ಒಂದು ಹಳ್ಳಿಯಲ್ಲಿ ಒಬ್ಬ ಮುದುಕನಿದ್ದ. ತನ್ನ ಹೆಂಡತಿಯ ಮರಣದ ನಂತರ, ತನ್ನ ಚಿಕ್ಕದಾದ ಮನೆಯಲ್ಲಿ, ಒಬ್ಬನೇ ವಾಸ ಮಾಡುತಿದ್ದ.
![]() |
ಸಾಂದರ್ಭಿಕ ಚಿತ್ರ |
ಅವನ ಇಬ್ಬರು ಹೆಣ್ಣು ಮಕ್ಕಳು, ತಮ್ಮ ಇಬ್ಬರಲ್ಲಿ ಒಬ್ಬರ ಮನೆಯಲ್ಲಿ ಬಂದು ಇರುವಂತೆ ಎಷ್ಟು ಬಾರಿ ಕೇಳಿಕೊಂಡರೂ ಸಹ, ತನ್ನ ಹೆಂಡತಿಯ ನೆನಪಲ್ಲಿ,"ಅದೇ ಹಳೆಯ ಮನೆಯಲ್ಲಿ ಇರುತ್ತೇನೆ" ಎಂದು ಹಠ ಹಿಡಿದು ಕುಳಿತಿದ್ದ.
ಹೀಗೆ ಇರುವಾಗ, ಒಂದು ದಿನ ಇಬ್ಬರು ಹೆಣ್ಣು ಮಕ್ಕಳು, ತಮ್ಮ ಇಬ್ಬರು ಮಕ್ಕಳೊಂದಿಗೆ, ತಂದೆಯ ಮನೆಗೆ ಬೇಸಿಗೆ ರಜೆಯಲ್ಲಿ ಬಂದಿದ್ದರು.
ಮುದುಕನು, ಹಿಂದಿನ ದಿನವೇ ತನ್ನ ಕೈಯಲ್ಲಿ ಸಾಧ್ಯವಾದಷ್ಟು ದಿನಸಿ ಸಾಮಗ್ರಿಗಳನ್ನು ತಂದು ಇಟ್ಟಿದ್ದ. ಅದರಲ್ಲೇ ರುಚಿಕರವಾದ ಅಡುಗೆಯನ್ನು ತಯಾರಿಸಿ ಎಲ್ಲರೂ ಮಧ್ಯಾಹ್ನದ ಊಟವನ್ನು ಮುಗಿಸಿದ್ದರು.
ಮುದುಕ ತನ್ನ ಖುರ್ಚಿಯಲ್ಲಿ ವಿಶ್ರಾಂತಿಗೆ ಮಲಗಿದ್ದ. ನಿದ್ದೆ ಬಂದಂತಾಗಿ ಕಣ್ಣುಗಳನ್ನು ಮುಚ್ಚಿದ. ಸ್ವಲ್ಪ ಸಮಯದ ನಂತರ "ತಾತ...ತಾತ" ಎಂದು ಮೊಮ್ಮಕ್ಕಳು ಕೂಗಿ ಅವನನ್ನು ನಿದ್ದೆಯಿಂದ ಎಬ್ಬಿಸಿದ್ದರು.
ಮುದುಕನ ಬಳಿ ಒಂದು ಹಳೆಯ ಮೊಬೈಲ್ ಇತ್ತು. ಈ ಮೊಬೈಲನ್ನು ಅವನ ಹೆಂಡತಿ ತೀರಿದ ನಂತರ, ಅವನ ಆರೋಗ್ಯವನ್ನು ಆಗಾಗ ವಿಚಾರಿಸಿಕೊಳ್ಳಲು ಅವನ ಮಕ್ಕಳು ಕೊಟ್ಟಿದರು. ಅದರ ಹೋಂ ಸ್ಕ್ರೀನ್ ನಲ್ಲಿ ಅವನ ಫ್ಯಾಮಿಲಿ ಫೋಟೋ ಹಾಕಿದ್ದರು. ಅವನು ಆಗಾಗ ಫೋಟೋ ನೋಡಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತಿದ್ದ.
ನಿದ್ದೆಯಿಂದ ಎಚ್ಚರಗೊಂಡ ತಕ್ಷಣ, "ಸಮಯ ಎಷ್ಟು?" ಎಂದು ತಿಳಿಯಲು ತನ್ನ ಮೊಬೈಲ್ ಗಾಗಿ ತಡಕಾಡಿದ. ಆದರೆ ಅದು ಇರಲಿಲ್ಲ.
"ನನ್ನ ಪೋನು ಕೊಡ್ರೋ" ಎಂದು ತಾತ, ಮೊಮ್ಮಕ್ಕಳ ಹಿಂದೆ ಕೋಪಿಸಿಕೊಂಡು ಹೋಗತೊಡಗಿದ. ಅವರು "ತಾತ ಜೂಟಾಟ ಆಡುತಿದ್ದಾನೆ" ಎಂದುಕೊಂಡು ಅವನಿಂದ ತಪ್ಪಿಸಿಕೊಂಡು ಓಡತೊಡಗಿದರು.
ಸ್ವಲ್ಪ ಹೊತ್ತು ಅವರನ್ನು ಹಿಂಬಾಲಿಸಿದ ಮುದುಕ, ಇನ್ನಷ್ಟು ಕೋಪಗೊಂಡು, ತನ್ನ ಹೆಣ್ಣು ಮಕ್ಕಳನ್ನು ಕರೆಯತೊಡಗಿದ.
"ತಮ್ಮ ಮಕ್ಕಳು. ತಮ್ಮ ತಂದೆಗೆ ಏನೋ ಕೀಟಲೆ ಮಾಡಿರಬೇಕು" ಎಂದುಕೊಂಡು ಹೆಂಗಸರಿಬ್ಬರು, ಎದುರಲ್ಲೇ ಓಡಿಬರುತಿದ್ದ ತಮ್ಮ ಮಕ್ಕಳ ತೋಳುಗಳನ್ನು ಬಲವಾಗಿ ಹಿಡಿದು ನಿಲ್ಲಿಸಿ, "ಏನು ಕಿತಾಪತಿ ಮಾಡಿದ್ರೋ?" ಎಂದು ಬಾರಿಸಲು ಹೋಗಿದ್ದರು. "ನಾವೇನೂ ಮಾಡಿಲ್ಲ" ಎಂದು ಮಕ್ಕಳಿಬ್ಬರೂ ಅಳುಮೋರೆ ಮಾಡಿದ್ದರು. ಈಗ ಹೆಂಗಸರಿಬ್ಬರೂ ತಮ್ಮ ತಂದೆಯ ಮುಖ ನೋಡಿ "ಏನಾಯ್ತಪ್ಪ?" ಎಂದು ಪ್ರಶ್ನಿಸಿದರು.
"ನನ್ನ ಪೋನು ಕಾಣ್ತಾ ಇಲ್ಲ, ನೀವೇ ಉಡುಗೊರೆ ಕೊಟ್ಟಿದ್ದು. ಮಲಗಬೇಕಾದ್ರೆ ಇತ್ತು" ಎಂದ ಮುದುಕ.
"ಇರಲಿಲ್ಲ ತಾತ, ನಮಗೆ ನೋಡಿದ್ದೇ ನೆನಪಿಲ್ಲ!" ಎಂದು ಮೊಮ್ಮಕ್ಕಳು ನೆನಪಿಸಿಕೊಂಡರು.
"ಅಯ್ಯೋ ಹಾಗಾದ್ರೆ ಹುಡುಕಿ, ನಂಗೆ ಅದು ತುಂಬಾ ಮುಖ್ಯ, ನಿಮ್ಮ ಅಜ್ಜಿಯ ನೆನಪಿಗೆ ಅದೊಂದೇ ಉಳಿದಿರೋದು, ಅವಳ ಬೇರೆ ಒಂದೇ ಒಂದು ಚಿತ್ರ ಕೂಡ ಇಲ್ಲ ನನ್ನ ಹತ್ರ" ತಾತನ ಕಣ್ಣುಗಳು ತುಂಬಿಬಂದಿದ್ದವು, ಗಂಟಲು ಕಟ್ಟತೊಡಗಿತ್ತು.
ಐದಾರು ಬಾರಿ ಕರೆ ಮಾಡಿ, ರಿಂಗ್ ಸದ್ದು ಕೇಳಿಸಿಕೊಳ್ಳಲು ಪ್ರಯತ್ನಿಸಿದಾಗ, ಒಮ್ಮೆಯೂ ರಿಂಗ್ ಟೋನ್ ಕೇಳಿಬರಲಿಲ್ಲ.
"ಚಂದೂ, ದೀಪು ಇಬ್ರೂ ಹುಡುಕ್ರೋ ಎಲ್ಲಾ ಕಡೆ" ಎಂದು ಹಿರಿಮಗಳು ಮಕ್ಕಳಿಗೆ ಹೇಳಿದಳು.
"ತಾತ, ಕೊನೆಯ ಸಲ ಎಲ್ಲಿ ನೋಡಿದ್ರಿ ನಿಮ್ಮ ಫೋನ್?" ಚಂದು ಕೇಳಿದ.
"ನೀವೆಲ್ಲಾ ಬರ್ತೀರ, ಸ್ವಲ್ಪ ನೀಟು ಮಾಡೋಣ ಅಂತ, ಎಲ್ಲಾ ಮನೆ ಸಾಮಾನು ಹೊರಗಡೆ ಇಟ್ಟಿದ್ದೆ. ಹೂವಿನ ತೋಟ ಎಲ್ಲ ಕಳೆ ತೆಗಿತಿದ್ದೆ. ನೀರು ಕುಡಿತಾ, ಗಂಟೆ ನೋಡಿದ್ದೆ. ಮಧ್ಯಾಹ್ನ ಹನ್ನೆರಡುವರೆ ಆಗಿತ್ತು. ಅದಾದ ಮೇಲೆ ಕೊಟ್ಟಿಗೆಲಿ ಹಸುವಿಗೆ ಹುಲ್ಲು ಹಾಕಿ, ಸಗಣಿ ಬಾಚಿ, ಕೈಕಾಲು ತೊಳಕ್ಕೊಂಡು ಬಂದು, ಹೊರಗಡೆ ಬಂದು ಜಗಲಿಲಿ ಮಲಗಿದ್ದೆ. ಅದಾದ ಮೇಲೆ ಗಂಟೆ ನೋಡಿದ್ದು ನೆನಪಿಲ್ಲ. ಛೇ ಎಲ್ಲಿ ಹೋಯ್ತೋ ಏನೋ?" ಎಂದು ಮುದುಕ ಚಿಂತೆಗೆ ಬಿದ್ದ.
ಮೊಮ್ಮಕ್ಕಳು ಪರಸ್ಪರ ಮುಖ - ಮುಖ ನೋಡಿಕೊಂಡು ಕೊಟ್ಟಿಗೆಯ ಕಡೆಗೆ ಓಡಿದರು. ಮೊಬೈಲ್ ಫ್ಲಾಶ್ ಹಾಕಿಕೊಂಡು, ಹಸುವನ್ನು ಹೊರಗೆ ಕಟ್ಟಿ, ಹುಲ್ಲಿನ ಕಂತೆಗಳನ್ನು ತಡಕಾಡಿ ಅಸ್ತವ್ಯಸ್ತಗೊಳಿಸಿದರು. ಹಿಂಭಾಗದಲ್ಲಿ ಜೋಡಿಸಿ ಇಟ್ಟಿದ್ದ ಕಟ್ಟಿಗೆಗಳನ್ನು ತೆಗೆಯಲು ಆರಂಭಿಸಿದರು.
ಸುಮಾರು ಒಂದು ಗಂಟೆ ಹುಡುಕಿದರೂ ಮೊಬೈಲ್ ಎಲ್ಲಿಯೂ ಕಾಣಿಸಲಿಲ್ಲ. ಬೇರೆ ಮೊಬೈಲ್ ನಿಂದ ಕರೆ ಮಾಡಿದರೂ, ಎಲ್ಲಿಯೂ ರಿಂಗ್ ಶಬ್ದ ಕೇಳಿ ಬರಲಿಲ್ಲ.
ಸುಸ್ತಾಗಿ ಕೈಚೆಲ್ಲಿ ಕುಳಿತ ಹುಡುಗರಲ್ಲಿ ಒಬ್ಬನಿಗೆ, ಒಂದು ಉಪಾಯ ಹೊಳೆದಿತ್ತು. "ಈ ಬಾರಿ ಯಾವುದೇ ಶಬ್ದ ಮಾಡದೆ, ಟಾರ್ಚ್ ಹಾಕದೆ, ಮಾತನಾಡದೆ ಹುಡುಕೋಣ, ನೀನು ಹೊರಗಡೆಯಿಂದ ಪುನಃ ಕಾಲ್ ಮಾಡು" ಎಂದು ಸಹೋದರನಿಗೆ ತಿಳಿಸಿದ್ದ. ಅದರಂತೆ ದೀಪು ಮೊಬೈಲ್ ಹಿಡಿದುಕೊಂಡು ಫೋನ್ ಮಾಡಲು ಹೊರಗೆ ನಡೆದಿದ್ದ. ಚಂದು "ಎಲ್ಲಿಯಾದರೂ ಫೋನ್ ನ ವೈಬ್ರೇಷನ್ ಆದರೂ ಕೇಳಬಹುದೇ?" ಎಂದು ಗಮನವಿಟ್ಟು ಅಲಿಸತೊಡಗಿದ್ದ. ನಿಧಾನವಾಗಿ ಸೌದೆ ಕೊಟ್ಟಿಗೆಯ ಒಂದೊಂದೇ ಮೂಲೆಗೆ ಚಲಿಸಿದ.
ಮೂರ್ನಾಲ್ಕು ನಿಮಿಷಗಳ ನಂತರ, "ಬ್ರ್... ಬ್ರ್" ಎಂದು ಕಟ್ಟಿಗೆಗಳ ರಾಶಿಯ ಒಳಗಡೆಯಿಂದ ಶಬ್ದವು ಕೇಳತೊಡಗಿತ್ತು. ಅದೇ ರೀತಿ, ಮಂದವಾದ ಬಿಳಿ ಬೆಳಕು ಕಂಡಿತು. ಕೆಳಗೆ ಕುಳಿತು ಇಣುಕಿ ನೋಡಿ, ಒಂದೆರಡು ಕಟ್ಟಿಗೆಗಳನ್ನು ಹುಷಾರಾಗಿ ಹೊರತೆಗೆದ ತಕ್ಷಣ, ಚಂದುವಿನ ಕೈಗೆ ಫೋನ್ ಎಟುಕಿತ್ತು.
"ಸಿಕ್ತು ತಾತ, ಮೊಬೈಲ್ ಸೈಲೆಂಟ್ ಮೋಡಲ್ಲಿ ಇತ್ತು" ಎಂದು ಮೊಬೈಲನ್ನು ಎತ್ತಿ ಹಿಡಿದುಕೊಂಡು, ಖುಷಿಯಿಂದ ಚಂದು ಹೊರಗೆ ಓಡಿದ್ದ.
ಈ ಕಥೆಯನ್ನು spotify ನಲ್ಲಿ ಆಲಿಸಲು ಈ ಲಿಂಕ್ ಒತ್ತಿ.
ಈ ಕಥೆಯ YouTube ವಿಡಿಯೋವನ್ನು ಕೆಳಗೆ ವೀಕ್ಷಿಸಿ. (With English Subtitles)
Comments
Post a Comment