ಸಂಪೂರ್ಣವಾಗಿ ದೇಶೀಯವಾಗಿ ತಯಾರಿಸಲ್ಪಟ್ಟ ಖಾಸಗಿ ರಾಕೆಟ್ ವಿಕ್ರಂ ಎಸ್ ಅನ್ನು 19 ನವೆಂಬರ್ 2022 ಶುಕ್ರವಾರದಂದು ಇಸ್ರೋ ಸಹಾಯದಿಂದ ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಯಿತು. ಸ್ಕೈ ರೂಟ್ ಏರೋಸ್ಪೇಸ್ ಎಂಬ ಕಂಪನಿಯು ಡಾ. ವಿಕ್ರಂ ಸಾರಾಭಾಯಿ ಅವರ ಸ್ಮರಣಾರ್ಥ ಈ ರಾಕೆಟನ್ನು ನಿರ್ಮಿಸಿತ್ತು.
![]() |
ಕೃಪೆ: ಸ್ಕೈ ರೂಟ್ website |
ಸಂಕ್ಷಿಪ್ತ ವಿವರಣೆ:
ಸ್ಕೈ ರೂಟ್ ಸಂಸ್ಥೆ: ಮಾಜಿ ಇಸ್ರೋ ಇಂಜಿನಿಯರ್ ಗಳಾದ ಪವನ್ ಕುಮಾರ್ ಚಂದನಾ ಹಾಗೂ ನಾಗ ಭರತ್ ಎಂಬುವವರು 2018ರಲ್ಲಿ ತೆಲಂಗಾಣದ ಕೊಂಡಾಪುರ ಎಂಬ ಸ್ಥಳದಲ್ಲಿ ಸ್ಥಾಪಿಸಿದರು.
ವಿಕ್ರಂ ಎಸ್ ರಾಕೆಟ್:
ಸ್ಕೈರೂಟ್ ಸಂಸ್ಥೆಯ "ಪ್ರಾರಂಭ" ಎಂಬ ಮಿಷನ್ನಿನ ಅಡಿಯಲ್ಲಿ ವಿಕ್ರಂ ಎಸ್ ನಿರ್ಮಾಣವಾಯಿತು. ಇದೊಂದು ಏಕ ಹಂತೀಯ ಘನ ಇಂಧನ ರಾಕೆಟ್ ಆಗಿದ್ದು, ಇದರ ತೂಕ ಸುಮಾರು 546 ಕೆಜಿಗಳು. ಇದು 290 ರಿಂದ 560 ಕೆಜಿಗಳಷ್ಟು ತೂಕದ ಉಪಗ್ರಹಗಳನ್ನು ಹೊರುವ ಸಾಮರ್ಥ್ಯ ಹೊಂದಿದೆ. ಸುಮಾರು 1.24 ಅಡಿಯ ವ್ಯಾಸ ಇರುವ ಈ ಉಡ್ಡಯನ ವಾಹನದ ಉದ್ದ ಸುಮಾರು 6 ಮೀಟರ್ (27 ಅಡಿ). ವಿಕ್ರಂ ಎಸ್ ತಯಾರಿಕೆಯ ಹಿಂದೆ ಸುಮಾರು 200 ಮಂದಿಯ ಶ್ರಮವಿದೆ. ಇದು SSLV ಅಂದರೆ ಸ್ಮಾಲ್ ಸ್ಯಾಟಲೈಟ್ ಲಾಂಚಿಂಗ್ ವೆಹಿಕಲ್ ಆಗಿದೆ. ಭೂಮಿಯ ಕಕ್ಷೆಯನ್ನು ತಲುಪುವ ವೇಗವನ್ನು ಇದು ಹೊಂದಿಲ್ಲವಾದುದರಿಂದ ಇದು ಪೇಲೋಡುಗಳನ್ನು ಭೂಮಿಯ ಉಪಕಕ್ಷೆ ಅಂದರೆ ಸಬ್ಆರ್ಬಿಟ್ ಗೆ ಸೇರಿಸುತ್ತದೆ.
ವಿಕ್ರಂ ಸರಣಿಯ ಮುಂದಿನ ಉಡಾವಣಾ ವಾಹನಗಳ ತಂತ್ರಜ್ಞಾನವನ್ನು ಪರೀಕ್ಷಿಸುವ ಉದ್ದೇಶದಿಂದ ವಿಕ್ರಂ ಎಸ್ ಎಂಬ ಮೊದಲ ರಾಕೆಟನ್ನು ಹಾರಿ ಬಿಡಲಾಯಿತು.
ಸಂಸ್ಥೆಯ ವಿಕ್ರಂ ಸರಣಿಯ ಮೂರು ರಾಕೆಟುಗಳಲ್ಲಿ ಇದು ಮೊದಲನೆಯದ್ದು. ಇದರ ನಿರ್ಮಾಣಕ್ಕಾಗಿ ತ್ರಿಡಿ ಪ್ರಿಂಟಿಂಗ್ ಮೋಟಾರ್ ಹಾಗೂ ಕಾರ್ಬನ್ ಸಂಯುಕ್ತಗಳನ್ನು ಬಳಸಲಾಗಿದೆ. ಇದು ಕಲಾಂ 80 ಎಂಬ ಇಂಜಿನನ್ನು ಹೊಂದಿದೆ.
ಮೂರು ಪೇಲೋಡ್ ಗಳನ್ನು ಇದರಲ್ಲಿ ಹಾರಿಸಲಾಯಿತು. ಅವುಗಳೆಂದರೆ ತಮಿಳು ನಾಡಿನ space kidz ಸಂಸ್ಥೆಯ 2.5ಕೆಜಿ ತೂಕದ ಫನ್ ಸ್ಯಾಟ್, ಉಳಿದೆರಡು ಪೇ ಲೋಡುಗಳು ಕ್ರಮವಾಗಿ, ಆಂಧ್ರದ N-spacetech ಹಾಗೂ ಅರ್ಮೇನಿಯ ದೇಶದ Bazoom-Q ಎಂಬ ಪ್ರಯೋಗಶಾಲೆ. ಪೇಲೋಡ್ 85ಕೆಜಿ ಹೊಂದಿದೆ. ಒತ್ತಡ ಅಳೆಯುವ ಸೆನ್ಸಾರ್ ಗಳು ಇವುಗಳಲ್ಲಿ ಇವೆ.
ಕಕ್ಷೆಗೆ ಸೇರಿದ ಐದು ನಿಮಿಷಗಳಲ್ಲಿ ರಾಕೆಟನ್ನು ಬಂಗಾಳ ಕೊಲ್ಲಿಯಲ್ಲಿ ಬೀಳಿಸಲಾಯಿತು. ಪೇಲೋಡ್ ಗಳು ಯಶಸ್ವಿಯಾಗಿ ಉಪಕಕ್ಷೆಯನ್ನು ಸೇರಿದವು.
ಕೇವಲ ಎಪ್ಪತ್ತೆರಡು ಗಂಟೆಗಳಲ್ಲಿ ನಿರ್ಮಿಸಲಾದ ಈ ವಾಹನವು, ಬಹಳ ಕಡಿಮೆ ನಿರ್ಮಾಣ ವೆಚ್ಚವನ್ನು ಹೊಂದಿದೆ.
ಈ ಸರಣಿಯ ಇನ್ನೂ ಎರಡು ವಾಹನಗಳು ವಿಕ್ರಂ 1 ಹಾಗೂ ವಿಕ್ರಂ 2. ಇದರಲ್ಲಿ ಮೊದಲನೆಯದ್ದು ಮುಂದಿನ ವರ್ಷದಲ್ಲಿ ಹಾರಿಸಲು ಸ್ಕೈ ರೂಟ್ ಸಂಸ್ಥೆಯು ಉದ್ದೇಶಿಸಿದೆ.
Comments
Post a Comment