Skip to main content

Featured post

How to start a blog in 2025: Step by step guide for beginners.

" " " Learn how to start a blog in 2025  with step-by-step tips on goals,  niches ,  SEO , and  content strategy  to grow your audience and earn online."

ಭಾಗವತದ ಕಥೆಗಳು ಭಾಗ 18: ಸಮುದ್ರ ಮಂಥನ


"ಸಮುದ್ರ ಮಂಥನದ ಕಥೆ: ದೇವತೆಗಳು ಮತ್ತು ರಾಕ್ಷಸರು, ಸಾಗರ ಮಂಥನ, ವಿಷ್ಣುವಿನ ಕೂರ್ಮ ಅವತಾರ,  ವಿಷವನ್ನು ಕುಡಿಯುವ ಶಿವ , ಲಕ್ಷ್ಮಿದೇವಿ  ಮತ್ತು ಮೋಹಿನಿಯು ಅಮೃತವನ್ನು ಉಳಿಸುವ  ಕಥೆ."

The churning of ocean
ಸಮುದ್ರ ಮಂಥನ


ಇಂದಿಗೆ ಸರಿಸುಮಾರು ನಾನೂರಾ ಇಪ್ಪತ್ತೆಂಟು ಮಿಲಿಯನ್ ವರ್ಷಗಳ ಹಿಂದೆ, ಚಾಕ್ಷುಷ ಮನುವಿನ ಅವಧಿಯಲ್ಲಿ ಮಂತ್ರದೃಮ ಎಂಬಾತ ಸ್ವರ್ಗದ ಇಂದ್ರನಾಗಿದ್ದ. ಒಂದು ದಿನ ಅವನು ಐರಾವತದ ಮೇಲೆ ಹೋಗುತ್ತಿದ್ದಾಗ, ಎದುರಲ್ಲಿ ದೂರ್ವಾಸ ಮುನಿ ಸಿಕ್ಕಿದನು. ಇಂದ್ರನಿಗೆ ಆಶೀರ್ವದಿಸಿದ ಮುನಿಯು, ತನಗೆ ಶಿವನು ನೀಡಿದ್ದ ಹಾರವನ್ನು ಅವನ ಕೊರಳಿಗೆ ಹಾಕಿದನು. ಈ ಹಾರವನ್ನು, ಅಪ್ಸರೆಯೊಬ್ಬಳು ನೀಡಿದ್ದಳು ಎಂದು ಕೆಲವು ಕಥೆಗಳು ಹೇಳುತ್ತವೆ. ಇಂದ್ರನು ಆ ಹಾರವನ್ನು ತೆಗೆದು ಆನೆಯ ಸೊಂಡಿಲಿಗೆ ಹಾಕಿದನು. ಆ ಹಾರದಲ್ಲಿದ್ದ ಹೂವುಗಳ ಪರಿಮಳದಿಂದಾಗಿ, ದುಂಬಿಗಳು ಮುತ್ತತೊಡಗಿದ್ದವು.

ಇದರಿಂದ ರೊಚ್ಚಿಗೆದ್ದ ಐರಾವತವು, ಮಾಲೆಯನ್ನು ಕೆಳಗೆ ಹಾಕಿ ತುಳಿದಿತ್ತು. ತಕ್ಷಣ ಕೋಪಗೊಂಡ ದೂರ್ವಾಸ ಮುನಿಯು, ನಿನ್ನ ಸ್ವರ್ಗಲೋಕದ ಐಶ್ವರ್ಯವೆಲ್ಲ ಕರಗಿ, ಬಡತನ ಬರಲಿ ಎಂದು ಶಪಿಸಿದನು. ನಂತರ ರಾಕ್ಷಸರು, ರಾಜ ಬಲಿಯ ನೇತೃತ್ವದಲ್ಲಿ ಸ್ವರ್ಗಕ್ಕೆ ದಾಳಿಯನ್ನು ನಡೆಸಿ, ದೇವತೆಗಳನ್ನು ಹೊಡೆದೋಡಿಸಿದರು. ಬ್ರಹ್ಮನ ಸಮ್ಮುಖದಲ್ಲಿ ದೇವತೆಗಳು, ಪರಿಹಾರವನ್ನು ಹೇಳುವಂತೆ ಕೇಳಿಕೊಂಡರು. ಅವನು ಅಲ್ಲಿಂದ ವೈಕುಂಠಕ್ಕೆ ಎಲ್ಲರನ್ನೂ ಕರೆದೊಯ್ದನು. 

ಸಪ್ತ ಸಾಗರಗಳಲ್ಲಿ ಐದನೆಯದಾದ, ಕ್ಷೀರ ಸಾಗರದಲ್ಲಿನ ಶ್ವೇತ ದ್ವೀಪದಲ್ಲಿ, ವಿಷ್ಣುವಿನ ವೈಕುಂಠವಿದೆ. ಅಲ್ಲಿ ಆದಿಶೇಷನ ಮೇಲೆ ಮಲಗಿದ್ದ ಅಜಿತನೆಂಬ ಹೆಸರಿನ ವಿಷ್ಣುವಿನ ಬಳಿ, ದೇವತೆಗಳು ತಮ್ಮ ಸಮಸ್ಯೆಯನ್ನು ಕೇಳಿಕೊಂಡರು. ಮಹಾವಿಷ್ಣುವು, ಮೊದಲಿಗೆ ಅಮೃತವನ್ನು ಪಡೆಯಲು ತಿಳಿಸಿ, ಅದಕ್ಕಾಗಿ ಅಸುರರೊಡನೆ ಸಂಧಾನ ಮಾಡಿಕೊಂಡು, ಕ್ಷೀರ ಸಾಗರಕ್ಕೆ ಮೂಲಿಕೆಗಳನ್ನೂ, ಬಳ್ಳಿ ತರಕಾರಿಗಳನ್ನೂ, ಔಷಧಗಳನ್ನೂ ಎಸೆದು, ಮಂದಾರ ಪರ್ವತವನ್ನು ಕಡೆಗೋಲಾಗಿ ಮಾಡಿಕೊಂಡು, ವಾಸುಕಿಯನ್ನು ಕಡೆಯುವ ಹಗ್ಗವನ್ನಾಗಿ ಬಳಸಲು ಹೇಳಿ ಅಸುರರಿಗೆ ಅಮೃತ ಸಿಗದಂತೆ ಮಾಡುವುದು ನನ್ನ ಜವಾಬ್ದಾರಿ ಎಂದನು.

ಇಂದ್ರ ದೇವತೆಗಳ ಮುಖಂಡನಾದ. ರಾಕ್ಷಸ ದೊರೆಯಾದ ಬಲಿಗೆ ಅಮೃತದ ಆಸೆ ಹುಟ್ಟಿಸಿ, ಮನವೊಲಿಸಿ, ಅಸುರರ ನಾಯಕ ಮಾಡಲಾಯಿತು. ದೇವಾಸುರರು ಸೇರಿ, ಮಂದಾರ ಪರ್ವತವನ್ನು ಕಿತ್ತುಹಾಕಿ, ಬಹಳ ಪ್ರಯಾಸದಿಂದ ತುಸು ದೂರದವರೆಗೆ ಹೊತ್ತಾಗ, ಅವರ ಮೇಲೆಯೇ ಬಿದ್ದ ಪರ್ವತವು, ಅನೇಕರ ಪ್ರಾಣವನ್ನು ಬಲಿ ತೆಗೆದುಕೊಂಡಿತು. ನಂತರ ಇಂದ್ರನು ವಿಷ್ಣುವಿನ ಮೊರೆ ಹೋದನು.

ವಿಷ್ಣುವು ಕೇವಲ ತನ್ನ ನೋಟದಿಂದ ಎಲ್ಲರನ್ನೂ ಮೊದಲಿನಂತಾಗಿಸಿ, ಪರ್ವತವನ್ನು ಎತ್ತಿ, ಗರುಡನ ಮೇಲೆ ಇಟ್ಟುಕೊಂಡು ಕ್ಷೀರ ಸಮುದ್ರಕ್ಕೆ ಹಾಕಿ, ವೈಕುಂಠಕ್ಕೆ ತೆರಳಿದನು. ಈಗ ದೇವಾಸುರರು ದೈತ್ಯ ಸರ್ಪ ವಾಸುಕಿಯನ್ನು, ಮಂದಾರ ಪರ್ವತಕ್ಕೆ ಹಗ್ಗದಂತೆ ಸುತ್ತಿದರು. ಬಾಲವನ್ನು ಹಿಡಿದುಕೊಳ್ಳುವುದು ತಮ್ಮ ಘನತೆಗೆ ಕಳಂಕ, ಎಂದುಕೊಂಡು ರಾಕ್ಷಸರು ತಲೆಯನ್ನು ಹಿಡಿದರೆ, ದೇವತೆಗಳು ಹಗುರವಾದ ಬಾಲದ ಭಾಗವನ್ನು ಹಿಡಿದುಕೊಂಡರು.

ಕಡೆಗೋಲಿನಿಂದ ಮಜ್ಜಿಗೆಯನ್ನು ಕಡೆಯುವಂತೆ, ಎರಡೂ ಕಡೆಯವರು, ವಾಸುಕಿಯನ್ನು ಹಿಂದಕ್ಕೂ ಮುಂದಕ್ಕೂ ಎಳೆಯಲಾರಂಭಿಸಿದರು. ಸ್ವಲ್ಪ ಹೊತ್ತು ಸಮುದ್ರವನ್ನು ಮಥಿಸಿದ ಕೂಡಲೇ, ಮಂದಾರ ಪರ್ವತವು ಸಮುದ್ರದ ಆಳಕ್ಕೆ ಮುಳುಗಲಾರಂಭಿಸಿತು. ಮಹಾವಿಷ್ಣು ತಕ್ಷಣ ಒಂದು ಬೃಹತ್ ಆಮೆಯ ರೂಪವನ್ನು ತಾಳಿ, ಎಂಟು ನೂರು ಸಾವಿರ ಮೈಲಿಗಳಷ್ಟು ದೊಡ್ಡ ದೇಹವನ್ನು ಹೊಂದಿ, ಮಂದಾರ ಪರ್ವತವನ್ನು ಬೆನ್ನಿನ ಮೇಲೆ ಹೊತ್ತುಕೊಂಡನು.ಈ ತನ್ನ ಕೂರ್ಮಾವತಾರವನ್ನು, ಮಹಾವಿಷ್ಣುವು ಯಾವುದೇ ರಾಕ್ಷಸರನ್ನು ಸಂಹರಿಸಲಿಲ್ಲ.

ಹೀಗೆ ಸಾವಿರಾರು ವರುಷ ದೇವಾಸುರರು ಸಮುದ್ರವನ್ನು ಕಡೆಯುತ್ತಲೇ ಇದ್ದರು. ವಾಸುಕಿಯನ್ನು ಹಿಂದಕ್ಕೂ ಮುಂದಕ್ಕೂ ಎಳೆಯುತಿದ್ದರಿಂದ, ಅವನ ಹೊಟ್ಟೆಯಲ್ಲಿ ತಳಮಳವಾಗುತಿತ್ತು. ದೇಹವು ಉರಿಯುತ್ತಿತ್ತು. ಅವನ ಮೂಗು ಬಾಯಿಗಳಿಂದ ಬೆಂಕಿಯನ್ನು ಉಗುಲಾರಂಭಿಸಿದನು. ಅವನ ತಲೆಗಳನ್ನು ಹಿಡಿದಿದ್ದ ಹಲವು ರಾಕ್ಷಸರು ಇದರಿಂದ ಸುಟ್ಟು ಭಸ್ಮವಾದರು. ದೇವತೆಗಳು ಸಾಯದಿದ್ದರೂ ಅವರ ಮುಖಗಳು ಮಂಕಾದವು. ದೇಹಗಳು ಹೊಳಪನ್ನು ಕಳೆದುಕೊಂಡಿದ್ದವು.

ವಾಸುಕಿಯ ದೇಹದ ಉರಿಯನ್ನು ತಗ್ಗಿಸಲು, ಅಜಿತ ವಿಷ್ಣುವು ಅಲ್ಲಿ ಮೋಡವನ್ನು ಸೃಷ್ಟಿಸಿ, ಮಳೆಯನ್ನು ಸುರಿಸಿದನು. ಪುನಹ ಸಮುದ್ರ ಮಂತನವು ಮುಂದುವರೆಯಿತು. ಆದರೆ ಎಷ್ಟು ಸಂವತ್ಸರಗಳು ಕಳೆದರೂ ಅಮೃತವೂ ದೊರೆಯಲೇ ಇಲ್ಲ.

ಆಗ ವಿಷ್ಣುವು ಅಲ್ಲಿ ಪ್ರತ್ಯಕ್ಷನಾಗಿ, ಎರಡೂ ಕೈಗಳಲ್ಲಿ ವಾಸುಕಿಯನ್ನು ಹಿಡಿದುಕೊಂಡು, ಅತೀ ವೇಗವಾಗಿ ಕಡೆಯಲು ಆರಂಭಿಸಿದನು. ಇದರಿಂದಾಗಿ ಭಯಗೊಂಡ ಜಲಚರಗಳು, ನೀರಿನಿಂದ ಮೇಲಕ್ಕೆ ಬಂದವು. ನೀರಿನ ಬಣ್ಣವು ಬದಲಾಗುತ್ತಾ ಹೋಯಿತು. ಕಾಲಕೂಟ ಅಥವಾ ಹಾಲಾಹಲ ಎಂಬ ವಿಷವು ಅಲ್ಲಿ ಉತ್ಪತ್ತಿಯಾಯಿತು. ಅದರಿಂದ ಹಸಿರು ಹೊಗೆಯು ಜಗತ್ತಿಗೆ ವ್ಯಾಪಿಸಿತ್ತು. ಸುತ್ತಲೂ ಸೇರಿದ್ದ ದೇವಾಸುರರು, ಅಲ್ಲಿಂದ ಓಡಿ ಕೈಲಾಸಕ್ಕೆ ಹೋದರು.

ಶಿವನು ಅವರ ಸಮಸ್ಯೆಯನ್ನು ಆಲಿಸಿದ ತಕ್ಷಣ, ಮಂಥನ ನಡೆಯುತಿದ್ದ ಜಾಗಕ್ಕೆ ಬಂದನು. ಹಾಲಾಹಲ ವಿಷವನ್ನು ಬೊಗಸೆಯಲ್ಲಿ ಹಿಡಿದು, ತಕ್ಷಣ ಕುಡಿದೇಬಿಟ್ಟನು. ಗಾಬರಿಯಿಂದ ಓಡಿ ಬಂದ ಪಾರ್ವತಿ ದೇವಿಯು, ಶಿವನ ಗಂಟಲನ್ನು ಅದುಮಿ ಹಿಡಿದುಕೊಂಡಳು. ವಿಷವು ಕೆಳಗಿಳಿಯದೆ ಗಂಟಲಲ್ಲೇ ನಿಂತುಕೊಂಡು, ಕುತ್ತಿಗೆಯ ಭಾಗವು ನೀಲಿ ಬಣ್ಣಕ್ಕೆ ತಿರುಗಿತ್ತು. ಅಂದಿನಿಂದ ಶಿವನನ್ನು ನೀಲಕಂಠ ಎನ್ನಲಾಯಿತು.

ನಂತರ ಕಡೆಯುವಿಕೆ ಮುಂದುವರಿದಾಗ, ಸುರಭಿಯೆಂಬ ಹಸುವು ಸಾಗರದಿಂದ ಮೇಲಕ್ಕೆ ಬಂತು. ಹಾಲಿನ ಉತ್ಪನ್ನಗಳನ್ನು ತಯಾರಿಸಲು ಋಷಿಗಳು, ಅದನ್ನು ಕರೆದುಕೊಂಡು ಹೋದರು. ನಂತರ ಉಚ್ಚೈಶ್ರವ ಎಂಬ ಬೆಳ್ಳಗಿನ ಕುದುರೆಯು,ಅಲ್ಲಿ ಪ್ರತ್ಯಕ್ಷವಾಯಿತು. ಅದನ್ನು ಮಹಾರಾಜ ಬಲಿಯು ಸ್ವೀಕರಿಸಿದನು. ನಂತರ ಐರಾವತ ಆನೆಯು, ಉತ್ಪತ್ತಿ ಯಾಗಿತ್ತು. ಅದನ್ನು ಇಂದ್ರನು ತನ್ನ ವಾಹನವನ್ನಾಗಿಸಿದನು. ಭಾಗವತ ಹಾಗೂ ಮಹಾಭಾರತದ ಪ್ರಕಾರ, ಈ ಆನೆಯು ಸಮುದ್ರ ಮಂತನದಲ್ಲಿ ಜನಿಸಿತ್ತು. ಆದರೆ ರಾಮಾಯಣವು, ಕಶ್ಯಪ ಮುನಿ ಹಾಗೂ ಕದ್ರುವಿನ ಮಗಳಾದ, ಇರಾವತಿ ಎಂಬ ನಾಗಿಣಿಯ ಮಗ ಐರಾವತ ಎನ್ನುತ್ತದೆ. ಈ ಆನೆಯ ಹಿಂದೆಯೇ ಜನಿಸಿದ ಎಂಟು ಆನೆಗಳು, ಐರಾವತವನ್ನು ಹಿಂಬಾಲಿಸಿದವು.

ತುಸುಸಮಯದಲ್ಲೇ ಕೌಸ್ತುಭ ಮಣಿ ಮತ್ತು ಪದ್ಮರಾಗಮಣಿ ಎಂಬ ರತ್ನಗಳು ಹುಟ್ಟಿದವು. ವಿಷ್ಣುವು ಅವುಗಳನ್ನು ತೆಗೆದುಕೊಂಡು, ತನ್ನ ಎದೆಯಲ್ಲಿ ಧರಿಸಿಕೊಂಡನು. ನಂತರ, ಎಲ್ಲರ ಆಸೆಗಳನ್ನು ಪೂರೈಸುವ ಪಾರಿಜಾತದ ಸಸ್ಯವು, ಅಲ್ಲಿ ಉದ್ಭವವಾಗಿತ್ತು. ಅದನ್ನು ಇಂದ್ರನು ಸ್ವರ್ಗಕ್ಕೆ ಕೊಂಡೊಯ್ದನು. ಅತ್ಯಂತ ಸುಂದರವಾದ ಅಪ್ಸರೆಯರು ಸಮುದ್ರದಲ್ಲಿ ಕಾಣಿಸಿಕೊಂಡು,ನೇರವಾಗಿ ಸ್ವರ್ಗದ ಕಡೆಗೆ ನಡೆದರು.

ಲಕ್ಷ್ಮಿ ದೇವಿಯು ರಮಾ ಎಂಬ ಹೆಸರಿನಿಂದ ಸಮುದ್ರದಿಂದ ಮೇಲಕ್ಕೆ ಬಂದಳು. ಅವಳನ್ನು ಪಡೆಯಬೇಕೆಂದು ಎರಡೂ ಗುಂಪುಗಳಲ್ಲಿ ಜಗಳ ಆರಂಭವಾಗಿತ್ತು. ನಂತರ ಅವಳಿಗಾಗಿ ಸ್ವಯಂವರವನ್ನು ಏರ್ಪಡಿಸಲಾಯಿತು. ಎರಡೂ ಬದಿಯ ಸಾಲುಗಳಲ್ಲಿ ನಿಂತವರನ್ನು ಬಿಟ್ಟು, ನೇರವಾಗಿ ವಿಷ್ಣುವಿಗೆ ಮಾಲೆಯನ್ನು ಹಾಕಿದಳು. ನಂತರ ಉದ್ಭವವಾದ ವರುಣಿ ದೇವತೆಯನ್ನು, ಬಲಿಯು ಸ್ವೀಕರಿಸಿದನು. ಮಂಥನವು ಮುಂದುವರೆಯಿತು.

ಒಬ್ಬ ಧನ್ವಂತರಿ ಎಂಬ ಪುರುಷನು ಕಯ್ಯಲ್ಲಿ ಒಂದು ಚಿನ್ನದ ಕಲಶವನ್ನು ಹಿಡಿದು,ಸಮುದ್ರದಿಂದ ಮೇಲೆ ಬಂದನು. ಅವನು ಯಾವುದೇ ಕಾಯಿಲೆಗಳನ್ನು ವಾಸಿ ಮಾಡುವ ಸಾಮರ್ಥ್ಯವನ್ನು ಹೊಂದಿದ್ದನು. ಅವನ ಕೈಯಲ್ಲಿನ ಅಮೃತದ ಕಲಶವನ್ನು ರಾಕ್ಷಸರು ಕಸಿದುಕೊಂಡು, ಯಾರು ಮೊದಲು ಕುಡಿಯುವುದೆಂದು ಕಿತ್ತಾಡತೊಡಗಿದರು. ಅಮೃತದ ಆಸೆಯನ್ನು ಬಿಟ್ಟು, ದುಃಖದಿಂದ ದೇವತೆಗಳು ಕುಳಿತರು. ವಿಷ್ಣುವು ಈ ಸಮಸ್ಯೆಯನ್ನು ಬಗೆಹರಿಸಲು, ಮೋಹಿನಿ ಎಂಬ ಸುಂದರಿಯ ರೂಪ ಧರಿಸಿದನು.

ತನ್ನ ನೃತ್ಯದಿಂದ ರಾಕ್ಷಸರನ್ನು ಒಲಿಸಿಕೊಂಡು, ಅವರ ಕೈಯಿಂದ ಅಮೃತ ಕಲಶ ಪಡೆದನು. ದೇವತೆಗಳನ್ನು ಹಾಗೂ ರಾಕ್ಷಸರನ್ನು ಪ್ರತ್ಯೇಕ ಸಾಲಿನಲ್ಲಿ ಕೂರಲು ಹೇಳಿ, ಅಮೃತವನ್ನು ಹಂಚಲು ನಿಂತಳು. ಮೊದಲಿಗೆ ದೇವತೆಗಳ ಬೊಗಸೆಗೆ ಮೋಹಿನಿ ಅಮೃತವನ್ನು ಸುರಿಯತೊಡಗಿದಳು. ರಾಕ್ಷಸರಿಗೆ ಒಬ್ಬರಿಗೂ ಕೊಡಲಿಲ್ಲ. ಕೇವಲ ಅವರ ಕಡೆ ಮುಗುಳು ನಗುತ್ತಿದ್ದಳು. ಅಮೃತ ತಮಗೆ ಸಿಗುವುದಿಲ್ಲ ಎಂದರಿತ ರಾಕ್ಷಸ ಸ್ವರಭಾನು, ದೇವತೆಗಳ ಸಾಲಿನಲ್ಲಿ ಮೆಲ್ಲನೆ ಬಂದು ಕುಳಿತಿದ್ದ. ಮೋಹಿನಿ ಅವನ ಬೊಗಸೆಗೆ ಅಮೃತ ಸುರಿದಳು. ಅವನು ತಕ್ಷಣ ಅದನ್ನು ಕುಡಿದ. ಅವನ ಕೋರೆ ಹಲ್ಲನ್ನು ಕಂಡು ಅವನು ರಾಕ್ಷಸನೆಂದು ಗೊತ್ತಾಗಿ, ಸೂರ್ಯ ಚಂದ್ರರು ಮೋಹಿನಿಗೆ ಸೂಚನೆ ಕೊಟ್ಟರು.

ಸುಂದರಿಯ ರೂಪದ ವಿಷ್ಣುವು ಚಕ್ರ ಬೀಸಿದ್ದ. ತಲೆಯು ದೇಹದಿಂದ ಬೇರ್ಪಟ್ಟಿತು. ಆದರೆ ಅಮೃತವು ಗಂಟಲಿಗೆ ಇಳಿದಾಗಿತ್ತು. ತಲೆ ರಾಹುವಾಯಿತು, ದೇಹವು ಕೇತುವಾಗಿತ್ತು. ಅದಾದ ನಂತರ ಅವಕಾಶ ಸಿಕ್ಕಾಗೆಲ್ಲಾ, ರಾಹು ಕೇತುಗಳು ಸೂರ್ಯ ಚಂದ್ರರನ್ನು ನುಂಗುತ್ತಿದ್ದರು. ಅದನ್ನು ಗ್ರಹಣ ಹಿಡಿಯುವುದು ಎನ್ನುವರು. ಆದರೆ ಅಮೃತದ ಸಂಪರ್ಕದಿಂದಾಗಿ ಅವರಿಗೆ ದೇವತೆಗಳ ಸ್ಥಾನಮಾನವು ದೊರೆಯಿತು.



<ಭಾಗ17:ಗಜೇಂದ್ರ ಮೋಕ್ಷದ ಕಥೆ  

ಭಾಗ 19:ರಾಜ ಬಲಿ  ಮತ್ತು ವಾಮನ ದೇವ >







Comments