Skip to main content

ಭಾಗವತದ ಕಥೆಗಳು ಭಾಗ 15: ವೃತ್ರಾಸುರನ ಕಥೆ






ವ್ರತ್ರಾಸುರ ಮತ್ತು ಇಂದ್ರ  

ಸುರಸೇನ ಎನ್ನುವ ಪ್ರಾಂತ್ಯದಲ್ಲಿ, ಚಿತ್ರಕೇತು ಎಂಬ ರಾಜನಿದ್ದ. ಅವನಿಗೆ ಸಾವಿರಾರು ಹೆಂಡತಿಯರಿದ್ದರು. ಆದರೆ ಮಕ್ಕಳಿರಲಿಲ್ಲ. ಒಂದು ದಿನ ಅಂಗೀರನೆಂಬ ಋಷಿಯು, ಅವನ ಅರಮನೆಗೆ ಬಂದಿದ್ದಾಗ, ರಾಜನ ಗಂಡು ಮಗು ಪಡೆಯುವ ಬೇಡಿಕೆಯನ್ನು ಈಡೇರಿಸಲು, ಒಂದು ಯಜ್ಞವನ್ನ ಮಾಡಿ, ಅಗ್ನಿಯಿಂದ ಪಡೆದ ಪದಾರ್ಥಗಳನ್ನು, ಎಲ್ಲಾ ಮಡದಿಯರಿಗೆ ಹಂಚಲು ಹೇಳಿದ. ಆದರೆ ಚಿತ್ರಕೇತು, ಕೇವಲ ಮೊದಲ ರಾಣಿ ಕೃತದ್ಯುತಿಗೆ ಅವುಗಳನ್ನು ನೀಡಿದ್ದ. ಕೃತದ್ಯುತಿಯು ಕೆಲವು ದಿನಗಳಲ್ಲೇ ಗರ್ಭಿಣಿಯಾಗಿದ್ದಳು. ನಂತರದಲ್ಲಿ, ರಾಜನಿಗೆ ಒಬ್ಬ ಮಗ ಜನಿಸಿದ್ದ. ರಾಜ ಪರಿವಾರವು ಬಹಳ ಸಂತಸ ಪಟ್ಟಿತ್ತು. ಇಡೀ ದೇಶಕ್ಕೆ ಹಬ್ಬದ ವಾತಾವರಣ ಉಂಟಾಗಿತ್ತು. ಪುಟ್ಟ ಯುವರಾಜನನ್ನು ನೋಡಿ, ಅವನಿಗೆ ಉಡುಗೊರೆಗಳನ್ನು ನೀಡಲು, ಅಲ್ಲಿ ಜನಸ್ತೋಮವೇ ಸೇರಿತ್ತು. ರಾಜನು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ, ವಸ್ತ್ರಗಳು, ಆಭರಣಗಳು, ಗ್ರಾಮಗಳು, ಕುದುರೆಗಳು, ಆನೆಗಳು ಹಾಗೂ ಸಾವಿರಾರು ಗೋವುಗಳನ್ನ ದಾನ ಮಾಡಿದ್ದ.

ದಿನಗಳು ಕಳೆದಂತೆ, ರಾಜನಿಗೆ ಮಗ ಹಾಗೂ ರಾಣಿ ಕೃತದ್ಯುತಿಯ ಮೇಲಿನ ಪ್ರೀತಿಯು ಹೆಚ್ಚಾಗಿತ್ತು. ಅಸೂಯೆಗೊಂಡ ಇತರೆ ಪತ್ನಿಯರು, ಆ ಮಗನಿಗೆ ವಿಷ ಪ್ರಾಶನವನ್ನು ಮಾಡಿಸಿ ಕೊಂದರು. ರಾಣಿ ಕೃತದ್ಯುತಿ, ಮಗನನ್ನು ಎಬ್ಬಿಸಿ, ಆಸ್ಥಾನಕ್ಕೆ ಕರೆತರಲು ಆಜ್ಞೆ ಮಾಡಿದಾಗ ಹೋದ ಸೇವಕಿಯು, ಮರಳಿ ಓಡುತ್ತಾ ಬಂದು, ರಾಜನ ಆಸ್ಥಾನದಲ್ಲಿ ನಿಂತು, ಮಗು ಸತ್ತಿತೆಂದು ಗೋಳಾಡತೊಡಗಿದ್ದಳು.

ಮಗುವಿನ ನೀಲಿ ಕಟ್ಟಿದ ದೇಹವನ್ನು ಕಂಡು, ರಾಜ ದಂಪತಿಗಳು ಮೂರ್ಛೆ ಹೋಗಿದ್ದರು. ಯುವ ರಾಜನು ಸತ್ತ ಸುದ್ದಿಯನ್ನು ಕೇಳಿ, ಇಡೀ ದೇಶವೇ ರೋಧಿಸಿತ್ತು. ಋಷಿ ಅಂಗೀರನಿಗೆ ಈ ವಿಷಯ ಗೊತ್ತಾದ ತಕ್ಷಣ, ನಾರದ ಮುನಿಯೊಂದಿಗೆ ಅವನು, ಅರಮನೆಯ ಕಡೆಗೆ ಧಾವಿಸಿದ್ದ. "ನಿನ್ನ ಹಣೆಯ ಬರಹದಲ್ಲಿ ಪುತ್ರ ಯೋಗವಿಲ್ಲ. ಅದರ ಬದಲು, ಮೋಕ್ಷವನ್ನು ಸಾಧಿಸುವ ಬಗ್ಗೆ ಯೋಚಿಸು." ಎಂದು, ಅವರಿಬ್ಬರೂ ರಾಜನಿಗೆ ಬುದ್ಧಿವಾದವನ್ನು ಹೇಳಿದರು.

ಹಾಗೂ ನಾರದನು ರಾಜನಿಗೆ ಏಳು ದಿನಗಳಲ್ಲಿ, ಭಗವಂತನನ್ನು ಒಲಿಸಿಕೊಳ್ಳುವಂತಹ ಒಂದು ಮಂತ್ರವನ್ನು ಬೋಧಿಸಿ, ಇನ್ನೊಂದು ಮಂತ್ರವನ್ನು ಪಠಿಸಿ, ಸತ್ತ ಮಗನ ಆತ್ಮವನ್ನು ಪುನಹ ದೇಹದೊಳಗೆ ಆಹ್ವಾನಿಸಿ, "ನೀನು ಈ ದೇಹದಲ್ಲಿಯೇ ನೆಲೆಸಿ, ತಂದೆಯ ನಂತರ ರಾಜಪಟ್ಟವನ್ನೂ, ಸಕಲ ಸಂಪತ್ತನ್ನೂ ಅನುಭವಿಸಬಹುದು. ನಾನು ಅದಕ್ಕೆ ವ್ಯವಸ್ಥೆ ಮಾಡುತ್ತೇನೆ. ಇದಕ್ಕೆ ನಿನ್ನ ಒಪ್ಪಿಗೆ ಇದೆಯೇ?" ಎಂದು ಕೇಳಿದ್ದ.

ಆಗ ಆ ಮಗುವು, "ನನಗೆ ತಂದೆ ತಾಯಿ ಇವರೇ ಎಂದೇನಿಲ್ಲ. ಈ ಜನ್ಮದಲ್ಲಿ ಒಂದು ದೇಹ. ಮುಂದಿನ ಜನ್ಮದಲ್ಲಿ ಮತ್ತೊಂದು ಪ್ರಾಣಿಯ ದೇಹ. ನಮ್ಮ ಪಾಪ ಪುಣ್ಯಗಳ ಫಲವಾಗಿ ನಾವು, ಜನ್ಮ ಎತ್ತುತ್ತೇವೆ ಅಷ್ಟೇ. ನನಗೆ ಇವರ ಮಗನಾಗಿ ಮುಂದುವರೆಯಲು ಇಷ್ಟವಿಲ್ಲ ಎಂದು," ಆತ್ಮವು ಮಗುವಿನ ದೇಹದಿಂದ ನಿರ್ಗಮಿಸಿತ್ತು.

ಆ ದೇಹಕ್ಕೆ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ ರಾಜನು, ಮಗನನ್ನು ಪಡೆಯುವ ಆಸೆಯನ್ನು ಸಂಪೂರ್ಣವಾಗಿ ಕೈಬಿಟ್ಟನು. ನಂತರ ಯಮುನಾ ನದಿಯಲ್ಲಿ ಸ್ನಾನವನ್ನು ಮಾಡಿ, ಎಲ್ಲರೂ ತಮ್ಮ ಪಿತೃಗಳಿಗೆ ನೈವೇದ್ಯವನ್ನು ಅರ್ಪಿಸಿದರು.
ಕೇವಲ ನೀರನ್ನು ಮಾತ್ರ ಸೇವಿಸಿದ ಚಿತ್ರಕೇತುವು, ನಾರದ ಮುನಿ ನೀಡಿದ ಮಂತ್ರವನ್ನು, ಬಹಳ ಶ್ರದ್ಧೆಯಿಂದ ಒಂದು ವಾರಗಳ ಕಾಲ, ನಿರಂತರವಾಗಿ ಜಪಿಸಿದ್ದ. ಆಗ ಆದಿಶೇಷನ ಶಯನದಲ್ಲಿ ಮಲಗಿರುವ, ಭಗವಂತನನ್ನು ಅವನು ಕಣ್ಣಾರೆ ಕಂಡ. ರಾಜನು ಮೌನವಾಗಿ, ಕೈಗಳನ್ನು ಮುಗಿದುಕೊಂಡು, ಕಣ್ಣೀರಿಡತೊಡಗಿದ್ದ.
ಅವನನ್ನು ವಿದ್ಯಾಧರರ ಮುಖ್ಯಸ್ಥನಾಗಿ ಮಾಡಿದ ವಿಷ್ಣು, ಆಕಾಶದಲ್ಲಿ ಸಂಚರಿಸಲು ವಿಮಾನವನ್ನು ನೀಡಿ, ಅಲ್ಲಿಂದ ಮಾಯವಾಗಿದ್ದ.

***
ಈ ಕಥೆಯನ್ನು ಯುಟ್ಯೂಬ್ ನಲ್ಲಿ ವೀಕ್ಷಿಸಿ. 


ಒಮ್ಮೆ ಚಿತ್ರಕೇತುವು ವಿಮಾನದಲ್ಲಿ ಕೈಲಾಸ ಮಾರ್ಗವಾಗಿ ಪ್ರಯಾಣಿಸುತ್ತಿದ್ದಾಗ, ಗಣಗಳೊಂದಿಗೆ ಸುತ್ತುವರೆದಿದ್ದ ಶಿವ ಹಾಗೂ, ಮಡಿಲಲ್ಲಿ ಕುಳಿತುಕೊಂಡಿದ್ದ ಪಾರ್ವತಿಯನ್ನು ಕಂಡ. ಆಗ ಚಿತ್ರಕೇತು ಜೋರಾಗಿ ನಗುತ್ತಾ, ಶಿವನಿಗೆ ಇಂದ್ರಿಯ ನಿಗ್ರಹವೇ ಇಲ್ಲ, ಎಂದು ಗೇಲಿ ಮಾಡಿದ್ದ.
ಮಹಾದೇವನು ಮುಗುಳ್ನಕ್ಕು ಸುಮ್ಮನಾದರೆ, ಪಾರ್ವತಿ ದೇವಿಯು ಕೋಪಗೊಂಡು, ನನ್ನ ಪತಿಯನ್ನು ಟೀಕಿಸಿದ ನೀನು, ಒಬ್ಬ ರಾಕ್ಷಸನಾಗಿ ಹುಟ್ಟು, ಎಂದು ಶಪಿಸಿದ್ದಳು. ತಕ್ಷಣ ತನ್ನ ವಿಮಾನದಿಂದ ಕೆಳಗಿಳಿದ ಚಿತ್ರಕೇತು, ಶಿವ ಪಾರ್ವತಿಯರಿಗೆ ವಂದಿಸಿ, ನಾನು ಈ ಶಾಪವನ್ನು ಸಂತೋಷದಿಂದ ಸ್ವೀಕರಿಸುವೆ ಎಂದು ನುಡಿದು, ತನ್ನ ವಿಮಾನವನ್ನೇರಿ ಹೊರಟು ಹೋದ.

ಒಂದು ದಿನ, ಗಂಧರ್ವರ ಗಾಯನ, ಅಪ್ಸರೆಯರ ನರ್ತನದಲ್ಲಿ ಮೈಮರೆತಿದ್ದ ಇಂದ್ರ, ಗುರು ಬೃಹಸ್ಪತಿಯು ಆಸ್ಥಾನಕ್ಕೆ ಬಂದಾಗ, ಸ್ವಾಗತವನ್ನು ನೀಡಲಿಲ್ಲ. ಬೃಹಸ್ಪತಿ ಬೇಸರಗೊಂಡು ಅಲ್ಲಿಂದ ಅದೃಷ್ಯನಾಗಿದ್ದ. ತಕ್ಷಣವೇ ಇಂದ್ರ, ತನ್ನ ತಪ್ಪನ್ನು ಅರ್ಥ ಮಾಡಿಕೊಂಡು, ಅವನನ್ನು ಹುಡುಕಲು ಆರಂಭಿಸಿದ್ದ.

ಆಗ ಅಸುರರು, ಗುರು ಶುಕ್ರಾಚಾರ್ಯನ ಸಲಹೆಯಂತೆ, ಸ್ವರ್ಗದ ಮೇಲೆ ದಾಳಿ ಮಾಡಿ, ದೇವತೆಗಳನ್ನ ಹೊಡೆದೋಡಿಸಿದ್ದರು. ತೀವ್ರವಾಗಿ ಗಾಯಗೊಂಡ ದೇವತೆಗಳು, ಬ್ರಹ್ಮನ ಸಲಹೆ ಕೇಳಿದ್ದರು. ಬ್ರಹ್ಮನು ಕೂಡಲೇ ತ್ವಸ್ಥ ಎಂಬ ತಪಸ್ವಿಯ ಮಗನಾದ, ಮೂರು ತಲೆಗಳುಳ್ಳ ವಿಶ್ವರೂಪ ಋಷಿಯನ್ನು, ರಾಜಗುರುವನ್ನಾಗಿ ಮಾಡಿಕೊಳ್ಳಲು ಹೇಳಿದ. ಹಾಗೂ ಅವನ ತಾಯಿಯು ಅಸುರ ಕುಲದವಳಾದ್ದರಿಂದ, ಅವನು ರಾಕ್ಷಸರಿಗೆ ಒಳಿತು ಮಾಡದಂತೆ, ಎಚ್ಚರಿಕೆಯನ್ನ ವಹಿಸುವಂತೆ ಬ್ರಹ್ಮ ಹೇಳಿದ.

ದೇವತೆಗಳ ಮನವಿಗೆ ತಕ್ಷಣ ಒಪ್ಪಿದ ವಿಶ್ವರೂಪ, ನಾರಾಯಣ ಕವಚ ಎಂಬ ರಕ್ಷಾ ಕವಚದ ಮಂತ್ರವನ್ನು ಪಠಿಸಿ, ರಾಕ್ಷಸರಿಂದ ಸ್ವರ್ಗವನ್ನು ಮರಳಿ ಪಡೆದ. ಆದರೆ, ಅವನು ಯಜ್ಞಕ್ಕೆ ಹವಿಸ್ಸನ್ನು ಕೊಡುವಾಗ, ರಾಕ್ಷಸರು ಹಾಗೂ ಭೂತಗಳಿಗೆ, ಯಜ್ಞದ ಪಾಲನ್ನು ಗುಟ್ಟಾಗಿ ನೀಡುತ್ತಿದ್ದ. ಈ ವಿಷಯ ತಿಳಿದ ನಂತರ ಇಂದ್ರನು, ವಿಶ್ವರೂಪನ ಮೂರೂ ತಲೆಗಳನ್ನು ಕಡಿದಿದ್ದ.

ಇದರಿಂದ ಅವನಿಗೆ, ಬ್ರಹ್ಮಹತ್ಯಾ ದೋಷವು ಕಾಡಿತ್ತು. ನಂತರ ದೋಷದ ಒಂದೊಂದು ಪಾಲನ್ನು ಸ್ವೀಕರಿಸುವಂತೆ, ಭೂಮಿಗೆ, ಮರಗಳಿಗೆ, ಹಾಗೂ ಮಹಿಳೆಯರಿಗೆ ಕೋರಿಕೊಂಡ. ಆ ದೋಷದ ಭಾಗವಾಗಿ ಭೂಮಿಯಲ್ಲಿ, ಮರುಭೂಮಿಗಳ ಸೃಷ್ಟಿ ಆಗಿತ್ತು. ಮರಗಳಲ್ಲಿ, ಒಗರು ನೀರು ಉಂಟಾಗಿತ್ತು. ಮಹಿಳೆಯರು ಮುಟ್ಟಿನ ಲಕ್ಷಣಗಳನ್ನು ಪಡೆದುಕೊಂಡಿದ್ದರು. ಹಾಗೂ ಭೂಮಿಯಲ್ಲಿ ಯಾವಾಗಲೂ ನೀರಿನ ಸೆಲೆಯಿರುವಂತೆ, ಮರಗಳ ಎಲೆ ಉದುರಿ ಪುನಹ ಚಿಗುರುವಂತೆ, ಮಹಿಳೆಯರು ಗರ್ಭಿಣಿಯಾದಾಗ ಮಗುವಿಗೆ ರಕ್ಷಣೆಯನ್ನೂ, ಅವರಿಗೆ ದಾಂಪತ್ಯದ ಸಂತೋಷವನ್ನು ಅನುಭವಿಸುವಂತೆಯೂ, ವರಗಳನ್ನ ಇಂದ್ರ ನೀಡಿದ್ದ.

***

ಅತ್ತಕಡೆ, ಕೋಪಗೊಂಡ ತ್ವಷ್ಠನು ಒಂದು ಯಾಗವನ್ನ ನಡೆಸಿ, ರಾಕ್ಷಸನನ್ನು ಸೃಷ್ಟಿ ಮಾಡಿದ್ದ. ಆಕಾಶದೆತ್ತರ ಬೆಳೆದಿದ್ದ ಅವನ ದೇಹ, ಕೈಯಲ್ಲಿನ ಶೂಲವನ್ನು ನೋಡಿ, ಅವನಿಗೆ ವೃತ್ರಾಸುರ ಎಂದು ಕರೆಯಲಾಯಿತು. ಅವನು ತಕ್ಷಣ ಸ್ವರ್ಗಕ್ಕೆ ದಾಳಿ ನಡೆಸಿದ್ದ. ತಡೆಯಲು ನಿಂತಿದ್ದ ದೇವತೆಗಳ ಯಾವುದೇ ಆಯುಧಗಳು ಅವನಿಗೆ ಗಾಯಗೊಳಿಸಲಿಲ್ಲ. ಅಲ್ಲಿಂದ ಪಲಾಯನ ಗೈದ ದೇವತೆಗಳು, ಮಹಾವಿಷ್ಣುವಿನ ಮೊರೆ ಹೋಗಿದ್ದರು.ವಿಷ್ಣುವು, ದಧೀಚಿ ಎಂಬ ಮುನಿಯ ಬೆನ್ನು ಮೂಳೆಯನ್ನು ಕೇಳುವಂತೆ, ಅವರಿಗೆ ಸಲಹೆ ನೀಡಿದ್ದ.

ಅವರು ದಧೀಚಿ ಮುನಿಯ ಬಳಿ ಹೋಗಿ, ಬೆನ್ನು ಮೂಳೆಯನ್ನು ನೀಡಲು ಕೇಳಿಕೊಂಡಾಗ, ಜಗತ್ತಿನ ಉಳಿವಿಗಾಗಿ ಅವನು, ಹಸುವಿನಿಂದ ನೆಕ್ಕಿಸಿಕೊಂಡು, ತನ್ನ ದೇಹ ತ್ಯಾಗ ಮಾಡಿದ್ದ. ಶಿಲ್ಪಿ ವಿಶ್ವಕರ್ಮ, ಆ ಬೆನ್ನು ಮೂಳೆಯಿಂದ ವಜ್ರಾಯುಧವನ್ನು ತಯಾರಿಸಿ, ಇಂದ್ರನಿಗೆ ನೀಡಿದ. ಈಗ ತನ್ನ ಐರಾವತವನ್ನೇರಿದ ಇಂದ್ರ, ವೃತ್ತ್ರಾಸುರನ ಕಡೆಗೆ ನಡೆದಿದ್ದ. ಯುದ್ಧ ಭೂಮಿಯಲ್ಲಿ ದಾಳಿ ಪ್ರತಿದಾಳಿಗಳು ನಡೆದಿದ್ದವು.


ಇಂದ್ರನ ವಜ್ರಾಯುಧದಿಂದ ಸೃಷ್ಟಿಯಾಗಿದ್ದ ರಕ್ಷಣಾ ಪದರದಿಂದಾಗಿ, ಅಸುರರ ಆಯುಧಗಳು, ದೇವತೆಗಳನ್ನ ಕಿಂಚಿತ್ತೂ ಘಾಸಿಗೊಳಿಸಲಿಲ್ಲ. ಆದರೆ, ಮಾರಣಾಂತಿಕವಾಗಿ ಗಾಯಗೊಂಡ ರಾಕ್ಷಸರು, ಅಲ್ಲಿಂದ ಪಲಾಯನ ಮಾಡತೊಡಗಿದ್ದರು.
ವೃತ್ರಾಸುರನು ಗದೆಯಿಂದ, ಐರಾವತದ ತಲೆಗೆ ಹೊಡೆದ. ಇಂದ್ರ ಮತ್ತು ಆನೆ ಇಬ್ಬರೂ ಕೆಳಗೆ ಉರುಳಿ ಬಿದ್ದರು. ರಾಕ್ಷಸನು, ಇಂದ್ರ ಮತ್ತು ಆನೆ ಮೇಲೆ ಏಳಲು ಸಮಯ ನೀಡಿದ. ಗಾಯಗೊಂಡಿದ್ದ ಆನೆಯ ಹಣೆಯನ್ನು ದೇವೇಂದ್ರನು ಸ್ಪರ್ಶಿಸಿದಾಗ, ಅದು ತಕ್ಷಣ ಚೇತರಿಸಿಕೊಂಡು ಮೇಲೆದ್ದಿತು.

ಅಸುರನು ಪುನಃ ದಾಳಿ ಮಾಡಿದಾಗ, ಇಂದ್ರ ಅವನ ಎರಡೂ ಕೈಗಳನ್ನು ಕತ್ತರಿಸಿದ್ದ. ವೃತ್ರಾಸುರ, ತೀವ್ರ ರಕ್ತಸ್ರಾವದಿಂದ, ಕುಸಿದು ನೆಲಕ್ಕೆ ಬಿದ್ದ. ಆಗಸದೆತ್ತರಕ್ಕೆ ಬಾಯನ್ನು ತೆರೆದು, ತನ್ನೆಡೆಗೆ ನುಗ್ಗಿ ಬರುತಿದ್ದ ಇಂದ್ರನನ್ನು ಆನೆಯ ಸಮೇತ ನುಂಗಿದ.
ಇಂದ್ರನು ತನ್ನ ವಜ್ರಾಯುಧದಿಂದ, ರಾಕ್ಷಸನ ಹೊಟ್ಟೆಯನ್ನು ಸೀಳಿ, ಅಲ್ಲಿಂದ ಹೊರಬಂದು, ಇನ್ನೂ  ಜೀವವಿದ್ದ ಅವನ ತಲೆಯನ್ನು ಕತ್ತರಿಸಿದ್ದ. ಬೆಳಕಿನ ಕಿಡಿಯೊಂದು ವೃತ್ರಾಸುರನ ದೇಹದಿಂದ ಹೊರಬಂದು, ಚಿತ್ರಕೇತುವಾಗಿ, ವೈಕುಂಠದ ಕಡೆಗೆ ಹೋಗಿತ್ತು. ವೃತ್ರಾಸುರನನ್ನು ಕೊಂದಾಗ, ಇಂದ್ರನ ಶಕ್ತಿಯು ಕಡಿಮೆಯಾಗಿ, ಮುಖವು ಕಳೆಗುಂದಿತ್ತು.

***

ಇಂದ್ರನು ಹೋದಲ್ಲೆಲ್ಲ ಅವನ ಪಾಪವು, ಒಂದು ಕುರೂಪಿ ಮಹಿಳೆಯ ರೂಪದಲ್ಲಿ ಹಿಂಬಾಲಿಸುತ್ತಿತ್ತು. ಅವಳಿಗೆ ಹೆದರಿದ, ಇಂದ್ರನು ಅಲ್ಲಿಂದ ಓಡಿ, ಮಾನಸ ಸರೋವರವನ್ನು ಸೇರಿದ್ದ. ಅಲ್ಲಿ ಕಮಲಗಳ ಕಾಂಡದಲ್ಲಿ ಆಶ್ರಯ ಪಡೆದ. ಆ ಪವಿತ್ರ ಸರೋವರದ ಒಳಗೆ ಪ್ರವೇಶಿಸುವ ಶಕ್ತಿಯು ಹಿಂಬಾಲಿಸಿದ ಮಹಿಳೆಗೆ ಇರಲಿಲ್ಲ. ಅವಳು ಸರೋವರದ ದಂಡೆಯಲ್ಲಿ ಕಾಯುತ್ತಾ ನಿಂತಳು. ದೇವೇಂದ್ರನಿಗೆ ನೀಡಿದ ಯಜ್ಞದ ಹವಿಸ್ಸನ್ನು, ಅಗ್ನಿ ದೇವನು ತಂದು ತಲುಪಿಸುತ್ತಿದ್ದ. ಇಂದ್ರನಿಲ್ಲದ ಸ್ವರ್ಗವನ್ನು, ಅವನ ಗೆಳೆಯ ನಹುಷ ರಾಜ ಆಳುತ್ತಿದ್ದ. ಸಾವಿರ ವರುಷಗಳ ಕಾಲ ಇಂದ್ರನು ವಿಷ್ಣುವನ್ನು ಪೂಜಿಸುತ್ತಾ, ಸರೋವರದಲ್ಲಿ ಕಾಲ ಕಳೆದ. ಕೊನೆಗೂ ಅವನ ಪಾಪಕ್ಕೆ ಪ್ರಾಯಶ್ಚಿತ ದೊರೆತಿತ್ತು. ಕುರೂಪಿ ಮಹಿಳೆಯು ಮಾಯವಾಗಿದ್ದಳು. ಮರಳಿ ಸ್ವರ್ಗಕ್ಕೆ ಹೋದ ಇಂದ್ರನು, ಪರಮಾತ್ಮನನ್ನು ಮೆಚ್ಚಿಸಲು ಒಂದು ಅಶ್ವಮೇಧ ಯಾಗವನ್ನು ಮಾಡಿ, ತನ್ನ ಶಕ್ತಿಯನ್ನು ಮರಳಿ ಪಡೆದುಕೊಂಡ.

<ಭಾಗ 14| ಭಾಗ 16>

Comments