ವಿಷ್ಣುವಿನ ಮಾಯೆಯಿಂದ ಪ್ರೇರಿತನಾದ ದಕ್ಷನು, ಮಡದಿ ಪಾಂಚಜನಿಯ ಗರ್ಭದಲ್ಲಿ, ಹತ್ತು ಸಾವಿರ ಪುತ್ರರನ್ನು ಪಡೆದನು. ಈ ಮಕ್ಕಳಿಗೆ ಒಟ್ಟಾಗಿ "ಹರ್ಯಾಶ್ವರು" ಎಂದು ಕರೆಯಲಾಯಿತು. ಪ್ರಜಾಪತಿಯ ಈ ಎಲ್ಲಾ ಮಕ್ಕಳೂ, ತಮ್ಮ ತಂದೆಯ ಆಜ್ಞೆಗಳಿಗೆ ವಿಧೇಯರಾಗಿದ್ದರು. ಈಗ ದಕ್ಷನು ಭೂಮಿಯಲ್ಲಿ, ಸೃಷ್ಟಿಯ ಕಾರ್ಯವನ್ನು ಮಾಡುವಂತೆ ಅವರಿಗೆ ತಿಳಿಸಿದನು. ಅವನ ಆಜ್ಞೆಯಂತೆ ಹರ್ಯಾಶ್ವರು, ಪಶ್ಚಿಮ ದಿಕ್ಕಿಗೆ ಹೋದರು. ಅಲ್ಲಿ ಸಿಂಧು ನದಿಯು ಸಮುದ್ರವನ್ನು ಸಂಧಿಸುವ ಸ್ಥಳದಲ್ಲಿ, ನಾರಾಯಣ-ಸಾರಸ ಎಂದು ಸರೋವರವಿರುವ ದೊಡ್ಡ ತೀರ್ಥಕ್ಷೇತ್ರವಿತ್ತು. ಈ ಜಾಗವು ಅನೇಕ ಋಷಿಗಳಿಗೆ ವಾಸಸ್ಥಾನವಾಗಿತ್ತು.
ಆ ಪವಿತ್ರ ಸ್ಥಳದಲ್ಲಿ, ಹರ್ಯಾಶ್ವರು ಸರೋವರದ ನೀರನ್ನು ಬಳಸಲು ಮತ್ತು, ಸ್ನಾನವನ್ನು ಮಾಡಲು ಪ್ರಾರಂಭಿಸಿದರು. ಕ್ರಮೇಣ, ಅವರ ಮನದಲ್ಲಿನ ಲೌಕಿಕ ಆಸೆಗಳು ಮಾಯವಾದವು. ನಂತರ ಜನಸಂಖ್ಯೆಯನ್ನು ಹೆಚ್ಚಿಸಲು, ತಂದೆ ನೀಡಿದ ಆಜ್ಞೆಯನ್ನು ಈಡೇರಿಸುವ ದಾರಿ ಕಾಣದೆ, ಕಠಿಣ ತಪಸ್ಸಿಗೆ ಕುಳಿತರು. ಒಂದು ದಿನ, ಆ ವಿಷಯವನ್ನು ತಿಳಿದ ನಾರದ ಮುನಿಯು, ಹರ್ಯಾಶ್ವರನ್ನು ಸಂಪರ್ಕಿಸಿದನು.
![]() |
ನಾರದ ಮತ್ತು ಸವಳಾಶ್ವರು (source:back2godhead.com) |
ನಂತರ ನಾರದನು, "ಹರ್ಯಾಶ್ವರೆ, ನೀವು ಭೂಮಿಯ ಎರಡೂ ತುದಿಗಳನ್ನು ನೋಡಿಲ್ಲ. ಒಬ್ಬನೇ ಒಬ್ಬ ಮನುಷ್ಯ ವಾಸಿಸುವ ಒಂದು ರಾಜ್ಯವಿದೆ. ಅದರಲ್ಲಿ ಒಂದು ದೊಡ್ಡ ರಂಧ್ರವಿದೆ. ಇದುವರೆಗೆ ಅದರೊಳಗೆ ಪ್ರವೇಶಿಸಿದ ಯಾವನೂ ಕೂಡಾ, ಹೊರಗಡೆ ಬಂದಿಲ್ಲ. ಆ ರಾಜ್ಯದಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯು ಇದ್ದಾನೆ. ಅವನ ಅಸಹ್ಯವಾಗಿರುವ ಪತ್ನಿಯು,ಜಗತ್ತಿನಲ್ಲೇ ಅತ್ಯಂತ ಆಕರ್ಷಕ ವಸ್ತ್ರಗಳನ್ನು ಧರಿಸುತ್ತಾಳೆ. ಆ ಸಾಮ್ರಾಜ್ಯದಲ್ಲಿ, ಎರಡೂ ದಿಕ್ಕುಗಳಿಗೆ ಚಲಿಸುವ ನದಿಯೊಂದಿದೆ. ಅಲ್ಲದೆ, ಇಪ್ಪತ್ತೈದು ವಿರಳ ವಸ್ತುಗಳಿಂದ ಮಾಡಿದ ಒಂದು ಅದ್ಭುತವಾದ ಮನೆ, ಅದರೊಳಗೊಂದು ಸುಂದರ ಹಂಸವಿದೆ. ಅದು ವಿವಿಧ ಶಬ್ದಗಳನ್ನು ಕೂಗುತ್ತದೆ. ಆ ಮನೆಯಲ್ಲಿ ಒಂದು ಚೂಪಾದ ಅಲಗುಗಳುಳ್ಳ, ಸ್ವಯಂಚಾಲಿತವಾಗಿ ಸುತ್ತುವ ಕಾಯವೊಂದಿದೆ. ನೀವುಗಳು ಇದನ್ನೆಲ್ಲ ನೋಡಿಲ್ಲ. ಹಾಗಾಗಿ ನಿಮಗೆ ಜೀವನದ ಅನುಭವ ಸಾಲದು. ಭೂಮಿಯಲ್ಲಿ ಸಂತತಿಯನ್ನು ರಚಿಸಲು ನೀವು ಯೋಗ್ಯರಲ್ಲ. ಇದರ ಮೇಲೆ ನಿಮ್ಮಿಷ್ಟ." ಎಂದನು.
ನಾರದ ಮುನಿಯ ಮಾತುಗಳನ್ನು ಕೇಳಿದ ಹರ್ಯಾಶ್ವರಿಗೆ, ತಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಈಗ, ಗೊಂದಲ ಉಂಟಾಗಿತ್ತು. ಅವನು ಹೇಳಿದ ಎಲ್ಲಾ ಕಾರ್ಯಗಳನ್ನು ಮಾಡಿದ ನಂತರ, ತಂದೆಯ ಆಸೆಯ ಕಡೆ ಗಮನ ಕೊಡುವುದು ಉತ್ತಮ ಎಂದೆನಿಸಿ, ಬ್ರಹ್ಮಚಾರಿಗಳಾಗಿ ಉಳಿದುಕೊಂಡೇ, ಭೂಮಿಯ ಎರಡೂ ಕೊನೆಗಳನ್ನೂ ಹಾಗೂ, ಏಕ ವ್ಯಕ್ತಿಯ ರಾಜ್ಯವನ್ನು ಹುಡುಕುತ್ತಾ, ಹರ್ಯಾಶ್ವರು ಹೊರಟರು. ಅನಂತರ ಅವರನ್ನು ಕಂಡವರು, ಜಗತ್ತಿನಲ್ಲೇ ಯಾರೂ ಇರಲಿಲ್ಲ.
ಅಲ್ಲಿಂದ, ನೇರವಾಗಿ ದಕ್ಷನ ಬಳಿಗೆ ಹೋದ ನಾರದ ಮುನಿಯು, ಹರ್ಯಾಶ್ವರು ಬ್ರಹ್ಮಚಾರಿಗಳಾಗಿಯೇ ಉಳಿದು, ದೇಶಾಂತರ ಹೋದ ಸುದ್ದಿಯನ್ನು ಅವನಿಗೆ ತಿಳಿಸಿದನು. ಈ ವಿಷಯವು ದಕ್ಷನಿಗೆ ಬಹಳ ದುಃಖವನ್ನು ಉಂಟುಮಾಡಿತ್ತು. ಇದರಲ್ಲಿ ನಾರದನ ಕೈವಾಡವಿದೆ ಎಂದು, ಅವನಿಗೆ ತಿಳಿಯಲಿಲ್ಲ.
ಈ ಕಥೆಯನ್ನು ಯೂಟ್ಯೂಬ್ ನಲ್ಲಿ ವೀಕ್ಷಿಸಿ:
ಹೀಗೆ ದಕ್ಷನು ನೋವಿನಲ್ಲಿದ್ದಾಗ, ಬ್ರಹ್ಮ ದೇವನು ಅವನಿಗೆ ಸಮಾಧಾನ ಪಡಿಸಿ, ಪುನಹ ಹತ್ತು ಸಾವಿರ ಮಕ್ಕಳನ್ನು ಸೃಷ್ಟಿಸಲು ಹೇಳಿ, ಅಲ್ಲಿಂದ ಮರೆಯಾದನು. ಈ ಬಾರಿ ದಕ್ಷನು, ತನ್ನ ಇನ್ನೊಂದು ಹೆಂಡತಿಯಾದ ಅಕಿನಿಯ ಗರ್ಭದಲ್ಲಿ, ಇನ್ನೂ ಹತ್ತು ಸಾವಿರ ಗಂಡು ಮಕ್ಕಳನ್ನು ಪಡೆದು, ಅವರಿಗೆ ಒಟ್ಟಾಗಿ ಸವಲಾಶ್ವರು ಎಂದು ಹೆಸರಿಟ್ಟನು.
ಈ ಸವಲಾಶ್ವರು ಕೂಡಾ, ಮೊದಲ ಹತ್ತು ಸಾವಿರ ಮಕ್ಕಳಂತೆ, ದೇಶದ ಪಶ್ಚಿಮ ಭಾಗದ ನಾರಾಯಣ-ಸಾರಸಕ್ಕೆ ಹೋದರು. ಅವರನ್ನೂ ಸಹ ಸಂಪರ್ಕಿಸಿದ ನಾರದನು, ಹರ್ಯಾಶ್ವರಿಗೆ ಹೇಳಿದ ಮಾತುಗಳನ್ನೇ ಇವರಿಗೂ ಹೇಳಿದನು. ಆ ರೀತಿ ಭೂಮಿಯ ಮೇಲಿನ ಸೃಷ್ಟಿ ಕಾರ್ಯವನ್ನು ತಡೆಹಿಡಿದನು.
ಆ ಸ್ಥಳದಲ್ಲೇ ಉಳಿದ ದಕ್ಷ ಪುತ್ರರು, ಪ್ರಪಂಚದ ರಹಸ್ಯವನ್ನು ತಿಳಿಯಲೆಂದು, ದೇವರ ಕುರಿತು ಕಠಿಣ ತಪಸ್ಸಿಗೆ ಕುಳಿತರು. ಕೇವಲ ನೀರು ಮತ್ತು ಗಾಳಿಯನ್ನು ಸೇವಿಸಿ, ಅವರುಗಳು ಬದುಕತೊಡಗಿದ್ದರು. ಅವರ ದೇಹಗಳು ಬಡಕಲಾಗಿ ಹೋಗಿದ್ದವು.
ಸ್ವಲ್ಪ ಕಾಲದ ನಂತರ, ನಾರದ ಮುನಿಯು ಪುನಹ ಈ ಯುವಕರನ್ನು ಸಂಪರ್ಕಿಸಿ, "ಹುಡುಗರೇ, ನಿಮ್ಮ ಅಣ್ಣಂದಿರಂತೆ ನೀವು ಪ್ರಪಂಚ ಪರ್ಯಟನೆಯನ್ನು ಮಾಡಿ. ಜೀವನದ ಅನುಭವವನ್ನು ಪಡೆದುಕೊಂಡು ಬನ್ನಿ" ಎಂದು, ಅಲ್ಲಿಂದ ಅವರನ್ನು ಕಳುಹಿಸಿದನು. ನಂತರ ದಕ್ಷನನ್ನು ಕಾಣಲು, ಅವನ ಅರಮನೆಯ ಕಡೆಗೆ ಹೊರಟನು.
ಇತ್ತ, ತನ್ನ ಸಿಂಹಾಸನದಲ್ಲಿ ಕುಳಿತಿದ್ದ ಪ್ರಜಾಪತಿ ದಕ್ಷನಿಗೆ, ಅನೇಕ ಅಪಶಕುನಗಳ ಸೂಚನೆ ಆಗಿತ್ತು. ಅಷ್ಟರಲ್ಲಿ ದೂತನೊಬ್ಬನು ಬಂದು, ನಾರದ ಮುನಿಯು ಸವಲಾಶ್ವರ ದಾರಿ ತಪ್ಪಿಸಿ, ಪ್ರಪಂಚ ಪರ್ಯಟನೆಗೆ ಕಳುಹಿಸಿದ ವಿಷಯವನ್ನು, ಅವನಿಗೆ ತಿಳಿಸಿದನು. ಮೊದಲ ಬಾರಿ ಮಾಡಿದ್ದೂ ನಾರದನೇ ಎಂದು, ಚಾಡಿ ಹೇಳಿದ್ದನು.
ಈ ವಿಷಯವು ತಿಳಿದ ತಕ್ಷಣ ದಕ್ಷನಿಗೆ, ತನ್ನ ಇಪ್ಪತ್ತು ಸಾವಿರ ಮಕ್ಕಳ ಬ್ರಹ್ಮಚರ್ಯ, ಕೇವಲ ನೀರು-ಗಾಳಿಯನ್ನು ಸೇವಿಸಿದ ಅವರ ಬಡಕಲು ದೇಹಗಳು, ಕಣ್ಣೆದುರು ಬಂದವು. ಅವನು ಹೃದಯಾಘಾತಕ್ಕೆ ಒಳಗಾಗಿ, ಮೂರ್ಛೆ ಹೊಂದಿದ್ದನು.
ಎಚ್ಚರವಾದ ನಂತರ, ಈ ಬಾರಿಯೂ ತನ್ನ ಯೋಜನೆಗೆ ಕಲ್ಲು ಹಾಕಿದ, ಈ ನಾರದ ಮುನಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ಕೋಪದಿಂದ ದಕ್ಷನು, ಅವನ ಬರುವಿಕೆಯನ್ನೇ ಎದುರು ನೋಡುತ್ತಿದ್ದನು.
ನಾರದನು ದಕ್ಷನ ಆಸ್ಥಾನಕ್ಕೆ ಬಂದಾಗ, ದಕ್ಷನು ಅವನಿಗೆ ಯಾವುದೇ ಗೌರವ ಆಸನಗಳನ್ನು ನೀಡದೆ, ಕೋಪದಿಂದ ಕಂಪಿಸುತ್ತಾ,
"ಅಯ್ಯಾ ನಾರದ ಮುನಿ. ನೀನು ಸಾಧುವಿನಂತೆ ವೇಷವನ್ನು ಧರಿಸಿರುವ ಕಪಟಿ. ಒಬ್ಬ ಮೋಸಗಾರ. ನೀನೊಬ್ಬ ಸಂತನೇ ಅಲ್ಲ. ನಾರಾಯಣಾ, ನಾರಾಯಣ ಎನ್ನುತ್ತಾ, "ವಿಷ್ಣು ಭಕ್ತ" ಎಂದು ತೋರಿಸಿಕೊಳ್ಳುವುದು, ನಂತರ ಬೆನ್ನ ಹಿಂದೆ ಕೆಟ್ಟ ಕೆಲಸ ಮಾಡುವುದು, ಇವಿಷ್ಟೇ ನಿನ್ನ ಕೆಲಸ. ನಾನು ನಿನಗೇನು ಅನ್ಯಾಯ ಮಾಡಿದ್ದೆ? ಬ್ರಹ್ಮಪಿತನ ಮಾತಿನಂತೆ, ಸೃಷ್ಟಿಯ ಕಾರ್ಯದಲ್ಲಿ ತೊಡಗಿದ್ದೆ. ನೀನು ಅದಕ್ಕೆ ಒಂದಲ್ಲ, ಎರಡು ಬಾರಿ ಅಡ್ಡಿ ಮಾಡಿದೆ. ನನ್ನ ಸ್ವಂತ ಮಕ್ಕಳು, ನನ್ನ ಮಾತನ್ನೇ ಧಿಕ್ಕರಿಸಿ, ಹೊಟ್ಟೆಗೆ ಹಿಟ್ಟಿಲ್ಲದೆ, ಪ್ರಪಂಚದ ಯಾವುದೋ ಮೂಲೆಯಲ್ಲಿ, ಕೇವಲ ಗಾಳಿ ಕುಡಿದು ಬದುಕುತ್ತಿದ್ದಾರೆ. ನಿನಗೇನು ಗೊತ್ತು ಸಂಸಾರವಂತರ ಕಷ್ಟಗಳು? ಎರಡೂ ಬಾರಿ ನನ್ನ ಮಕ್ಕಳಿಗೆ, ಇಲ್ಲ-ಸಲ್ಲದ್ದನ್ನು ಹೇಳಿ, ಮರುಳು ಮಾಡಿ, ನನ್ನ ಪ್ರಯತ್ನವನ್ನು ವ್ಯರ್ಥಗೊಳಿಸಿದ ನಿನಗೆ, ಶಾಶ್ವತ ನೆಲೆ ಇಲ್ಲದಂತಾಗಿ, ಬರೀ ಪ್ರಪಂಚವನ್ನು ಸುತ್ತುವಂತಾಗಲಿ. ಇದು ನನ್ನ ಶಾಪ." ಎಂದು ದಕ್ಷ ಗುಡುಗಿದ್ದ.
ನಾರದನು ಪ್ರತ್ಯುತ್ತರವಾಗಿ ತಲೆಯನ್ನು ತಗ್ಗಿಸಿ, "ನಾನು ಒಳ್ಳೆಯ ಉದ್ದೇಶದಿಂದ ಮಾಡಿದ ಕಾರ್ಯವಾದರೂ, ನೀನು ಶಪಿಸುತ್ತಿರುವೆ. ಪರವಾಗಿಲ್ಲ. ಮರು ಶಾಪವನ್ನು ನೀಡದೆ, ಈ ಶಾಪವನ್ನು ನಾನು ಸ್ವೀಕರಿಸುತ್ತೇನೆ" ಎಂದು ನುಡಿದು, ಸುಮ್ಮನಾದನು.
<ಭಾಗ 13|ಭಾಗ 14>
Comments
Post a Comment