Skip to main content

ಮಾವಿನ ಮರ



mango tree
Mango tree


ನಾನು ತುಂಗಾ ನದಿಯ ದಂಡೆಯಲ್ಲಿದ್ದೆ. "ಸರ್ವಕಾಲಿಕ ಮಾವಿನ ಹಣ್ಣಿನ ಮರ”ವನ್ನು ನೋಡಲು, ನಾನು ಈ ನದಿಯನ್ನು ದಾಟಬೇಕಾಗಿತ್ತು. ಸ್ವಲ್ಪ ದೂರದಲ್ಲಿ ಒಬ್ಬ ವೃದ್ಧನು ತನ್ನ ಕೊಡಲಿಯಿಂದ ಉರುವಲುಗಳನ್ನು ಕತ್ತರಿಸುತಿದ್ದ. ನಾನು ಅವನ ಬಳಿ ದೋಣಿಗಳ ಬಗ್ಗೆ ವಿಚಾರಿಸಿದೆ. "ಕೆಲವೇ ದೋಣಿ ಮಾತ್ರ ಆ ಕಡೆ ಹೋಗೋದು." ಎಂದು ಅವನು ಉತ್ತರಿಸಿದ. ನಾನು ದೋಣಿಗಳಿಗಾಗಿ ಕಾಯುತ್ತಾ ಹತ್ತಿರದ ದೊಡ್ಡ ಬಂಡೆಯ ಮೇಲೆ ನಿಂತುಕೊಂಡೆ. ದೂರದಲ್ಲಿ ಮಂಜಿನಿಂದ ಆವೃತವಾದ ಪಶ್ಚಿಮ ಘಟ್ಟಗಳು ಅಲ್ಲಿಂದ ನನಗೆ ಕಾಣಿಸುತಿದ್ದವು. ದೋಣಿಗಳಿಗೆ ಕಾದು ನಿಂತಿದ್ದ ನನಗೆ, ಕಾದು, ಕಾದು ಬೇಸರವಾಗಿತ್ತು. ಸಣ್ಣ ಚಪ್ಪಟೆ ಕಲ್ಲುಗಳನ್ನು ಆರಿಸಿ, ಅವುಗಳನ್ನು ನೀರಿಗೆ ಒಂದೊಂದಾಗಿ ಎಸೆಯಲು ಆರಂಭಿಸಿದ್ದೆ. ಅವುಗಳು ಚೆಂಡಿನಂತೆ ಪುಟಿಯುತ್ತಾ ನೀರಿನ ಮೇಲೆ ಸಾಗುವುದನ್ನು ನೋಡಿ ನನಗೆ ನನ್ನ ಬಾಲ್ಯವು ನೆನಪಿಗೆ ಬಂದಿತ್ತು.

ನಾನು ಪ್ರತೀ ಕಲ್ಲನ್ನು ಎಸೆಯುತಿದ್ದಂತೆ, ನೀರಿನಲ್ಲಿದ್ದ ಮೀನುಗಳು, ಅವುಗಳನ್ನು ಯಾವುದೊ ತಿಂಡಿ ಎಂದು ಭಾವಿಸಿ ಹಿಡಿಯಲು ನೀರಿನಿಂದ ಮೇಲಕ್ಕೆ ಜಿಗಿಯುತಿದ್ದವು. ಆ ನದಿಯಲ್ಲಿ ತುಂಬಾ ಮೀನುಗಳಿದ್ದವು. ಅದುದರಿಂದ, ಕಡೆ ಪಕ್ಷ ಒಂದನ್ನಾದರೂ ಮುಟ್ಟುವ ಆಸೆಯಿಂದ, ಮೆಲ್ಲನೆ ನೀರಿನೊಳಗೆ ಕೈಯನ್ನು ಅದ್ದಿದೆ. ಆದರೆ ಕೂದಲೆಳೆ ಅಂತರದಲ್ಲಿ, ಅವು ಕೈಗೆ ಸಿಗದೆ ತಪ್ಪಿಸಿಕೊಳ್ಳುತಿದ್ದವು.


ನಾನು ಈ ಮೀನುಗಳೊಂದಿಗೆ ಗಾಢವಾದ ಆಟದಲ್ಲಿ ಮುಳುಗಿದ್ದೆ. ನನ್ನ ಹಿಂದೆ ಯಾರೋ ತಮ್ಮ ಗಂಟಲು ಸರಿಪಡಿಸಿಕೊಂಡಂತೆ ಕೇಳಿಸಿತು. ತಿರುಗಿ ನೋಡಿದರೆ, ಸ್ವಲ್ಪ ಹೊತ್ತಿನ ಮುಂಚೆ ಮರವನ್ನು ಕಡಿಯುತ್ತಿದ್ದ ಅದೇ ಮುದುಕ!
"ಹ್ಮ್?" ಎಂದು ನಾನು ಹಿಂಜರಿಯುತ್ತಾ ಅವನ ಕಡೆ ನೋಡಿದೆ. "ಏನಿಲ್ಲ. ಬೀಡಿ ಪಾರ್ಟಿ ಮಾಡೋಣ ಅಂದ್ಕೊಂಡೆ. ನೀವು ನನ್ನ ಜೊತೆ ಬರ್ತೀರಾ?” ಅವನು ಬೀಡಿಗಳ ಪ್ಯಾಕನ್ನು ನನಗೆ ತೋರಿಸಿದ್ದ.
"ಬರೀ ಬೀಡಿನಾ?" ನಾನು ನಿರಾಸಕ್ತಿಯಿಂದ ಕೇಳಿದೆ.
“ಇಲ್ಲ, ನನ್ನ ಹತ್ರ ಸ್ವಲ್ಪ ಕಡಲೆಕಾಯಿನೂ ಇದೆ” ಎಂದ. ನಾನು ಅವನೊಂದಿಗೆ ಟೈಮ್ ಪಾಸ್ ಮಾಡಲು ಸಿದ್ಧನಾಗಿದ್ದೆ, ಆದರೆ ಮಾವಿನ ಮರವನ್ನು ನೋಡುವುದು ನನ್ನ ಕನಸಾಗಿತ್ತು. "ನಿಮ್ಮ ಜೊತೆ ಬರಲು ಯಾವ ತೊಂದರೆಯೂ ಇಲ್ಲ, ಆದರೆ ನನಗೆ ದೋಣಿ ಸಿಕ್ಕಬೇಕು ಅಷ್ಟೇ!” ಎಂದು ಹೇಳಿದೆ.
“ಚಿಂತೆ ಮಾಡಬೇಡಿ ಸಾರ್. ಈ ಪಾರ್ಟಿಯ ನಂತರ, ನಾನು ನಿಮ್ಮನ್ನು ನನ್ನ ದೋಣಿಯಲ್ಲಿ ಅಲ್ಲಿಗೆ ಕರೆದೊಯ್ಯುತ್ತೇನೆ.” ಅವನು ಶಾಂತವಾಗಿ ಉತ್ತರಿಸಿದನು.

"ಅಯ್ಯೋ ಇದೇನು ಹೇಳ್ತಾ ಇದೀರಿ?" ಅವನ ಮಾತಿನಿಂದ ತುಸು ಕೊಪಗೊಂಡಿದ್ದೆ. “ನಾನು ಈ ಗಲೀಜು ಕಲ್ಲಿನ ಮೇಲೆ ಗಂಟೆಗಟ್ಟಲೆ ಬುಡ ಊರ್ಕೊಂಡು ಕೂತ ಮೇಲೆ ಹೇಳ್ತಾ ಇದೀರಲ್ವಾ? ಇದನ್ನ ಮೊದಲೇ ಹೇಳಬಹುದಿತ್ತಲ್ವಾ?”
“ಸಿಟ್ಟು ಮಾಡಿಕೊಳ್ಳಬೇಡಿ ಸರ್. ನಾನು ಎರಡು ದಿನದಿಂದ ಸರಿಯಾಗಿ ಊಟ ಮಾಡಿಲ್ಲ. ಇವತ್ತು ಏನೋ ಅದೃಷ್ಟ ಅನ್ಸುತ್ತೆ! ಸ್ವಲ್ಪ ಅನ್ನ ಸಾಂಬಾರು ಮಾಡ್ತೀನಿ. ಒಲೆ ಹಚ್ಚಕ್ಕೆ ಅಂತ ನಾನು ಸೌದೆ ಕಡಿತಾ ಇದ್ದೆ” ಅವನು ಮುಖವನ್ನು ಸಪ್ಪಗೆ ಮಾಡಿದ್ದ. ನಾನು ಆ ಕ್ಷಣದಲ್ಲೇ ಅವನನ್ನು ಅಡಿಯಿಂದ ಮುಡಿಯವರೆಗೆ ಅಳೆದಿದ್ದೆ. ಅವನ ತೆಳ್ಳಗಿನ ಅಸ್ಥಿಪಂಜರದಂತಹ ದೇಹವು ಅವನ ಮಾತಿಗೆ ಸಾಕ್ಷಿಯಾಗಿತ್ತು. ನನಗೆ ಅವನ ಮೇಲೆ ಕರುಣೆ ಹುಟ್ಟಿತ್ತು. "ಇರಲಿ ಬಿಡಿ. ನಂಗೆ ಗೊತ್ತಾಯ್ತು. ಆದ್ರೆ ನನ್ನ ಪರಿಸ್ಥಿತಿನೂ ಅರ್ಥ ಮಾಡ್ಕೊಳ್ಳಿ. ನಾನು ವಾಪಸ್ ಹೋಗಬೇಕಲ್ವಾ? ತಡ ಮಾಡಿದ್ರೆ ನಾನು ಹೇಗೆ ಹೋಗೋದು?”
"ನೀವು ನನ್ನ ಮನೆಲಿ ಉಳ್ಕೋಬೋದು." ಅವನು ಹಿಂಜರಿಯುತ್ತಲೇ ಹೇಳಿದ. "ಸರಿ! ಆದರೆ ನನಗೆ ಮೀನು ಸಾರು ಬೇಡ. ನಾನು ಮೀನು ತಿನ್ನಲ್ಲ.” ನಾನು ಮುಗುಳ್ನಕ್ಕಿದೆ.
“ನಾನು ಆಲೂಗಡ್ಡೆ ಸಾರು ಮಾಡುತ್ತೇನೆ. ನನ್ನ ಹತ್ರ ಅದೂ ಸ್ವಲ್ಪ ಇದೆ” ಎಂದು ಅವನು ನಗುತ್ತಾ ಉತ್ತರಿಸಿದ.


***


ಈಗ ನಾವು ಅವನ ಗುಡಿಸಲಿನ ಮುಂದೆ ಕುಳಿತಿದ್ದೆವು. ಅವನು ಒಂದಿಷ್ಟು ಕಟ್ಟಿಗೆಗಳನ್ನು ಒಟ್ಟುಮಾಡಿ, ಬೆಂಕಿ ಉರಿಸಿ, ಅದರಲ್ಲೇ ಬೀಡಿ ಹಚ್ಚಿಕೊಂಡು, ವಿಚಿತ್ರ ಶೈಲಿಯಲ್ಲಿ ಬೀಡಿ ಸೇದುತ್ತಿದ್ದ. ನಾನು ಅವನ ಕಣ್ಣುಗಳಲ್ಲಿ ಈಡೇರದೇ ಉರಿದು ಭಸ್ಮವಾಗಿದ್ದ ಅನೇಕ ಕನಸುಗಳನ್ನು ಕಂಡೆ. ಅವನು ಒಂದು ಬೀಡಿಯನ್ನು ನನ್ನ ಕಡೆಗೆ ಚಾಚಿದ. ಈ ಆಫ಼ರ್ ನಿಂದ ನನಗೇನು ಸಂತೋಷ ಆಗಲಿಲ್ಲ ಆದರೆ ನಿರಾಕರಿಸಿ, ಅವನಿಗೆ ಪುನಃ ಬೇಸರಗೊಳಿಸಲು ನಾನು ಸಿದ್ಧನಿರಲಿಲ್ಲ .ಹಾಗಾಗಿ ಸುಮ್ಮನೆ ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದೆ. ಐದು-ಆರು ಬೀಡಿಗಳ ನಂತರ, ಅವನು ಕೆಮ್ಮಲು ಪ್ರಾರಂಭಿಸಿ, ಉಳಿದವುಗಳನ್ನು ಸುತ್ತಿ ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ. "ನಾವು ಹೋಗೋಣವೆ? ತಡವಾಗುತ್ತಿದೆ.” ನಾನು ಅವಸರಿಸಿದೆ.

"ನನ್ನ ಮಕ್ಕಳಿಗೆ ತಿನ್ನಿಸಿದ ನಂತರವೇ ಹೋಗೋದು" ಅವನ ಧ್ವನಿಯು ಸ್ವಲ್ಪ ಗಟ್ಟಿಯಾಯಿತು ಮತ್ತು "ನೀನು ಕಾಯಬೇಕು" ಎಂದು ನನಗೆ ಆದೇಶಿಸುವಂತೆ ಭಾಸವಾಯಿತು. ಈ ಮಾತುಗಳು ನನ್ನನ್ನು ತೀವ್ರವಾಗಿ ಕೆರಳಿಸಿತು. ಆ ಕ್ಷಣವೇ ಅವನ ಮೇಲೆ ನನಗೆ ದ್ವೇಷ ಉಂಟಾಗಿತ್ತು.
"ಸರಿ! ಖಂಡಿತ, ನಾನು ಕಾಯುತ್ತೇನೆ" ನಾನು ಯಾವುದೇ ಅನಾಹುತಕ್ಕೆ ಕಾರಣನಾಗಲು ಸಿದ್ಧನಿರಲಿಲ್ಲ.
ಅವನು ನನ್ನನ್ನು ನದಿಗೆ ಕರೆದೊಯ್ದು, ತನ್ನ ಹರಿದ ಚೀಲದಿಂದ ಅವಲಕ್ಕಿಯನ್ನು ಎಸೆಯಲು ಪ್ರಾರಂಭಿಸಿದನು. ನೀರಲ್ಲಿನ ಮೀನುಗಳು ಅವಲಕ್ಕಿಗಾಗಿ ಕಾದಾಡತೊಡಗಿದವು. ಅವನು ಇನ್ನೊಂದು ಬದಿಯ ಪೊದೆಯ ಬಳಿ ತೆರಳಿ, "ರಾಣಿ... ರಾಣಿ..." ಎಂದು ಕರೆದನು, ಮೂಗುತಿಯನ್ನು ಹೊಂದಿದ್ದ ದಪ್ಪ ಮೀನೊಂದು ಅವಲಕ್ಕಿಯನ್ನು ತಿನ್ನಲು ಈಜುತ್ತಾ ದಂಡೆಯ ಬಳಿಗೆ ಬಂದಿತ್ತು. ಅವನು ಅದಕ್ಕೆ ಕೆಲವು ಹುಳುಗಳನ್ನು ತಿನ್ನಿಸಿದನು. (ಅವಳು ಅವನ ನೆಚ್ಚಿನ ಮಗು ಇರಬೇಕು ಎಂದು ನಾನು ಯೋಚಿಸಿದೆ).

***

ಈಗ ನಾವು ನದಿಯ ಇನ್ನೊಂದು ಬದಿಯಲ್ಲಿದ್ದೆವು. ಮುದುಕ ನನಗೆ ಮಾವಿನ ಮರವನ್ನು ತೋರಿಸಿದನು. ಹಣ್ಣುಗಳಿಂದ ತುಂಬಿದ ಮಾವಿನ ಮರವನ್ನು ನೋಡಿ ನನಗೆ ಆಶ್ಚರ್ಯವಾಯಿತು. (ಅದು ಅಕ್ಟೋಬರ್ ತಿಂಗಳಾಗಿತ್ತು). "ಅದ್ಭುತ!" ನಾನು ಉದ್ಗರಿಸಿದೆ. "ಸಾರ್! ಅದು ಎಂದಿಗೂ ತನ್ನ ಎಲೆಗಳನ್ನು ಉದುರಿಸುವುದಿಲ್ಲ." ಎಂದು ಅವನು ತಿಳಿಸಿದ. "ಓಹ್ ಇನ್ನೂ ಒಂದು ಆಶ್ಚರ್ಯಕರ ವಿಷಯ!" ನಾನು ಮುಗುಳ್ನಕ್ಕೆ. ನಾನು ನನ್ನ ಕ್ಯಾಮೆರಾವನ್ನು ತೆಗೆದುಕೊಂಡು ಎಲ್ಲಾ ಕೋನಗಳಿಂದ ಫೋಟೋಗಳನ್ನು ಕ್ಲಿಕ್ ಮಾಡಿದೆ ಮತ್ತು ತಕ್ಷಣ ಅವುಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಅಪ್‌ಲೋಡ್ ಮಾಡೋಣ ಎಂದರೆ "ಯಾವುದೇ ನೆಟ್‌ವರ್ಕ್ ಇಲ್ಲ" ಎಂದು ಬೇಸರವಾಯಿತು.

ಆ ಮರಕ್ಕೆ ಏಣಿಯೊಂದನ್ನು ಒರಗಿಸಲಾಗಿತ್ತು. ಅವನು ಮೇಲಕ್ಕೆ ಹತ್ತಿ ಹಣ್ಣನ್ನು ಕೀಳಲು ಪ್ರಾರಂಭಿಸಿದನು. “ಸರ್... ಹಿಡೀರಿ...ಹಿಡೀರಿ” ಎಂದು ಮರದ ಮೇಲೆ ಕೋತಿಯಂತೆ ತೂಗಾಡತೊಡಗಿದ್ದನು. ಅವನ ಈ ಉತ್ಸಾಹ ನನ್ನನ್ನು ಅಚ್ಚರಿ ಗೊಳಿಸಿತ್ತು!  

  ಹತ್ತು ಹಣ್ಣುಗಳ ನಂತರ, ನಾನು ಅವನನ್ನು ಕೆಳಗಡೆ ಬರಲು ಹೇಳಿದೆ. ಅವನು ನಿಧಾನವಾಗಿ ಇಳಿದು ಕೆಳಗೆ ಬಂದನು. ನಾನು ಮೂರ್ನಾಲ್ಕು ಹಣ್ಣುಗಳನ್ನು ತಿಂದ ನಂತರ ಅವನು ಮೌನ ಮುರಿದು, "ಹೇಗಿದೆ?" ಎಂದು ಕೇಳಿದ.

“ತುಂಬಾ ಸಿಹಿ ಇದೆ! ನಾನು ಇಷ್ಟೊಂದು ರುಚಿ ಇರೋ ಹಣ್ಣು ಯಾವತ್ತೂ ತಿಂದೇ ಇಲ್ಲ!" ಎಂದು ಉತ್ತರಿಸಿದೆ. ನನ್ನ ಮನದಲ್ಲಿ "ಈ ಮರದ ರಹಸ್ಯವೇನು?" ಎಂದು ತಿಳಿಯುವ ಕುತೂಹಲವಿತ್ತು, ಮತ್ತು ಅದರ ಬಗ್ಗೆ ಅವನನ್ನು ವಿಚಾರಿಸಿದೆ.

“ಸರಿ, ಅದನ್ನು ಎಚ್ಚರಿಕೆಯಿಂದ ನೋಡಿ. ಅದನ್ನು ನೆಲದ ಮೇಲೆ ನೆಟ್ಟಿಲ್ಲ.”

ಈಗ ನಾನು ಕಣ್ಣಗಲಿಸಿ ಮರದ ಕಡೆಗೆ ನೋಡಿದೆ, ಮತ್ತು ನನಗೇ ನನ್ನ ಕಣ್ಣುಗಳನ್ನು ನಂಬಲಾಗಲಿಲ್ಲ; ಮರವನ್ನು ಒಂದು ಸಮಾಧಿಯ ಮೇಲೆ ನೆಡಲಾಗಿತ್ತು! ನಾನು ಹಣ್ಣನ್ನು ತಿನ್ನುವುದನ್ನು ತಕ್ಷಣ ನಿಲ್ಲಿಸಿದ್ದೆ. ಒಂದು ಸಣ್ಣ ಚೂರು ಇನ್ನೂ ನನ್ನ ಬಾಯಿಯೊಳಗೆ ಇತ್ತು. ನಾನು "ಅದನ್ನು ನುಂಗಬೇಕೋ? ಅಥವಾ ಉಗುಳಬೇಕೋ?" ಎಂಬ ಗೊಂದಲದಲ್ಲಿದ್ದೆ.

ಆದರೆ, ನಾನು ಮೂಢನಂಬಿಕೆಗಳನ್ನು ನಂಬುವವನಲ್ಲ; ಹಾಗಾಗಿ, ಬಾಯಲಿದ್ದ ಚೂರನ್ನು ಧೈರ್ಯವಾಗಿ ನುಂಗಿದೆ ಮತ್ತು ಒಂದು ತೇಗು ತೇಗಿದ್ದೆ. ಆದರೆ ನಾನು ಶಾಂತವಾಗಿಯಂತೂ ಇರಲು ಸಾಧ್ಯವಾಗಲೇ ಇಲ್ಲ.

"ಒಳಗಡೆ ಯಾರಿದ್ದಾರೆ?" ನಾನು ಸಮಾಧಿಯತ್ತ ಕೈ ತೋರಿಸಿದೆ.

"ನನ್ನ ಮಗ." ಅವನು ಸಣ್ಣದನಿಯಲ್ಲಿ ಉತ್ತರಿಸಿದ.

“ಓಹ್, ನಾನು ಕೇಳಿದಕ್ಕೆ ಕ್ಷಮೆ ಇರಲಿ. ಆದರೆ ಇದೆಲ್ಲಾ ಹೇಗಾಯ್ತು ಅಂತ ಹೇಳ್ತೀರಾ?"

ಅವನು ಮುಂದುವರಿಸಿದ, “ನಾನು ದೇವಸ್ಥಾನದ ಹತ್ತಿರ ಹೂವಿನ ಅಂಗಡಿ ನಡೆಸುತ್ತಿದ್ದ ಹುಡುಗಿಯನ್ನು ಮದುವೆಯಾದೆ. ನಾನು ದೋಣಿ ನಡೆಸ್ತಾ ಇದ್ದೆ. ನಮ್ಮ ಅಲ್ಪ ಸಂಪಾದನೆಯಲ್ಲಿ ನಮ್ಮ ಜೀವನ ಖುಷಿಯಿಂದ ಸಾಗುತ್ತಾ ಇತ್ತು. ದೇವರ ದಯೆಯಿಂದ ಒಂದು ಗಂಡು ಮಗು ಕೂಡಾ ಆಯಿತು. ಆದರೆ ಏನು ಗ್ರಹಚಾರನೋ ಏನೋ?, ಅವನು ಕೆಟ್ಟ ಜನರ ಸಹವಾಸ ಮಾಡಿದ, ನಾವು ಹೆತ್ತವರು ಹೊರಗಡೆ ಇದ್ದಾಗ, ಅವನು ಕಳ್ಳತನ ಮಾಡೋಕೆ ಶುರು ಮಾಡ್ಕೊಂಡ. ಅದಲ್ಲದೆ, ನನ್ನ ಮಗ ಬೀಡಿ - ಸಿಗರೇಟು, ಸಾರಾಯಿ ಕುಡಿಯೋದು ಎಲ್ಲಾ ಅಭ್ಯಾಸ ಮಾಡಿಕೊಂಡ. ಒಂದು ದಿನ ಅವನು ಕೆಲವು ಶ್ರೀಮಂತರು ಮಕ್ಕಳ ಜೊತೆ ಜಗಳ ಮಾಡ್ಕೊಂಡು, ಮನೆಗೆ ಬಂದು ರೂಮು ಬಾಗಿಲು ಹಾಕಿಕೊಂಡು ಕದ್ದು ಕೂತ. ಅವರು ಅವನನ್ನು ಹುಡುಕಲು ಶುರು ಮಾಡಿದರು. ನಮ್ಮ ಪಕ್ಕದ ಮನೆಯವರು ಈ ಜಗಳದ ಬಗ್ಗೆ ನಮಗೆ ತಿಳಿಸಿದರು, ಮತ್ತು ಅಲ್ಲಿಂದ ತಪ್ಪಿಸಿಕೊಳ್ಳಲು ಸೂಚಿಸಿದರು. ಆ ಸಮಯದಲ್ಲಿ ನನ್ನ ಹೆಂಡತಿ ಮನೆಯಲ್ಲಿ ಇರಲಿಲ್ಲ. ನನಗೆ ಯೋಚನೆ ಮಾಡೋಕೆ ಸಮಯ ಇರ್ಲಿಲ್ಲ, ನಾನು ಅವನನ್ನು ಕರ್ಕೊಂಡು ನನ್ನ ದೋಣಿಯ ಕಡೆಗೆ ಓಡಿದೆ, ವೇಗವಾಗಿ ಹುಟ್ಟು ಹಾಕಿದೆ. ಅವನ ಮೇಲೆ ನನಗಿದ್ದ ಕುರುಡು ಪ್ರೀತಿ ಅವನನ್ನು ನಾನು ಉಳಿಸೋ ಥರ ಮಾಡಿತ್ತು. ಹಿಂಗೆ ಅಲ್ಲಿಂದ ಓಡಿ ಬಂದು ಈ ಜಾಗಕ್ಕೆ ತಲುಪಿ ಚಿಕ್ಕ ಗುಡಿಸಲು ಮಾಡಿಕೊಂಡೆವು. ಅದಾದ ಮೇಲೆ ನಾನು ಒಬ್ಬನೇ ನನ್ನ ಹೆಂಡತಿಯನ್ನು ನೋಡಲು ಆ ಊರಿಗೆ ಪುನಃ ಹೋದೆ. ನಾನು ದಡವನ್ನು ತಲುಪಿದಾಗ, ದೇವಸ್ಥಾನದ ಪುರೋಹಿತರು ನದಿಯಿಂದ ನೀರು ತರೋಕ್ಕೆ ಬಂದಿದ್ದರು, ಅವರು ನನ್ನ ಗುರುತು ಹಿಡಿದು ‘ನಿನ್ನ ಹೆಂಡತಿನಾ ಹುಡುಕುತ್ತಾ ಇದ್ದೀಯ? ಸಾಹುಕಾರರ ಮನೆ ಗೂಂಡಾಗಳು ಅವಳನ್ನು ಸಾಯಿಸಿದರು. ನೀನು ಈಕಡೆ ಬರಲೇ ಬೇಡ. ಓಡ್ಹೋಗಿ, ನಿನ್ನ ಜೀವ ಉಳುಸ್ಕೋ’ ಅಂತ ಹೇಳಿದರು. ನನಗೆ ಸಿಡಿಲು ಹೊಡೆದಂತೆ ಆಗಿತ್ತು. ನಾನು ನನ್ನ ದುಃಖವನ್ನು ನುಂಗಿಕೊಂಡು, ಕನಿಷ್ಠ ಪಕ್ಷ, ‘ನನ್ನ ಮಗ ಅದರೂ ಬದುಕಿ ಉಳಿದನಲ್ಲಾ’ ಅಂತ ನಿಟ್ಟುಸಿರು ಬಿಟ್ಟೆ. ಆದರೆ ಆಗಿದ್ದ ಎಲ್ಲ ಅನಾಹುತಗಳಿಗೂ ಅವನೇ ಕಾರಣ. ನಾನು ವಾಪಸ್ಸು ಬಂದು ಅವನಿಗೆ ಚೆನ್ನಾಗಿ ಹೊಡೆದು, ‘ಎಲ್ಲಾ ನಿನ್ನಿಂದಲೇ ಆಗಿದ್ದು’ ಅಂತ ಕಿರುಚಾಡಿದ್ದೆ. ನಾನು ತುಂಬಾ ಅಳುತ್ತಾ ಇದ್ದೆ. ಅವನು ಮಾತಾಡದೆ, ತಲೆ ತಗ್ಗಿಸಿ ನಿಂತಿದ್ದ. ಇನ್ನೆರಡು - ಮೂರು ದಿನ ನಾನು ಅವನನ್ನ ಸರಿಯಾಗಿ ಮಾತಾಡಿಸಲೇ ಇಲ್ಲ. ಒಂದು ದಿನ ಬೆಳಿಗ್ಗೆ ನಾನು ಕೆಟ್ಟ ಕನಸು ಬಿದ್ದು, ನಿದ್ದೆಯಿಂದ ಎದ್ದು ನನ್ನ ಮಗನ್ನ ಕರೆದೆ, ಆದರೆ ಅವನು ಅಲ್ಲಿ ಇರಲಿಲ್ಲ. ನಾನು ಅವನನ್ನು ಹುಡುಕಿಕೊಂಡು ಹೊರಟೆ. ಸ್ವಲ್ಪ ದೂರ ಹೋದಾಗ, ಪೊದೆಗಳ ಹತ್ರ ಯಾರೋ ನರಳುವ ಥರ ಕೇಳ್ತಾ ಇತ್ತು.ಅಲ್ಲಿಗೆ ಹೋಗಿ ನೋಡಿದಾಗ, ನನ್ನ ಮಗ ನೋವಿನಿಂದ ನೆಲದ ಮೇಲೆ ಬಿದ್ದು, ಒದ್ದಾಡ್ತಾ ಇದ್ದ. 'ಏನಾಯ್ತೋ' ಅಂತ ಕೂಗಿಕೊಂಡು ಅವನ ಹತ್ರ ಓಡಿ ಹೋದೆ. ಆತನಿಗೆ ಹಾವು ಕಚ್ಚಿತ್ತು, ಬಾಯಲ್ಲಿ ನೊರೆ ಬರ್ತಾ ಇತ್ತು. ಅವನು ನನಗೆ ಏನೋ ಹೇಳಕ್ಕೆ ಪ್ರಯತ್ನ ಮಾಡ್ತಾ ಇದ್ದ. ನಾನು ಮಂಡಿಯೂರಿ ಕೂತ್ಕೊಂಡು, ಅವನ ಬಲಗೈ ಹಿಡ್ಕೊಂಡೆ, ‘ಅಪ್ಪಾ..ನಾನು ನಿನಗೆ ಈ ಜನ್ಮದಲ್ಲಿ ಒಳ್ಳೆಯ ಮಗನಾಗಿರಲಿಲ್ಲ. ಆದರೆ ನನಗೆ ಇನ್ನೊಂದು ಜನ್ಮ ಅಂತ ಇದ್ರೆ ಒಳ್ಳೆಯ ಮನುಷ್ಯ ಆಗಿ ಬದುಕ್ತೀನಿ ಅಂತ ಮಾತು ಕೊಡ್ತಾ ಇದ್ದೀನಿ’ ಅವನು ಅಷ್ಟೇ ಹೇಳಿದ್ದು, ನಾನು ನನ್ನ ಉತ್ತರಾಧಿಕಾರಿನ ಕಳಕೊಂಡಿದ್ದೆ. ಅವನ ಎಡಗೈಯಲ್ಲಿ ಒಂದು ಮಾವಿನ ಹಣ್ಣು ಇತ್ತು. ನಾನು ಅವನ್ನ ಅಲ್ಲಿಯೇ ಸಮಾಧಿ ಮಾಡಿ ಅವನ ಸಮಾಧಿಯ ಮೇಲೆ ಅದೇ ಮಾವಿನ ಹಣ್ಣು ನೆಟ್ಟೆ. ಅದೇ ಈಗ ಇಷ್ಟು ದೊಡ್ಡ ಮರ ಆಗಿದೆ. ಇದು ಎಲ್ಲಾ ಕಾಲದಲ್ಲೂ, ಎಲ್ಲರಿಗೂ ಹಣ್ಣು ಕೊಡುತ್ತೆ, ಬಡವ ಶ್ರೀಮಂತ ಅಂತ ನೋಡಲ್ಲ. ನನ್ನ ಮಗನೇ ಈ ಮಾವಿನ ಮರ ಅಗಿರೋದು ಅನ್ನೊದು ನನ್ನ ನಂಬಿಕೆ.” ಎಂದು ಅವನು ನಿಟ್ಟುಸಿರು ಬಿಟ್ಟ.

Comments