Skip to main content

ಭಾಗವತದ ಕಥೆಗಳು ಭಾಗ 17: ಗಜೇಂದ್ರ ಮೋಕ್ಷದ ಕಥೆ


gajendra moksha
ಗಜೇಂದ್ರ ಆನೆಯನ್ನು ಹಿಡಿದಿರುವ ಮೊಸಳೆ

ಪುರಾಣಗಳ ಪ್ರಕಾರ ವಿಶ್ವದಲ್ಲಿರುವ ಹದಿನಾಲ್ಕು ಲೋಕಗಳಲ್ಲಿ, ಸ್ವರ್ಗ ಲೋಕವೂ ಒಂದು. ಅಲ್ಲಿನ ರಾಜ ಇಂದ್ರ. ಅವನ ಆಸ್ಥಾನದಲ್ಲಿ ಸುಂದರ ಅಪ್ಸರೆಯರೂ, ಸುಮಧುರ ಗೀತೆಗಳನ್ನು ಹಾಡುವ ಗಂಧರ್ವರೂ ಇರುತ್ತಾರೆ. ಈ ಗಂಧರ್ವರನ್ನು ಬ್ರಹ್ಮ ತನ್ನ ನಗುವಿನಿಂದಲೂ ಅಥವಾ, ಕಶ್ಯಪ ಮುನಿಯು ತನ್ನ ತಪಸ್ಸಿನಿಂದಲೂ, ಸೃಷ್ಟಿ ಮಾಡಿದರೆಂದು ಹೇಳಲಾಗುತ್ತದೆ. ಕೈಲಾಸ ಪರ್ವತವು ಪರಶಿವನ ವಾಸ ಸ್ಥಾನ. ಇದೇ ಕೈಲಾಸದ ಉತ್ತರಕ್ಕೆ ಇರುವುದು ಗಂಧರ್ವ ಲೋಕ. ಗಂಧರ್ವರಿಗೆ ಗಾಳಿಯಲ್ಲಿ ಹಾರಾಡುವ, ಗಾಯಗಳನ್ನು ಗುಣಪಡಿಸುವ ಹಾಗೂ, ಮರಗಿಡ ಪ್ರಾಣಿಪಕ್ಷಿಗಳ ಜೊತೆಯಲ್ಲಿ, ಮಾತನಾಡುವ ಶಕ್ತಿಯೂ ಇರುತ್ತದೆ.

ಯಾವುದೇ ಯಜ್ಞ ಯಾಗಾದಿಗಳು ಇಲ್ಲದೇ, ಪರಸ್ಪರ ಗಂಡು ಹೆಣ್ಣಿನ ಸಮ್ಮತಿಯಿಂದ ನಡೆಯುವ ವಿವಾಹವೇ, ಗಂಧರ್ವ ವಿವಾಹ. ಕೆಲವು ಗಂಧರ್ವರು ಅರ್ಧ ಮನುಷ್ಯ ದೇಹ ಹಾಗೂ, ಅರ್ಧ ಪ್ರಾಣಿಯ ದೇಹವನ್ನು ಹೊಂದಿರುತ್ತಾರೆ. ಸ್ವರ್ಗದಲ್ಲಿನ ಸೋಮ ರಸವನ್ನು ಕಾಯುವುದು ಕೂಡಾ, ಇವರ ಇನ್ನೊಂದು ಕಾರ್ಯ. 
ಈ ಗಂಧರ್ವಲೋಕದಲ್ಲಿ ಹುಹೂ ಎಂಬ ಒಬ್ಬ ಸುಂದರ ಗಂಧರ್ವನಿದ್ದ. ಅವನನ್ನು ಕಂಡರೆ ಗಂಧರ್ವ ಸ್ತ್ರೀಯರಿಗೆ ಬಹಳ ಅಚ್ಚುಮೆಚ್ಚು. ಈ ಸ್ತ್ರೀಯರೊಂದಿಗೆ ಆಗಾಗ ಭೂಲೋಕಕ್ಕೆ ಬರುತಿದ್ದ ಹುಹೂ, ಒಂದು ಬಾರಿ ನದಿಯೊಂದರಲ್ಲಿ ಅವರೊಂದಿಗೆ ಸ್ನಾನಕ್ಕಿಳಿದ. ಅವರು ಪರಸ್ಪರ ನೀರನ್ನೆರಚುತ್ತಾ ಆನಂದದಿಂದ ವಿಹರಿಸುತ್ತಿದ್ದರು. ಅದೇ ನದಿಯ ಇನ್ನೊಂದು ಭಾಗದಲ್ಲಿ, ದೇವಳ ಎಂಬ ಮುನಿಯೊಬ್ಬ ದೇವರನ್ನು ಧ್ಯಾನಿಸುತ್ತಾ ಮುಳುಗೇಳುತ್ತಿದ್ದ. ತಾನು ಸುಂದರಾಂಗ ಎಂಬ ಹೆಮ್ಮೆಯಿಂದ ಹುಹೂ, ಗಂಧರ್ವ ಸ್ತ್ರೀಯರ ಮನೋರಂಜನೆಗಾಗಿ, ನೀರಿನ ಆಳದಲ್ಲಿ ಮುಳುಗಿ ದೇವಳ ಋಷಿಯ ಕಾಲನ್ನು ಎಳೆದಿದ್ದ. ತನ್ನನ್ನು ಮೊಸಳೆಯೊಂದು ಎಳೆಯಿತೆಂದು ಹೆದರಿದ ಋಷಿಯು, ತನ್ನ ಕೈಕಾಲುಗಳನ್ನು ಬಡಿಯುತ್ತಾ, ಹೇಗೋ ನೀರಿನಿಂದ ಮೇಲಕ್ಕೆದ್ದು ಬಂದಿದ್ದ. ತನ್ನನ್ನು ನೋಡಿ ನಗುತ್ತಿದ್ದ ಗಂಧರ್ವರನ್ನು ಕಂಡು, ಅವನು ಸಿಟ್ಟಿಗೆದ್ದಿದ್ದ. ನೀನೊಂದು ಮೊಸಳೆಯಾಗಿ ಹುಟ್ಟು ಎಂದು ಶಪಿಸಿ, ಅವನು ಅಲ್ಲಿಂದ ಹೊರಟಿದ್ದ. ಭಯಗೊಂಡ ಗಂಧರ್ವನು ಅವನ ಹಿಂದೆಯೇ ಓಡಿ, ಅವನ ಕಾಲಿಗೆ ಬಿದ್ದು ಕ್ಷಮಾಪಣೆಯನ್ನು ಕೇಳಿದ್ದ. ಪರಿಹಾರವನ್ನು ಸೂಚಿಸುವಂತೆ ಬೇಡಿಕೊಂಡಿದ್ದ. "ಗಜೇಂದ್ರ ಎಂಬ ಆನೆಯು ನಿನ್ನನ್ನು ಶಾಪದಿಂದ ಮುಕ್ತ ಗೊಳಿಸುತ್ತಾನೆ." ಎಂದ ಮುನಿಯು ಅಲ್ಲಿಂದ ಹೊರಟುಹೋಗಿದ್ದ.

***

ಪಾಂಡ್ಯನಾಡು ಎಂಬ ದೇಶದಲ್ಲಿ, ಇಂದ್ರದ್ಯುಮ್ನ ಎಂಬ ರಾಜನಿದ್ದ. ವೈಷ್ಣವ ಪಂಥದವನಾಗಿದ್ದ ಅವನು,ವಿಷ್ಣುವಿನ ಪರಮ ಭಕ್ತನಾಗಿದ್ದ. ಅವನು ತನ್ನ ವೃದ್ಧಾಪ್ಯ ಕಾಲದಲ್ಲಿ, ಮಲಯ ಬೆಟ್ಟದ ಪಕ್ಕದಲ್ಲಿ ಒಂದು, ಕುಟೀರವನ್ನು ಕಟ್ಟಿಕೊಂಡು ಸನ್ಯಾಸಿ ಜೀವನವನ್ನು ಸಾಗಿಸುತ್ತಿದ್ದ. ಹೀಗೆ ಒಂದು ದಿನ ಅವನು ಧ್ಯಾನದಲ್ಲಿ ನಿರತನಾಗಿದ್ದಾಗ, ಅಗಸ್ತ್ಯ ಮುನಿಯು ಅಲ್ಲಿಗೆ ತನ್ನ ಶಿಷ್ಯರೊಂದಿಗೆ ಬಂದಿದ್ದ. ಕಣ್ಣು ಮುಚ್ಚಿ ಕುಳಿತಿದ್ದ ಇಂದ್ರದ್ಯುಮ್ನನು, ಅವನಿಗೆ ಸ್ವಾಗತವನ್ನು ಕೋರಲಿಲ್ಲ. ಕೋಪಗೊಂಡ ಅಗಸ್ತ್ಯ ಮುನಿಯು, ನೀನೊಂದು ಮೂರ್ಖ ಆನೆಯಾಗಿ ಹುಟ್ಟು ಎಂದು ಅವನಿಗೆ ಶಪಿಸಿ, ಅಲ್ಲಿಂದ ಹೊರಟು ಹೋದ.

***

ಅದು ತ್ರಿಕೂಟ ಎಂಬ ಸುಂದರ ಪರ್ವತ. ಆ ಕಾಡಿನಲ್ಲಿ ಗಜೇಂದ್ರ ಎಂಬ ಆನೆಗಳ ರಾಜನು ತನ್ನ ರಾಣಿ ಆನೆಗಳೊಂದಿಗೆ ವಾಸಿಸುತ್ತಿತ್ತು. ಒಂದು ಬೇಸಿಗೆಯ ಬಿಸಿಲಿನ ಝಳಕ್ಕೆ ತಾಳಲಾರದೆ, ಗಜೇಂದ್ರ ಸಂಗಾತಿಗಳೊಡನೆ, ನೀರನ್ನು ಹುಡುಕಿಕೊಂಡು ಕಾಡಿನಲ್ಲಿ ಅಲೆದಾಡುತ್ತಾ, ಸಿಕ್ಕ ಸಿಕ್ಕ ಮರಗಳನ್ನು ಮುರಿಯುತಿದ್ದನು. ಈ ಆನೆಗಳ ಅಬ್ಬರಕ್ಕೆ ಕಾಡಿನ ಇತರೆ ಪ್ರಾಣಿಗಳು, ಹೆದರಿ ಓಡ ತೊಡಗಿದ್ದವು. ಹೀಗೆ ಸಾಗುತ್ತಾ ಒಂದು ಸುಂದರವಾದ ಸರೋವರವನ್ನು ಅವುಗಳು ಕಂಡವು. ತಡಮಾಡದೆ ಆನೆಗಳ ಗುಂಪು ಸರೋವರವನ್ನು ಪ್ರವೇಶಿಸಿ, ನೀರಾಟವನ್ನು ಆಡಲಾರಂಭಿಸಿತು. ಸಮಯವು ಸರಿದಂತೆ, ಒಂದು ಭೀಕರ ಮೊಸಳೆಯೊಂದು ತುಸುದೂರದಲ್ಲಿ ಕುಳಿತು,ಈ ಆನೆಗಳ ಕಡೆಗೆ ನೋಡುತ್ತಿತ್ತು. ಮೆಲ್ಲನೆ ನೀರಿಗಿಳಿದು ಗಜೇಂದ್ರನ ಕಡೆಗೆ ಸಾಗಿತ್ತು. ಮೊಸಳೆಯ ಬಗ್ಗೆ ಸ್ವಲ್ಪವೂ ಗಮನವಿಲ್ಲದೆ, ಆನೆಗಳ ಸ್ನಾನವು ಮುಂದುವರೆದಿತ್ತು. ಆ ಭೀಕರ ಮೊಸಳೆಯು ರಭಸದಿಂದ, ಗಜರಾಜನ ಕಾಲನ್ನು ಕಚ್ಚಿ ಹಿಡಿದಿತ್ತು. ಅದರ ಹಿಡಿತದಿಂದ ತಪ್ಪಿಸಿಕೊಳ್ಳಲು ಗಜೇಂದ್ರ ಆನೆ ಒದ್ದಾಡಲು ಆರಂಭಿಸಿತು. ಇತರೆ ಆನೆಗಳು ಭಯಭೀತರಾಗಿ ದಡವನ್ನು ಸೇರಿ, ಗಜೇಂದ್ರನ ಪರಿಸ್ಥಿತಿಯನ್ನು ನೋಡುತ್ತಾ, ಮರುಕ ಪಟ್ಟವು. ಒಂದೆರಡು ಆನೆಗಳು ಧೈರ್ಯ ಮಾಡಿ, ಮೊಸಳೆಯನ್ನು ಓಡಿಸಲು ನೋಡಿದವು. ಆದರೆ ಮೊಸಳೆಯ ಬಲಿಷ್ಠ ದವಡೆಗಳಿಂದ, ಗಜೇಂದ್ರನನ್ನು ಬಿಡಿಸಲು ಅವುಗಳಿಂದ ಆಗಲಿಲ್ಲ. ಹೀಗೆ ಸಾವಿರ ವರುಷಗಳು ಸರಿದವು. ಎರಡೂ ಪ್ರಾಣಿಗಳೂ ತಮ್ಮ ಪಟ್ಟು ಬಿಡಲಿಲ್ಲ. ಮೊಸಳೆಯ ಹಿಡಿತವೂ ಬಲಿಷ್ಠ ಆಗುತ್ತಲೇ ಹೋದರೆ, ಗಜೇಂದ್ರನ ಶಕ್ತಿಯು ದಿನೇ ದಿನೇ ಕಡಿಮೆಗೊಳ್ಳುತಿತ್ತು. ಆಗ ಆನೆಯು ಅಳುತ್ತಾ, ಸಹಾಯಕ್ಕಾಗಿ ಘೀಳಿಡ ತೊಡಗಿತ್ತು.

"ನನ್ನ ಮಡದಿ-ಮಕ್ಕಳು ಗೆಳೆಯರಾರಿಗೂ, ನನ್ನ ಕಷ್ಟದಲ್ಲಿ ಸಹಾಯವನ್ನು ಮಾಡಲಾಗುತ್ತಿಲ್ಲ. ಇನ್ನು ದೇವರು ಎಂಬುವವನಿದ್ದಾನೆ ಎಂದಾದರೆ, ಅವನಾದರೂ ಸಹಾಯ ಮಾಡುತ್ತಾನೇನೋ?" ಎಂದು ಯೋಚಿಸಿದ ಆನೆಯು, ನೋವಿನಲ್ಲೂ ತನ್ನ ಮನಸ್ಸನ್ನು ಏಕಾಗ್ರತಗೊಳಿಸಿ, ಭಗವಂತಾ ನನ್ನನ್ನು ಕಾಪಾಡು ಎಂದು, ಮೊರೆಯನ್ನು ಇಡತೊಡಗಿತ್ತು. ತನ್ನ ಹಿಂದಿನ ಜನ್ಮವು ನೆನಪಿಗೆ ಬಂದು,ಸ್ಮರಣೆಯಲ್ಲಿದ್ದ ಸ್ತೋತ್ರಗಳನ್ನೆಲ್ಲಾ, ತನ್ನ ಮನಸ್ಸಿನಲ್ಲಿಯೇ ಹೇಳತೊಡಗಿತ್ತು.

ಸಮಯವು ಉರುಳುತ್ತಿತ್ತು. ಸ್ವರ್ಗದಿಂದ ಎಲ್ಲವನ್ನೂ ಅಚ್ಚರಿಯಿಂದ ನೋಡುತಿದ್ದ, ದೇವಾದಿ ದೇವತೆಗಳೂ ಕೂಡಾ, ಅಸಹಾಯಕರಂತೆ ಸುಮ್ಮನೆ ನಿಂತಿದ್ದರು. ಮಹಾವಿಷ್ಣುವು ಈ ಆನೆಯ ಆರ್ತನಾದವನ್ನು ನೋಡಿ ಸಹಿಸದಾದನು. ತಡಮಾಡಿದರೆ ಗಜೇಂದ್ರನು ಇನ್ನಷ್ಟು ನೋವನ್ನು ಪಡುವನು ಎಂದು, ತಕ್ಷಣ ವೈಕುಂಠದಿಂದ ಹೊರಟನು. ತನ್ನ ಜೀವದ ಮೇಲಿನ ಆಸೆಯನ್ನು ಕಳೆದುಕೊಂಡಿದ್ದ ಗಜೇಂದ್ರನು, ಕಣ್ಣೀರಿಡುತ್ತಾ ಕಾಲನ್ನು ಕೊಡವುತಿದ್ದ. ಮೊಸಳೆಯ ಹಲ್ಲಿನ ಬಿಗಿತವು ಇನ್ನಷ್ಟು ಬಲವಾಗುತ್ತಲೇ ಹೋಗಿತ್ತು. ಅಷ್ಟರಲ್ಲಿ ಗರುಡನ ರೆಕ್ಕೆಯ ಶಬ್ಧವು ಅಲ್ಲಿ ಕೇಳಿಸಿತ್ತು. ಗಜೇಂದ್ರ ಆನೆಯು ತಕ್ಷಣ, ಒಂದು ಕಮಲದ ಹೂವನ್ನು ಸೊಂಡಿಲಲ್ಲಿ ಎತ್ತಿಕೊಂಡು ಘೀಳಿಟ್ಟನು. ಆನೆಯನ್ನು ಬಿಡು ಎಂಬ ವಿಷ್ಣುವಿನ ಮಾತನ್ನು, ಮೊಸಳೆಯು ಕೇಳದಿದ್ದಾಗ, ಮಹಾವಿಷ್ಣುವು ತನ್ನ ಸುದರ್ಶನ ಚಕ್ರವನ್ನು ಕೈಯಿಂದ ಬಿಡುಗಡೆ ಮಾಡಿದ್ದ. ಮೊಸಳೆಯ ಬಾಯನ್ನು ತುಂಡರಿಸಿದ ಚಕ್ರವು, ಪರಮಾತ್ಮನ ಕೈಯನ್ನು ಪುನಹ ಸೇರಿತ್ತು. ಮೊಸಳೆಯು ನೋವಿನಿಂದ ನೀರಿನೊಳಕ್ಕೆ ಹೊಕ್ಕಿತ್ತು. ಆಗ ದೇವಾದಿದೇವತೆಗಳೂ ಚಪ್ಪಾಳೆಯನ್ನು ತಟ್ಟುತ್ತಾ, ಹೂಮಳೆಯನ್ನು ಸುರಿಸಿದರು.

ಕೆಲವು ಕ್ಷಣಗಳಲ್ಲೇ ಮೊಸಳೆಯ ಮೃತದೇಹವು, ನೀರಿನಿಂದ ಮೇಲಕ್ಕೆ ತೇಲುತ್ತಾ ಬಂದಿತ್ತು. ಅದರ ಮೃತ ದೇಹದಿಂದ ಹುಹೂ ಗಂಧರ್ವನ ಸೃಷ್ಟಿಯಾಗಿ, ಭಗವಂತನಿಗೆ ಕೈಮುಗಿದಿದ್ದ. ನನಗೆ ದೇವಳ ಮುನಿಯ ಶಾಪ ವಿಮೋಚನೆ ಆಯಿತೆಂದು ಅವನು, ತನ್ನ ಗಂಧರ್ವ ಲೋಕಕ್ಕೆ ಹಾರುತ್ತಾ ತೆರಳಿದ್ದ. ವಿಷ್ಣುವು ಗಜೇಂದ್ರನನ್ನು ಸ್ಪರ್ಶಿಸಿ, ಅವನ ಗಾಯವು ಕ್ಷಣದಲ್ಲಿ ವಾಸಿಯಾಗುವಂತೆ ಮಾಡಿದ್ದ. ಗಜೇಂದ್ರ ಇದ್ದ ಜಾಗದಲ್ಲಿ ಮಹಾರಾಜ ಇಂದ್ರದ್ಯುಮ್ನನು ಪ್ರತ್ಯಕ್ಷವಾಗಿ, ವಿಷ್ಣುವಿಗೆ ನಮಿಸಿದ್ದ. ಅವನನ್ನು ತನ್ನೊಂದಿಗೆ ಗರುಡನ ಮೇಲೆ ಕೂರಿಸಿಕೊಂಡ ಮಹಾ ವಿಷ್ಣು, ವೈಕುಂಠಕ್ಕೆ ತೆರಳಿದನು.

<ಭಾಗ 16|ಭಾಗ 18>

Comments