Skip to main content

ಭಾಗವತದ ಕಥೆಗಳು ಭಾಗ 1: ಪರೀಕ್ಷಿತನ ಜನನ


English


ನೈಮಿಷಾರಣ್ಯ ಎಂಬ ಒಂದು ಪವಿತ್ರವಾದ ಕಾಡು. ಇದು ಈಗಿನ ಉತ್ತರ ಪ್ರದೇಶದಲ್ಲಿದೆ. ಒಂದಾನೊಂದು ಕಾಲದಲ್ಲಿ, ಈ ಕಾಡಿನ ಉತ್ತಮವಾದ ಜಾಗದಲ್ಲಿ, ಭಗವಂತನನ್ನು ಪ್ರಸನ್ನ ಗೊಳಿಸಲು, ಒಂದು ಮಹಾಯಾಗವನ್ನು ನಡೆಸಲು ಶೌನಕ ಎಂಬ ಮಹರ್ಷಿಗಳು ನಿರ್ಧರಿಸಿದರು. 

ಒಂದು ದಿನ, ಯಜ್ಞಕುಂಡವನ್ನು ಹತ್ತಿಸಿ, ಬೆಳಗಿನ ಕರ್ತವ್ಯಗಳನ್ನು ಮುಗಿಸಿ, ಅತಿಥಿಯಾಗಿ ಬಂದ ಸೌತಿಗಳಿಗೆ ಗೌರವದ ಆಸನವನ್ನು ಅರ್ಪಿಸಿದ ನಂತರ, ಶೌನಕ ಋಷಿಗಳು, ಪರಮಾತ್ಮನ ಅವತಾರಗಳ ಬಗ್ಗೆ ವಿವರಿಸುವಂತೆ, ಸೌತಿಯವರ ಬಳಿ ಕೇಳಿಕೊಂಡರು. ಈ ಸೌತಿಯವರು, ಋಷಿಗಳಿಗೆ ಪುರಾಣದ ಕಥೆಗಳನ್ನು ಹೇಳುವಲ್ಲಿ ಪ್ರಮುಖರು. ಸೂತ ಗೋಸ್ವಾಮಿ, ಮತ್ತು ಉಗ್ರಶವ ಎಂಬುದು ಇವರ ಇತರೆ ಹೆಸರುಗಳು.

Sauti telling stories
ಸೌತಿ ಮಹರ್ಷಿ 

ಸೌತಿ ಹೇಳಿದ ಮೊದಲ ಕಥೆಯೆಂದರೆ,   ದ್ರೋಣನ ಮಗ ಅಶ್ವತ್ಥಾಮನು ಮಾಡಿದ ಹೇಯ ಕೃತ್ಯ.

ಕುರುಕ್ಷೇತ್ರದ ಯುದ್ಧ ಮುಗಿದಿತ್ತು. ಧೃತರಾಷ್ಟ್ರನ ಮಗ ದುರ್ಯೋಧನನು, ಭೀಮನ ಗದೆಯ ಏಟು ತಿಂದು, ಮೂಳೆ ಮುರಿದುಕೊಂಡು ಮಲಗಿದ್ದನು. ಅವನನ್ನು ಸಂತೋಷಗೊಳಿಸಲು, ಅಶ್ವತ್ಥಾಮನು ಪಾಂಡವರ ತಲೆಯನ್ನು ತರುತ್ತೇನೆಂದು ಕತ್ತಲಲ್ಲಿ ಹೋಗಿ, ತಮ್ಮ ಬಿಡಾರದಲ್ಲಿ ಮಲಗಿದ್ದ ಪಾಂಡವರ ಮಕ್ಕಳ ತಲೆಗಳನ್ನು ಕಡಿದು ತಂದನು. ಇದರಿಂದಾಗಿ, ದುರ್ಯೋಧನನು ಇನ್ನಷ್ಟು ನೊಂದುಹೋದನು.

ಇತ್ತ ದ್ರೌಪದಿಯು, ತನ್ನ ಮಕ್ಕಳ ದುರ್ಮರಣವನ್ನು ನೋಡಿ, ಜೋರಾಗಿ ಅಳತೊಡಗಿದಳು. ಅವಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದ ಅರ್ಜುನನು, "ಅಶ್ವತ್ಥಾಮನ ತಲೆಯನ್ನು ಕಡಿದು ತಂದು, ಆನಂತರ ಅವಳ ಕಣ್ಣೀರನ್ನು ಒರೆಸುತ್ತೇನೆ. " ಎಂದು ಗುಡುಗಿದನು.

ಅತ್ತ ಅಶ್ವತ್ಥಾಮನು ಬಹಳ ದೂರದಿಂದ ಅರ್ಜುನನು ತನ್ನ ಕಡೆಗೆ ಧಾವಿಸಿ ಬರುತ್ತಿರುವುದನ್ನು ನೋಡಿ, ತನ್ನ ಪ್ರಾಣವನ್ನು ಉಳಿಸಿಕೊಳ್ಳಲು, ರಥದಲ್ಲಿ ಓಡಿಹೋದನು. ಬಹಳ ದೂರ ಚಲಿಸಿದ ನಂತರ, ದ್ರೋಣನ ಮಗನಾದ ಅಶ್ವತ್ಥಾಮ, ತನ್ನ ಕುದುರೆಗಳು ದಣಿದಿರುವುದನ್ನು ಕಂಡು, ಮುಂದೆ ಓಡಲು ಸಾಧ್ಯವಾಗದೆ, ಬೇರೆ ದಾರಿಕಾಣದೆ, ಅತ್ಯಂತ ಪ್ರಬಲವಾದ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ನಿರ್ಧರಿಸಿದನು.  ನೀರನ್ನು ಮುಟ್ಟಿ, ಶುದ್ಧನಾಗಿ ಬ್ರಹ್ಮಾಸ್ತ್ರದ ಮಂತ್ರವನ್ನು ಪಠಿಸಿ, ಅದನ್ನು ಹೂಡಿಯೆ ಬಿಟ್ಟನು. ಆದರೆ, ಅದನ್ನು ಹಿಂದೆ ತೆಗೆದು ಕೊಳ್ಳಲು ಅವನಿಗೆ ತಿಳಿದಿರಲಿಲ್ಲ. 

ಬ್ರಹ್ಮಾಸ್ತ್ರ ಹೊರಹೊಮ್ಮಿದ ಬೆಳಕು ದಶದಿಕ್ಕುಗಳಿಗೂ ವ್ಯಾಪಿಸಿತ್ತು. ಬ್ರಹ್ಮಾಸ್ತ್ರವು, ಅರ್ಜುನನ್ನು ಗುರಿಯಾಗಿಸಿಕೊಂಡು ನುಗ್ಗಿತ್ತು. ಈಗ ಅರ್ಜುನನು, ತನ್ನ ಪ್ರಾಣವು ಅಪಾಯದಲ್ಲಿದೆ ಎಂದು ಅರಿತು ಕೃಷ್ಣನ ಮೊರೆ ಹೋದನು. ಪ್ರತಿಯಾಗಿ ಕೃಷ್ಣನು ಇನ್ನೊಂದು ಬ್ರಹ್ಮಾಸ್ತ್ರವನ್ನು ಹೂಡುವಂತೆ ಸಲಹೆ ನೀಡಿದನು. ಅರ್ಜುನನು ಭಗವಾನ್ ಶ್ರೀ ಕೃಷ್ಣನನ್ನು ಪ್ರದಕ್ಷಿಣೆ ಮಾಡಿದ ನಂತರ, ಅವನು ತನ್ನ ಬ್ರಹ್ಮಾಸ್ತ್ರವನ್ನು ಎಸೆದನು. ಎರಡು ಬ್ರಹ್ಮಾಸ್ತ್ರಗಳ ಕಿರಣಗಳು ಆಕಾಶದಲ್ಲಿ ಸೇರಿಕೊಂಡು, ಪ್ರಖರ ಬೆಳಕನ್ನು ಉಂಟುಮಾಡಿದವು. ಪ್ರಪಂಚದಲ್ಲಿ ಹಾಹಾಕಾರ ಉಂಟಾಯಿತು. ಅಪಾಯವನ್ನರಿತ ಕೃಷ್ಣನು, ತನ್ನ ಬ್ರಹ್ಮಾಸ್ತ್ರವನ್ನು ಹಿಂಪಡೆಯುವಂತೆ ಅರ್ಜುನನಿಗೆ ಹೇಳಿದನು. ಅದರಂತೆ ಅರ್ಜುನನು ಮಾಡಿದನು. ಆದರೆ ಅಶ್ವತ್ಥಾಮನಿಗೆ ಈ ಮಂತ್ರವು ತಿಳಿದಿರಲಿಲ್ಲ. ಬದಲಾಗಿ ಅವನು ಅದರ ದಿಕ್ಕನ್ನು ತಪ್ಪಿಸಿ, ಮೃತ ಅಭಿಮನ್ಯುವಿನ  ಗರ್ಭಿಣಿ ಪತ್ನಿ, ಉತ್ತರೆಯ ಗರ್ಭದೊಳಗೆ ಪ್ರವೇಶಿಸುವಂತೆ ಮಾಡಿದನು.

ನಂತರ ಶ್ರೀಕೃಷ್ಣನ ಮಾತಿನಂತೆ ಅರ್ಜುನನು, ಅಶ್ವತ್ಥಾಮನನ್ನು ಬಂಧಿಸಿ ತಮ್ಮ ಡೇರೆಗೆ ಎಳೆದೊಯ್ದನು. ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ  ಕೋಪದಿಂದ, "ನೀನು ಅವನು ಬ್ರಾಹ್ಮಣ ಎಂದು ಅವನನ್ನು ಕೊಲ್ಲಲು ಅಂಜಬೇಡ. ಅವನು ನಿದ್ದೆಯಲ್ಲಿರುವ ಮುಗ್ಧ ಬಾಲಕರನ್ನು ಕೊಂದಿದ್ದಾನೆ. ಆದುದರಿಂದ ಅವನ ಮೇಲೆ ಕರುಣೆಯನ್ನು ತೋರಿಸಬೇಡ." ಎಂದನು.  ಆದರೆ, ಅರ್ಜುನನಿಗೆ ತನ್ನ ಗುರುವಿನ ಮಗನಾದ ಅಶ್ವತ್ಥಾಮನನ್ನು ಕೊಲ್ಲಲು ಮನಸಾಗಲೇ ಇಲ್ಲ. 

ಅವರು ತಮ್ಮ ಶಿಬಿರವನ್ನು ತಲುಪಿದ ನಂತರ, ಅಶ್ವತ್ಥಾಮನನ್ನು ದ್ರೌಪದಿಯ ಎಂದುರಿಗೆ ಎಳೆದೊಯ್ದರು. ಅವಳು, ಅಲ್ಲಿ ತನ್ನ ಪುತ್ರರಿಗಾಗಿ ಅಳುತ್ತಿದ್ದಳು. ದ್ರೌಪದಿಗೆ ಅಶ್ವತ್ಥಾಮನನ್ನು ನೋಡಿ, ಕರುಣೆ ಉಂಟಾಯಿತು. "ಅವನು ನಿಮ್ಮ ಶಸ್ತ್ರ ಕಲಿಸಿದ ಗುರುಗಳ ಮಗ. ಅವನನ್ನು ಬಿಡುಗಡೆ ಗೊಳಿಸಿ." ಎಂದು ಅರ್ಜುನನನ್ನು ಕೇಳಿಕೊಂಡಳು. 

ಮಹಾರಾಜ ಯುಧಿಷ್ಠಿರನು, ಈ ಮಾತನ್ನು ಒಪ್ಪಿದನು. ಭೀಮನನ್ನು ಹೊರತುಪಡಿಸಿ, ಇತರರೂ ಒಪ್ಪಿದರು. ಈಗ ಎಲ್ಲರಿಗೂ ಸಮ್ಮತವಾಗುವಂತೆ ಶ್ರೀಕೃಷ್ಣನು, "ಅಶ್ವತ್ಥಾಮನ ಹಣೆಯಲ್ಲಿ ಒಂದು ಮಣಿಯಿದೆ. ಅದನ್ನು ತೆಗೆದರೆ ಅವನು ಬದುಕಿದ್ದೂ ಸತ್ತಂತೆ." ಎಂದು ತೀರ್ಪು ನೀಡಿದನು. ಅಶ್ವತ್ಥಾಮನು ತನ್ನ ಹಣೆಯಲ್ಲಿನ ಮಣಿಯನ್ನು ಕತ್ತರಿಸಿ ತೆಗೆದು ಪಾಂಡವರಿಗೆ ಅರ್ಪಿಸಿ, ಅಲ್ಲಿಂದ ದೂರ ನಡೆದನು. 

ತುಸು ಸಮಯದ ನಂತರ, ಉತ್ತರೆಯ ಗರ್ಭಕ್ಕೆ ಬ್ರಹ್ಮಾಸ್ತ್ರ ಹೊಕ್ಕಿದ ಸಂಗತಿ ಪಾಂಡವರ ಕಿವಿಗೆ ಬಿದ್ದಿತ್ತು. ಶ್ರೀಕೃಷ್ಣನು ತಕ್ಷಣ ತನ್ನ ಸುದರ್ಶನ ಚಕ್ರವನ್ನು ಪ್ರಯೋಗಿಸಿ, ಉತ್ತರೆಯ ಗರ್ಭದಲ್ಲಿದ್ದ ಬ್ರಹ್ಮಾಸ್ತ್ರವನ್ನು ನಿಷ್ಕ್ರಿಯಗೊಳಿಸಿದನು. ಯಾವುದೇ ಅಪಾಯವಿಲ್ಲದೆ, ಉತ್ತರೆಗೆ ಒಂದು ಗಂಡು ಮಗು ಜನಿಸಿತ್ತು. ಇವನೇ ರಾಜ ಪರೀಕ್ಷಿತ.


ಕಲಿಯುಗದ ಆರಂಭ

Kali
ಕಲಿ 

ಅದು ಪರೀಕ್ಷಿತ ರಾಜನ ಆಳ್ವಿಕೆಯ ಕಾಲವಾಗಿತ್ತು. ಶ್ರೀಕೃಷ್ಣ ಪರಮಾತ್ಮನು ತನ್ನ ದೇಹತ್ಯಾಗವನ್ನು ಮಾಡಿಯಾಗಿತ್ತು. ಪರೀಕ್ಷಿತನು ಉತ್ತರ ರಾಜನ ಮಗಳನ್ನು ವರಿಸಿ, ಅವಳಿಂದ ಜನಮೇಯಜಯ ಸೇರಿದಂತೆ ನಾಲ್ಕು ಗಂಡು ಮಕ್ಕಳನ್ನು ಪಡೆದನು. ಇವನ ಗುರುಗಳು ಕೃಪಾಚಾರ್ಯ. ತನ್ನ ಗುರುಗಳ ಆಜ್ಞೆಯಂತೆ ರಾಜನು ಅಶ್ವಮೇಧ ಯಾಗವನ್ನು ಮಾಡಿ ತನ್ನ ರಥವೇರಿ, ಜಗವನ್ನು ಗೆಲ್ಲಲು ಹೊರಟನು.

ಹೀಗೆ ದಾರಿಯಲ್ಲಿ ಸಾಗುವಾಗ ಅವನಿಗೆ, ಒಬ್ಬ ಕುರೂಪಿ ವ್ಯಕ್ತಿಯು ಒಂದು ಹಸು ಮತ್ತು ಎತ್ತಿಗೆ ತನ್ನ ಕೋಲು ಮತ್ತು ಕತ್ತಿಗಳಿಂದ ಹೊಡೆಯುವುದನ್ನು ನೋಡಿದನು. ತಕ್ಷಣವೇ ರಥವನ್ನು ನಿಲ್ಲಿಸಿ, ತನ್ನ ಬಿಲ್ಲನ್ನು ಹೆದೆಯೇರಿಸಿ ಅತ್ತಕಡೆ ಸಾಗಿದನು. ರಾಜನನ್ನು ಕಂಡ ಕುರೂಪಿಯು ಹೊಡೆಯುವುದನ್ನು ನಿಲ್ಲಿಸಿದನು.

ಪರೀಕ್ಷಿತ ಮಹಾರಾಜನು ಕೋಪದಿಂದ, "ಯಾರು ನೀನು ನೀಚ, ನನ್ನ ಸಾಮ್ರಾಜ್ಯದಲ್ಲಿ ಇದ್ದುಕೊಂಡು ಮೂಕ ಪ್ರಾಣಿಗಳನ್ನು ಏಕೆ ಹಿಂಸಿಸುತ್ತಿರುವೆ? ನೀನು ಇನ್ನು ಬದುಕಿರಬಾರದು" ಎಂದು, ಅವನನ್ನು ಕೊಲ್ಲಲು ಹೊರಟನು.

ಆಗ ಕುರೂಪಿಯು ಭಯದಿಂದ ನಡುಗುತ್ತಾ, "ನನ್ನಿಂದ ತಪ್ಪಾಯಿತು ರಾಜನೇ, ನನ್ನನ್ನು ಕೊಲ್ಲಬೇಡ, ಆದರೆ ನನಗೆ ನಿನ್ನ ಸಾಮ್ರಾಜ್ಯದಲ್ಲಿ ವಾಸಿಸಲು ಅವಕಾಶವನ್ನು ಕೊಡು." ಎಂದು ಅವನ ಪಾದಗಳಿಗೆ ಶರಣಾದನು.

ತನಗೆ ಶರಣು ಬಂದವನನ್ನು ಕೊಲ್ಲಲು ರಾಜನ ಮನಸ್ಸು ಒಪ್ಪಲಿಲ್ಲ. "ಯಾರು ನೀನು? ಹೀಗೇಕೆ ಮಾಡುತ್ತಿರುವೆ? ನಿನಗೆ ಯಾವ ರೀತಿಯ ಸ್ಥಳದಲ್ಲಿ ಆಶ್ರಯ ಬೇಕು?" ಎಂದು ಪ್ರಶ್ನಿಸಿದನು.

ಕುರೂಪಿಯು ಉತ್ತರಿಸಿದನು, "ನನ್ನ ಹೆಸರು ಕಲಿ. ಈ ಬೆಳ್ಳಗಿನ ಎತ್ತು ಧರ್ಮ. ಈ ಹಸುವು ಭೂಮಿ. ನಾನು ವಾಸಿಸಲು ಇಚ್ಛೆ ಪಡುವ ಸ್ಥಳಗಳಲ್ಲಿ ಮದ್ಯಪಾನ, ಜೂಜು, ವೇಶ್ಯಾವಾಟಿಕೆ, ಕಳ್ಳತನ ಹಾಗೂ ಪ್ರಾಣಿವಧೆಗಳು ನಡೆಯುತ್ತಿರಬೇಕು. ಹಾಗೂ ಲೋಹಗಳಲ್ಲಿ ಚಿನ್ನದ ಮೇಲೆ ನನ್ನ ವಾಸವಿರಬೇಕು" ಎಂದನು. "ಹಾಗೆಯೇ ಆಗಲಿ" ಎಂದು ಪರೀಕ್ಷಿತನು ಭಾಷೆಯಿತ್ತು, ರಥವೇರಿ ಅಲ್ಲಿಂದ ನಿರ್ಗಮಿಸಿದನು. 

ನಂತರ ಕಲಿಯ ಮಾತುಗಳನ್ನು ಗಮನದಲ್ಲಿ ಇಟ್ಟುಕೊಂಡು, ತನ್ನಿಂದ ಧರ್ಮಕ್ಕೆ ಅಪಚಾರವಾಗದಂತೆ, ಭೂಮಿಗೆ ಯಾವುದೇ ಹಾನಿಯಾಗದಂತೆ ಪರೀಕ್ಷಿತನು ಆಡಳಿತ ನಡೆಸಿದನು.

ಈ ಕತೆಯನ್ನು ಯು ಟ್ಯೂಬ್ ನಲ್ಲಿ ವೀಕ್ಷಿಸಿ:

 


 

ಭಾಗ2>

Comments