![]() |
ಬಿಳಿ ಬಣ್ಣದ ಬೆಕ್ಕು. |
“ಮಿಯಾಂವ್... ಮಿಯಾಂವ್” ಎಂಬ ಕೂಗನ್ನು ಕೇಳಿ ನಾನು ಎಚ್ಚರಗೊಂಡು, ಅಮ್ಮನನ್ನು ಗದರಿಸಿದೆ, ‘ಯಾಕೆ ಬೆಕ್ಕನ್ನು ಇಲ್ಲಿಗೆ ತಂದಿದ್ದೀಯಾ?’
'ಮಂಗ! ನಾನು ಯಾವುದೇ ಬೆಕ್ಕು ತಂದಿಲ್ಲ. ಅದು ಹೊರಗಡೆಯಿಂದ ಬಂದಿರಬಹುದು.’ ಅಮ್ಮ ಅಡಿಗೆ ಮನೆಯಿಂದಲೇ ಕಿರುಚಿದ್ದಳು.
ಈಗ ನನ್ನ ಕನಸುಗಳು ಹಾರಿ ಹೋಗಿದ್ದವು. ಆ ಬೆಕ್ಕಿನ ಕೂಗು ನನಗೆ ಪದೇ ಪದೆ ಕಿರಿಕಿರಿಯನ್ನು ಉಂಟುಮಾಡುತಿತ್ತು .ಈಗ ನಾನು ಬೆಕ್ಕನ್ನು ಹುಡುಕಿ ಅದಕ್ಕೆ ತಕ್ಕ ಪಾಠವನ್ನು ಕಲಿಸಬೇಕಾಗಿತ್ತು. ನಾನು ಮನೆಯ ಇಂಚಿಂಚೂ ಬಿಡದೆ ಹುಡುಕಿದೆ, ಆದರೆ ನನಗೆ ಅದು ಎಲ್ಲಿಯೂ ಸಿಗಲಿಲ್ಲ.
ಹತಾಶನಾಗಿ, ನಾನು ನನ್ನ ಕೋಣೆಗೆ ಹಿಂತಿರುಗಿ ನೆಲದ ಮೇಲೆ ಮಲಗಿದೆ. ಆ ಸಮಯದಲ್ಲಿ, ಮಂಚದ ಕೆಳಗೆ ಏನೋ ಹೊಳೆಯುತ್ತಿರುವುದನ್ನು ನಾನು ನೋಡಿದೆ. ‘ಅಬ್ಬಾ ಕೊನೆಗೆ ಅದನ್ನು ಹಿಡಿದೆ’ ಎಂದು ನಿಟ್ಟುಸಿರು ಬಿಟ್ಟೆ. ‘ಕಳ್ಳಿ!, ನೀನು ಇಲ್ಲಿದ್ದೀಯಾ? ನಾನು ನಿನಗೋಸ್ಕರ ಎಲ್ಲಾ ಕಡೆ ಹುಡುಕಿದ್ದೆ’ ಎಂದೆ. ನಾನು ಅದನ್ನು ಹಿಡಿಯಲು ಮಂಚದ ಕೆಳಗೆ ತೆವಳಿದೆ ಮತ್ತು ಆಕಸ್ಮಿಕವಾಗಿ ನನ್ನ ತಲೆಯನ್ನು ಮಂಚದ ಅಂಚಿಗೆ ಜೋರಾಗಿ ಹೊಡೆದುಕೊಂಡು, ನೆತ್ತಿಯ ಮೇಲೆ ಒಂದು ಬೋಂಡ ಮೂಡಿತ್ತು! ಬೆಕ್ಕು ತಕ್ಷಣ ಮೂಲೆಗೆ ತೆರಳಿ ತನ್ನ ದೇಹವನ್ನು ಮುದುಡಿಕೊಂಡಿತ್ತು. ಇದರಿಂದ ನಾನು ಅದರನ್ನು ತಲುಪಲು ಸಾಧ್ಯವಾಗಲಿಲ್ಲ. ನಾನು ಅದರ ಕಡೆಗೆ ನನ್ನ ಕೈಯನ್ನು ಚಾಚಿದಾಗ, ಅದು ‘ಮಿಯಾವ್‘ ಎಂದು ಅರಚುತ್ತಾ ತನ್ನ ಪುಟ್ಟ ಪಂಜದಿಂದ ನನ್ನ ಕೈಗೆ ಪರಚತೊಡಗಿತ್ತು.
ಹಲವು ಬಾರಿ ಅದನ್ನು ಹಿಡಿಯಲು ಪ್ರಯತ್ನಿಸಿ ವಿಫಲನಾದ ನನಗೊಂದು ಉಪಾಯ ಸಿಕ್ಕಿತು. ಕೈ ಚಾಚಿ ಅದನ್ನು ಹೆದರಿಸುವ ಬದಲು, ನಾನು ಮಗುವನ್ನು ಕರೆಯುವ ತಾಯಿಯಂತೆ ಅದರನ್ನು ‘ಬಾ.. ಬಾ.. ಏನೂ ಮಾಡಲ್ಲ.. ಬಾ’ ಎಂದು ಕರೆದೆ. ಕೊನೆಗೆ ನಾನೇ ಗೆದ್ದೆ; ಅದು ತುಂಬಾ ಮುದ್ದಾಗಿತ್ತು.ಸಂಪೂರ್ಣವಾಗಿ ಬಿಳಿಯ ಬಣ್ಣವನ್ನು ಹೊಂದಿತ್ತು. ನಾನು ಅದನ್ನು ನನ್ನ ಕೈಯಲ್ಲಿ ತೆಗೆದುಕೊಂಡು ಅದರ ಬೆನ್ನು ಸವರಲು ಪ್ರಾರಂಭಿಸಿದೆ. ಅದು ಯಾರ ಕೈಗೆ ಸಿಕ್ಕರೂ ಅವರೂ ಹೀಗೇ ಮಾಡುತಿದ್ದಾರೆನೋ?
ಕೆಲವು ತಿಂಗಳುಗಳು ಕಳೆದವು. ಅದು ಸಾಕುಪ್ರಾಣಿಗಿಂತಲೂ ಹೆಚ್ಚಾಗಿ ನನ್ನ ಬೆಸ್ಟ್ ಫ್ರೆಂಡ್ ಆಗಿ ಹೋಗಿತ್ತು! ನಮ್ಮ ಜೋಡಿಯು ಮಾರುಕಟ್ಟೆಯನ್ನು ಸುತ್ತುತಿತ್ತು ಮತ್ತು ಅದನ್ನು ಹಲವು ಬಾರಿ ಮೂವಿ ನೋಡಲು ಸಿನೆಮಾ ಥಿಯೇಟರ್ ಗೂ ಕರೆದುಕೊಂಡು ಹೋಗಿದ್ದೆ. ಅಲ್ಲದೆ ಅದು ಕೆಲವೊಮ್ಮೆ ನನ್ನೊಡನೆ ಶಾಲೆಗೂ ಬರುತಿತ್ತು !.
ನಾನು ಪ್ರತೀ ದಿನ ಶಾಲೆ ಮುಗಿಸಿ, ಮನೆಗೆ ಹಿಂದಿರುಗಿದಾಗ, ಬಾಗಿಲಲ್ಲೆ ನನ್ನನ್ನು ಎದುರುಗೊಳ್ಳುತಿತ್ತು, ಓಡಿ ಬಂದು ನನ್ನ ಮೈಯ ಮೇಲೆ ಜಿಗಿದು ನನ್ನ ಮುಖವನ್ನು ನೆಕ್ಕುತ್ತಿತ್ತು. ಮಗುವು ಗೊಂಬೆಗಳೊಂದಿಗೆ ನಿದ್ದೆ ಮಾಡುವಂತೆ ನಾನು ಅದರ ಮೇಲೆ ನನ್ನ ಕೈ ಹಾಕದೆ ಮಲಗಲು ಸಾಧ್ಯವಾಗುತ್ತಲೇ ಇರಲಿಲ್ಲ.
ಒಂದು ಮಳೆಗಾಲದ ದಿನ ನಾನು ಎಂದಿನಂತೆ ಶಾಲೆಯಿಂದ ಮನೆಗೆ ಹಿಂತಿರುಗಿದೆ. ನಾನು ಒಳಗೆ ಪ್ರವೇಶಿಸಿದಾಗ "ಕಿಟ್ಟಿ" ಇರಲಿಲ್ಲ, 'ಇವಳಿಗೆ ಏನಾಯಿತು?, ಎಲ್ಲಿ ಹೋಗಿರಬಹುದು?' ಎಂದು ನಾನು ಯೋಚಿಸಿದೆ, ನಾನು ಅದರ ಹೆಸರನ್ನು ಕರೆಯುತ್ತಲೇ ಇಡೀ ಮನೆಯನ್ನು ಹುಡುಕಿದೆ, ಆದರೆ ಫಲಿತಾಂಶ ಶೂನ್ಯ!
ನಾನು ಬೆಕ್ಕಿನ ಬಗ್ಗೆ ವಿಧಿಯಿಲ್ಲದೆ, ತಾಯಿಯ ಬಳಿ ವಿಚಾರಿಸಿದೆ. "ಏನು? ಯಾವಾಗ ನೋಡಿದರೂ ಕಿಟ್ಟಿ ಕಿಟ್ಟಿ ಅಂತಾ ಹೇಳ್ತಾ ಇರತೀಯಲ್ಲ? ಆಲ್ಲೆ ಎಲ್ಲೋ ಇರಬೇಕು ನೋಡು. ನಿಮ್ಮ ಹತ್ತಿರ ಆಟ ಅಡೋಕೆ ಟೈಮ್ ಇಲ್ಲ ನನ್ನ ಹತ್ತಿರ”. ಈ ರೀತಿಯ ಬೈಗುಳಗಳು ನನಗೆ ಸಾಮಾನ್ಯವಾಗಿದ್ದರಿಂದ ನಾನು ಅಮ್ಮನ ಮಾತನ್ನು ನಿರ್ಲಕ್ಷಿಸಿದ್ದೆ.
ನಾನು ನನ್ನ ‘ಸ್ನೇಹಿತೆ’ಯನ್ನು ಈಗ ಹುಡುಕಬೇಕಾಗಿತ್ತು. ನಾನು ನನ್ನ ಬ್ಯಾಗನ್ನು ಡಸ್ಟ್ ಬಿನ್ ಗೆ ಎಸೆವಂತೆ ಎಸೆದು, ಶೂಗಳನ್ನೂ ಸಹಾ ಧರಿಸದೆ, ಬರಿಗಾಲಿನಲ್ಲಿ ಓಡಲಾರಂಭಿಸಿದೆ. ಫಿಶ್ ಮಾರ್ಕೆಟ್ ಗೆ ಹೋಗಿ, ನನ್ನ ಮೂಗನ್ನು ಬಿಗಿಯಾಗಿ ಹಿಡಿದುಕೊಂಡು ಪ್ರತಿಯೊಂದು ಅಂಗಡಿಯನ್ನು ಬಿಡದೆ, ಹುಡುಕಿದೆ! ಆದರೆ, ನನ್ನ ಕಿಟ್ಟಿ ಎಲ್ಲಿಯೂ ಕಾಣಿಸಲಿಲ್ಲ.
ಈಗ, ಸಂಜೆ ಸೂರ್ಯನು ನನಗೆ ರೆಡ್ ಸಿಗ್ನಲ್ ತೋರಿಸತೊಡಗಿದ್ದನು. ನಾನು ಸಮೀಪದ ಕಟ್ಟೆಯ ಮೇಲೆ ಸ್ವಲ್ಪ ಸಮಯ ವಿಶ್ರಾಂತಿಯನ್ನು ಪಡೆದೆ. ಇನ್ನೂ ಕೆಲವು ನಿಮಿಷಗಳ ನಂತರ ಸೂರ್ಯನು ಪಶ್ಚಿಮ ಘಟ್ಟಗಳ ಹಿಂದೆ ಮುಳುಗುತ್ತಾ ವಿದಾಯ ಹೇಳಿದ್ದನು. ಸುತ್ತಲೂ ಕತ್ತಲಾವರಿಸತೊಡಗಿತ್ತು. ಅಂತಹ ಸಣ್ಣ ವಿಷಯಗಳ ಬಗ್ಗೆ ನಾನು ಎಂದಿಗೂ ಚಿಂತಿಸಲಿಲ್ಲ! ಮತ್ತು ಕತ್ತಲಿಗೆ ಅಂಜಲಿಲ್ಲ. ನಾನು ಮತ್ತೊಮ್ಮೆ ಬೆಕ್ಕಿಗಾಗಿ ಹುಡುಕುತ್ತಾ ಹೊರಟೆ.
ನಾನು ಮುಖ್ಯ ಬೀದಿಯ ಆರನೇ ಕ್ರಾಸ್ ಬಳಿಗೆ ಬಂದೆ. ನನಗೆ ಪಕ್ಕದ ರಸ್ತೆಯಿಂದ ಕೆಲವು ನಾಯಿಗಳ ಬೊಗಳುವಿಕೆ ಹಾಗೂ ಒಂದು ಬೆಕ್ಕಿನ ನರಳಾಟ ಕೇಳುತಿತ್ತು. ನಾನು ಅತ್ತ ಸರಿಯುತಿದ್ದಂತೆ ಬೆಕ್ಕಿನ ಧ್ವನಿಯು ತುಂಬಾ ಪರಿಚಿತವೆನಿಸಿತ್ತು. ನನಗೆ ಅರಿವಿಲ್ಲದಂತೆ ನಾನು ಸಣ್ಣಗೆ ನಡುಗುತ್ತಿದ್ದೆ, ನನ್ನ ಹೃದಯವು ಜೋರಾಗಿ ಬಡಿಯಲು ಪ್ರಾರಂಭಿಸಿತು ಮತ್ತು ಅದು ಮೊದಲಿಗಿಂತ ಹೆಚ್ಚು ಭಾರವಾಯಿತು, ನನ್ನ ಮನಸ್ಸಿನಲ್ಲಿ ನೂರಾರು ಕೆಟ್ಟ ಅನಿಸಿಕೆಗಳು ಮೂಡಲಾರಂಭಿಸಿದವು.
ನಾನು ಅಥ್ಲೀಟ್‌ನಂತೆ ವೇಗವಾಗಿ ಓಡತೊಡಗಿದ್ದೆ. ನನಗೆ ಅರಿವಿಲ್ಲದೆ, ಕೆಲವು ಗಾಜಿನ ಚೂರುಗಳ ಮೇಲೆ ಕಾಲಿಟ್ಟು, ರಕ್ತ ಸುರಿಯಲಾರಂಭಿಸಿತ್ತು , ಮತ್ತು ನಾನು ಹೋದಲ್ಲೆಲ್ಲಾ, ಕೆಂಪು ಹೆಜ್ಜೆಗುರುತುಗಳು ನನ್ನನ್ನು ಹಿಂಬಾಲಿಸಿದವು, ನಾನು ಆದರೂ ಎಲ್ಲೂ ನಿಲ್ಲದೆ ಓಡುತಿದ್ದೆ. ಕೊನೆಗೂ, ಐದಾರು ನಾಯಿಗಳಿಂದ ಸುತ್ತುವರಿದ ನನ್ನ ಕಿಟ್ಟಿಯನ್ನು ನಾನು ಕಂಡೆ. ಕ್ರೂರ ನಾಯಿಗಳು ಅವಳನ್ನು ಅದಾಗಲೇ ಮನಬಂದಂತೆ ಕಚ್ಚಿ, ತೀವ್ರ ಗಾಯಗೊಳಿಸಿದ್ದವು.
ನನ್ನ ಕಣ್ಣುಗಳು ನಿರಂತರವಾಗಿ ಕಲ್ಲುಗಳಿಗಾಗಿ ಹುಡುಕುತ್ತಿದ್ದವು ಮತ್ತು ಅರಿವಿಲ್ಲದೆ ನನ್ನ ಕೈಗಳು ಹಲವಾರು ಕಲ್ಲುಗಳನ್ನು ಆರಿಸಿ ನಾಯಿಗಳ ಮೇಲೆ ಎಸೆಯಲು ಪ್ರಾರಂಭಿಸಿದವು, ಕೊನೆಗೂ ನಾನು ಆ ಬೀದಿ ನಾಯಿಗಳನ್ನು ಓಡಿಸುವಲ್ಲಿ ಯಶಸ್ವಿಯಾದೆ ಮತ್ತು ನನ್ನ ಕಿಟ್ಟಿಯನ್ನು ರಕ್ಷಿಸಲು ಆತುರದಿಂದ ನುಗ್ಗಿ ಅದನ್ನು ಎತ್ತಿಕೊಂಡು ನನ್ನ ಕೈಗಳಲ್ಲಿ ಹಿಡಿದುಕೊಂಡೆ. ನನ್ನ ಮುದ್ದಿನ ಬೆಕ್ಕು ಬಹಳ ಪ್ರಯಾಸದಿಂದ ಉಸಿರು ತೆಗೆದುಕೊಳ್ಳುತಿತ್ತು ಮತ್ತು ಅದರ ದೇಹವು ರಕ್ತದಿಂದ ಒದ್ದೆಯಾಗಿ ಕೆಂಪನೆಯ ಹತ್ತಿಯ ಉಂಡೆಯಂತೆ ತೋರುತ್ತಿತ್ತು. ನಾನು ಅದನ್ನು ವೈದ್ಯನಂತೆ ಪರೀಕ್ಷಿಸಿದೆ; ಅದರ ಎಡಕಿವಿಯು ಸಂಪೂರ್ಣವಾಗಿ ಹರಿದಿತ್ತು, ಕೇವಲ ಸಣ್ಣ ರಂಧ್ರವು ಮಾತ್ರ ಉಳಿದಿತ್ತು. ಬಹಳ ಸಂಕಟದಿಂದ ಬೆಕ್ಕು ನರಳುತಿತ್ತು. ಮತ್ತು ಸರಿಯಾಗಿ ಉಸಿರಾಡಲು ಸಾಧ್ಯವಾಗದೆ, ಕೃತಕ ಉಸಿರಾಟ ನೀಡುವ ಅಗತ್ಯವಿದ್ದಂತೆ ತೋರಿತ್ತು.
ನಾನು ಬೆಕ್ಕನ್ನು ಉಳಿಸಿಕೊಳ್ಳಲು, ಅದರ ಬಾಯಿಗೆ ಊದಿದೆ ಮತ್ತು ಅದರ ಪಂಜಗಳು, ಹೊಟ್ಟೆ ಮತ್ತು ತಲೆಯನ್ನು ಮತ್ತೆ ಮತ್ತೆ ಉಜ್ಜಿದೆ; ನನ್ನ ಕೈಸೋಲುವವರೆಗೂ ಉಜ್ಜುತ್ತಲೇ ಇದ್ದೆ. ಆ ಸಮಯದಲ್ಲಿ, ನಾನು ನನ್ನ ಅಂಗೈಗಳನ್ನು ನೋಡಿದೆ, ಅವುಗಳು ರಕ್ತದಿಂದ ಕೆಂಪಾಗಿ ಹೋಗಿದ್ದವು. ಕಿಟ್ಟಿಯ ದೇಹದಿಂದ ಹರಿದ ರಕ್ತವು ನೆಲದ ಮೇಲೆ ಹನಿಗಳನ್ನು ಉಂಟು ಮಾಡಿತ್ತು. ಪುಟ್ಟ ಮಗುವೊಂದು ತನ್ನ ಗೊಂಬೆಯನ್ನು ಕಳೆದುಕೊಂಡು ಅಳುವಂತೆ ನಾನು ಅಳುತ್ತಿದ್ದೆ. ಅದರ ಪುಟ್ಟ ದೇಹವನ್ನು ನನ್ನ ಕೆನ್ನೆಗೆ ಒತ್ತಿಕೊಂಡು ಆ ಟಾರ್ ರೋಡಿನ ಮೇಲೆ ನಿರ್ಗತಿಕನಂತೆ ಕುಳಿತು ರೋಧಿಸತೊಡಗಿದೆ. ಒಂದೆರಡು ನಿಮಿಷಗಳ ನಂತರ, ಅದು ನನ್ನ ಕೆನ್ನೆಗಳನ್ನು ಎರಡು ಅಥವಾ ಮೂರು ಬಾರಿ ನೆಕ್ಕಿತು. ನನಗೆ ಆನಂದದಿಂದ ಕಣ್ಣೀರು ಹರಿಯತೊಡಗಿತ್ತು, ನಾನು ಅಳುತ್ತಲೇ ನಗುತಿದ್ದೆ.
ಆದರೆ ಆ ದೇವರು ನನ್ನ ಕಿಟ್ಟಿಯನ್ನು ಹಿಂದಿರುಗಿಸದಷ್ಟು ಕ್ರೂರಿಯಾಗಿ ಹೋದನು. ಅವಳು ಥಟ್ಟನೆ ನೆಕ್ಕುವುದನ್ನು ನಿಲ್ಲಿಸಿದಳು. ನಾನು ನನ್ನ ನತದೃಷ್ಟ ಕಣ್ಣುಗಳ ಮುಂದೆ ಅದರ ಪುಟ್ಟ ದೇಹವನ್ನು ಕೊನೆಯ ಬಾರಿ ಹಿಡಿದು ದಿಟ್ಟಿಸಿದೆ. ಆ ಬೆಕ್ಕು ಇನ್ನಿರಲಿಲ್ಲ! ಪ್ರತಿ ಕ್ಷಣಕ್ಕೂ ನನ್ನ ದುಃಖ ದುಪ್ಪಟ್ಟಾಯಿತು, ನಾನು ನಿಂತ ಜಾಗದಲ್ಲೇ ಕುಸಿದು ಕುಳಿತೆ. ನನ್ನ ಕಿಟ್ಟಿಯು ರೆಕ್ಕೆಯನ್ನು ಧರಿಸಿಕೊಂಡು, ಕೈಯಲ್ಲೊಂದು ವೀಣೆಯನ್ನು ನುಡಿಸುತ್ತಾ, ಸ್ವರ್ಗದ ಕಡೆಗೆ ಹಾರುತ್ತಾ ಹೋಗುವುದನ್ನು ಮೂಕನಂತೆ ನೋಡುತ್ತಾ ನಿಂತೆ.
Comments
Post a Comment