![]() |
ಅಜಮಿಳನನ್ನು ಯಮದೂತರಿಂದ ರಕ್ಷಿಸುತ್ತಿರುವ ವಿಷ್ಣು ದೂತರು |
ಕನ್ಯಾಕುಬ್ಜ ಎಂಬ ನಗರದಲ್ಲಿ, ಅಜಮಿಳ ಎನ್ನುವ ಬ್ರಾಹ್ಮಣನಿದ್ದ. ತನ್ನ ಹೆತ್ತವರು ಹಾಗೂ ಮಡದಿಯೊಂದಿಗೆ ಒಂದು ಪುಟ್ಟ ಮನೆಯಲ್ಲಿ ಅವನು ವಾಸಿಸುತ್ತಿದ್ದ. ಅವನು ಒಂದು ದಿನ ತನ್ನ ತಂದೆಯ ಆಜ್ಞೆಯಂತೆ, ಕಾಡಿಗೆ ಹೋಗಿ ಹೂವು ಹಣ್ಣುಗಳನ್ನು ಸಂಗ್ರಹಿಸಿ, ಅಲ್ಲಿಂದ ಮರಳಿ ಬರುವಾಗ, ಪೊದೆಗಳ ನಡುವೆ ಏನೋ ಶಬ್ಧವು ಕೇಳಿ ಬಂದಿತ್ತು. ಪೊದೆಯ ಸಮೀಪದ ಮರದ ಹಿಂದೆ ಅವಿತು ನೋಡಿದಾಗ, ಒಬ್ಬ ಕುಡುಕ ಹಾಗೂ ಒಬ್ಬಳು ವೇಶ್ಯೆಯು ಏಕಾಂತದಲ್ಲಿ ಇರುವುದನ್ನು ಅವನು ನೋಡಿದ. ಅವರಿಬ್ಬರೂ ತಮ್ಮ ಮೈ ಮೇಲಿನ ಬಟ್ಟೆ ಹಾಗೂ ಸುತ್ತಲಿನ ಪ್ರಪಂಚದ ಬಗ್ಗೆ ಪರಿವೆಯೇ ಇಲ್ಲದೆ ಮೈಮರೆತು ವರ್ತಿಸುತ್ತಿದ್ದರು. ಇವನ್ನೆಲ್ಲಾ ನೋಡಿ ಅಜಮಿಳನ ಮನಸ್ಸು ಚಂಚಲವಾಗಿತ್ತು. ಇನ್ನು ಸ್ವಲ್ಪ ಹೊತ್ತು ಅಲ್ಲಿಯೇ ನಿಂತಿದ್ದರೆ, ತಾನು ಏನು ಮಾಡುವೇನೋ ಎಂದು ಅಂಜಿಕೆ ಪಟ್ಟು, ತಾನು ನೋಡಿದ ದೃಶ್ಯವನ್ನು ಇಲ್ಲಿಯೇ ಮರೆಯಬೇಕು ಎಂದು ಯೋಚಿಸಿ, ಅಲ್ಲಿಂದ ವೇಗವಾಗಿ ಹೆಜ್ಜೆ ಹಾಕಿದ್ದ. ಅದಾದ ನಂತರ ಮನೆಗೆ ಬಂದವನಿಗೆ ತಾನು ಏನು ಕೆಲಸ ಮಾಡುತ್ತಿದ್ದರೂ ಆ ವೇಷ್ಯೆಯ ಬಗ್ಗೆಯೇ ನೆನಪಾಗುತ್ತಿತ್ತು. ದಿನಗಳು ಕಳೆದಂತೆ ಅವಳನ್ನು ಮತ್ತೊಮ್ಮೆ ನೋಡುವ ಹಂಬಲ ಹೆಚ್ಚಾಗಿತ್ತು. ಕೊನೆಗೂ ಅವಳನ್ನು ಪಡೆದೆ ತೀರುತ್ತೇನೆ ಎಂದು ನಿರ್ಧಾರ ಮಾಡುವಷ್ಟು ಈಗ ಅವನ ಮನಸ್ಸು ಕೆಟ್ಟು ಹೋಗಿತ್ತು.
ಕೆಲವು ತಿಂಗಳುಗಳು ಕಳೆದ ನಂತರ, ಆ ವೇಶ್ಯೆ ಇದ್ದ ಜಾಗಕ್ಕೆ ಹೋದ ಅಜಮಿಳನು, ಅವಳನ್ನು ಮನಒಲಿಸಿ ಕರೆದುಕೊಂಡು ಬಂದು, ತನ್ನ ಮನೆಯಲ್ಲಿ ಕೆಲಸಕ್ಕೆ ಇಟ್ಟುಕೊಂಡ. ಇದಕ್ಕೆ ತನ್ನ ಕುಟುಂಬದವರು ವಿರೋಧಿಸಿದಾಗ, ಅವರನ್ನೇ ತೊರೆದು ಬೇರೆ ಮನೆಯನ್ನು ಮಾಡಿ ವೇಷ್ಯೆಯನ್ನು ವಿವಾಹವಾಗಿ ಅವಳಒಡನೆ ವಾಸಿಸು ತೊಡಗಿಯಾ. ವರುಷಗಳ ಉರುಳಿತು, ಅವನಿಗೆ ಹತ್ತು ಮಕ್ಕಳಾದರು. ತನ್ನ ಜಪ ತಪಗಳನ್ನು ಎಂದೋ ಮರೆತಿದ್ದ ಅಜಮಿಳ, ಮಾಂಸಾಹಾರ ಹಾಗೂ ಮದ್ಯದ ಸೇವನೆಯನ್ನು ಆರಂಭಿಸಿದ್ದ. ಅವನ ಮಕ್ಕಳಲ್ಲಿ ಕಿರಿಯವನಾದ ನಾರಾಯಣ ಎಂದರೆ ಅವನಿಗೆ ಅಚ್ಚುಮೆಚ್ಚು. ಪ್ರತಿಯೊಂದು ವಿಷಯಕ್ಕೂ ನಾರಾಯಣಾ... ನಾರಾಯಣ ಎಂದು ಅವನನ್ನೇ ಕರೆಯುತ್ತಿದ್ದ.
***
ಅಜಮಿಳನಿಗೆ ಎಂಬತ್ತೆಂಟು ವರ್ಷಗಳಾಗಿದ್ದವು. ಹೀಗೆ ಒಂದು ದಿನ ಮಂಚದ ಮೇಲೆ ಮಲಗಿದ್ದವನಿಗೆ, ಗಾಢ ನಿದ್ದೆಯು ಬಂದಿತ್ತು. ತನ್ನ ಹೆಸರನ್ನು ಯಾರೂ ಕರೆದಂತಾಗಿ ಕಣ್ಣು ತೆರೆದು ನೋಡಿದವನಿಗೆ ಕಣ್ಣೆದುರು ಮೂರು ನಾಲ್ಕು ಭಯಂಕರ ವ್ಯಕ್ತಿಗಳು ಕಾಣಿಸಿದರು. ಅವರ ಮುಖ ಕುರೂಪವಾಗಿತ್ತು. ಕೋರೆ ಹಲ್ಲುಗಳನ್ನು ಅವರು ಹೊಂದಿದ್ದರು. ಅವರ ಕೈಯಲ್ಲಿ ಹಗ್ಗಗಳಿದ್ದವು. ಅವರ ಭೀಕರ ರೂಪವನ್ನು ನೋಡಿದ ಅಜಮೀಲನು ಹೆದರಿ ಅಳುತ್ತಾ ತನ್ನ ಮಗನಾದ ನಾರಾಯಣನ್ನು ಜೋರಾಗಿ ಕರೆಯತೊಡಗಿದ್ದ. ಈ ರೀತಿ ತನಗರಿವಿಲ್ಲದೆ ಜೀವನದ ಕೊನೆಯ ಕ್ಷಣದಲ್ಲಿ ಭಗವಂತನ ಸ್ಮರಣೆಯನ್ನು ಮಾಡಿದ್ದ.
ವಿಷ್ಣುವಿನಿಂದ ಕಳುಹಿಸಲ್ಪಟ್ಟ ವಿಷ್ಣು ದೂತರು ಕೈಗಳಲಿ ಆಯುಧಗಳನ್ನು ಹಿಡಿದುಕೊಂಡು ಅಲ್ಲಿ ಪ್ರತ್ಯಕ್ಷರಾದರು. ರಕ್ಷಸರಂತೆ ಕಾಣುತಿದ್ದ ಯಮದೂತರನ್ನು ಅವರು ತಡೆದರು. ಅಜಮೀಲನನ್ನು ವೈಕುಂಠಕ್ಕೆ ಕರೆದೊಯ್ಯುವುದು ಅಥವಾ ನರಕಕ್ಕೆ ಎಳೆದೊಯ್ಯುವುದೋ ಎಂದು ಎರಡೂ ಗುಂಪುಗಳಲ್ಲಿ ವಾದ ನಡೆಯಿತು.
"ಅವನು ಪಾಪಿ, ಅನೇಕ ಕೆಟ್ಟ ಕಾರ್ಯಗಳನ್ನು ಮಾಡಿದ್ದಾನೆ. ಅವನು ನರಕಕ್ಕೆ ಹೋಗುವುದು ಸೂಕ್ತ." ಎಂದರು ಯಮ ದೂತರು.
"ಅದು ನಿಜ. ಆದರೆ ಅವನು ಕೊನೆಯ ಗಳಿಗೆಯಲ್ಲಿ ಅಳುತ್ತಾ ದೇವರ ಮೊರೆ ಇಟ್ಟಿದ್ದಾನೆ. ಅಲ್ಲದೆ ಪ್ರತೀ ದಿನವೂ ತನಗರಿವಿಲ್ಲದೆ ನಾರಾಯಣ ನಾರಾಯಣ ಎಂದು ಕರೆದು ದೇವರ ಸ್ಮರಣೆ ಮಾಡಿದ್ದಾನೆ. ಹಾಗಾಗಿ ಅವನ ಎಲ್ಲಾ ಪಾಪಗಳು ಪರಿಹಾರವಾಗಿವೆ." ಎಂದು ಹಠ ಹಿಡಿದರು ವಿಷ್ಣು ದೂತರು.
ಈಗ ಸ್ವಲ್ಪ ಹೊತ್ತು ತಮ್ಮ ತಮ್ಮಲ್ಲೇ ಮಾತನಾಡಿಕೊಂಡ ಯಮದೂತರು, ಅಜಮಿಳ ನನ್ನು ಪಶದಿಂದ ಮುಕ್ತಗೊಳಿಸಿ ಅಲ್ಲಿಂದ ಆದೃಷ್ಯರಾದರು.
ಯಮದೂತರು ಮಾಯವಾದ ತಕ್ಷಣ ಅಜಮಿಳನು ಅಳುತ್ತಾ ತನ್ನ ಪ್ರಾಣವನ್ನು ಉಳಿಸಿದ ವಿಷ್ಣು ದೂತರು ಪಾದಗಳಿಗೆ ಬಿದ್ದನು. ಅವನು ಪುನಃ ತಲೆಯೆತ್ತಿ ಮಾತನಾಡುವ ಮೊದಲೇ ಅವರು ಅಲ್ಲಿಂದ ಅದೃಷ್ಯರಾದರು.
ವೇಶ್ಯೆಯ ಸಂಪರ್ಕ ಮಾಡಿ ವೃದ್ಧ ತಂದೆ ತಾಯಿಯನ್ನು ತೊರೆದು, ತಾಳಿ ಕಟ್ಟಿದ ಹೆಂಡತಿ ಯನ್ನೂ ಬಿಟ್ಟು ನಾನು ಧರ್ಮವನ್ನೇ ಮರೆತೇ. ಪೂಜೆ ಪುನಸ್ಕಾರಗಳನ್ನು ಬಿಟ್ಟೆ. ಛೆ ನಾನು ನನ್ನ ಪಾಪ ಕೃತ್ಯಗಳನ್ನು ಇಲ್ಲಿಗೆ ಬಿಡಬೇಕು. ಪುನಃ ಭಕ್ತಿ ಮಾರ್ಗವನ್ನು ಅನುಸರಿಸಬೇಕು ಎಂದುಬು ನಿರ್ಧರ ಮಾಡಿದ. ತಕ್ಷಣ ಆ ಜಾಗವನ್ನು ಬಿಟ್ಟು ಹರಿದ್ವಾರಕ್ಕೆ ಹೊರಟ. ಅಲ್ಲಿ ಒಂದು ವಿಷ್ಣುವಿನ ದೇವಾಲಯದಲ್ಲಿ ಉಳಿದುಕೊಂಡ. ದೇವರ ಸೇವೆಯಲ್ಲಿ ತೊಡಗಿದ.
ಹೀಗೆ ಒಂದು ದಿನ ಗಂಗಾ ನದಿಯಲ್ಲಿ ಸ್ನಾನ ವನ್ನು ಮಾಡಿ, ದಡದಲ್ಲಿ ಕುಳಿತು ಧ್ಯಾನ ಮಾಡುತಿದ್ದವನಿಗೆ ಎದುರಲ್ಲಿ ವಿಷ್ಣು ದೂತರು ಪ್ರತ್ಯಕ್ಷರಾದರು. ತನ್ನ ಆಯಸ್ಸು ಮುಗಿಯಿತು ಎಂದು ಅರಿತುಕೊಂಡ ಅಜಮಿಳ, ಅವರಿಗೆ ನಮಸ್ಕರಿಸಿ ತನ್ನ ದೇಹವನ್ನು ತೊರೆದ.
Comments
Post a Comment