Skip to main content

ಭಾಗವತದ ಕಥೆಗಳು ಭಾಗ 16: ನರಸಿಂಹ ಅವತಾರ





Narasimha
ನರಸಿಂಹ ಮತ್ತು ಹಿರಣ್ಯಕಶಿಪು 

ಬ್ರಹ್ಮನ ಮಾನಸ ಪುತ್ರರಾದ ನಾಲ್ಕು ಸನಕಾದಿ ಮುನಿಗಳು, ವಿಷ್ಣುವಿನ ದರ್ಶನಕ್ಕೆ ಹೋದಾಗ, ವೈಕುಂಠದ ದ್ವಾರದಲ್ಲಿ ಅವರನ್ನು ಜಯ ವಿಜಯರು ತಡೆಡಿದ್ದರು. ಕೋಪಗೊಂಡ ಬಾಲ ಮುನಿಗಳು, ಭೂಲೋಕದಲ್ಲಿ ರಾಕ್ಷಸರಾಗಿ ಹುಟ್ಟಿ ಎಂದು,ಅವರಿಬ್ಬರಿಗೆ ಶಾಪವನ್ನು ಕೊಟ್ಟರು. ಅದರಂತೆ ದಿತಿಯ ಮಕ್ಕಳಾಗಿ ಹುಟ್ಟಿದ, ಜಯನು ಹಿರಣ್ಯಾಕ್ಷನಾದ. ಭೂದೇವಿಯನ್ನು ಅಪಹರಿಸಿ, ವಿಷ್ಣುವಿನ ವರಾಹ ಅವತಾರದಿಂದ ಹತನಾಗಿದ್ದ. ಅವನ ತಮ್ಮ ವಿಜಯನು, ಹಿರಣ್ಯಕಶಿಪು ಆಗಿದ್ದ. ಅಣ್ಣನ ಸಾವಿನಿಂದ ಹಿರಣ್ಯಕಶಿಪು,ತೀವ್ರವಾಗಿ ದುಃಖಿಸಲು ಪ್ರಾರಂಭಿಸಿದನು. ಅದಕ್ಕೆ ಕಾರಣನಾಗಿದ್ದ ವಿಷ್ಣುವಿನ ವಿರುದ್ಧ, ಅವನು ಸೇಡು ತೀರಿಸಿಕೊಳ್ಳಲು ಬಯಸಿದನು.

ಮಂದಾರ ಬೆಟ್ಟದ ಕಣಿವೆಯಲ್ಲಿ, ಅವನು ಬ್ರಹ್ಮನ ಕುರಿತು ಘೋರ ತಪಸ್ಸು ಮಾಡಿದನು. ಕಾಲವು ಸರಿದಂತೆ, ಅವನ ದೇಹವು ಬಡಕಲಾಗಿ, ಹುಲ್ಲು ಕಡ್ಡಿಗಳಿಂದ ಮುಚ್ಚಲ್ಪಟ್ಟಿತು. ಇರುವೆಗಳು ಅವನನ್ನು ತಿನ್ನಲು ಆರಂಭಿಸಿದವು.
ಕೊನೆಗೂ ಬ್ರಹ್ಮ ಅಲ್ಲಿ ಪ್ರತ್ಯಕ್ಷನಾಗಿ, ಅವನ ದೇಹಕ್ಕೆ ನೀರು ಚಿಮುಕಿಸಿ, ಮೊದಲಿನಂತೆ ಮಾಡಿ, ವರವನ್ನು ಕೇಳೆಂದನು.

ಆಗ ಹಿರಣ್ಯಕಶಿಪು, ನನಗೆ ನಿನ್ನ ಸೃಷ್ಟಿಯ ಯಾವುದೇ ಮನುಷ್ಯ, ರಾಕ್ಷಸ, ಜೀವಿ, ನಿರ್ಜೀವಿ, ದೇವತೆ, ಪ್ರಾಣಿಯಿಂದಾಗಲಿ, ಆಯುಧದಿಂದಾಗಲಿ, ಯಾವುದೇ ಮನೆಯ ಒಳಗಾಗಲಿ, ಅಥವಾ ಹೊರಗಾಗಲಿ, ಹಗಲು ಅಥವಾ ಇರುಳಾಗಲಿ, ಸಾವು ಬರದಂತೆ ವರವನ್ನು ಕೊಡು ಎಂದನು. ಅದಕ್ಕೆ ತಥಾಸ್ತು ಎಂದ ಬ್ರಹ್ಮನು, ಅಲ್ಲಿಂದ ಅದೃಶ್ಯನಾದನು.
ನಂತರ ಹಿರಣ್ಯಕಷೀಪು, ತನ್ನ ರಾಕ್ಷಸ ಸೈನ್ಯದೊಂದಿಗೆ, ಇಡೀ ವಿಶ್ವವನ್ನೇ ಗೆದ್ದು, ದೇವರಾಜ ಇಂದ್ರನನ್ನು ಬಂಧಿಸಿ, ಸ್ವರ್ಗದ ರಾಜನಾದನು. ಅವನಿಗೆ ಹೆದರಿದ ಭೂಮಿಯು, ತಾನಾಗಿಯೇ ಬೆಳೆಯನ್ನು ಬೆಳೆಯುತಿತ್ತು. ಹಸುಗಳು ಸಾಕಷ್ಟು ಹಾಲನ್ನು ನೀಡುತ್ತಿದ್ದವು.

ಹಿರಣ್ಯಕಶಿಪು ತಪಸ್ಸು ಮಾಡುತ್ತಿದ್ದ ಸಮಯದಲ್ಲಿ, ಅವನ ಹೆಂಡತಿಯಾದ ಕಯಾದು, ಗರ್ಭಿಣಿ ಆಗಿದ್ದಳು. ಅವಳ ಮಗನು ಮುಂದೆ ತನಗೆ ಕಂಟಕವಾಗಬಹುದು, ಎಂದು ಅಂಜಿದ ಇಂದ್ರನು, ಅವಳನ್ನು ಅಪಹರಿಸಿದ್ದನು. ಆಗ ಅವನನ್ನು ತಡೆದ ನಾರದ ಮುನಿಯು, ಕಯಾದುವನ್ನು ತನ್ನ ಆಶ್ರಮದಲ್ಲಿ ಇರಿಸಿಕೊಂಡು, ವಿಷ್ಣುವಿನ ಕಥೆಗಳನ್ನು ಅವಳಿಗೆ ಹೇಳುತ್ತಿದ್ದ. ನಂತರ ಪ್ರಹ್ಲಾದ ಎಂಬ ಮಗ ಜನಿಸಿದ್ದ.

ಹಿರಣ್ಯಕಶಿಪು ತಪಸ್ಸಿನಿಂದ ಬಂದ ನಂತರ, ಕಯಾದು ತನ್ನ ಮಗನೊಂದಿಗೆ ಅರಮನೆ ಸೇರಿದ್ದಳು. ಬಾಲಕ ಪ್ರಹ್ಲಾದನು ಬಾಲ್ಯದಿಂದಲೇ ವಿಷ್ಣು ಭಕ್ತನಾಗಿದ್ದ. ನಂತರ ಅವನನ್ನು ಗುರು ಕುಲಕ್ಕೆ ಸೇರಿಸಲಾಯಿತು.

ಗುರು ಶುಕ್ರಾಚಾರ್ಯರ ಇಬ್ಬರೂ ಮಕ್ಕಳಾದ, ಶಾಂಡ ಮತ್ತು ಅಮರಕರು ಪ್ರಹ್ಲಾದನ ಗುರುಗಳಾದರು. ಹಿರಣ್ಯ ಕಶೀಪು ವಿಷ್ಣುವಿನ ದ್ವೇಷಿ ಆಗಿದ್ದರಿಂದ, ಅವನ ಮುಂದೆ ಪ್ರಹ್ಲಾದನು, ವಿಷ್ಣುವಿನ ಭಜನೆಯನ್ನು ಮಾಡದಂತೆ ತಡೆಯಲು, ಅವರಿಬ್ಬರೂ ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದವು.

ಕೆಲವು ವಾರಗಳ ನಂತರ, ಪ್ರಹ್ಲಾದನ ಶಿಕ್ಷಣವು ಮುಗಿದಿತ್ತು. ಅವನನ್ನು ಪುನಹ ಅರಮನೆಗೆ ಕರೆತರಲಾಯಿತು. ಅವನ ಶಿಕ್ಷಣದ ಬಗ್ಗೆ ವಿಚಾರಿಸಿದ ಹಿರಣ್ಯಕಶಿಪುವಿಗೆ, ತನ್ನ ಮಗ ರಾಜಕುಮಾರನಾಗುವ ಬದಲು, ತನ್ನ ವೈರಿಯಾದ ವಿಷ್ಣುವಿನ ಭಕ್ತನಾಗಿದ್ದು ತಿಳಿಯಿತು. ಅವನು ಕೋಪದಿಂದ ಕೆಂಡವಾಗಿದ್ದ. ಎದುರಲ್ಲೇ ನಿಂತಿದ್ದ ಪ್ರಹ್ಲಾದನ ಗುರುಗಳಿಬ್ಬರೂ, ಈಗ ನಡುಗಿ ಹೋಗಿದ್ದರು. ಅವನಿಗೆ ಇದನ್ನು ನಾವು ಹೇಳಿಕೊಡಲಿಲ್ಲ ಎಂದು ವಾದಿಸಿದ್ದರು. ಹರಿಸ್ಮರಣೆಯನ್ನು ಬಿಡುವಂತೆ, ಹಿರಣ್ಯಕಶಿಪು ಮಗನಿಗೆ ಹೆದರಿಸಿದ್ದ.

ತನ್ನ ಭಟರಿಗೆ ಹೇಳಿ, ಆಯುಧಗಳಿಂದ ಹೊಡೆಸಿದ್ದ. ಈಟಿಗಳಿಂದ ಚುಚ್ಚಿಸಿದ್ದ. ತನ್ನ ಕಣ್ಣುಗಳನ್ನು ಮುಚ್ಚಿಕೊಂಡು, ಕೈ ಮುಗಿದುಕೊಂಡ ಪ್ರಹ್ಲಾದನು, ಹರಿಯ ಸ್ಮರಣೆಯನ್ನು ಮಾಡುತ್ತಿದ್ದ. ಯಾವ ಆಯುಧಗಳೂ ಅವನಿಗೆ, ನೋವನ್ನುಂಟು ಮಾಡಲಿಲ್ಲ.

ನಂತರ ಅಸುರನು ತನ್ನ ಮಗನನ್ನು, ಆನೆಯಿಂದ ಒದೆಸಲು ನೋಡಿದ. ವಿಷಪೂರಿತ ಹಾವುಗಳಿಂದ ಕಚ್ಚಿಸಿದ್ದ. ಬೆಂಕಿಯಿಂದ ಸುಟ್ಟಿದ್ದ, ಬೆಟ್ಟದಿಂದ ಕೆಳಗೆ ತಳ್ಳಿಸಿದ್ದ. ಕೊನೆಗೆ, ವಿಷ ಪ್ರಾಶನವನ್ನೇ ಮಾಡಿಸಿದ್ದ. ಇಷ್ಟೆಲ್ಲಾ ಮಾಡಿದರೂ ಪ್ರಹ್ಲಾದನನ್ನು ಕೊಲ್ಲಲು, ಅವನಿಂದ ಸಾಧ್ಯವಾಗಲಿಲ್ಲ.

ಅವನನ್ನು ತಿದ್ದಲು, ನಮಗೆ ಮತ್ತೊಮ್ಮೆ ಅವಕಾಶವನ್ನು ಕೊಡಿ, ಎಂದು ಕೇಳಿದ ಶುಕ್ರಾಚಾರ್ಯರ ಮಕ್ಕಳು, ಪುನಃ ಅವನನ್ನು ಗುರುಕುಲಕ್ಕೆ ಕರೆದುಕೊಂಡು ಹೋದರು. ಆದರೆ, ಪ್ರಹ್ಲಾದನು ಸಮಯ ಸಿಕ್ಕಾಗೆಲ್ಲಾ, ಉಳಿದ ಅಸುರರ ಮಕ್ಕಳಿಗೂ, ವಿಷ್ಣುವಿನ ಕಥೆಗಳನ್ನು ಹೇಳುತ್ತಾ, ಅವರ ಮನ ಪರಿವರ್ತನೆ ಮಾಡುತ್ತಿದ್ದ. ಇದರಿಂದ ಎಲ್ಲಾ ರಾಕ್ಷಸರು ಬಂದು, ಹಿರಣ್ಯ ಕಶೀಪುವಿಗೆ ದೂರು ನೀಡತೊಡಗಿದ್ದರು.

ಒಂದು ಮುಸ್ಸಂಜೆಯಲ್ಲಿ, ಇನ್ನು ತನ್ನ ಕೈಯಾರೆ ಮಗನನ್ನು ಕೊಲ್ಲುತ್ತೇನೆ ಎಂದು, ಧೃಢ ನಿರ್ಧಾರ ಮಾಡಿದ ಹಿರಣ್ಯ ಕಶೀಪು, ಗದೆಯನ್ನು ಹಿಡಿದುಕೊಂಡು, ಮಗನನ್ನು ಜೋರಾಗಿ ಕರೆದಿದ್ದ. "ನಿನ್ನ ಹರಿ ಎಲ್ಲಿದ್ದಾನೆ ತೋರಿಸು. ಅವನು ನಿನ್ನನ್ನು ಕಾಪಾಡಲು ಹೇಗೆ ಬರುತ್ತಾನೆ ಎಂದು, ನಾನೂ ನೋಡುತ್ತೇನೆ. ಅವನ ಜೊತೆ ನಿನ್ನನ್ನೂ ಕೊಲ್ಲುತ್ತೇನೆ." ಎಂದು ಆರ್ಭಟಿಸಿದ್ದ.

ಈ ಕಥೆಯನ್ನು ಯು ಟ್ಯೂಬ್ ನಲ್ಲಿ ವೀಕ್ಷಿಸಿ.



ಹಿರಣ್ಯಕಶಿಪು ತನ್ನ ಗದೆಯನ್ನು ತೆಗೆದುಕೊಂಡು, ಅರಮನೆಯ ಪ್ರತಿಯೊಂದು ವಸ್ತುಗಳನ್ನು ತೋರಿಸುತ್ತಾ ಇಲ್ಲಿ ನಿನ್ನ ಹರಿ ಇದ್ದಾನೆಯೇ ಎಂದು ಕೇಳತೊಡಗಿದ್ದ. ಪ್ರತ್ಯುತ್ತರವಾಗಿ ಹೌದು ಎಂದು ಪ್ರಹ್ಲಾದ ಹೇಳುತ್ತಿದ್ದ.

ಆಗ ಬಹಳ ಕೋಪದಿಂದ ರಾಕ್ಷಸನು, ಒಂದು ಕಂಬಕ್ಕೆ ಹೊಡೆದನು. ಆಗ ಕಂಬವು ಒಡೆದು ಎರಡು ಭಾಗವಾಗಿತ್ತು. ಕಣ್ಣು ಕೋರೈಸುವ ಬೆಳಕು ಹೊರಹೊಮ್ಮಿತು. ಮಹಾವಿಷ್ಣುವು ಸಿಂಹದ ತಲೆಯ, ಮನುಷ್ಯ ದೇಹದ ವ್ಯಕ್ತಿಯ ರೂಪದಲ್ಲಿ ಅದರಿಂದ ಹೊರಗೆ ಬಂದನು.

ಹಿರಣ್ಯ ಕಶಿಪು ಗದೆಯಿಂದ ನರಸಿಂಹನ ಮೇಲೆ ದಾಳಿ ಮಾಡಿದನು. ಅವನ ಕೈಯಿಂದ ಗದೆಯನ್ನು ಬೀಳಿಸಿದ ನರಸಿಂಹನು, ಅವನ ಖಡ್ಗದ ದಾಳಿಯನ್ನೂ ಎದುರಿಸಿದ. ನಂತರ, ರಾಕ್ಷಸನನ್ನು ಕೈಗಳಲ್ಲಿ ಎತ್ತಿಕೊಂಡು, ದ್ವಾರದ ಹೊಸ್ತಿಲ ಮೇಲೆ ಕುಳಿತು ಉಗುರುಗಳಿಂದ ಅವನ ಹೊಟ್ಟೆಯನ್ನು ಬಗೆದು, ಕರುಳ ಬಳ್ಳಿಗಳನ್ನು ಹೊರಗೆಳೆದು, ತನ್ನ ಕೊರಳ ಮಾಲೆಯಂತೆ ಹಾಕಿಕೊಂಡನು. ತೀವ್ರ ರಕ್ತಸ್ರಾವ ಹಾಗೂ ನೋವಿನಿಂದ, ಹಿರಣ್ಯ ಕಷಿಪು ತನ್ನ ಕೊನೆಯುಸಿರೆಳೆದನು. ಉಳಿದ ರಾಕ್ಷಸರನ್ನು ನರಸಿಂಹನು ಸದೆ ಬಡಿದನು.

ಅಲ್ಲಿ ಪ್ರತ್ಯಕ್ಷವಾದ ದೇವತೆಗಳ ಭಗವಂತನ ಬಳಿಗೆ ಹೋಗಲು ಹೆದರಿದರು. ಪ್ರಹ್ಲಾದನು ಭಕ್ತಿಯಿಂದ ಕೈಮುಗಿದುಕೊಂಡು ಸ್ತೋತ್ರಗಳನ್ನು ಹಾಡಿದಾಗ, ಮಹಾವಿಷ್ಣು ತನ್ನ ನಿಜ ರೂಪದಲ್ಲಿ ಪ್ರತ್ಯಕ್ಷನಾಗಿ, ಅವನಿಗೆ ಆಶೀರ್ವದಿಸಿದರು. ರಾಕ್ಷಸರಿಗೆ ವರವನ್ನು ನೀಡದಂತೆ ಬ್ರಹ್ಮನಿಗೆ ತಿಳಿಸಿ, ವೈಕುಂಠಕ್ಕೆ ಹೋದನು. ನಂತರ ಶುಕ್ರಾಚಾರ್ಯ ಹಾಗೂ ಬ್ರಹ್ಮನ ಸಮ್ಮುಖದಲ್ಲಿ ಪ್ರಹ್ಲಾದನನ್ನು ರಾಜನನ್ನಾಗಿ ಮಾಡಲಾಯಿತು.

ಅಸುರರ ತಾಯಿ ದಿತಿಯು, ತನ್ನ ಇಬ್ಬರೂ ಮಕ್ಕಳ ಮರಣದ ನಂತರ, ಬಹಳ ದುಃಖ ಪಟ್ಟಳು. ಎಲ್ಲದಕ್ಕೂ ಇಂದ್ರನೇ ಕಾರಣ ಎಂದು ತಿಳಿದು, ಅವನಿಗಿಂತ ಬಲಿಷ್ಠ ಮಗನನ್ನು ಪಡೆಯಲು ಯೋಚಿಸಿದಳು. ತನ್ನ ಪತಿಯಾದ ಕಶ್ಯಪ ಮುನಿಗೆ, ಬಹಳ ಪ್ರೀತಿಯಿಂದ ಸೇವೆಯನ್ನು ಮಾಡಿದಳು. ಕೆಲವು ವರುಶಗಳಲ್ಲಿ ಕಶ್ಯಪ ಮುನಿಯು, ತಪಸ್ಸಿಗೆ ಹೊರಟು ನಿಂತ. ನಿನಗೇನು ವರ ಬೇಕು ಕೇಳು, ನೀಡುತ್ತೇನೆ ಎಂದ. ಇಂದ್ರನನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿರುವ ಒಬ್ಬ, ಶಕ್ತಿಶಾಲಿ ಮಗನನ್ನು ನನಗೆ ನೀಡಿ ಎಂದಳು ದಿತಿ.

ಸ್ವಲ್ಪ ಹೊತ್ತು ಯೋಚಿಸಿದ ಮುನಿಯು, ಒಂದು ವರುಷಗಳ ಕಾಲದ ಪುಂಸವನ ಎಂಬ ಈ ವ್ರತದಲ್ಲಿ, ಸುಳ್ಳು ಹೇಳದೆ, ಮದ್ಯ ಮಾಂಸಗಳನ್ನು ಸೇವಿಸದೇ, ಹಿಂಸೆಯನ್ನು ಮಾಡದೆ, ಎಲ್ಲಾ ಶಾಸ್ತ್ರಗಳನ್ನು ಸರಿಯಾಗಿ ನಿರ್ವಹಿಸಿದರೆ, ನಿನಗೊಬ್ಬ ಇಂದ್ರನಿಗಿಂತ ಬಲಶಾಲಿ ಮಗ ಜನಿಸುವನು. ಆದರೆ ವ್ರತದಲ್ಲಿ ಲೋಪವಾದರೆ, ನಿನ್ನ ಮಗನು ಇಂದ್ರನ ಸ್ನೇಹಿತನಾಗುವನು ಎಂದು ಹೇಳಿ, ಅರಣ್ಯದ ಕಡೆಗೆ ಹೊರಟನು.

ಕೆಲವು ತಿಂಗಳ ನಂತರ, ಗರ್ಭಿಣಿಯಾಗಿದ್ದ ತನ್ನ ಚಿಕ್ಕಮ್ಮ ದಿತಿಯನ್ನು ಕಾಣಲು, ಇಂದ್ರನು ಆಶ್ರಮಕ್ಕೆ ಬಂದ. ಅವಳ ಬಳಿ ವಿನಯದಿಂದ ನಡೆದುಕೊಂಡು, ಅವಳ ಗರ್ಭದಲ್ಲಿರುವ ಮಗುವನ್ನು ನಾಶ ಮಾಡಲು, ಸೂಕ್ತ ಸಮಯಕ್ಕಾಗಿ ಅವನು ಕಾಯುತ್ತಿದ್ದ. ಅವಳು ತನ್ನ ವ್ರತದಲ್ಲಿ ಲೋಪವನ್ನು ಮಾಡುವವರೆಗೂ, ಇಂದ್ರನು ಏನನ್ನೂ ಮಾಡಲು ಸಾಧ್ಯವಿರಲಿಲ್ಲ.

ಒಂದು ಮುಸ್ಸಂಜೆ, ತನ್ನ ಹೊಟ್ಟೆಯ ಭಾರದಿಂದಾಗಿ, ದಿತಿಯು ಮಲಗಿ ನಿದ್ದೆ ಹೋದಳು. ಇದರಿಂದ ಶಾಸ್ತ್ರದ ಉಲ್ಲಂಘನೆ ಆಯಿತೆಂದು, ಇಂದ್ರನು ತಕ್ಷಣ ಸೂಕ್ಷ್ಮ ರೂಪವನ್ನು ಧರಿಸಿ, ಅವಳ ಗರ್ಭಕ್ಕೆ ಹೊಕ್ಕಿ, ವಜ್ರಾಯುಧದಿಂದ ಅಲ್ಲಿದ್ದ ಭ್ರೂಣವನ್ನು ಏಳು ತುಂಡಾಗಿ ಕತ್ತರಿಸಿದ್ದ. ಅವುಗಳು ಸಾಯದೆ ಅಳತೊಡಗಿದಾಗ, ಪುನಃ ಅವರುಗಳನ್ನು ಏಳೇಳು ತುಂಡಾಗಿಸಿದ. ಹೀಗೆ ಒಟ್ಟು ನಲುವತೊಂಬತ್ತು ಮಕ್ಕಳು, ಅಲ್ಲಿ ಸೃಷ್ಟಿಯಾದರು. "ನಮ್ಮನ್ನು ಕೊಲ್ಲಬೇಡ ಸಹೋದರಾ, ನಾವು ನಿನ್ನ ಹಿಂಬಾಲಕರಾದ ಮಾರುತರು. " ಎಂದು ಆ ಮಕ್ಕಳು ಕೇಳಿಕೊಂಡರು. ಹಾಗೂ ಇಂದ್ರನ ಸಮೇತ, ದಿತಿಯ ಗರ್ಭದಿಂದ ಹೊರಗೆ ಬಂದರು.

ದಿತಿಯು ಎಚ್ಚರಗೊಂಡಾಗ, ತನ್ನ ನಲವತೊಂಬತ್ತು ಮಕ್ಕಳನ್ನೂ, ಇಂದ್ರನನ್ನೂ ನೋಡಿದಳು. ತಾನು ಮುಸ್ಸಂಜೆಯಲ್ಲಿ ನಿದ್ರಿಸಿ, ವ್ರತ ಭಂಗವಾಗಿದ್ದಕ್ಕೆ ಬೇಸರಗೊಂಡರೂ, ತನ್ನ ಮಕ್ಕಳನ್ನ ನೋಡಿ ಅವಳಿಗೆ ಸಂತಸವಾಗಿತ್ತು. ಅವಳಿಗೆ ತಕ್ಷಣ ನಮಿಸಿದ ಇಂದ್ರನು, ಮಾರುತರನ್ನು ತನ್ನೊಡನೆ ಕರೆದುಕೊಂಡು ಸ್ವರ್ಗಕ್ಕೆ ಹೋದನು.


<ಭಾಗ 15|ಭಾಗ 17>

Comments