![]() |
ರಾಜ ಬಲಿ ಮತ್ತು ವಾಮನ |
ವಿಷ್ಣುವಿನ ಶ್ರೇಷ್ಠ ಭಕ್ತ ಪ್ರಹ್ಲಾದನ ಮೊಮ್ಮಗ, ಈ ಬಲಿ. ಅವನ ತಂದೆ ವೀರೋಚನ ಹಾಗೂ, ತಾಯಿ ದೇವಾಂಬ. ಮಹಾರಾಜ ಪ್ರಹ್ಲಾದನು, ಬಾಲಕ ಬಲಿಗೆ ವಿಷ್ಣುವಿನ ಕಥೆಗಳನ್ನು ಹೇಳುತ್ತಾ ಬೆಳೆಸಿದ್ದ. ನಂತರ ರಾಜನಾದ ಬಲಿಯು, ಗುರು ಶುಕ್ರಾಚಾರ್ಯರ ಆಸೆಯಂತೆ, ಪಾತಾಳ ಹಾಗೂ ಭೂಮಿಗಳನ್ನು ಗೆದ್ದು, ಸ್ವರ್ಗದ ಮೇಲೆ ದಾಳಿ ನಡೆಸಿ, ಇಂದ್ರನ ಕೈಯಲ್ಲಿ ಮರಣ ಹೊಂದಿದ್ದನು. ಆದರೆ ಶುಕ್ರಾಚಾರ್ಯರ ಸಂಜೀವಿನಿ ಮಂತ್ರದಿಂದ ಅವನನ್ನು ಬದುಕಿಸಿದರು. ಎರಡನೇ ಬಾರಿ, ಬಲಿಯು ಇಂದ್ರನನ್ನು ಓಡಿಸಿ ಅಲ್ಲಿನ ರಾಜನಾದನು. ಹೀಗೆ ಮೂರೂ ಲೋಕಗಳನ್ನು ಗೆದ್ದ ನಂತರ, ಅವನಿಗೆ ಅಶ್ವಮೇಧ ಯಾಗ ಮಾಡುವಂತೆ, ಗುರು ಶುಕ್ರಾಚಾರ್ಯ ಹೇಳಿದ್ದರು. ಅದಕ್ಕಾಗಿ ಬಲಿಯು ತಯಾರಿ ನಡೆಸುತ್ತಿದ್ದನು. ಅತ್ತಕಡೆ ಇಂದ್ರನು ಬಲಿಯನ್ನು ಕೊಂದು, ತನಗೆ ಸ್ವರ್ಗವನ್ನು ಮರಳಿ ಕೊಡಿಸುವಂತೆ, ವಿಷ್ಣುವಿನ ಮೊರೆ ಹೋದನು. ತನ್ನ ಭಕ್ತ ಬಲಿಯನ್ನು ಕೊಲ್ಲಲು ವಿಷ್ಣುವು ಒಪ್ಪದಿದ್ದರೂ, ಸ್ವರ್ಗವನ್ನು ಇಂದ್ರನಿಗೆ ಕೊಡಿಸುವ ಹೊಣೆಯನ್ನು ಅವನು ಹೊತ್ತನು.
ಎಲ್ಲಾ ದೇವತೆಗಳ ತಾಯಿಯಾದ ಅದಿತಿಯು,ತನ್ನ ಮಕ್ಕಳು ಸ್ವರ್ಗವನ್ನು ಕಳೆದುಕೊಂಡಿದ್ದಕ್ಕೆ ದುಃಖ ಪಟ್ಟಳು. ತನ್ನ ಪತಿಯಾದ ಋಷಿ ಕಶ್ಯಪ ತಪಸ್ಸಿನಿಂದ ಬಂದಕೂಡಲೇ, ತನ್ನ ಸವತಿ ದಿತಿಯ ಮಕ್ಕಳಾದ, ದೈತ್ಯರನ್ನು ಸದೆಬಡಿಯುವ ಸಾಮರ್ಥ್ಯವಿರುವ ಒಬ್ಬ ಮಗನನ್ನು ತನಗೆ ಕರುಣಿಸುವಂತೆ, ಅವರಲ್ಲಿ ಕೇಳಿಕೊಂಡಳು. ಸ್ವಲ್ಪ ಹೊತ್ತು ಯೋಚಿಸಿದ ಕಶ್ಯಪ ಮುನಿಯು ಮುಗುಳ್ನಗುತ್ತಾ, ವಿಷ್ಣುವಿನ ಕುರಿತಾದ ಪಾಯೋ ಎಂಬ ವ್ರತವನ್ನು ಮಾಡಲು ಹೇಳಿದರು. ಅದರಂತೆ ಅದಿತಿಯು, ಶ್ರದ್ಧೆ ಭಕ್ತಿಯಿಂದ ವ್ರತಮಗ್ನಳಾದಳು.
ಕೆಲವು ವರ್ಷಗಳ ನಂತರ, ಶಂಖ ಚಕ್ರ ಗದೆಗಳನ್ನು ಹಿಡಿದ ಮಹಾವಿಷ್ಣುವು,ತನ್ನ ನಿಜ ರೂಪದಲ್ಲಿ ಪ್ರತ್ಯಕ್ಷನಾದನು. ಅದಿತಿಗೆ ಬೇಕಾದ ವರವನ್ನು ಕೇಳು ಎಂದನು. ಅದಿತಿ ಏನನ್ನೂ ಮಾತನಾಡದೆ ಕೈಗಳನ್ನು ಮುಗಿದುಕೊಂಡು, ಕಂಬದಂತೆ ನಿಂತುಕೊಂಡಳು. ಅವಳ ಕೈಕಾಲುಗಳು ನಡುಗತೊಡಗಿದ್ದವು. ಅವಳು ಯಾವ ವರವನ್ನೂ ಕೇಳದೆ,ಸ್ತೋತ್ರಗಳನ್ನು ಹಾಡತೊಡಗಿದಳು. ವಿಷ್ಣುವು ಮುಗುಳ್ನಗುತ್ತಾ ಅದಿತಿಗೆ, ನಿನ್ನ ಮನಸ್ಸಿನಲ್ಲಿರುವ ಯೋಚನೆ ನನಗೆ ತಿಳಿದಿದೆ. ನನ್ನ ಭಕ್ತನಾದ ಬಲಿಯನ್ನು ಕೊಲ್ಲಲು ನನ್ನಿಂದ ಸಾಧ್ಯವಿಲ್ಲ. ಹಾಗೆಯೇ ಯಾವುದೇ ಲೋಪವಿಲ್ಲದ ನಿನ್ನ ವ್ರತವನ್ನು ವ್ಯರ್ಥವಾಗಲು ಕೂಡಾ, ನಾನು ಬಿಡುವುದಿಲ್ಲ. ಹೇಗಾದರೂ ಇಂದ್ರನಿಗೆ ಸ್ವರ್ಗವನ್ನು ಮರಳಿ ದೊರಕಿಸಿಕೊಡುವುದು ನನ್ನ ಜವಾಬ್ದಾರಿ. ಅದಕ್ಕಾಗಿ ನಾನು ನಿಮ್ಮ ಮಗನಾಗಿ ಜನಿಸುತ್ತೇನೆ. ಆದರೆ ಈ ವಿಷಯವನ್ನು ನೀನು ಯಾರಿಗೂ ಹೇಳಬಾರದು ಎಂದನು.
ಅಲ್ಲಿಂದ ವಿಷ್ಣುವು, ತಪದಲ್ಲಿದ್ದ ಕಶ್ಯಪ ಮುನಿಯ ದೇಹದೊಳಕ್ಕೆ ಸೇರಿಕೊಂಡನು. ಕಶ್ಯಪ ಹಾಗೂ ಅದಿತಿಗೆ ಮುಂದೆ ಗಂಡು ಮಗುವು ಜನಿಸಿತ್ತು. ಆ ಮಗುವು ಬಾಲಕನಾಗಿ, ಅಶ್ವಮೇಧ ಯಾಗ ಮಾಡುತಿದ್ದ ರಾಜ ಬಲಿಯ ಕಡೆಗೆ, ಪ್ರಯಾಣವನ್ನ ಬೆಳೆಸಿದನು. ಅವನನ್ನು ವಾಮನ ಎಂದು ಕರೆಯಲಾಯಿತು. ಈ ವಾಮನನು ಎಲ್ಲಾ ವೇದಶಾಸ್ತ್ರಗಳನ್ನು ಬಲ್ಲವನಾಗಿದ್ದನು.
ಯಾಗ ಶಾಲೆಯಲ್ಲಿ ಬಲಿಯು ಯಜ್ಞದ ಯಜಮಾನನಾಗಿ ಕುಳಿತಿದ್ದನು. ಪಕ್ಕದಲ್ಲೇ ಗುರು ಶುಕ್ರಾಚಾರ್ಯ ಆಸೀನರಾಗಿದ್ದರು. ಮೂರೂ ಲೋಕಗಳನ್ನು ಗೆದ್ದಿದ್ದ ಬಲಿಯು, ತಾನು ಇಂದ್ರನಷ್ಟೇ ಶಕ್ತಿಶಾಲಿ, ಹಾಗಾಗಿ ಯಾರು ಬಂದು ಏನೇ ಕೇಳಿದರೂ, ಕೊಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದನು. ವಾಮನದೇವನು ಯಾಗ ಶಾಲೆಯನ್ನು ತಲುಪಿದಾಗ, ಯಜ್ಞವು ಆರಂಭವಾಗಿತ್ತು. ಅಶ್ವಮೇಧದ ಕುದುರೆಯು ಓಡಲು ಸಿದ್ಧವಾಗಿತ್ತು. ಯಾಗಕ್ಕೆ ಕುಳಿತಿದ್ದ ಬಲಿಗೆ ದೂತನೊಬ್ಬ ಬಂದು, ಬಾಲ ಮುನಿಯು ಬಂದಿರುವ ಸುದ್ದಿ ತಿಳಿಸಿದ್ದ. ತಕ್ಷಣವೇ ಯಾಗದಿಂದ ಎದ್ದ ಬಲಿಯು, ವಾಮನ ಮುನಿಗೆ ಗೌರವಾದರಗಳಿಂದ ಬರಮಾಡಿಕೊಂಡು, ಬಂದ ಉದ್ದೇಶವನ್ನು ಕೇಳಿದ.
ಗುರು ಶುಕ್ರಾಚಾರ್ಯರಿಗೆ ಈ ವಟುವನ್ನು ಕಂಡು, ಅನುಮಾನವು ಬಂದಿತ್ತು. "ಇವನು ಯಾಗವನ್ನು ತಪ್ಪಿಸಲೆಂದೇ ಬಂದಿರಬೇಕು" ಎಂದು ಯೋಚಿಸಿ, ಯಜ್ಞ ಮುಗಿಯುವವರೆಗೂ ಯಾವುದೇ ದಾನ ಧರ್ಮಗಳನ್ನು ಮಾಡದಿರಲು, ರಾಜ ಬಲಿಗೆ ಸೂಚಿಸಿದರು. ಆದರೆ ಬಲಿಯು ತನ್ನ ಗುರುವಿನ ಮಾತುಗಳನ್ನು ಕೇಳದೆ, ವಾಮನನ ಬಳಿ ನಿನಗೇನು ಬೇಕು ಕೇಳು, ಕೊಡುತ್ತೇನೆ ಎಂದು, ನೀರಿನ ಕಮಂಡಲವನ್ನು ಹಿಡಿದುಕೊಂಡ. ಆಗ ವಾಮನನು, "ನನಗೆ ಹೆಚ್ಚೇನೂ ಬೇಡ. ನಾನು ಕೇವಲ ಮೂರು ಹೆಜ್ಜೆಗಳನ್ನು ಇಡುವಷ್ಟು ಭೂಮಿಯನ್ನು ನೀಡು ಸಾಕು" ಎಂದ. ಬಲಿಯು ನಗುತ್ತಾ "ಅಷ್ಟೇ ಸಾಕೆ? ಇದರಿಂದ ಎಷ್ಟೋ ಪಾಲು ಹೆಚ್ಚಿನದ್ದೆ ಭೂಮಿಯನ್ನು ಕೊಡುತ್ತೇನೆ. ವಜ್ರ ವೈಢೂರ್ಯ, ಆನೆ, ಗೋವುಗಳನ್ನು ಕೊಡುತ್ತೇನೆ. ಕೇಳು" ಎಂದನು.ಆದರೆ ವಾಮನ ತಾನು ಕೇಳಿದಷ್ಟೇ ಸಾಕು ಬೇರೇನೂ ಬೇಡ ಎಂದಿದ್ದನು.
ಬಲಿಯು ಮುಗುಳ್ನಗುತ್ತಾ ಒಂದು ಕಮಂಡಲದಿಂದ, ನೀರನ್ನು ವಾಮನನ ಕೈಗೆ ಸುರಿದು, ದಾನವನ್ನು ಕೊಡಲು ಸಿದ್ಧನಾದ. ಆದರೆ ಶುಕ್ರಾಚಾರ್ಯ ಸೂಕ್ಷ್ಮ ರೂಪವನ್ನು ಧರಿಸಿ, ಕಮಂಡಲದ ಒಳಹೊಕ್ಕು, ನೀರು ಹರಿಯದಂತೆ ಬಾಯಿಯನ್ನು ಅಡ್ಡಗಟ್ಟಿದರು. ಆಗ ಹುಲ್ಲಿನ ಕಡ್ಡಿಯಿಂದ ವಾಮನನು, ಕಮಂಡಲದ ಬಾಯಿಯನ್ನು ಚುಚ್ಚಿದಾಗ, ಅದು ಒಳಗಿದ್ದ ಅಸುರ ಗುರುವಿನ ಒಂದು ಕಣ್ಣನ್ನು ತಿವಿದಿತ್ತು. ಶುಕ್ರಾಚಾರ್ಯ ನೋವಿನಿಂದ, ತನ್ನ ಸೂಕ್ಷ್ಮ ರೂಪವನ್ನು ತೊರೆದು ಅದೃಶ್ಯರಾದರು. ಕಮಂಡಲದಿಂದ ನೀರು ಸರಾಗವಾಗಿ ವಾಮನನು ಕೈಗೆ ಸುರಿದಿತ್ತು. ಅಂದಿನಿಂದ ಶುಕ್ರಾಚಾರ್ಯರಿಗೆ ಒಕ್ಕಣ್ಣು. ಹೀಗೆ, ಯಾರ ಬೇಡಿಕೆಯನ್ನೂ ನಿರಾಕರಿಸುವುದಿಲ್ಲ ಎಂದು, ಪ್ರತಿಜ್ಞೆ ಮಾಡಿದ್ದ ಬಲಿಯು, ತನ್ನ ಗುರು ಶುಕ್ರಾಚಾರ್ಯರ ಎಚ್ಚರಿಕೆಯನ್ನು ಸಹಾ ನಿರ್ಲಕ್ಷಿಸಿ, ಮೂರು ಹೆಜ್ಜೆಯಷ್ಟು ಭೂಮಿಯನ್ನು ಕೊಡಲು ಸಿದ್ಧನಾದ.
ವಾಮನನು ತಕ್ಷಣ ತನ್ನ ದೇಹದ ಗಾತ್ರವನ್ನು ಹಿಗ್ಗಿಸಿ, ಭೂಮಿಯಿಂದ ಎತ್ತರಕ್ಕೆ ಬೆಳೆದನು. ಅವನ ಪಾದವು ಸಂಪೂರ್ಣ ಭೂಮಿಯನ್ನು ಹಾಗೂ, ಕೆಳಗಿನ ಲೋಕಗಳನ್ನು ಆವರಿಸಿತ್ತು. ಎರಡನೆಯ ಹೆಜ್ಜೆಯು ಬಾಹ್ಯಾಕಾಶದ ಲೋಕಗಳನ್ನು ಮುಚ್ಚಿತ್ತು. ಮೂರನೆಯ ಹೆಜ್ಜೆಯನ್ನು ಇಡಲು ಜಾಗವೇ ಇಲ್ಲದಂತಾಗಿತ್ತು.
ಎತ್ತಿದ ಕಾಲು ಹಾಗೆಯೇ ಇತ್ತು. ಅದು ಸತ್ಯ ಲೋಕದ ಬ್ರಹ್ಮನನ್ನು ತಲುಪಿತ್ತು. ಬ್ರಹ್ಮ ತಕ್ಷಣ ಆ ಪಾದವನ್ನು, ಕಮಂಡಲದ ನೀರಿನಿಂದ ತೊಳೆದು ಪೂಜಿಸಿದ್ದ. ಆಗ ನೀರು ಗಂಗಾ ನದಿಯಾಗಿ, ಸ್ವರ್ಗ ಲೋಕಕ್ಕೆ ಹರಿದಿತ್ತು. ವಿಷ್ಣುವಿನ ಈ ಅವತಾರವನ್ನು ನೋಡಿ, ರಾಕ್ಷಸರಿಗೆ ಬಹಳ ಕೋಪ ಉಂಟಾಗಿತ್ತು. ತಮ್ಮ ರಾಜ ಬಲಿಯಿಂದ, ಉಪಾಯವಾಗಿ ಎಲ್ಲವನ್ನೂ ಕಿತ್ತುಕೊಂಡ ಈ ವಾಮನ, ಒಬ್ಬ ಬ್ರಾಹ್ಮಣನೇ ಅಲ್ಲ. ಬದಲಾಗಿ ಒಬ್ಬ ಮೋಸಗಾರ ಹಾಗೂ ದೇವತೆಗಳ ಹಿತೈಷಿ. ಇವನನ್ನು ಸುಮ್ಮನೆ ಬಿಡಬಾರದು ಎಂದು ಯೋಚಿಸಿ, ತಮ್ಮ ಆಯುಧಗಳನ್ನು ಹಿಡಿದು, ವಾಮನನು ಕಡೆಗೆ ನುಗ್ಗಿದರು. ಬಲಿಯು ಅವರನ್ನು ಸುಮ್ಮನಿರುವಂತೆ ತಿಳಿಸಿದರೂ, ಅವರು ಕೇಳಲಿಲ್ಲ. ಆದರೆ ಅವರನ್ನು ವಿಷ್ಣುದೂತರು ಯಶಸ್ವಿಯಾಗಿ ತಡೆದು, ಭೂಮಿಯ ಕೆಳಗಿನ ಲೋಕಗಳಾದ ಪಾತಾಳ, ಸುತಳಗಳಿಗೆ ಅಟ್ಟಿದರು.
ನಂತರ ವಾಮನನು ಕುಬ್ಜ ರೂಪಕ್ಕೆ ಬಂದ. ಬಲಿಗೆ ಯಾಗವನ್ನು ಮುಗಿಸಲು ಹೇಳಿದ. ನಂತರ ಗರುಡನು ಅಲ್ಲಿಗೆ ಬಂದು, ಅವನನ್ನು ವರುಣನು ನೀಡಿದ್ದ ಹಗ್ಗಗಳನ್ನು ಬಳಸಿ, ಒಂದು ಕಂಬಕ್ಕೆ ಬಂಧಿಸಿದ. ಆಗ ಮೂರೂ ಲೋಕಗಳು ನಡುಗಿತ್ತು. ನನ್ನ ತಲೆಯ ಮೇಲೆಯೇ ಮೂರನೆಯ ಹೆಜ್ಜೆಯನ್ನಿಡು ಎಂದು, ಬಲಿಯು ತಲೆಯನ್ನು ತಗ್ಗಿಸಿದ. ಅಷ್ಟರಲ್ಲಿ ಪ್ರಹ್ಲಾದನು ಅಲ್ಲಿ ಪ್ರತ್ಯಕ್ಷನಾದ. ತನ್ನ ಮೊಮ್ಮಗನ ಮೇಲೆ ಕರುಣೆಯನ್ನು ತೋರಿಸಲು ವಿಷ್ಣುವಿನ ಬಳಿ ಕೇಳಿಕೊಂಡ.
"ಬಲಿಯು ಸಾವರ್ಣಿ ಎಂಬ ಮನುವಿನ ಅವಧಿಯಲ್ಲಿ ಸ್ವರ್ಗದ ರಾಜನಾಗುತ್ತಾನೆ. ಅಲ್ಲಿಯವರೆಗೂ ಅವನು ಸುತಳದಲ್ಲಿ ಇರಲಿ." ಎಂದು, ವಾಮನನು ಪ್ರಹ್ಲಾದನಿಗೆ ತಿಳಿಸಿ, ಅವನ ತಲೆಯ ಮೇಲೆ ಕಾಲನ್ನಿಟ್ಟು, ವಾಮನನು ಪಾತಾಳ ಲೋಕದವರೆಗೆ ಅವನನ್ನು ಒತ್ತಿದನು. ಹಾಗೂ ಸ್ವರ್ಗದಷ್ಟೇ ಸಂಪತ್ಭರಿತ ಸಾಮ್ರಾಜ್ಯವಾಗಿದ್ದ ಸುತಳದ ರಾಜನಾದನು. ಅವನ ವಚನ ನಿಷ್ಠೆಗೆ ಮೆಚ್ಚಿದ ವಿಷ್ಣುವು, ವರವನ್ನು ಕೇಳಲು ಹೇಳಿದನು. ಆಗ ಬಲಿಯು,"ನಾನು ವರ್ಷಕ್ಕೊಮ್ಮೆಯಾದರೂ ಭೂಮಿಗೆ ಬರುವಂತೆ ನನಗೆ ಅವಕಾಶ ಕೊಡಬೇಕು ಹಾಗೂ, ನೀನು ಯಾವಾಗಲೂ ನನ್ನೊಂದಿಗೆ ಇದ್ದು, ನನ್ನ ಸಾಮ್ರಾಜ್ಯದ ರಕ್ಷಣೆಯನ್ನು ಮಾಡಬೇಕು"ಎಂದು ಬೇಡಿಕೊಂಡನು. ತಥಾಸ್ತು ಎಂದ ವಿಷ್ಣುವು, ಬಲಿಗೆ ತಿಳಿಯದಂತೆ, ಅರಮನೆಯ ಒಬ್ಬ ದ್ವಾರಪಾಲಕನ ವೇಷದಲ್ಲಿ ಇರತೊಡಗಿದ್ದ.
ಆ ಸಮಯದಲ್ಲಿ ವೈಕುಂಠದಲ್ಲಿ ಲಕ್ಷ್ಮಿ ದೇವಿಯೊಬ್ಬಳೇ ಇರಬೇಕಾಯಿತು. ವಿಷ್ಣುವನ್ನು ಹೇಗಾದರೂ ಮರಳಿ ಕರೆತರಬೇಕೆಂದುಕೊಂಡು, ಒಬ್ಬ ಬ್ರಾಹ್ಮಣ ಮಹಿಳೆಯ ವೇಷವನ್ನು ಧರಿಸಿ, ಬಲಿಯ ಅರಮನೆಗೆ ಹೋದಳು. ನನ್ನ ಪತಿಯು ತುಂಬಾ ದೂರದಲ್ಲಿ ಇದ್ದಾನೆ. ನನಗೆ ಉಳಿದುಕೊಳ್ಳಲು ಸ್ಥಳವನ್ನು ನೀಡು ಎಂದಳು. ಅವಳನ್ನು ತನ್ನ ಸ್ವಂತ ತಂಗಿಯಂತೆ ಬರಮಾಡಿಕೊಂಡ ಬಲಿಯು, ಅರಮನೆಯಲ್ಲಿಯೇ ಒಂದು ಪ್ರತ್ಯೇಕ ಕೋಣೆಯಲ್ಲಿ ವಾಸಿಸಲು,ಅವಳಿಗೆ ವ್ಯವಸ್ಥೆಯನ್ನು ಮಾಡಿದನು. ಲಕ್ಷ್ಮಿಯ ಆಗಮನದಿಂದಾಗಿ ಅವನ ಸಾಮ್ರಾಜ್ಯದ ಸಂಪತ್ತು, ದಿನೇ ದಿನೇ ಹೆಚ್ಚಾಗುತ್ತಿತ್ತು.
ಒಂದು ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು, ಲಕ್ಷ್ಮಿ ದೇವಿಯು ಬಲಿಯ ಕೈಗೆ ಹತ್ತಿಯ ದಾರವನ್ನ ಕಟ್ಟಿದಳು. ತನ್ನ ರಕ್ಷಣೆ ಹಾಗೂ ಸಾಮ್ರಾಜ್ಯದ ಸುಖ ಸಂತೋಷಕ್ಕೆಂದು ಪ್ರಾರ್ಥಿಸಿದಳು. ಹರುಷಗೊಂಡ ಬಲಿಯು, ಅವಳಿಗೆ ಏನು ಬೇಕು ಕೇಳು ಕೊಡುತ್ತೇನೆ ಎಂದನು. ಅದಕ್ಕವಳು, ನನ್ನ ಪತಿಯನ್ನು ನನ್ನೊಡನೆ ಕಳುಹಿಸಿಕೊಡಿ ಎಂದು, ದ್ವಾರಪಾಲಕನ ರೂಪದ ವಿಷ್ಣುವಿನ ಕಡೆಗೆ, ಕೈ ತೋರಿಸಿದಳು. ಅಚ್ಚರಿಯಿಂದ ದ್ವಾರಪಾಲಕನ ಕಡೆಗೆ ಬಲಿಯು ನೋಡಿದಾಗ, ದಂಪತಿಗಳಿಬ್ಬರೂ ತಮ್ಮ ನಿಜರೂಪದಲ್ಲಿ ಪ್ರತ್ಯಕ್ಷರಾದರು. ಇಬ್ಬರಿಗೂ ನಮಿಸಿದ ಬಲಿಯು, ಭಗವಂತನನ್ನು ವೈಕುಂಠಕ್ಕೆ ಕಳುಹಿಸಲು ಒಪ್ಪಿದನು. ಹಾಗೂ ಪ್ರತೀ ವರ್ಷ ಮಳೆಗಾಲದ ನಾಲ್ಕು ತಿಂಗಳು, ಪಾತಾಳಕ್ಕೆ ಬಂದು ಇರುವುದಾಗಿ ಮಹಾವಿಷ್ಣು ಬಲಿಗೆ ಭಾಷೆ ಇತ್ತನು. ಲಕ್ಷ್ಮಿದೇವಿಯು ಬಲಿಗೆ ಸಹೋದರಿಯಂತೆ ದಾರವನ್ನು ಕಟ್ಟಿದ ದಿನದಂದು, ಬಾಲೆವ್ ಅಥವಾ ರಕ್ಷಾಬಂಧನವಾಗಿ ಆಚರಿಸಲಾಗುತ್ತದೆ, ಎಂಬ ಮಾತಿದೆ. ಹಾಗೆಯೇ ಆ ದಿನ ನೂಲ ಹುಣ್ಣಿಮೆ ಎಂದು, ಬ್ರಾಹ್ಮಣರು ತಮ್ಮ ಜನಿವಾರಗಳನ್ನು ಬದಲಿಸುತ್ತಾರೆ.
ಅಸುರ ಕುಲದಲ್ಲಿ ಹುಟ್ಟಿದರೂ ಕೂಡಾ, ಬಲಿಯು ಅಸುರನಲ್ಲ. ಬದಲಾಗಿ ತನ್ನ ಒಳ್ಳೆಯ ಗುಣಗಳಿಂದ, ನಮ್ಮ ನೆನಪಲ್ಲಿ ಉಳಿಯುವ ಒಬ್ಬ, ಧರ್ಮಿಷ್ಟರಾಜ ಎಂದೇ ನಾವು ಹೇಳಬಹುದು. ಕೇರಳದಲ್ಲಿ ಸುಗ್ಗಿಯ ಕಾಲದಲ್ಲಿ ಓ ಣಂ ಎಂಬ ಹಬ್ಬವನ್ನು ಆಚರಿಸುತ್ತಾರೆ. ಆಗ ಪಾತಾಳ ಲೋಕದಿಂದ ಪ್ರಜೆಗಳನ್ನು ಕಾಣಲು, ಮಹಾಬಲಿಯು ಭೂಮಿಗೆ ಬರುತ್ತಾನೆ ಎಂಬುದು, ಆ ಜನರ ನಂಬಿಕೆ. ಈ ಬಲಿಚಕ್ರವರ್ತಿಯು ಸಪ್ತ ಚಿರಂಜೀವಿಗಳಲ್ಲೂ ಒಬ್ಬ. ಭಾರತದಾದ್ಯಂತ ದೀಪಾವಳಿಯ ಬಲಿಪಾಡ್ಯಮಿ ಹಬ್ಬದಂದು, ಬಲಿಯು ಭೂಮಿಗೆ ಬರುತ್ತಾನೆ ಎಂಬ ನಂಬಿಕೆಯೂ ಇದೆ.
ಬಲಿಯು ಹಿಂದಿನ ಜನ್ಮದಲ್ಲಿ ಒಂದು ಇಲಿಯಾಗಿದ್ದ. ಬತ್ತಿಗೆ ಹತ್ತಿದ ತುಪ್ಪವನ್ನು ತಿಂದು, ಅದನ್ನು ಜೋರಾಗಿ ಉರಿಯುವಂತೆ ಮಾಡಿದ್ದ. ಆಗ ಶಿವನು ಹರುಷಗೊಂಡು, ಮುಂದಿನ ಜನ್ಮದಲ್ಲಿ ಶ್ರೇಷ್ಠ ವ್ಯಕ್ತಿಯಾಗುವಂತೆ ವರವನ್ನ ನೀಡಿದ್ದ. ಕೇರಳದ ಕೊಚ್ಚಿನ್ ಬಳಿಯ ತ್ರಿಕ್ಕಾಕರ ಎಂಬುದು, ಬಲಿಯ ರಾಜಧಾನಿಯಾಗಿತ್ತು ಎಂದು ನಂಬಲಾಗಿದೆ. ಬಲಿ ರಾಜನು ಹರಿನಾಮ ಸ್ತೋತ್ರ ಎಂಬ, ಪದ್ಯವನ್ನು ಬರೆದಿದ್ದಾನೆ ಎನ್ನಲಾಗುತ್ತದೆ. ಹಾಗೂ ರಾಮಾಯಣದಲ್ಲಿ ಬರುವ ಕುಂಭಕರ್ಣನ ಮಡದಿ ವಜ್ರಜ್ವಾಲಾ, ಈ ಮಹಾಬಲಿಯ ಮಗಳು.
Comments
Post a Comment