Skip to main content

ಭಾಗವತದ ಕಥೆಗಳು ಭಾಗ - 2: ರಾಜ್ಯ ಪರೀಕ್ಷಿತ ಮತ್ತು ತಕ್ಷಕ ಸರ್ಪ


English




ಪರೀಕ್ಷಿತನು ಪಡೆದ ಶಾಪ 

ಮ್ಮೆ ರಾಜ ಪರೀಕ್ಷಿತನು, ಬೇಟೆಯಾಡಲು ತನ್ನ ಮಂತ್ರಿ ಹಾಗೂ ಸೈನಿಕರೊಂದಿಗೆ  ಕಾಡಿಗೆ ಹೋಗಿದ್ದನು. ಎಂದಿನಂತೆ ತನ್ನ ತಲೆಗೆ ಚಿನ್ನದ ಕಿರೀಟವನ್ನು ಧರಿಸಿಕೊಂಡಿದ್ದನು. ಅಲ್ಲಿ ಒಂದು ಜಿಂಕೆಗಳ ಹಿಂಡನ್ನು ಕಂಡು ಬೆನ್ನಟ್ಟಿ, ಬಾಣವನ್ನು ಹೂಡಿದನು. ಬಾಣವು ಒಂದು ಜಿಂಕೆಗೆ ತಗುಲಿತ್ತು. ಆದರೆ, ಒಮ್ಮೆ ಕೆಳಗಡೆ ಬಿದ್ದ ಜಿಂಕೆ, ಸಾಯದೆ ಬದುಕಿ ಉಳಿದಿತ್ತು. ರಾಜನ ಜೀವನದಲ್ಲಿ ಯಾವುದೇ ಜಿಂಕೆಗೆ,  ಎರಡು ಬಾರಿ ಬಾಣವನ್ನು ಹೂಡಿರಲಿಲ್ಲ. ಆ ಜಿಂಕೆಯು ಆವನಿಂದ ತಪ್ಪಿಸಿಕೊಂಡು, ಎದ್ದು ಕಾಡಿನ ಕಡೆಗೆ ಓಡಿತ್ತು. ರಾಜ ಪರೀಕ್ಷಿತನು, ಅದನ್ನು ಹುಡುಕುತ್ತಾ, ತನ್ನ ಅಂಗರಕ್ಷಕರ ಗುಂಪಿನಿಂದ ಬೇರ್ಪಟ್ಟು, ಒಬ್ಬಂಟಿಯಾಗಿ, ದಟ್ಟ ಅಡವಿಯನ್ನು ಹೊಕ್ಕಿದನು. ಹಸಿವು, ಬಾಯಾರಿಕೆಗಳಿಂದ ಕಂಗೆಟ್ಟು, ತುಸುದೂರದಲ್ಲಿ ಕಾಣುತಿದ್ದ ಶಮೀಕ ಋಷಿಯ ಆಶ್ರಮದ ಒಳಗೆ ನುಗ್ಗಿದನು.

ಅಲ್ಲಿ  ಋಷಿಯು ಕಣ್ಣು ಮುಚ್ಚಿ ಕುಳಿತಿರುವುದನ್ನು ನೋಡಿದನು. ಬಾಯಾರಿ ಹೋಗಿದ್ದ ರಾಜನು ಕುಡಿಯಲು ನೀರು ಕೇಳಿದನು. ಆದರೆ ಮೌನ ವ್ರತದಲ್ಲಿ ಕುಳಿತಿದ್ದ ಋಷಿಯು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. 

ಒಂದೆರಡು ಬಾರಿ ಋಷಿಯನ್ನು ಎಬ್ಬಿಸಲು ಯತ್ನಿಸಿ, ವಿಫಲನಾದ ರಾಜನಿಗೆ, ಮಹಾರಾಜನಾದ ತನಗೆ ಯಾವುದೇ ಉಪಚಾರವನ್ನು ನೀಡದ ಋಷಿಯ ಬಗ್ಗೆ, ವಿವೇಚನೆಯನ್ನು ಕಳೆದುಕೊಂಡು, ಕೋಪ ಉಂಟಾಯಿತು. ಅವನು ತನ್ನ ಧರ್ಮವನ್ನು ಮರೆತನು. ತಲೆಯ ಚಿನ್ನದ ಕಿರೀಟದಲ್ಲಿ ಕುಳಿತಿದ್ದ  ಕಲಿಯ ಪ್ರಭಾವವು, ಅದಾಗಲೇ ರಾಜನ ಮೇಲೆ ಆಗಿತ್ತು. “ತನಗೆ ಈ ಋಷಿಯು ಬೇಕೆಂದೇ ಅವಮಾನ ಮಾಡಿದನು.” ಎಂದುಕೊಂಡು ತನ್ನ ಉರಿಗೋಪದ ಉಪಶಮನಕ್ಕಾಗಿ, ಸುತ್ತ ನೋಡಿ, ಅಲ್ಲೇ ಸತ್ತು ಬಿದ್ದಿದ್ದ ಹಾವೊಂದನ್ನು ತೆಗೆದು, ಋಷಿಯ ಕೊರಳಿಗೆ ಹಾಕಿ ಅಲ್ಲಿಂದ ಹೊರ ನಡೆದನು.

pareekshit and shamika rushi
ರಾಜ ಪರೀಕ್ಷಿತ ಮತ್ತು ಋಷಿ ಶಮೀಕ 


 ಋಷಿ ಶಮೀಕನಿಗೆ, ಶೃಂಗಿ ಎಂಬ ಒಬ್ಬ ಮಗನಿದ್ದ. ಅವನು ಬಾಲಕನಾದರೂ ಮಹಾ ತಪಸ್ವಿ. ಆಟವಾಡುತ್ತಿದ್ದ ಅವನಿಗೆ, ಸ್ನೇಹಿತರಿಂದ ತನ್ನ ತಂದೆಗಾದ ವಿಷಯ ತಿಳಿಯಿತು. ಅವನು ತಕ್ಷಣ ಕೋಪಗೊಂಡು, “ತನ್ನ ತಂದೆಗೆ ಅವಮಾನ ಮಾಡಿದವರು ಯಾರು?” ಎಂದು ಯೋಚಿಸದೆ, "ನನ್ನ ತಂದೆಯ ಕೊರಳಲ್ಲಿ ಸತ್ತ ಹಾವನ್ನು ಹಾಕಿದವನಿಗೆ, ಇನ್ನು ಏಳು ದಿವಸಗಳಲ್ಲಿ, ಸರ್ಪಲೋಕದ ತಕ್ಷಕ ಎಂಬ ಸರ್ಪವು ಕಚ್ಚಿ ಸಾಯಿಸಲಿ." ಎಂದು ಶಪಿಸಿದನು. ನಂತರ ಆಟವಾಡಲು ಮನಸ್ಸಾಗದೆ, ತಂದೆಯನ್ನು ನೋಡಲು ಆಶ್ರಮಕ್ಕೆ ಓಡೋಡಿ ಬಂದನು. 

ಇನ್ನೊಂದು ಕಥೆಯ ಪ್ರಕಾರ ಶೃಂಗಿಯು ಆಟವಾಡುವ ಬಾಲಕನಾಗಿ ಇರುವುದಿಲ್ಲ. ಬದಲಾಗಿ ಅವನು ಯುವಕನಾಗಿರುತ್ತಾನೆ, ಹಾಗೂ ಅವನು ಮಹಾ ತಪಸ್ವಿಯಾಗಿರುತ್ತಾನೆ. ಎಷ್ಟೇ ತಪಸ್ವಿಯಾದರೂ  ಶೃಂಗಿಗೆ, ತಾನು ಕೊಟ್ಟ ಶಾಪವನ್ನು ಹಿಂದೆ ಪಡೆಯುವ ಸಾಮರ್ಥ್ಯ ಇರುವುದಿಲ್ಲ.  ಶೃಂಗಿಯು ಧರ್ಬೆಗಳನ್ನು ಸಂಗ್ರಹಿಸುತ್ತಿರುವಾಗ, ಅವನ ಗೆಳೆಯನಾದ ಕೃಶನು  ಅವನ ಬಳಿ ಬಂದು, ಶಮೀಕನ ಕೊರಳಿಗೆ ಸತ್ತ ಹಾವನ್ನು ರಾಜನ ಹಾಕಿರುವ ಸಂಗತಿಯನ್ನು ತಿಳಿಸುತ್ತಾನೆ. ಆ ಕ್ಷಣಕ್ಕೆ ಕೋಪಗೊಂಡ ಶೃಂಗಿಯು, ಆ ಸ್ಥಳದಲ್ಲೆ ಶಪಿಸುತ್ತಾನೆ.  ಮತ್ತು, ಆ ಕೂಡಲೇ ತನ್ನ ತಂದೆಯನ್ನು ನೋಡಲು ಆಶ್ರಮಕ್ಕೆ ಓಡೋಡಿ ಹೋಗುತ್ತಾನೆ.

ಇನ್ನೂ ಕೆಲವು ಮೂಲಗಳು, 'ಶೃಂಗಿಯು, "ರಾಜನಿಗೆ ಉರಗ ಪಕ್ಷಿಯು ಕಚ್ಚಲಿ" ಎಂದು ಶಪಿಸಿದ.' ಎಂದು ಹೇಳುತ್ತವೆ.


***


ತನ್ನ ಸ್ನೇಹಿತ ಹೇಳಿದಂತೆ, ಶಮೀಕನ ಕೊರಳಲ್ಲಿ ಸತ್ತ ಹಾವೊಂದು ಸುತ್ತಿಕೊಂಡಿತ್ತು. ತನ್ನ ತಂದೆಯ ಮೌನವ್ರತದಿಂದ ಏಳುವುದನ್ನು ಅವನು ಕಾಯುತ್ತಾ ಕುಳಿತನು.

ಶಮೀಕ ಋಷಿಯ ಮೌನ ವ್ರತವು ಮುಗಿದಿತ್ತು. ಭಗವಂತನನ್ನು ನೆನೆಯುತ್ತಾ, ನಿಧಾನವಾಗಿ ಕಣ್ಣು ತೆರೆದವನಿಗೆ, ಬೇಸರದಿಂದ ತನ್ನ ಎದುರು ಕುಳಿತಿದ್ದ ತನ್ನ ಮಗ ಶೃಂಗಿಯು ಕಾಣಿಸಿದನು.

“ಏನಾಯ್ತು?” ಎಂದು ಮಗನನ್ನು ವಿಚಾರಿಸಿದಾಗ, ಪರೀಕ್ಷಿತ ರಾಜ ಬಂದು, ತನ್ನ ಕೊರಳಿಗೆ ಸತ್ತ ಹಾವನ್ನು ಹಾಕಿ ಹೋದ ವಿಷಯ ಅವನ ಗಮನಕ್ಕೆ ಬಂದಿತು. ಅದಲ್ಲದೆ, ತನ್ನ ಮಗನು ದುಡುಕಿ ರಾಜನನ್ನು ಶಪಿಸಿದ್ದೂ ತಿಳಿದಿತ್ತು. 

ಮಗನ ಮುಂಗೋಪದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ ಶಮೀಕನು, ಅವನಿಗೆ ಬುದ್ಧಿ ಹೇಳಿ, ಅವನಿಗೆ ಶಾಪವನ್ನು ಹಿಂಪಡೆಯುವ ಸಾಮರ್ಥ್ಯವಿಲ್ಲದ ಕಾರಣ, ತನ್ನ ಕೆಲವು ಶಿಷ್ಯರನ್ನು ಕರೆದು, ರಾಜನಿಗೆ ಮುಂಜಾಗರೂಕತೆಗೆ ಹಾಗೂ ಕೊನೆಯ ಆಸೆಗಳನ್ನು ಈಡೇರಿಸಲು ಸಹಕಾರಿಯಾಗಲು, ಈ ಶಾಪದ ವಿಷಯವನ್ನು ತಿಳಿಸಲು ಹೇಳಿದನು. ಅದರಂತೆ, ಅವನ ಶಿಷ್ಯರು ತಕ್ಷಣ ಅರಮನೆಯ ಕಡೆಗೆ ಹೊರಟರು.

***


ತನ್ನ ಆಸ್ಥಾನಕ್ಕೆ ಬಂದ ಶಿಷ್ಯರು ಹೇಳಿದ ಶಾಪದ ವಿಚಾರಕ್ಕಿಂತ, "ತನ್ನಿಂದ ಒಬ್ಬ ಋಷಿಗೆ ಅವಮಾನವಾಯಿತಲ್ಲಾ" ಎಂಬ ನೋವೇ ಪರೀಕ್ಷಿತನಿಗೆ ಹೆಚ್ಚಾಯಿತು. ತಾನು ಶಮೀಕರಲ್ಲಿ ಕ್ಷಮಾಪಣೆಯನ್ನು ಕೋರಿರುವುದಾಗಿ ಹೇಳುವಂತೆ ಆತನ ಶಿಷ್ಯರಲ್ಲಿ ರಾಜನು ಕೇಳಿಕೊಂಡನು.

ಮುಂದಿನ ಕೊನೆಯ ಏಳು ದಿನಗಳನ್ನು ಕಳೆಯುವ ಬಗ್ಗೆ ಆಸ್ಥಾನದಲ್ಲಿ ಚರ್ಚಿಸಿದನು. 

ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು. ಅದರಂತೆ, ಸರ್ಪಗಳು ತೆವಳಿಕೊಂಡು ಹತ್ತಲು ಸಾಧ್ಯವಾಗದಂತೆ, ಒಂದು ಎತ್ತರದ ಗೋಪುರವನ್ನು ನಿರ್ಮಿಸಿ, ಅದರಲ್ಲಿ ರಾಜನನ್ನು ಇರಿಸಲಾಯಿತು. ದಿನದ ಇಪ್ಪತನಾಲ್ಕು ಗಂಟೆಯೂ ಕಾವಲಿನವರು ಇರುತ್ತಿದ್ದರು. "ತನ್ನ ಜೀವವು ಖಚಿತವಾಗಿ ಹೋಗುವುದು." ಎಂದು ತಿಳಿದಿದ್ದರೂ, ಬದುಕುವ ಆಸೆಯನ್ನು ರಾಜನು ಕಳೆದುಕೊಂಡಿರಲಿಲ್ಲ!

ಆದರೆ, ಸಮಯವು ಕಳೆದಂತೆ, ರಾಜನಿಗೆ ಆಡಳಿತದ ಬಗ್ಗೆ ಸಂಪೂರ್ಣವಾಗಿ ನಿರಾಸಕ್ತಿ ಉಂಟಾಯಿತು. ಅವನು ತನ್ನ ಸಿಂಹಾಸನವನ್ನು ತೊರೆದು, ಸನ್ಯಾಸವನ್ನು ಸ್ವೀಕಾರ ಮಾಡಿದನು. ಹಾಗೂ ಜೀವನದ ಕೊನೆಯ ದಿನಗಳನ್ನು ಉತ್ತಮವಾಗಿ ಕಳೆಯಬೇಕೆಂದು ತೀರ್ಮಾನಿಸಿ, ಪ್ರತಿದಿನ ಭಗವಂತನ ಕಥೆಗಳನ್ನು ಕೇಳಲು ಇಚ್ಚಿಸಿದನು .  ಇದಕ್ಕಾಗಿ ಉತ್ತಮ ವ್ಯಕ್ತಿಯನ್ನು ಕರೆದುಕೊಂಡು ಬರಲು ತನ್ನ ಆಸ್ಥಾನದಲ್ಲಿ ಕೇಳಿಕೊಂಡ. ಹೀಗೆ ಹುಡುಕುವಾಗ ಮಂತ್ರಿಗೆ, ಶುಕದೇವ ಮುನಿಯ ಬಗ್ಗೆ ತಿಳಿದು "ಅವನೇ ಯೋಗ್ಯ ವ್ಯಕ್ತಿ" ಎಂದೆಣಿಸಿ ಅವನನ್ನು ಕರೆದುಕೊಂಡು ಬಂದನು.

ರಾಜನು ಮುನಿ ಶುಕದೇವನನ್ನು ನೋಡಿ, ಸಾಷ್ಟಾಂಗ ಪ್ರಣಾಮವನ್ನು ಮಾಡಿದನು. ಕಪ್ಪನೆಯ ದೇಹ ಬಣ್ಣವನ್ನು ಹೊಂದಿದ್ದ ಶುಕದೇವನು, ವಸ್ತ್ರಗಳನ್ನು ಸಂಪೂರ್ಣವಾಗಿ ತ್ಯಜಿಸಿದ್ದನು. ಕೆಲವು ಕಥೆಗಳು, "ಶುಕದೇವನು ಕೇವಲ ಕನಿಷ್ಠ ಬಟ್ಟೆಯನ್ನು ಧರಿಸುತಿದ್ದ." ಎಂದು ಹೇಳುತ್ತವೆ. ಶುಕದೇವನು ಮಹಾಭಾರತವನ್ನು ಬರೆದ ವೇದವ್ಯಾಸರ ಮಗ. ಈತನು ಪರೀಕ್ಷಿತನಿಗೆ, ಕೇವಲ ಕಥೆಗಳಷ್ಟೇ ಅಲ್ಲದೆ, ಮನುಷ್ಯನ ಹುಟ್ಟು ಮತ್ತು ಸಾವಿನ ನಡುವಿನ ಅನೇಕ ಜಂಜಾಟಗಳನ್ನು, ಅವುಗಳ ಪರಿಹಾರವನ್ನು ವಿವರಿಸಿದನು. ಹಾಗೂ ರಾಜನು ಕೇಳಿದ ಅನೇಕ ಪ್ರಶ್ನೆಗಳಿಗೆ ಬಹಳ ಸಮಾಧಾನದಿಂದಲೇ ಅರ್ಥಪೂರ್ಣವಾದ ಉತ್ತರಗಳನ್ನು ನೀಡಿದನು.

***


ರಾಜನು ಗೋಪುರದ ಅರಮನೆಯಲ್ಲಿ, ದಿನಪೂರ್ತಿ ಇರುತಿದ್ದ. ರಾಜ ಪರಿವಾರದವರು, ಆಸ್ಥಾನಿಕರು ಅಲ್ಲಿಗೆ ಹೋಗಿ, ರಾಜನ ಬಳಿ ಮಾತನಾಡುತ್ತಿದ್ದರು.

ಅನೇಕ ಋಷಿಗಳು, ಸಾಧು ಸಂತರು, ರಾಜನನ್ನು ಭೇಟಿ ಮಾಡಿ, ಅವನಿಗೆ ಆಶೀರ್ವಚನ ನೀಡುತ್ತಿದ್ದರು. ಯಾವುದೇ ಸರ್ಪಗಳು ಹಾಗೂ ಕೀಟಗಳು, ಅರಮನೆಯ ಹತ್ತಿರ ಸುಳಿಯದಂತೆ, ಗಿಡ ಮೂಲಿಕೆಗಳನ್ನೂ, ಬೇರೆ ಬೇರೆ ಸುವಾಸನೆಯ ಹೊಗೆಗಳನ್ನು ಹಾಕಲಾಗಿತ್ತು. ಅರಮನೆಯ ತುಸು ದೂರದಲ್ಲಿ, ಬೀಡು ಬಿಟ್ಟಿದ್ದ ತಕ್ಷಕನು, ಇದರ ಬಗ್ಗೆ ತಿಳಿದು ಈಗ ಚಿಂತೆಗೆ ಒಳಗಾಗಿದ್ದ. ಹೀಗೆ ಆರು ದಿನಗಳು ಕಳೆದು ಹೋದವು.

ಅದು ಏಳನೆಯ ದಿನವಾಗಿತ್ತು. ಅರಮನೆಯಿಂದ ತುಸು ದೂರದ ಕಾಡಿನಲ್ಲಿ, ಕಷ್ಯಪನೆಂಬ ಮುನಿಯು ವೇಗವಾಗಿ ಅರಮನೆಯ ಕಡೆಗೆ ಬರುತ್ತಿದ್ದ. ತಾನು ಅರಮನೆಯಲ್ಲಿ ಇದ್ದರೆ, ತಕ್ಷಕನು ರಾಜನನ್ನು ಕಡಿದರೂ ಕೂಡಾ ಅವನನ್ನು ಪುನಃ ಬದುಕಿಸಬಲ್ಲೆ ಎಂದು ಅವನಿಗೆ ವಿಶ್ವಾಸವಿತ್ತು.

ಹೀಗೆ ದಾಪುಗಾಲು ಇಡುತಿದ್ದ ಕಶ್ಯಪ ಋಷಿಯ ತೋಳನ್ನು, ಯಾರೋ ಹಿಡಿದು ನಿಲ್ಲಿಸಿದಂತಾಗಿ ಅವನು ನಿಂತನು. ಯಾರೋ ಒಬ್ಬ ಅಪರಿಚಿತ ವ್ಯಕ್ತಿಯ ಅವನ ಬಳಿ, "ಎಲ್ಲಿಗೆ ಹೊರಟಿದ್ದೀರಿ?" ಎಂದು ವಿಚಾರಿಸಿದ.

"ನಾನು ರಾಜನಿಗೆ ತಕ್ಷಕ ಕಚ್ಚಿದ ನಂತರ, ಅವನಿಗೆ ಮರುಜೀವವನ್ನು ಕೊಡಲು ಬಂದಿದ್ದೇನೆ." ಎಂದು ಕಶ್ಯಪ.

ಅದಕ್ಕೆ ನಕ್ಕ ಆ ವ್ಯಕ್ತಿಯು, "ತಕ್ಷಕ, ಬಹಳ ಭಯಂಕರ ಸರ್ಪ. ಅವನು ಕಚ್ಚಿದರೆ, ಯಾರಿಂದಲೂ ಬದುಕಿಸಲು ಸಾಧ್ಯವಿಲ್ಲ." ಎಂದು ನುಡಿದ.

"ನನ್ನ ಮಂತ್ರಶಕ್ತಿಯ ಬಗ್ಗೆ ನನಗೆ ನಂಬಿಕೆಯಿದೆ." ಎಂದ ಕಶ್ಯಪ. 

"ಹಾಗಾದರೆ ನೋಡೆ ಬಿಡೋಣ. ನಾನೇ ಆ ತಕ್ಷಕ." ಎಂದು ಆ ವ್ಯಕ್ತಿಯು, ತಕ್ಷಣ ಭೀಕರ ಹಾವಿನ ರೂಪವನ್ನು ತಾಳಿ, ಪಕ್ಕದಲ್ಲಿ  ಇದ್ದ, ಬೃಹತ್  ಆಲದ ಮರಕ್ಕೆ ಕಡಿದನು.

ಕಶ್ಯಪ ಮುನಿಯು ನೋಡುತ್ತಿದ್ದಂತೆ, ಆ ಮರವು ಸುಟ್ಟು ಬೂದಿಯಾಗಿತ್ತು. ಅವನು ಧೈರ್ಯಗೆಡದೆ, ಆ ಸುಟ್ಟ ಮರದ ಬೂದಿಯ ಮೇಲೆ ತನ್ನ ಕಮಂಡಲದಿಂದ ನೀರನ್ನು ಚಿಮುಕಿಸಿ, ಯಾವುದೋ ಮಂತ್ರವನ್ನು ಹೇಳಿದ. 

ತಕ್ಷಕನಿಗೆ, ತನ್ನ ಕಣ್ಣನ್ನೇ ನಂಬಲಾಗಲಿಲ್ಲ. ಬೂದಿಯು ಈಗ ಒಟ್ಟಾಗಿ, ಮರವಾಗಿ ಬೆಳೆಯಲು ಆರಂಭಿಸಿತು. ಕ್ಷಣದಲ್ಲೇ ಆಲದ ಮರ ತನ್ನ ಮೂಲರೂಪವನ್ನು ತಳೆದು ನಿಂತಿತ್ತು.

ಈಗ ತಕ್ಷಕ ತಲೆಯನ್ನು ತಗ್ಗಿಸಿ, "ಮುನಿವರ್ಯ, ರಾಜನನ್ನು ಕಚ್ಚಲು ನನಗೆ ಅವಕಾಶ ಕೊಡು. ನಿನಗೆ ಏನು ಬೇಕು ಕೇಳು? ಕೊಡುತ್ತೇನೆ." ಎಂದ.

"ನಾನು ಬಡವ. ನನಗೆ ಹಣದ ಅವಶ್ಯಕತೆ ಇದೆ. ರಾಜನನ್ನು ಬದುಕಿಸಿದರೆ, ನನಗೆ ಹೊನ್ನು ಸಿಗುವ ಆಸೆಯಿಂದ ಬಂದೆ. ನೀನು ನನಗೆ ಕಾಸು ನೀಡಿದರೆ, ನಾನು ಇಲ್ಲಿಂದಲೇ ತಿರುಗಿ, ಮನೆಗೆ ಹೋಗುತ್ತೇನೆ." ಎಂದು ಕಷ್ಯಪನು ಉತ್ತರಿಸಿದ. ಹಾಗೂ ರಾಜನ ಆಯಸ್ಸನ್ನು ಮನದಲ್ಲೆ ಲೆಕ್ಕ ಹಾಕಿ, ವಿಧಿಲಿಖಿತದಂತೆ, ಕಲಿಯುಗವು ಮುಂದುವರಿಯಲು ಅನುವು ಮಾಡಿಕೊಡಲು ನಿರ್ಧರಿಸಿ, ಕಷ್ಯಪನು ಹಣಕ್ಕಾಗಿ ತಕ್ಷಕನ ಮುಖವನ್ನು ನೋಡಿದ.

ಒಂದು ಚೀಲ ಬಂಗಾರದ ನಾಣ್ಯಗಳನ್ನು ಮುನಿಗೆ ನೀಡಿ, ಅವನನ್ನು ಅಲ್ಲಿಂದ ಮನೆಗೆ ಕಳುಹಿಸಿದ ತಕ್ಷಕ ಸರ್ಪವು, ಈಗ ನಿಟ್ಟುಸಿರು ಬಿಟ್ಟನು. 

***


ಸೂರ್ಯನು ಪಶ್ಚಿಮದಲ್ಲಿ ಕಿರಣಗಳನ್ನು ಬೀರುತ್ತಿದ್ದ. ರಾಜನ ಅರಮನೆಗೆ ಹತ್ತಾರು ಋಷಿಗಳು ಭೇಟಿ ಕೊಡುತಿದ್ದರು. ಅನೇಕರು ರಾಜನಿಗೆ, ಹಣ್ಣು ಹಂಪಲುಗಳನ್ನು ನೀಡುತ್ತಿದ್ದರು. ರಾಜನು ಎಲ್ಲರನ್ನೂ  ಸ್ವಾಗತಿಸಿ, ಸೂಕ್ತ ಆಸನಗಳಲ್ಲಿ ಕೂರಿಸುತಿದ್ದ. 

ಈಗ ಸಾಯಂಕಾಲವಾಗಿತ್ತು. ರಾಜನಿಗೆ ಎಲ್ಲಿಯೂ ತಕ್ಷಕನ ಸುಳಿವು ಇರಲಿಲ್ಲ. ಸರಿಯಾಗಿ ಆಹಾರವನ್ನು ಸೇವಿಸದೇ, ಹೊಟ್ಟೆಯು ಚುರುಗುಟ್ಟುತಿತ್ತು. ತನ್ನ ಮುಂದಿದ್ದ ತಟ್ಟೆಯಲ್ಲಿ ಇದ್ದ ಹಣ್ಣು ಹಂಪಲುಗಳನ್ನು ತಿನ್ನುವ ಮನಸ್ಸಾಗಿತ್ತು. ಒಂದು ಆಕರ್ಷಕ ಸೇಬು ಹಣ್ಣನ್ನು ಕೈಗೆತ್ತಿಕೊಂಡ ರಾಜನು, ಇತರರಿಗೂ ಹಣ್ಣುಗಳನ್ನು ತಿನ್ನಲು ಹೇಳಿದ. ಮಂತ್ರಿ ಹಾಗೂ ರಾಜ ಪರಿವಾರದವರು ಒಂದೊಂದು ಹಣ್ಣನ್ನು ಕೈಗೆತ್ತಿಕೊಂಡರು.

ರಾಜನು ಸೇಬನ್ನು ತಿನ್ನಲಾರಂಭಿಸಿದ. ಹೀಗೆ ತಿನ್ನುವಾಗ, ಅವನಿಗೆ ಹಣ್ಣಿನಲ್ಲೊಂದು ಕಪ್ಪನೆಯ ವಿಚಿತ್ರ ಹುಳವು ಕಂಡಿತ್ತು. ತಿನ್ನುವುದನ್ನು ನಿಲ್ಲಿಸಿ, ಹುಳವನ್ನು ಅಂಗೈಯಲ್ಲಿ  ಹಿಡಿದುಕೊಂಡ. ಅವನ ಮನಸ್ಸಿಗೆ ಮಂಕು ಕವಿಯಲಾರಂಭಿಸಿತು. 

"ಮಂತ್ರಿಗಳೇ, ನನಗೆ ಋಷಿ ಕುಮಾರನ ಶಾಪವನ್ನು ವಿಫಲಗೊಳಿಸಲು ಮನಸ್ಸಿಲ್ಲ. ಈ ಹುಳವೇ ನನ್ನನ್ನು ತಕ್ಷಕನಾಗಿ ಸಾಯಿಸಲಿ." ಎಂದು ರಾಜ ಗಟ್ಟಿಯಾಗಿ ಹೇಳಿದ್ದ. ಮಂತ್ರಿಯೂ ಕೂಡಾ ಯಾವುದೋ ವಶೀಕರಣಕ್ಕೆ ಒಳಗಾದಂತೆ, "ಹಾಗೆ ಆಗಲಿ ಮಹಾರಾಜ." ಎಂದನು. 

ಅರೆ ಕ್ಷಣದಲ್ಲಿ, ಅಂಗೈಯಲ್ಲಿ ಇದ್ದ ಹುಳವು ಭೀಕರ ಸರ್ಪವಾಗಿ ಬದಲಾಗಿ, ಬುಸುಗುಡುತ್ತಾ, ರಾಜನನ್ನು ಕಚ್ಚಿತ್ತು.  

ಭಯಂಕರ ರೂಪದ ತಕ್ಷಕ್ನನ್ನು ಕಂಡು, ಸುತ್ತಲೂ ನೆರೆದಿದ್ದ ಜನರು ದಿಕ್ಕಾಪಾಲಾಗಿ ಓಡಿದರು. ರಾಜನು ನೆಲದ ಮೇಲೆ ಅಂಗಾತವಾಗಿ ಬಿದ್ದನು. ಅವನ ಶರೀರವು ಕಡುನೀಲಿ ಬಣ್ಣಕ್ಕೆ ತಿರುಗಿತು. 

ಹೀಗೆ, ತಾನು ಮಾಡಿದ ಒಂದು ತಪ್ಪಿನ ಕಾರಣದಿಂದಾಗಿ, ಪರೀಕ್ಷಿತ ರಾಜನು ತನ್ನ ಪ್ರಾಣವನ್ನು ಕಳೆದುಕೊಂಡನು. 


ಈ ಕಥೆಯಿಂದ ನಾವು ತಿಳಿದುಕೊಳ್ಳಬೇಕಾದ ಪಾಠಗಳು.

1. ಯಾರು ಮಾಡಿದರೂ ತಪ್ಪು, ತಪ್ಪೇ.

2. ನಿಮ್ಮ ಕೋಪವು ನಿಮ್ಮ ಜ್ಞಾನವನ್ನು ತಿನ್ನುತ್ತದೆ.

3. ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಡದವನು, ತನ್ನ ನಾಶಕ್ಕೆ ತಾನೇ ಕಾರಣನಾಗುತ್ತಾನೆ.


ಸ್ನೇಹಿತರೆ, ನಿಮಗೊಂದು ಸರಳ ಪ್ರಶ್ನೆ.


ತಕ್ಷಕನು ರಾಜನ ಅರಮನೆಯ ಒಳಗೆ ಪ್ರವೇಶಿಸಿದ್ದು ಹೇಗೆ?

ಉತ್ತರವನ್ನು ಕಾಮೆಂಟ್ ಬಾಕ್ಸ್ ನಲ್ಲಿ ದಯವಿಟ್ಟು ತಿಳಿಸಿ.


 ಕತೆಯನ್ನು youtubeನಲ್ಲಿ  ವೀಕ್ಷಿಸಿ:



<ಭಾಗ1|ಭಾಗ3>

Comments