ಹೆಕ್ಟರ್ ಗಾರ್ಸಿಯಾ ಮತ್ತು ಫ್ರಾನ್ಸೆಸ್ಕ್ ಮಿಲ್ಲರ್ ಎಂಬುವವರು ಈ ಸುಂದರವಾದ ಸ್ವ-ಸಹಾಯಕ ಪುಸ್ತಕವನ್ನು ಬರೆದಿದ್ದಾರೆ.
ಪುಸ್ತಕವು ಜಪಾನ್‌ನ ದಕ್ಷಿಣದಲ್ಲಿರುವ ಓಕಿನಾವಾದ್ವೀಪಕ್ಕೆ ಲೇಖಕರು ಭೇಟಿ ನೀಡುವುದರೊಂದಿಗೆ ಪ್ರಾರಂಭವಾಗುತ್ತದೆ. ಇದು ಅತಿ ಹೆಚ್ಚು ಶತಾಯುಷಿಗಳು ಅಥವಾ ಒಂದು ಶತಮಾನಕ್ಕೂ ಹೆಚ್ಚು ಕಾಲ ಬದುಕಿರುವ ಜನರನ್ನು ಹೊಂದಿದೆ. 208 ಪುಟಗಳನ್ನು ಒಳಗೊಂಡಿರುವ ಪುಸ್ತಕವನ್ನು ಪೆಂಗ್ವಿನ್ ಬುಕ್ಸ್ ಬಿಡುಗಡೆ ಮಾಡಿದೆ.
ಈಗ ನಿರೂಪಣೆಗೆ ಬರೋಣ. ಓಕಿನಾವಾ ವಿಶ್ವದಲ್ಲೇ ಅತಿ ಹೆಚ್ಚು ಶತಾಯುಷಿಗಳನ್ನು ಹೊಂದಿದೆ. ಹೆಕ್ಟರ್ ಮತ್ತು ಮಿಲ್ಲರ್ ಅವರು ಸುದೀರ್ಘ ಜೀವನದ ರಹಸ್ಯವನ್ನು ಕಂಡುಹಿಡಿಯಲು ಮತ್ತು ಸ್ಥಳೀಯ ವೃದ್ಧರನ್ನು ಸಂದರ್ಶಿಸಲು ಅಲ್ಲಿಗೆ ಹೋಗುತ್ತಾರೆ. ಅವರು ಇಕಿಗೈಯ ನಿಜವಾದ ಅರ್ಥವನ್ನು ಕಂಡುಕೊಳ್ಳುವ ಪ್ರಯತ್ನವನ್ನೂ ಅಲ್ಲಿ ಮಾಡುತ್ತಾರೆ.
ಆದಾಗ್ಯೂ, ಈ ಶೀರ್ಷಿಕೆಯು ಕೇವಲ ಜಪಾನಿನ ತಂತ್ರಗಳನ್ನು ಮಾತ್ರ ಒಳಗೊಳ್ಳುವುದಿಲ್ಲ, ಜೊತೆಗೆ, ಲೇಖಕರು ಪ್ರಪಂಚದ ಇತರ ಪ್ರದೇಶಗಳ ಬಗ್ಗೆ, ಅಲ್ಲಿನ ವೈವಿಧ್ಯಮಯ ಸಂಸ್ಕೃತಿಗಳನ್ನು ಪರಿಚಯಿಸುತ್ತಾರೆ. ಉದಾಹರಣೆಗೆ, ಭಾರತದ ಯೋಗಾಭ್ಯಾಸಗಳನ್ನು ಅವರು ತಿಳಿಸುತ್ತಾರೆ.
ನಾನು ಮೊದಲೇ ಹೇಳಿದಂತೆ, ಇದು ಸೆಲ್ಫ್ ಹೆಲ್ಪ್ ಪಸ್ತಕವಾಗಿದೆ. ಹಾಗಾಗಿ, ಇದರಲ್ಲಿ ಒಬ್ಬ ಹುಡುಗನು, ಒಂದು ಹುಡುಗಿಯನ್ನು ಭೇಟಿಯಾಗುತ್ತಾನೆ ಮತ್ತು ಹಲವು ತಿರುವುಗಳೊಂದಿಗೆ, ಅಡೆತಡೆಗಳನ್ನು ಎದುರಿಸುತ್ತಾನೆ ಎಂಬ ಕಥೆಯಿರುವ, ಆಸಕ್ತಿದಾಯಕವಾಗಿರುವ ಕಾದಂಬರಿಯಂತೂ ಅಲ್ಲವೇ ಅಲ್ಲ!
ಒಟ್ಟಾರೆಯಾಗಿ, ಅನುಭವ, ಸಲಹೆಗಳು ಮತ್ತು ಅಭ್ಯಾಸಗಳ ಮೂಲಕ ನಿಮ್ಮ ಇಕಿಗೈಯನ್ನು ಕಂಡುಹಿಡಿದು, ದೀರ್ಘ ಮತ್ತು ಉತ್ತಮ ಜೀವನವನ್ನು ಹೇಗೆ ಬದುಕಬೇಕು ಎಂಬುದನ್ನು ಪುಸ್ತಕವು ವಿವರಿಸುತ್ತದೆ.
ಅತ್ಯುತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಸಂತೋಷದ ಕೀಲಿಕೈ ಯಾವುದು?
ಸಂಶೋಧಕರ ಪ್ರಕಾರ, ನಿಮ್ಮ ಜೀವನಶೈಲಿ, ಸೇವಿಸುವ ಪೋಷಕಾಂಶಗಳು ಮತ್ತು ವಿಶೇಷವಾಗಿ ನೀವು ಅರೆ-ಉಷ್ಣವಲಯದ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಹವಾಮಾನ. ಮತ್ತು, ಸಹಜವಾಗಿ, ನಿಮ್ಮ ಇಕಿಗೈ.
"ಪ್ರತಿಯೊಬ್ಬರೂ ತಮ್ಮದೇ ಆದ ಇಕಿಗೈ ಹೊಂದಿದ್ದಾರೆ" ಆದರೂ ಇದು ಸಾಮರ್ಥ್ಯಗಳು ಮತ್ತು ಮೌಲ್ಯಗಳನ್ನು ಅವಲಂಬಿಸಿ ಪ್ರತಿಯೊಬ್ಬ ವ್ಯಕ್ತಿಗೆ ವಿಶಿಷ್ಟವಾಗಿದೆ. ಇದು ಯಾವಾಗಲೂ ವ್ಯಕ್ತಿಯ ಆಂತರಾತ್ಮವನ್ನು ಪ್ರತಿನಿಧಿಸುತ್ತದೆ ಮತ್ತು ಖುಷಿಯಿಂದ ಮಾಡಿದರೆ, ಸಲೀಸಾಗಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸುತ್ತದೆ. ಸಂತಸಭರಿತ ಹಾಗೂ ಸುದೀರ್ಘ ಜೀವನಕ್ಕೆ ಪುಸ್ತಕದ ಹತ್ತು ಸೂತ್ರಗಳನ್ನು ಈ ಕೆಳಗೆ ನೀಡಲಾಗಿದೆ.
1. ನಿಮ್ಮ ಇಕಿಗೈಯನ್ನು ಹುಡುಕಿ ಮತ್ತು ಅನುಸರಿಸಿ.
ನಿಮ್ಮ ಇಕಿಗೈಯನ್ನು ಕಂಡುಹಿಡಿಯುವುದು ಒಂದು ವಿಷಯವಾದರೆ; ಅದರಿಂದ ಜೀವನೋಪಾಯವನ್ನು ಗಳಿಸುವುದು ಇನ್ನೊಂದು ದೊಡ್ಡ ವಿಷಯ! ಆದ್ದರಿಂದ ನಿಮ್ಮ ಇಕಿಗೈ ಮೂಲಕ ನಿಮ್ಮ ಅನ್ನವನ್ನು ಗಳಿಸುವ ಆಕಾಂಕ್ಷೆ ನಿಮಗಿದ್ದರೆ, ಅದನ್ನು ಪೂರೈಸಲು, ಈ ಕೆಳಗಿನ ನಾಲ್ಕು ಪ್ರಶ್ನೆಗಳನ್ನು ಗಮನದಲ್ಲಿಡಬೇಕು.
1.ನೀವು ಏನನ್ನು ಮಾಡುವುದನ್ನು ಆನಂದಿಸುತ್ತೀರಿ?
2.ನಾನು ಯಾವ ಉದ್ಯೋಗವನ್ನು ಚೆನ್ನಾಗಿ ಮಾಡಬಲ್ಲೆ?
3.ಜಗತ್ತು ನನ್ನಿಂದ ಏನನ್ನು ನಿರೀಕ್ಷಿಸುತ್ತಿದೆ?
4.ನಾನು ಯಾವ ಕೆಲಸದಿಂದ ಗಳಿಸಬಹುದು?
ನಿಮ್ಮ ಇಕಿಗೈಯನ್ನು ನೀವು ತಕ್ಷಣ ಗುರುತಿಸದಿದ್ದರೆ, ನೀವು ಜೀವನದಲ್ಲಿ ಅಲೆದಾಡುತ್ತೀರಿ, ನಿಮ್ಮ ಗುರಿಗಳನ್ನು ನಿರಂತರವಾಗಿ ಬದಲಾಯಿಸುತ್ತೀರಿ ಮತ್ತು ಕೇವಲ ಭೌತಿಕ ಜೀವನವನ್ನು ಅವಲಂಬಿಸಿರುತ್ತೀರಿ ಎಂದು ಲೇಖಕರು ಎಚ್ಚರಿಸುತ್ತಾರೆ.
2. ನಿಧಾನಿಸಿ.
ಯಾವಾಗಲೂ ನಿಧಾನಗತಿಯ ಜೀವಿಸುವ ಓಕಿನಾವಾ ಜನರ ಬಗ್ಗೆ ಬರಹಗಾರರು ಚರ್ಚಿಸುತ್ತಾರೆ. ಗಡಿಬಿಡಿ, ಅವಸರ ಎನ್ನುವುದು ಅವರಿಗೆ ಅನ್ಯಭಾಷೆಯ ಪದ ಎನ್ನುವಷ್ಟು ಅಪರಿಚಿತ! ಅವರು ಎಲ್ಲವನ್ನೂ ಉತ್ಸಾಹ ಮತ್ತು ಗಮನದಿಂದ ಮಾಡುತ್ತಾರೆ. ಪ್ರಶಂಸಾ ಮನೋಭಾವವನ್ನು ಬೆಳೆಸಿಕೊಂಡಿದ್ದಾರೆ, ಹಾಗೂ ಸಂಗೀತ ಮತ್ತು ನೃತ್ಯವನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ.
ಅವರ ದೈನಂದಿನ ಜೀವನ ನಿಧಾನವಾಗಿ ಪ್ರಾರಂಭವಾಗುತ್ತದೆ, ಮತ್ತು ಅವರು ಎಂದಿಗೂ ಇತರರೊಂದಿಗೆ ಮಾತನಾಡುವ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಅವರು ನಿರಂತರವಾಗಿ ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುತ್ತಾರೆ ಮತ್ತು ಪ್ರಸ್ತುತ ಕ್ಷಣದಲ್ಲಿ ಬದುಕುತ್ತಾರೆ. ಹಾಗೂ, ಅವರು ತಮ್ಮ ದೈನಂದಿನ ಜೀವನದಲ್ಲಿ ತಂತ್ರಜ್ಞಾನವನ್ನು ಅಷ್ಟೇನೂ ಬಳಸಿಕೊಳ್ಳುವುದಿಲ್ಲ. ಆದರೆ, ಪ್ರಪಂಚದ ಉಳಿದ ಭಾಗದ ಜನರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಬರೀ ಅವಸರದಲ್ಲಿರುತ್ತಾರೆ.
"ಆತುರತೆಯು, ನಿಮ್ಮ ಕೆಲಸದ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ" ಎಂದು ಲೇಖಕರು ಹೇಳುತ್ತಾರೆ.
3. ಹೊಟ್ಟೆ ತುಂಬಾ ತಿನ್ನಬೇಡಿ.
ಈ ಸಲಹೆಯು ವಿಚಿತ್ರವಾಗಿ ಕಾಣಿಸಬಹುದು, ಆದರೆ ಇದು ಒಂದು ಪ್ರಮುಖ ಸೂತ್ರವಾಗಿದೆ. ಓಕಿನಾವಾದ ಶತಾಯುಷಿಗಳು ತಮ್ಮ ದೀರ್ಘಾಯುಷ್ಯದಲ್ಲಿ ಪ್ರಮುಖ ಅಂಶವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಆಹಾರಕ್ರಮವನ್ನು ಹೆಚ್ಚಾಗಿ ಅನುಸರಿಸುತ್ತಾರೆ.
ಈಗ ನಾವು ಓಕಿನಾವಾ ಆಹಾರಕ್ರಮವನ್ನು ನೋಡೋಣ, ಇದರಲ್ಲಿ ಪ್ರತಿದಿನ ಕನಿಷ್ಠ ಐದು ಬಾರಿ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ಒಳಗೊಂಡಿರುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಹಸಿರು ಚಹಾ/ ಗ್ರೀನ್ ಟೀ, ಸೋಯಾ ಮೊಗ್ಗುಗಳು, ಕಡಲಕಳೆ, ತೋಫು, ಇತ್ಯಾದಿ. ಸಾಮಾನ್ಯ ಸಕ್ಕರೆಯ ಬದಲಿಗೆ ಕಬ್ಬಿನ ಸಕ್ಕರೆಯನ್ನು ಇಲ್ಲಿ ಜನರು ಬಳಸುತ್ತಾರೆ. ಇವರ ಸರಾಸರಿ ದೈನಂದಿನ ಸೇವನೆಯು 1.9 ಕಿಲೋ ಕ್ಯಾಲೋರಿ ಆಗಿದ್ದರೆ, ದೈನಂದಿನ ಉಪ್ಪು ಸೇವನೆಯ ಪ್ರಮಾಣ ಕೇವಲ 7 ಗ್ರಾಂ ಮಾತ್ರ.
ಕನ್ಫ್ಯೂಷಿಯಸ್ ಪರಿಚಯಿಸಿದ "ಹರಾ ಹಚಿಬು" ಎಂಬ ಇನ್ನೊಂದು ಪದ್ಧತಿ ಇದೆ, ಅಂದರೆ " ಹೊಟ್ಟೆ 80 ಭಾಗ ತುಂಬುವಷ್ಟು ಮಾತ್ರ ತಿನ್ನಿರಿ". ಅದಕ್ಕಿಂತ ಹೆಚ್ಚು ತಿನ್ನುವುದರಿಂದ ನಿಮ್ಮ ಜೀರ್ಣಕ್ರಿಯೆ ನಿಧಾನವಾಗಬಹುದು.
ಓಕಿನಾವಾ ಜನರು ಹರಾ ಹಚಿ ಬು ಪದ್ಧತಿಯನ್ನು ಹೇಗೆ ಅನುಸರಿಸುತ್ತಾರೆ?
ಅವರು ತಮ್ಮ ಊಟ ಮಾಡುವಾಗ, ಆಹಾರದ ಮೇಲೆ ಮಾತ್ರ ಗಮನವಿರಿಸಿ, ನಿಧಾನವಾಗಿ, ಮತ್ತು ಸಣ್ಣ ತಟ್ಟೆಗಳಲ್ಲಿ ತಿನ್ನುತ್ತಾರೆ.
4. ಸ್ನೇಹಿತರೊಂದಿಗೆ ಸಮಯ ಕಳೆಯಿರಿ.
ಓಕಿನಾವಾ ಒಂದು ಸಣ್ಣ ಜಪಾನೀಸ್ ದ್ವೀಪವಾಗಿದ್ದು, ಇಲ್ಲಿನ ಎಲ್ಲರಿಗೂ ದ್ವೀಪದ ಪ್ರತಿಯೊಬ್ಬರ ಪರಿಚಯವಿದೆ. ಇಲ್ಲಿನ ಜನರು ಸಮುದಾಯದ ಭಾಗವಾಗಿರಲು ಇಷ್ಟಪಡುತ್ತಾರೆ. ಅವರು ಇನ್ನೊಬ್ಬರ ಅಗತ್ಯಕ್ಕೆ ಯಾವಾಗಲೂ ಇರುತ್ತಾರೆ. ಅವರು ಪ್ರತಿದಿನ ಚಹಾ ಅಥವಾ ಕಾಫಿಗಾಗಿ ಜನರನ್ನು ಭೇಟಿ ಮಾಡುತ್ತಾರೆ ಮತ್ತು ಯಾವಾಗಲೂ ಗೆಳೆಯರಿಗೆಂದು ಸಮಯವನ್ನು ಕೊಡುತ್ತಾರೆ.
ಅವರು "ಮೊವಾಯ್" ಎಂಬ ಸ್ನೇಹ ಸಮುದಾಯವನ್ನು ರಚಿಸುತ್ತಾರೆ. ಈ ಸಂಸ್ಥೆಯು ಸಮಾಜ ಕಲ್ಯಾಣಕ್ಕಾಗಿ ಗಣನೀಯ ಕೊಡುಗೆ ನೀಡುತ್ತದೆ. ಬಾಲ್ಯದಿಂದಲೇ, ಐದು ಮಕ್ಕಳ ಮೋಯಿಯನ್ನು ಈ ಪ್ರದೇಶದಲ್ಲಿ ರಚಿಸಲಾಗುತ್ತದೆ.
ಸ್ನೇಹಿತರು ನಿಮ್ಮ ಮನಸ್ಥಿತಿಯ ಮೇಲೆ ಪ್ರಭಾವ ಬೀರುತ್ತಾರೆ. ಅವರೊಂದಿಗೆ ಸಮಯ ಕಳೆದ ನಂತರ ನಾವು ಸಾಮಾನ್ಯವಾಗಿ ಹರ್ಷಚಿತ್ತದಿಂದ ಮತ್ತು ಧನಾತ್ಮಕವಾಗಿರುತ್ತೇವೆ. ಆದರೆ ಫೇಸ್ಬುಕ್ ಅಥವಾ ಯಾವುದೇ ಟ್ವಿಟರ್ ಸ್ನೇಹಿತರನ್ನು ಹೊಂದುವ ಬಗ್ಗೆ ಲೇಖಕರು ನಮಗೆ ಹೇಳುವುದಿಲ್ಲ.
ಒಕಿನಾವಾದಲ್ಲಿ ಗೆಳೆತನವು, ಧೂಮಪಾನ ಅಥವಾ ಮದ್ಯಪಾನದಂತಹ ಕೆಟ್ಟ ಅಭ್ಯಾಸಗಳ ಮೇಲೆ ನಿಂತಿರದೆ, ಒಂದೇ ರೀತಿಯ ಆಸಕ್ತಿಗಳೊಂದಿಗೆ ಒಬ್ಬರನ್ನೊಬ್ಬರು ಬೆಂಬಲಿಸುವುದರ ಮೇಲೆ ನಿರ್ಮಿಸಲ್ಪಟ್ಟಿದೆ.
5. ನಗು
ಒಕಿನಾವಾ ದ್ವೀಪವು, ಆಗಾಗ್ಗೆ ಆಮದು ಉತ್ಪನ್ನಗಳು ಮತ್ತು ಅಗತ್ಯ ಸೇವೆಗಳ ಕೊರತೆಯನ್ನು ಎದುರಿಸುತ್ತಿದೆ. ಆದರೆ, ಜನರು ತಮ್ಮ ಮುಖದಲ್ಲಿ ನಗುವಿನೊಂದಿಗೆ ಪ್ರತಿ ಸವಾಲನ್ನು ಎದುರಿಸುತ್ತಾರೆ. ಇದು ಅವರಿಗೆ ಸ್ಫೂರ್ತಿ ಮತ್ತು ಶಕ್ತಿಯನ್ನು ನೀಡುತ್ತದೆ. ಅಲ್ಲದೆ, ಅವರು ಸಕಾರಾತ್ಮಕ ಮನೋಭಾವವು ಅವರನ್ನು ಶಾಂತಗೊಳಿಸುತ್ತದೆ ಮತ್ತು ಹೊಸ ಜನರನ್ನು ಭೇಟಿ ಮಾಡಲು ಅನುವು ಮಾಡಿಕೊಡುತ್ತದೆ. ನಗುವುದು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹವನ್ನು ರಿಫ್ರೆಶ್ ಮಾಡುತ್ತದೆ.
6. ಪ್ರಕೃತಿಯೊಂದಿಗೆ ಬೆರೆಯಿರಿ.
ಓಕಿನಾವಾದಲ್ಲಿನ ಪ್ರತಿಯೊಂದು ಮನೆಯೂ ತರಕಾರಿ ತೋಟ ಹೊಂದಿದೆ. ಶಿಕುವಾಸ, ಮಾವು ಮತ್ತು ಚಹಾ ಇಲ್ಲಿನ ಸಾಮಾನ್ಯ ಬೆಳೆಗಳು. ಅವರು ತಮ್ಮ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ ಮತ್ತು ಅಲ್ಲಿ ಹೊಸ ಸ್ನೇಹಿತರನ್ನು ಭೇಟಿ ಮಾಡುತ್ತಾರೆ.
ನೀವು ಸಸ್ಯವರ್ಗದಿಂದ ಸುತ್ತುವರೆದಿರುವಾಗ, ನೀವು ಶ್ವಾಸಕೋಶದ ತೊಂದರೆಗಳು ಅಥವಾ ಕ್ಯಾನ್ಸರ್ ಹೊಂದುವ ಸಾಧ್ಯತೆ ಕಡಿಮೆ. ಹಸಿರು ಬಣ್ಣವನ್ನು ನೋಡುವುದು ನಿಮಗೆ ಸಕಾರಾತ್ಮಕತೆಯನ್ನು ಅನುಭವಿಸಲು ಸಹಾಯ ಮಾಡುತ್ತದೆ, ನಿಮ್ಮ ನರಮಂಡಲವನ್ನು ಶಮನಗೊಳಿಸುತ್ತದೆ ಮತ್ತು ನಿಮ್ಮ ಆಲೋಚನೆಗಳನ್ನು ಶಾಂತಗೊಳಿಸುತ್ತದೆ.
7. ಕೃತಜ್ಞತೆ ಸಲ್ಲಿಸಿ
ಓಕಿನಾವಾನ್‌ಗಳು ಎಲ್ಲರಿಗೂ ಮತ್ತು ಎಲ್ಲದಕ್ಕೂ ಧನ್ಯವಾದ ಹೇಳುವ ಪ್ರವೃತ್ತಿಯನ್ನು ಹೊಂದಿದ್ದಾರೆ. ಇದು ಅವರ ಪೂರ್ವಜರಿಗೆ, ಆಹಾರ ಮತ್ತು ಇತರ ಅಗತ್ಯಗಳಿಗಾಗಿ ಪ್ರಕೃತಿಗೆ, ಮತ್ತು ಅಂತಿಮವಾಗಿ, ಸ್ನೇಹಿತರು ಮತ್ತು ಕುಟುಂಬ ಮತ್ತು ಹಿತೈಷಿಗಳಿಗೆ ಧನ್ಯವಾದಗಳನ್ನು ಒಳಗೊಂಡಿರುತ್ತದೆ.
ಸುಗ್ಗಿಯ ಕಾಲದ ನೆನಪಿಗಾಗಿ, "ನಹಾ" ಎಂದು ಕರೆಯಲ್ಪಡುವ ಹಗ್ಗಜಗ್ಗಾಟವನ್ನು ನಡೆಸಲಾಗುತ್ತದೆ.
ಕೃತಜ್ಞತಾ ಭಾವವು ಜನರನ್ನು ಸಂತೋಷಪಡಿಸುತ್ತದೆ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ಅವರನ್ನು ಆರೋಗ್ಯಕರ ಮತ್ತು ಹೆಚ್ಚು ಸಂತೃಪ್ತರನ್ನಾಗಿ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.
8. ವ್ಯಾಯಾಮ
ಬರಹಗಾರರು ಓಕಿನಾವಾಗೆ ಆಗಮಿಸಿದಾಗ, ಅವರು ಇನ್ನೂ ಸಕ್ರಿಯವಾಗಿರುವ 90 ರ ಹರೆಯದ ವೃದ್ಧರನ್ನು ಗಮನಿಸಿದರು. ಈ ವೃದ್ಧರು, ಮನೆಯಲ್ಲಿ ಉಳಿಯಲು ಮತ್ತು ದಿನವಿಡೀ ದೂರದರ್ಶನವನ್ನು ವೀಕ್ಷಿಸಲು ಇಷ್ಟಪಡುವುದಿಲ್ಲ ಮತ್ತು ಸೂರ್ಯೋದಯದಲ್ಲಿ ಬೆಳಿಗ್ಗೆ ಬೇಗನೆ ಎದ್ದೇಳಲು ಬಯಸುತ್ತಾರೆ. ಪ್ರತಿದಿನ, ಅವರು ಹೆಚ್ಚು ನಡೆಯುತ್ತಾರೆ. ಕ್ಯಾರಿಯೋಕೆ ಮತ್ತು ನೃತ್ಯದಲ್ಲಿ ಭಾಗವಹಿಸುತ್ತಾರೆ.
ಜಿಮ್‌ಗೆ ಹೋಗುವುದು ಮತ್ತು ದೇಹವನ್ನು ಬೆಳೆಸುವುದರಲ್ಲಿ ಅವರಿಗೆ ಆಸಕ್ತಿ ಇಲ್ಲ. ಪ್ರತಿದಿನ ಮುಂಜಾನೆ ಸ್ವಲ್ಪ ವ್ಯಾಯಾಮವು ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಜೀವಸತ್ವಗಳನ್ನು ನೀಡುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ. ಅವರಲ್ಲಿ ಹೆಚ್ಚಿನವರು ಮಾರ್ಷಲ್ ಆರ್ಟ್ಸ್ಸ್ ಕಲಿತವರು.
ತಮ್ಮ ದೇಹವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ನೀವು ಯೋಗ ಅಥವಾ ಥೈ ಚಿ ಅಭ್ಯಾಸವನ್ನು. ಕೂಡಾ ಮಾಡಬಹುದೆಂದು ಲೇಖಕರು ಶಿಫಾರಸು ಮಾಡುತ್ತಾರೆ.
9. ಪ್ರಸ್ತುತ ಕ್ಷಣದಲ್ಲಿ ಬದುಕಿ.
ಇದು ಸಂಪೂರ್ಣವಾಗಿ ಜಪಾನಿಯರಿಗೆ ಅನ್ವಯಿಸುತ್ತದೆ. ಅವರು ಕೈಗೊಳ್ಳುವ ಎಲ್ಲದರಲ್ಲೂ ಅವರ ಬದ್ಧತೆ ಮತ್ತು ತೊಡಗಿಸಿಕೊಳ್ಳುವಿಕೆಯು ನಿಜಕ್ಕೂ ಶ್ಲಾಘನೀಯ.
ನಿರತತೆ (flow) ಎಂದರೆ, ಒಬ್ಬನು ತನ್ನ ಕಾರ್ಯದಲ್ಲಿ ಸಂಪೂರ್ಣವಾಗಿ ಮುಳುಗಿರುವ ಮಾನಸಿಕ ಸ್ಥಿತಿಗಿಂತ ಹೆಚ್ಚೇನೂ ಅಲ್ಲ ಎಂದು ಅವರು ಹೇಳುತ್ತಾರೆ. ಇದು ಗರಿಷ್ಠ ಕಾರ್ಯಕ್ಷಮತೆ ಮತ್ತು ಗಮನವನ್ನು ಒಳಗೊಂಡಿದೆ. ಮತ್ತು ಸಂತೋಷ. ಇದು ಜೀವಂತವಾಗಿರುವ ಅನಿಸಿಕೆ ನೀಡುತ್ತದೆ.
ನೀರಸ ಕೆಲಸವನ್ನು ಮಾಡುವಾಗ ನೀವು ನಿರತತೆಯನ್ನು ಹೇಗೆ ಅಭಿವೃದ್ಧಿಪಡಿಸಬಹುದು?
ನಿಮಗೆ ತಿಳಿದಿರುವ ಸಾಧಾರಣ ಚಟುವಟಿಕೆಯೊಂದಿಗೆ ಪ್ರಾರಂಭಿಸಲು ಅವರು ಶಿಫಾರಸು ಮಾಡುತ್ತಾರೆ. ನಂತರ ಸ್ವಲ್ಪ ಹೆಚ್ಚು ಕಷ್ಟಕರವಾದ ಒಂದಕ್ಕೆ ಹೋಗಿ, ಇತ್ಯಾದಿ. ಅಂತಿಮವಾಗಿ, ಅತ್ಯಂತ ಕಷ್ಟಕರವಾದದನ್ನು ಆರಿಸಿ.
ಅತ್ಯಂತ ಕಷ್ಟಕರವಾದದನ್ನು ಪ್ರಾರಂಭಿಸಬೇಡಿ ಏಕೆಂದರೆ ಅದು ನಿಮಗೆ ಕಿರಿಕಿರಿ ಉಂಟುಮಾಡುತ್ತದೆ ಮತ್ತು ನಿಮ್ಮ ಕಾರ್ಯ ನಿರತತೆಯನ್ನು ಅಡ್ಡಿಪಡಿಸುತ್ತದೆ, ಇದರಿಂದಾಗಿ ನೀವು ಸಂಪೂರ್ಣ ಕೆಲಸವನ್ನೇ ತ್ಯಜಿಸುತ್ತೀರಿ.
ಪ್ರತಿ ರಾತ್ರಿ ಮಲಗುವ ಮುನ್ನ ಬಿಲ್ ಗೇಟ್ಸ್ ತನ್ನ ತಟ್ಟೆಯನ್ನು ತೊಳೆಯುತ್ತಾರೆ. ಇದು ಅವರ ನೆಚ್ಚಿನ ಕಾರ್ಯ. ಇದು ಮನಸ್ಸನ್ನು ಶಾಂತಗೊಳಿಸಲು ಅವರಿಗೆ ಸಹಕರಿಸುತ್ತದೆ. ಅವರು, ಪ್ಲೇಟ್ ನಿಂದ ಆರಂಭಿಸಿ, ನಂತರ ಫೋರ್ಕ್, ಇತ್ಯಾದಿಗಳನ್ನು ತೊಳೆಯುತ್ತಾರೆ.
10. ಎಂದಿಗೂ ನಿವೃತ್ತರಾಗಬೇಡಿ
ಓಕಿನಾವಾದಲ್ಲಿ, "ನಿವೃತ್ತಿ" ಎಂಬುದು ಸ್ವಾಗತಾರ್ಹ ಪದವಲ್ಲ. ವಯಸ್ಸಾದವರೂ ಬೆಳಗ್ಗೆ ಬೇಗ ಏಳುತ್ತಾರೆ. ಅವರು ಪ್ರತಿದಿನವೂ ಉದ್ದೇಶ ಪೂರ್ವಕವಾಗಿ ಬದುಕುತ್ತಾರೆ. ನೀವು ನಿವೃತ್ತಿ ಹೊಂದಿದರೆ, ನಿಮ್ಮ ಇಕಿಗೈ ಅಲ್ಲಿಗೆ ಕೊನೆಗೊಳ್ಳುತ್ತದೆ. ಆದ್ದರಿಂದ, ಹೆಚ್ಚು ಹಣ ಗಳಿಸುವ ಬಗ್ಗೆ ಚಿಂತಿಸುವ ಬದಲು, ಸಂತೋಷ ಮತ್ತು ಅರ್ಥಪೂರ್ಣ ಜೀವನವನ್ನು ಹೊಂದುವ ಗುರಿಯನ್ನು ಹೊಂದಿರಿ.
Comments
Post a Comment