಗದ, ಬೋರ್ಡ್ ಹಿಡಿದು ಕಲಿಸುವುದಿಲ್ಲ, ಬದಲಿಗೆ ಇಬ್ಬರಿಗೂ ಪ್ರಾಕ್ಟಿಕಲ್ ಪಾಠ ಹೇಳಿ ಕೊಡುವೆ" ಎಂದು ಇಬ್ಬರ ಬಳಿಯೂ ತನ್ನ ಅಂಗಡಿಗಳಲ್ಲಿ ಒಂದನ್ನು ಸ್ವಚ್ಛಗೊಳಿಸಲು ಹೇಳಿದ್ದರು, ಹಾಗೂ ವಾರಕ್ಕೆ ಹತ್ತು ಸೆಂಟ್ಸ್ (ಅಮೆರಿಕನ್ ಡಾಲರ್) ವೇತನ ನಿಗದಿ ಮಾಡಿದ್ದರು.

ಮೂರು ವಾರಗಳ ಕಾಲ ಕಳೆದ ನಂತರ, ಕಿಯೋಸಕಿಗೆ ಅಷ್ಟು ಕಡಿಮೆ ಸಂಬಳಕ್ಕೆ ಅದನ್ನು ಮಾಡಲು ಮನಸ್ಸಾಗಲಿಲ್ಲ ಮತ್ತು ಕೆಲಸವನ್ನು ಬಿಡುವ ಬಗ್ಗೆ ಅವರು ಯೋಚಿಸಿ, ಮೈಕ್ನ ತಂದೆಯ ಬಳಿ ಇದರ ಬಗ್ಗೆ ಹೇಳಿದರು.

ಪ್ರತ್ಯುತ್ತರವಾಗಿ, ಶ್ರೀಮಂತ ತಂದೆ ಹಣದ ಬಗ್ಗೆ ಹೇಳಿದ ಮೊದಲ ಪಾಠ ಹೀಗಿತ್ತು: "ಕೆಲವರು ಸಂಬಳ ಕಡಿಮೆ ಅಂತ ತಮ್ಮ ಕೆಲಸವನ್ನು ಬಿಟ್ಟುಬಿಡುತ್ತಾರೆ, ಆದರೆ ಇನ್ನೂ ಕೆಲವರು 'ಹೊಸದನ್ನು ಕಲಿಯುವ ಅವಕಾಶ ಸಿಕ್ತು' ಎಂದು ಯೋಚನೆ ಮಾಡ್ತಾರೆ." ನಂತರ ಇಬ್ಬರ ಬಳಿಯೂ ಸಂಬಳವೇ ಇಲ್ಲದೆ, ಉಚಿತವಾಗಿ ಕೆಲಸ ಮಾಡಲು ಹೇಳಿದರು.

ಇದರ ಹಿಂದಿನ ಉದ್ದೇಶ ಏನೆಂದರೆ, "ಫ್ರೀ ಯಾಗಿ ಕೆಲಸ ಮಾಡುವಾಗ ಹಣವನ್ನು ಗಳಿಸುವ ಯಾವುದಾದರೂ ಬೇರೆ ನ್ಯಾಯಯುತ ಮಾರ್ಗವನ್ನು ಹುಡುಗರು ಕಂಡುಕೊಳ್ಳಲ್ಲಿ" ಎಂಬುದಾಗಿತ್ತು.

ಹೀಗೆ, ವೇತನ ರಹಿತ ಕೆಲಸ ಮಾಡುತ್ತಿದ್ದ ಈ ಗೆಳೆಯರಿಗೆ ಒಂದು ದಿನ ಅಂಗಡಿಯ ಸುತ್ತಲೂ ಕೆಲವು ಕಾಮಿಕ್ಸ್ ಪುಸ್ತಕಗಳು ಬಿದ್ದಿರುವುದು ಕಂಡಿತ್ತು. ಇವಿಷ್ಟೇ ಸಾಕಾಗಿತ್ತು ಹಣವನ್ನು ಗಳಿಸುವ ಮಾರ್ಗ ಕಂಡುಕೊಳ್ಳಲು. ಕಾಮಿಕ್ಸ್ ಗಳನ್ನು ಸಂಗ್ರಹಿಸಿದ ಹುಡುಗರು ಒಂದು ಸಣ್ಣ ಗ್ರಂಥಾಲಯವನ್ನು ತೆರೆದು ಅದಕ್ಕೆ ಇಂತಿಷ್ಟು ಶುಲ್ಕವನ್ನು ನಿಗದಿ ಮಾಡಿದ್ದರು. ಮತ್ತು ಈ ಲೈಬ್ರೆರಿ ಯನ್ನು ನೋಡಿಕೊಳ್ಳಲು ಮೈಕ್ ನ ಸಹೋದರಿಗೆ ವಾರಕ್ಕೆ ಒಂದು ಡಾಲರ್ ಸಂಬಳಕ್ಕೆ ನಿಯೋಜಿಸಿದ್ದರು. ಈ ವ್ಯವಹಾರ ಯಶಸ್ವಿಯಾಗಿತ್ತು ಮತ್ತು ವಾರಕ್ಕೆ ಅಂದಾಜು 9.50 ಡಾಲರ್ ಆದಾಯ ಬರುತ್ತಿತ್ತು. ಹೀಗೆ ಅವರ ಮೊದಲ ಬಿಸಿನೆಸ್ ಆರಂಭವಾಗಿತ್ತು.

ಪಾಠ ಸಂಖ್ಯೆ 2: ಆರ್ಥಿಕ ಸಾಕ್ಷರತೆಯನ್ನು ಏಕೆ ಕಲಿಸಬೇಕು?

ನಮಗೆ ಶಾಲೆಯಲ್ಲಿ ಶ್ರೀಮಂತರಾಗಲು ಯಾವತ್ತೂ ಕಲಿಸುವುದಿಲ್ಲ. ಇಂಥ ಶೈಕ್ಷಣಿಕ ವ್ಯವಸ್ಥೆಯಿಂದಲೇ ಬಡವ ಹಾಗೂ ಉಳ್ಳವರ ನಡುವಿನ ಅಂತರ ಹೆಚ್ಚುತ್ತಿದೆಯೇ ಹೊರತು ಅವಕಾಶಗಳ ಕೊರತೆಯಿಂದ ಅಲ್ಲ!

ಈ ಔದ್ಯೋಗಿಕ ವಾತಾವರಣಕ್ಕೆ ಪ್ರವೇಶಿಸಲು ನಿಮಗೆ ಕಲಿಸುವುದೇ ಶಾಲೆಗಳ ಪ್ರಾಥಮಿಕ ಉದ್ದೇಶ ಹಾಗೂ ನಿಮ್ಮನ್ನು ಉತ್ತಮ ಉದ್ಯೋಗಿಯನ್ನಾಗಿಯೇನೋ ಈ ಶಿಕ್ಷಣ ವ್ಯವಸ್ಥೆಯು ಮಾಡುತ್ತದೆ. ಆದರೆ, ಉತ್ತಮ ಉದ್ಯೋಗದಾತನಾಗಿ ಅಲ್ಲ. ಮುಂದಿನ ಎಲ್ಲಾ ವ್ಯತ್ಯಾಸಗಳಿಗೆ ಇದುವೇ ಮೂಲ ಕಾರಣ. ಇದರಿಂದಾಗಿ ಸಂಪತ್ತನ್ನು ಗಳಿಸುವ ವೈಯಕ್ತಿಕ ಹಣಕಾಸು ನಿರ್ವಹಣೆಯ ಜ್ಞಾನವು ಶಾಲೆಗಳಲ್ಲಿ ಸಿಗುವುದೇ ಇಲ್ಲ. ಸೂಕ್ತ ಜ್ಞಾನವನ್ನು ಸಂಪಾದಿಸಿ, ಸ್ವತ್ತುಗಳನ್ನು ಗಳಿಕೆ ಮಾಡುವ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವುದು ನಿಮಗೆ ಬಿಟ್ಟಿದ್ದು.

"ನೀವು ಎಷ್ಟು ಸಂಪಾದಿಸುತ್ತಿದ್ದೀರಿ?" ಎಂಬುದು ಸಮಸ್ಯೆಯಲ್ಲ, ಆದರೆ "ನೀವು ಎಷ್ಟು ಉಳಿಕೆ ಮಾಡುತ್ತೀರಿ?" ಎಂಬುದೇ ಸಮಸ್ಯೆ!

ರ್ಯಾಟ್ ರೇಸ್‌ನಿಂದ ಹೊರಬರುವ ಮೊದಲ ಹೆಜ್ಜೆ:

ಒಂದು ಆಸ್ತಿ (Asset) ಮತ್ತು ಹೊಣೆಗಾರಿಕೆಯ(Liability) ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ. ಆಸ್ತಿಯು ಅದರ ಮಾಲೀಕರಿಗೆ ಆದಾಯವನ್ನು ನೀಡುತ್ತದೆ, ಹಾಗೆಯೇ ಒಂದು ಹೊಣೆಗಾರಿಕೆಯು ಖರ್ಚನ್ನು ಸೃಷ್ಟಿಸುವುದು.

ಕೆಲವು ಉದಾಹರಣೆಗಳು:
ಬಡವರು ಪ್ರತೀ ದಿನವೂ ತಮ್ಮ ಹಣದ ನಿರ್ವಹಣೆಗಾಗಿ ಒದ್ದಾಡುತ್ತಾರೆ, ಮಧ್ಯಮ ವರ್ಗದವರು ಅಸ್ತಿ ಎಂದು ತಿಳಿದು ಹೊಣೆಗಾರಿಕೆಗಳನ್ನು ಖರೀದಿಸುತ್ತಾರೆ ಮತ್ತು ಶ್ರೀಮಂತರು ಮಾತ್ರ ನಿಜವಾದ ಅಸ್ತಿಯನ್ನು ಖರೀದಿ ಮಾಡಿ ತಮ್ಮ ಭವಿಷ್ಯವನ್ನು ಭದ್ರ ಪಡಿಸುತ್ತಾರೆ.

ಮಧ್ಯಮ ವರ್ಗದವರ ಅರ್ಥಿಕ ಸಮಸ್ಯೆಗಳು ಶಾಶ್ವತವೂ, ನಿರಂತರವೂ ಆಗಿರುತ್ತದೆ. ಅವರ ಆದಾಯದ ಮೂಲವೆಂದರೆ ಅವರ ಸಂಬಳ. ಮತ್ತು ಸಂಬಳ ಹೆಚ್ಚಾದಂತೆ, ಅವರು ಸರ್ಕಾರಕ್ಕೆ ಕಟ್ಟುವ ತೆರಿಗೆಯೂ ಹೆಚ್ಚಾಗುತ್ತದೆ.

ಸ್ವತ್ತುಗಳ ವಿಧಗಳು:

ನಿಮ್ಮ ವಾಸದ ಮನೆಯು ನಿಮ್ಮ ಆಸ್ತಿ ಯಾಕಲ್ಲ?

ನಿಮ್ಮ ಮನೆಯನ್ನು ಸಾಲ ಮಾಡಿ ಕಟ್ಟಿಸಿದ್ದರೆ, ತೆಗೆದುಕೊಂಡ ಅಡಮಾನವನ್ನು ಮರುಪಾವತಿಸಲು ನಿಮ್ಮ ಇಡೀ ಜೀವನವನ್ನು ನೀವು ಕೆಲಸ ಮಾಡುತ್ತೀರಿ. ಆ ಮನೆಯ ನಿರ್ವಹಣಾ ವೆಚ್ಚವೂ ಅಧಿಕವಾಗಿರುತ್ತದೆ. ಅದೇ ರೀತಿ ನೀವು ಆಸ್ತಿ ತೆರಿಗೆ ಪಾವತಿಸಬೇಕು. ರಿಯಲ್ ಎಸ್ಟೇಟ್ ಮಾರುಕಟ್ಟೆ ಕುಸಿದರೆ ಅಥವಾ ನೀವು ಅತೀ ಹೆಚ್ಚು ಬೆಲೆ ಇದ್ದಾಗ ಮನೆ ಖರೀದಿಸಿದರೆ, ನಿಮಗೆ ನಷ್ಟ ಉಂಟಾಗಬಹುದು.

ನೀವು ಇಲ್ಲಿ ನಿಯಮಿತ ಮಾಸಿಕ ಆದಾಯ ಗಳಿಸುವುದಿಲ್ಲ; ನಿಮ್ಮ ಮಾಸಿಕ ಕ್ರೆಡಿಟ್ ಅನ್ನು ನೀವು ಬ್ಯಾಂಕ್‌ಗೆ ಮರುಪಾವತಿಸುತ್ತೀರಿ. ಹಾಗಾಗಿ ಸಾಲ ತೀರಿಸುವ ತನಕ ನಿಮ್ಮ ಮನೆಯ ನಿಜವಾದ ಮಾಲೀಕರು ಬ್ಯಾಂಕ್!

ಹಾಗಾಗಿ ಗೃಹ ಸಾಲವನ್ನು ಮಾಡುವ ಮೊದಲು ಅದಕ್ಕೆ ಬೇಕಾದಷ್ಟು ಆದಾಯ ಗಳಿಕೆಯನ್ನು ನೀವು ಕಂಡುಕೊಳ್ಳಬೇಕು.


ನೈಜ ಆಸ್ತಿಗಳು (Real Assets):

1. ನೀವು ಬಾಡಿಗೆಗೆ ನೀಡುವ ಅಪಾರ್ಟ್ಮೆಂಟ್ ಅಥವಾ ರೂಮಿನಿಂದ ನಿಮಗೆ ಮಾಸಿಕ ಬಾಡಿಗೆಯ ಆದಾಯ ಬರುತ್ತದೆ.

2. ನೀವು ನೋಡಿಕೊಳ್ಳದ ಆದರೆ, ನೀವು ಷೇರುದಾರರಾಗಿರುವ ಒಂದು ವ್ಯವಹಾರ.


ಇಲಿ ಓಟದಿಂದ ಹೊರಬರಲು ಮುಖ್ಯ ಹಂತಗಳು:

1. ಆಸ್ತಿ ಮತ್ತು ಹೊಣೆಗಾರಿಕೆಯ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ,

2. ಸ್ಥಿರ ಆದಾಯವನ್ನು ಉತ್ಪಾದಿಸುವ ಆಸ್ತಿಗಳನ್ನು ಖರೀದಿಸಿ.

3. ನಿಮ್ಮ ಸಾಲ ಮತ್ತು ಖರ್ಚುಗಳನ್ನು ಆದಷ್ಟು ಕಡಿಮೆ ಮಾಡಿ.


ಪಾಠ ಸಂಖ್ಯೆ 3: ನಿಮ್ಮ ಸ್ವಂತ ವ್ಯವಹಾರವನ್ನು ಗಮನದಲ್ಲಿಟ್ಟುಕೊಳ್ಳಿ!

ಈಗಿರುವ ಕೆಲಸ ಮಾಡಿ, ಆದರೆ ನಿಮ್ಮ ಸ್ವಂತ ವ್ಯವಹಾರವನ್ನು ಆರಂಬಿಸುವ ಬಗ್ಗೆ ಯಾವಾಗಲೂ ಯೋಚಿಸಿ.

ಕಿಯೋಸಾಕಿ ಅವರು ಜೆರಾಕ್ಸ್‌ ಕಂಪನಿಗಾಗಿ ಫೋಟೊಕಾಪಿಯರ್‌ ಮಷಿನುಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ಅದರ ಆದಾಯವನ್ನು ಬಳಸಿಕೊಂಡು, ಅವರು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿದರು.

ಕೇವಲ 3 ವರ್ಷಗಳಲ್ಲೇ, ಅವರ ಹೂಡಿಕೆಯಿಂದ ಬಂದ ಆದಾಯವು ಸಂಬಳವನ್ನು ಮೀರಿಸಿತ್ತು! ರ್ಯಾಟ್ ರೇಸ್ನಿಂದ ಹೊರಬರಲು ಇದೊಂದೇ ಪರಿಹಾರ ಎಂಬುದು ಕಿಯೋಸಕಿ ಮಾತು.

ಎಲ್ಲಾ ಆದಾಯವನ್ನು ಖರ್ಚು ಮಾಡಬೇಡಿ, ವಿವಿಧ ಅಸ್ತಿಗಳ ಸುಂದರ ಪೋರ್ಟ್ ಫೋಲಿಯೋವನ್ನು ಹೊಂದಿರಿ. ಸಾಕಷ್ಟು ಹಣಗಳಿಸಿದ ನಂತರ, ಅದರಿಂದ ಬಯಸಿದ್ದನ್ನು ಪಡೆಯಿರಿ.

ಪಾಠ ಸಂಖ್ಯೆ 4: ತೆರಿಗೆಗಳ ಇತಿಹಾಸ ಮತ್ತು ನಿಗಮಗಳ ಶಕ್ತಿ

1874 ರಲ್ಲಿ ಆದಾಯ ತೆರಿಗೆಯನ್ನು ಮೊದಲ ಬಾರಿಗೆ ಇಂಗ್ಲೆಂಡ್ ದೇಶವು ಜಾರಿಗೆ ತಂದಿತು. ಇದನ್ನು 1913ರಲ್ಲಿ ಅಮೆರಿಕದಲ್ಲಿ ಪರಿಚಯಿಸಲಾಯಿತು. ಹಣವಂತರಿಂದ ದೇಶದ ಅಭವೃದ್ಧಿಗಾಗಿ ಕೊಡುಗೆಯನ್ನು ಪಡೆಯುವ ಈ ಯೋಜನೆಯು ಕ್ರಮೇಣ ಎಲ್ಲಾ ವರ್ಗದವರಿಗೆ ವಿಸ್ತರಣೆ ಆಯಿತು.

ತೆರಿಗೆಯನ್ನು ತಪ್ಪಿಸಲು ಶ್ರೀಮಂತರು ಉತ್ತಮ ಉಪಾಯವನ್ನು ಹೊಂದಿದ್ದಾರೆ. ಅದೇನೆಂದರೆ ಅವರ ಕಂಪನಿ. ಅವರ ಕಂಪನಿಯು ಅವರಿಗೆ ಅನೇಕ ಅನುಕೂಲಗಳನ್ನು ಮಾಡಿಕೊಡುತ್ತದೆ.

ಸಿರಿವಂತ ಮಾಲೀಕರ ತೆರಿಗೆ ಉಳಿಸುವ ವಿಧಾನ ಇಂತಿದೆ:

ಕಂಪನಿ ಮಾಲೀಕರು ಗಳಿಸಿದ ನಂತರ ತಮಗೆ ಬೇಕಾದಷ್ಟು ಖರ್ಚಿಗೆ ಇಟ್ಟುಕೊಂಡು ನಂತರ ತೆರಿಗೆ ಪಾವತಿಸಿದರೆ, ಅದರ ಉದ್ಯೋಗಿಗಳು ಗಳಿಸಿದ ತಕ್ಷಣವೇ ತೆರಿಗೆ ಪಾವತಿಸಿ ನಂತರ ಉಳಿದ ಹಣವನ್ನು ಉಪಯೋಗಿಸಬೇಕಾಗುತ್ತದೆ.

ಹಣಕಾಸಿನ ಐಕ್ಯೂ(IQ) ಎಂದರೇನು?

  • ಲೆಕ್ಕಪತ್ರಗಳ ಜ್ಞಾನ ಅಂದರೆ ಅಕೌಂಟಿಂಗ್ ಹಾಗೂ ಆಡಿಟಿಂಗ್ ಬಗ್ಗೆ ಅರಿವು ಇರಬೇಕು.
  • ಕೆಲವು ಅನುಭವಿ ಹೂಡಿಕೆದಾರರರೊಂದಿಗೆ ಮಾತನಾಡಿ, ಸೂಕ್ತ ಮಾಹಿತಿಯನ್ನು ಕಲೆ ಹಾಕಬೇಕು. ಷೇರು ಮಾರುಕಟ್ಟೆಗಳ ಸೆಮಿನಾರ್ ಗಳನ್ನು ಕೇಳುವುದು ಸಹ ಉತ್ತಮ.
  • ಮಾರುಕಟ್ಟೆಯ ಕಾನೂನು, ಬೇಡಿಕೆ - ಪೂರೈಕೆ ಗಳ ಬಗ್ಗೆ ಜ್ಞಾನ ಹೊಂದಿರುವ ಅತ್ಯಗತ್ಯ.

ಪಾಠ ಸಂಖ್ಯೆ 5: ಹಣವನ್ನು ಶ್ರೀಮಂತರು ಕಂಡುಹಿಡಿದರು.

ಆರ್ಥಿಕ ಸ್ವಾತಂತ್ರ್ಯಕ್ಕೆ ಮುಖ್ಯವಾಗಿ ಬೇಕಾಗಿರುವುದು ಅದರ ಐಕ್ಯೂ, ಹಾಗೂ ದೃಢ ಆತ್ಮ ವಿಶ್ವಾಸ! ಅದೇ ರೀತಿ ಹೂಡಿಕೆ ಮಾಡುವ ಮೊದಲು ಸ್ವಲ್ಪ ಉಳಿಕೆಯನ್ನು ಮಾಡಬೇಕಾಗುತ್ತದೆ.

"ಸಮಯ ಮತ್ತು ಅವಕಾಶಗಳನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಬೇಕು."

ಮೇಲಿನ ಹೇಳಿಕೆಗೆ ಸಂಬಂಧಿಸಿದಂತೆ, ಒಂದು ಉದಾಹರಣೆಯನ್ನು ನೋಡಿ.

90 ರ ದಶಕದ ಆರಂಭದಲ್ಲಿ, ಫೀನಿಕ್ಸ್‌ ನಗರದ ಆರ್ಥಿಕತೆಯು ಅದರ ಅತ್ಯಂತ ಕಡಿಮೆ ಹಂತದಲ್ಲಿತ್ತು. $100,000 ಗೆ ಖರೀದಿಸಿದ ಮನೆಗಳು $75,000 ಗೆ ಮಾರಾಟವಾಗುತಿದ್ದವು. ಕಿಯೋಸಾಕಿ ಅವರು, ತಾವು ಪಬ್ಲಿಕ್ ಹರಾಜಿನಲ್ಲಿ $20,000 ಗೆ ಕೊಂಡರು. ಆರ್ಥಿಕತೆ ಚೇತರಿಕೆಯಾದಾಗ, $ 60,000 ಗೆ ಮಾರಾಟ ಮಾಡಿ ಉತ್ತಮ ಲಾಭ ಪಡೆದರು.

ರಿಚ್ ಡ್ಯಾಡಿಯ ಪ್ರಕಾರ ಹೂಡಿಕೆ ದಾರರಲ್ಲಿ ಎರಡು ವಿಧಗಳಿವೆ.

1. "ಹೂಡಿಕೆ ಪ್ಯಾಕೇಜುಗಳನ್ನು" ಖರೀದಿಸುವವರು:ನೀವು ನಿಮ್ಮ ಹಣವನ್ನು ರಿಯಲ್ ಎಸ್ಟೇಟ್ ಡೆವಲಪರ್ ಗೆ ಒಪ್ಪಿಸಿದಾಗ ಸುಲಭ ಮತ್ತು ಸ್ಪಷ್ಟವಾಗಿ ಹಣ ಹೂಡಬಹುದು. ಅವ್ರು ನಿಮ್ಮ ಪರವಾಗಿ ಕಾರ್ಯ ಪ್ರವೃತ್ತ ಆಗುತ್ತಾರೆ.

2. ವೃತ್ತಿಪರ ಹೂಡಿಕೆದಾರ: ಶ್ರೀಮಂತ ತಂದೆಯು ಈ ನಡೆಯನ್ನು ಪ್ರೋತ್ಸಾಹಿಸುತ್ತಾರೆ. ನೀವು ಯಾವುದೇ ದಲ್ಲಾಳಿ ಅಥವಾ ಮಧ್ಯವರ್ತಿಗಳ ಸಹಾಯ ಇಲ್ಲದೆ ಹಣ ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿನ ರಿಸ್ಕ್ ಹೆಚ್ಚು, ಆದರೆ ಲಾಭ ಜಾಸ್ತಿ.

ಹೂಡಿಕೆದಾರನಿಗೆ ಇರಬೇಕಾದ ಕೌಶಲ್ಯಗಳು:

1. ಬೇರೆ ಯಾರೂ ಗುರುತಿಸದ ಅವಕಾಶವನ್ನು ಗುರುತಿಸುವುದು.

2. ಹೂಡಿಕೆಗೆ ಹಣ ಒಟ್ಟು ಗೂಡಿಸುವುದು.

3. ಬುದ್ಧಿವಂತ ಜನರೊಂದಿಗೆ ಕೆಲಸ ಮಾಡುವುದು.


ಬೇರೆ ಯಾರೂ ಗುರುತಿಸದ ಅವಕಾಶವನ್ನು ಗುರುತಿಸುವುದು ಹೇಗೆ?

ವ್ಯವಹಾರದ ಬೆಳವಣಿಗೆಗೆ ಸಹಕಾರಿಯಾದ ಅಂಶ ಯಾವುದು ಎಂದು ಮೊದಲು ಗುರುತಿಸಬೇಕು.

ಉದಾ:
ಮೆಕ್ ಡೊನಾಲ್ಡ್ ಅಷ್ಟೊಂದು ಯಶಸ್ವಿಯಾಗಲು ಅದರ ಬರ್ಗರ್ ಕಾರಣ ಅಲ್ಲ. ಬದಲಿಗೆ ಶಾಪ್ ತೆರೆಯಲು ಅವರು ಬಳಸಿಕೊಂಡ ಜಾಗಗಳು. ಅದೇ ರುಚಿಯ ಬರ್ಗರುಗಳನ್ನು ಯಾರು ಬೇಕಾದರೂ ತಯಾರಿಸಬಹುದು. ಅವರ ಪ್ರತಿಯೊಂದು ಬ್ರಾಂಚುಗಳು ನಗರದ ಜನನಿಬಿಡ ಪ್ರದೇಶಗಳಲ್ಲೇ ಸ್ಥಾಪಿತವಾಗಿವೆ.

ಕೊನೆಯದಾಗಿ, ಸ್ವಲ್ಪ ರಿಸ್ಕ್ ತೆಗೆದುಕೊಳ್ಳಲು ಹಾಗೂ ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ನೀವು ಕಲಿಯಬೇಕು ಮತ್ತು ಸದಾ ಕಾಲ ವೈಫಲ್ಯದ ಬಗ್ಗೆಯೇ ಚಿಂತಿಸಬಾರದು.

ಮರುಪ್ರಯತ್ನವೇ ನಿಮಗೆ ಯಶಸ್ಸನ್ನು ಕೊಡುತ್ತದೆ ಹೊರತು ತಕ್ಷಣ ಸಕ್ಸಸ್ ಆಗಬೇಕೆಂಬ ಹಂಬಲವಲ್ಲ.

ಪಾಠ ಸಂಖ್ಯೆ 6: ಕಲಿಯಲು ಕೆಲಸ ಮಾಡಿ - ಹಣಕ್ಕಾಗಿ ಕೆಲಸ ಮಾಡಬೇಡಿ

ಈ ಪಾಠವು ಲೇಖಕರ ಜೀವನದ ಅನುಭವವನ್ನು ಹೇಳುತ್ತಾ ಹೋಗುತ್ತದೆ. ಕಾಲೇಜು ಶಿಕ್ಷಣದ ನಂತರ, ಕಿಯೊಸಕಿ, ಮರೈನ್ ಕಾರ್ಪ್ಸ್ ಸೇರಿದರು. ಅಲ್ಲಿ ಸೈನ್ಯ ನಡೆಸುವುದರ ಜೊತೆಗೆ ವ್ಯವಹಾರದ ಜ್ಞಾನವನ್ನೂ ಅರಿತರು. ಜೆರಾಕ್ಸ್ (Xerox) ಕಂಪನಿಯಲ್ಲಿ ಟಾಪ್ 5 ಸೇಲ್ಸ್ ಮನ್ ಆಗುವ ಮೂಲಕ ನಿರಾಕರಣೆಯನ್ನು (rejection) ಎದುರಿಸುವುದನ್ನು ಕಲಿತರು. ನಂತರ ಸ್ವಂತ ಕಂಪನಿಯನ್ನು ಕಟ್ಟಿದರು.
ಲೇಖಕರು ಅದಲ್ಲದೇ, ಮಾರ್ಕೆಟಿಂಗ್, ನಿರ್ವಹಣೆ ಮತ್ತು ಸಂವಹನದಲ್ಲಿ ಪರಿಣಿತರಾಗಿರಿ ಹಾಗೂ ಹಣದ ನಿರ್ವಹಣೆಯನ್ನು ಮಾಡುವ ವಿಭಿನ್ನ ಶಿಕ್ಷಣವನ್ನು ಕರಗತ ಮಾಡಿಕೊಳ್ಳಿ ಎಂದು ಒತ್ತಿ ಹೇಳಿದ್ದಾರೆ. ಶಾಲೆಯ ರ್ಯಾಂಕ್ ಇಲ್ಲಿ ಕೆಲಸಕ್ಕೆ ಬರುವುದಿಲ್ಲ ಎಂದೂ ಎಚ್ಚರಿಸಿದ್ದಾರೆ.

ಮೇಲಿನ ವಿಷಯಗಳನ್ನು ಶ್ರೀಮಂತ ತಂದೆ ರಾಬರ್ಟ್ ಮತ್ತು ಮೈಕ್‌ಗೆ ಕಲಿಸಿದರು. ಮೈಕ್ ತನ್ನ ತಂದೆಯ ವ್ಯವಹಾರವನ್ನು ವಿಸ್ತರಿಸಿದರೆ, ರಾಬರ್ಟ್ ತನ್ನದೇ ಪ್ರಾಡಕ್ಟ್ಸ್ ಹಾಗೂ ಬಿಸಿನೆಸ್ ಕೋರ್ಸ್ ಗಳನ್ನು ಆರಂಬಿಸಿದರು.

ನಿರ್ವಹಣೆಗೆ (Management) 3 ಅಗತ್ಯ ಕೌಶಲ್ಯಗಳು: ನಗದು ಹರಿವಿನ ನಿರ್ವಹಣೆ, ವ್ಯವಸ್ಥೆಗಳ ನಿರ್ವಹಣೆ ಹಾಗೂ ಜನರ ನಿರ್ವಹಣೆ.

ಆರ್ಥಿಕ ಸ್ವಾತಂತ್ರ್ಯಕ್ಕೆ ಇರುವ 5 ಅಡೆತಡೆಗಳು:

1. ಸೋಲುವೆ ಎಂಬ ಭಯ.

2. ನಿಮ್ಮ ಸುತ್ತ ಮುತ್ತಲಿನ ಜನರ ಅಭಿಪ್ರಾಯಗಳು ಮತ್ತು ಟೀಕೆಗಳು. ಅವರು ಹೆಚ್ಚಾಗಿ ನಿಮ್ಮ ಏಳಿಗೆಯನ್ನು ಬಯಸುವುದೇ ಇಲ್ಲ. (Cynicism)

3. ಸೋಮಾರಿತನ.

4. ನಿಮ್ಮ ಬ್ಯಾಡ್ ಹಾಬಿಟ್ಸ್: ನಿಮ್ಮ ಖರ್ಚನ್ನು ಹೆಚ್ಚಿಸಿ ಆರೋಗ್ಯವನ್ನು ಹಾಳು ಮಾಡುತ್ತವೆ.

5. ಹಣದ ಬಗ್ಗೆ ನಿಮ್ಮ ತಿಳುವಳಿಕೆಯ ಬಗೆಗಿನ ಅಹಂಕಾರ. ಕೆಲವೊಮ್ಮೆ ಪರಿಣಿತರ ಸಹಾಯ ಅಗತ್ಯವಿರುತ್ತದೆ.


ನಿಮ್ಮ ಆರ್ಥಿಕ ತಿಳುವಳಿಕೆಯನ್ನು ಜಾಗೃತಗೊಳಿಸಲು ಕೆಲವು ಸ್ಟೆಪ್ ಗಳು:

1. ಒಮ್ಮೊಮ್ಮೆ ವಾಸ್ತವ / ರಿಯಾಲಿಟಿಯನ್ನು ಬಿಟ್ಟು ಸ್ವಲ್ಪ ಹುಚ್ಚು ಕನಸನ್ನು ಹೊಂದಿ!.

2. "ನೀವು ಆರ್ಥಿಕವಾಗಿ ಸ್ವಾಂತಂತ್ರ್ಯ ಹೊಂದಿದರೆ ಹೇಗಿರಬಹುದು?" ಎಂದು ಕಲ್ಪಿಸಿಕೊಳ್ಳಿ.

3. ಪ್ರತಿದಿನ ನಿಮ್ಮ ಸ್ವೇಚ್ಛಾಚಾರಿತನವನ್ನು ಪರೀಕ್ಷೆಗೆ ಒಳಪಡಿಸಿ.

4. ನಿಮ್ಮ ಸ್ನೇಹಿತರನ್ನು ಆರಿಸುವಾಗ ಎಚ್ಚರಿಕೆ ವಹಿಸಿ

5. ಹಣಕಾಸಿಗೆ ಸಂಬಂಧಿಸಿದ ಹೊಸ ಪಾಠಗಳನ್ನು ದಿನ ನಿತ್ಯ ಕಲಿಯಿರಿ.

6. ಹಣ ದೊರೆತಾಗ ಮೊದಲು ನಿಮಗೇ ಪೇ ಮಾಡಿಕೊಳ್ಳಿ ಅಂದರೆ ಉಳಿತಾಯಕ್ಕೆ ಹಾಕಿ. ನಿಮ್ಮ ಖರ್ಚನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಉಳಿತಾಯವನ್ನು ಪೋಲು ಮಾಡದೆ ಹೂಡಿಕೆ ಮಾಡಿ.

7. ನಿಮಗೋಸ್ಕರ ದುಡಿಯುವವರ ಸಂಬಳದ ಬಗ್ಗೆ ಉದಾರತೆ ತೋರಿ, ಅವರ ಶ್ರಮವೇ ನಿಮ್ಮ ಯಶಸ್ಸಿಗೆ ಕಾರಣ.

8. ಸಾಹಸಿ ಬಂಡವಾಳಗಾರರಂತೆ ವರ್ತಿಸಿ. ಇದು ತ್ವರಿತವಾಗಿ ನಿಮ್ಮ ಬಂಡವಾಳವನ್ನು ಮರು ಗಳಿಸಲು ಸಹಕಾರಿ.

9. ಹೊಸ ವ್ಯವಹಾರಗಳಿಗೆ ತೊಡಗಿಸಿಕೊಳ್ಳಿ. ಸಾಕಷ್ಟು ಆದಾಯ ಬಂದರೆ, ಹೊಸ ವ್ಯವಹಾರಕ್ಕೆ ಹಣ ವಿನಿಯೋಗಿಸಿ.

10. ನಿಮಗೊಂದು ಮಾರ್ಗದರ್ಶಕರನ್ನು ಹುಡುಕಿಕೊಳ್ಳಿ..

11. ಗಳಿಕೆಯಲ್ಲಿ ಸ್ವಲ್ಪ ಭಾಗವನ್ನು ಬೇರೆಯವರಿಗೆ ಫಲಾಪೇಕ್ಷೆ ಇಲ್ಲದೆ ನೀಡಿ ಮತ್ತು ನೀವು ಅದರ ನೂರು ಪಟ್ಟನ್ನು ಪುನಃ ಪಡೆಯುವಿರಿ.

12. ಕಾರ್ಯ ಪ್ರವೃತ್ತತೆಯು ನಿಮ್ಮ ಸದಾಕಾಲದ ಮಿತ್ರ, ಸುದೀರ್ಘವಾದ ಕಾಯುವಿಕೆಯಲ್ಲ!


ನಿಮ್ಮ ಯೋಜನೆಯನ್ನು ಸಾಕಾರಗೊಳಿಸಲು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಹೀಗೆ ಮಾಡಿ:

ಆಗಾಗ್ಗೆ ನಿಮ್ಮ ಕಾರ್ಯಗಳ ಮೌಲ್ಯ ಮಾಪನ ಮಾಡಿ, ಬೇಕು ಬೇಡಗಳನ್ನು ಗಮನಿಸಿ .ಹೊಸ ವಿಚಾರಗಳಿಗಾಗಿ ಹುಡುಕಿ. ಆ ಕ್ಷೇತ್ರದ ಸಾಧಕರನ್ನು ಭೇಟಿ ಮಾಡಿ ನಿಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಿ.

ಸಾಧ್ಯವಾದರೆ ಬೇರೆಯವರಿಗೆ ಫೈನಾನ್ಸ್ ಬಗ್ಗೆ ನೀವೇ ತರಬೇತಿ ನೀಡಿ, ಬೇರೆಡೆ ದೊರೆಯುವ ಕೋರ್ಸ್ಗಳನ್ನು , ಪಾಡ್ ಕಾಸ್ಟ್ ಗಳನ್ನು ಕೊಳ್ಳಿರಿ.

ಬೇರೆ ಬೇರೆ ಆಫರ್ ಗಳನ್ನು ನೀಡಿ, ಭವಿಷ್ಯದ ಗ್ರಾಹಕರನ್ನು ಮೀಟ್ ಮಾಡಿ ಅಭಿಪ್ರಾಯ ಸಂಗ್ರಹಿಸಿ. ಸುತ್ತಮುತ್ತಲಿನ ಜಾಗಗಳಿಗೆ ಹೋಗಿ, ಜಾಹೀರಾತುಗಳನ್ನು ಗಮನಿಸಿ.

ದೊಡ್ಡ ಚಿಂತನೆಗಳನ್ನು ಮಾಡಿ, ಇತಿಹಾಸದಿಂದ ಕಲಿಯಿರಿ, ಬೇರೆ ದೊಡ್ಡ ಉದ್ಯಮಿಗಳ ಸಲಹೆಯನ್ನು ಪಡೆಯಿರಿ.


ವಿಮರ್ಶೆ:

ನಾವು "ಆರ್ಥಿಕ ನಿರ್ವಹಣೆ"ಯ ಬಗ್ಗೆ ಮೊದಲ ಬಾರಿಗೆ ತಿಳಿದುಕೊಳ್ಳಲು ರಾಬರ್ಟ್ ಟಿ ಕಿಯೊಸಕಿ ಬರೆದ ಈ ರಿಚ್ ಡ್ಯಾಡ್ ಪೂರ್ ಡ್ಯಾಡ್ ಉತ್ತಮ ಪುಸ್ತಕ.

ಈ ಪುಸ್ತಕವು "ಎಲ್ಲರೂ ಹುಟ್ಟುತ್ತಲೇ ಶ್ರೀಮಂತರಾಗಿ ಇರುವುದಿಲ್ಲ" ಎಂಬುದನ್ನು ಸಾಕ್ಷಿಯ ಸಮೇತ ನಿರೂಪಿಸುತ್ತದೆ. ಅದೇ ರೀತಿ "ಹಣವನ್ನು ಗಳಿಸಲು ಒಂದು ನಿರ್ದಿಷ್ಟ ಉದ್ಯೋಗದ ಅಗತ್ಯವಿಲ್ಲ; ಆದರೆ ಹಣಕಾಸಿನ ತಿಳುವಳಿಕೆ ಬೇಕು" ಎಂದು ಪುಸ್ತಕವು ಸಾರುತ್ತದೆ. ಒಟ್ಟಾಗಿ ಹೇಳುವುದಾದರೆ, ಇದೊಂದು ಸ್ಪೂರ್ತಿದಾಯಕ, ನೈಜ ಘಟನೆಗಳ ಆಧಾರಿತ ಶೀರ್ಷಿಕೆಯಾಗಿದ್ದು, "ಕಠಿಣ ಶ್ರಮ ಮತ್ತು ಅದೃಷ್ಟ ಜೊತೆಗೂಡಿದರೆ ಮನುಷ್ಯ ಎಷ್ಟು ಎತ್ತರಕ್ಕೆ ಬೇಕಾದರೂ ತಲುಪಬಲ್ಲ!" ಎಂಬುದನ್ನು ತೋರಿಸುತ್ತದೆ.

ಎಲ್ಲರ ಜೀವನದಲ್ಲಿ ಈ ರೀತಿಯ ಸಾಹಸಗಳು ಯಶಸ್ವಿಯಾಗುವ ಸಾಧ್ಯತೆಗಳಿಗಿಂತ ವಿಫಲವಾಗುವ ಸಾಧ್ಯತೆಯೇ ಹೆಚ್ಚು. ಹೂಡಿಕೆಯ ಬಗ್ಗೆ ಹೆಚ್ಚೇನೂ ಮಾಹಿತಿಯನ್ನು ಲೇಖಕರು ಇಲ್ಲಿ ತಿಳಿಸಿಲ್ಲ. ಬದಲಾಗಿ, ಓದುಗರನ್ನು ಹುರಿದುಂಬಿಸಲು ಅನೇಕ ಹೇಳಿಕೆಗಳನ್ನೂ, ಉದಾಹರಣೆಗಳನ್ನೂ ನೀಡಿದ್ದಾರೆ. ಆರ್ಥಿಕ ಸ್ವಾತಂತ್ರವನ್ನು ಹೊಂದಲು ಕೆಲವು ಸಲಹೆಗಳು ಇದರಲ್ಲಿವೆಯೇ ಹೊರತು, ಅದಕ್ಕೆ ಸಂಬಂಧಿಸಿದ ಪ್ರಾಕ್ಟಿಕಲ್ ತರಬೇತಿಯನ್ನು ಲೇಖಕರು ಎಲ್ಲಿಯೂ ನೀಡುವುದಿಲ್ಲ. ಆದರೆ, ಇದೊಂದು "ಬೋರ್ ಹೊಡೆಸದ, ಚೆನ್ನಾಗಿ ಓದಿಸಿಕೊಂಡು ಹೋಗುವ, ಸರಳ ಬರಹಗಳ ಪುಸ್ತಕ" ಎನ್ನುವುದು ನನ್ನ ಅಭಿಪ್ರಾಯ.

ಪುಸ್ತಕದ ಇಂಗ್ಲಿಷ್ ಆವೃತ್ತಿಯನ್ನು ಇಲ್ಲಿ ಖರೀದಿಸಿ: Link.

ಪುಸ್ತಕದ ಕನ್ನಡ ಆವೃತ್ತಿಯನ್ನು ಇಲ್ಲಿ ಖರೀದಿಸಿ: Link.

Comments