Skip to main content

ಭಾಗವತದ ಕಥೆಗಳು ಭಾಗ 20 : ಪುರೂರವ ಮತ್ತು ಊರ್ವಶಿ






ವಿಷ್ಣುವಿನ ಹೊಕ್ಕುಳಿನಿಂದ ಬ್ರಹ್ಮನ ಜನನವಾಯಿತು. ಅವನ ಮನಸ್ಸಿನಿಂದ ಮರೀಚಿ ಮುನಿ ಹುಟ್ಟಿದರು. ಮಹಾ ಋಷಿ ಕಶ್ಯಪನು ಮರೀಚಿಯ ಮಗ. ಅಸುರರ ಹಾಗೂ ದೇವತೆಗಳ ತಾಯಿಯರಾದ ದಿತಿ ಹಾಗೂ ಅದಿತಿಯರನ್ನು ಅವರು ವರಿಸಿದರು. ಈ ಅದಿತಿಯ ಗರ್ಭದಲ್ಲಿ ಜನಿಸಿದ ವಿವಸ್ವಾನ ಎಂಬಾತನ ಮಗನೇ ಮಾನವರನ್ನು ಸೃಷ್ಟಿಸಿದ ಮನು.

ಈ ಮನುವಿಗೆ ಬಹಳ ಕಾಲ ಮಕ್ಕಳಿರಲಿಲ್ಲ. ಅವನಿಗೆ ಗಂಡು ಮಗುವನ್ನು ದೊರಕಿಸಲು ಋಷಿ ವಸಿಷ್ಠರು ಒಂದು ಯಾಗವನ್ನು ಮಾಡಲು ಹೊರಟರು. ಆದರೆ ಆ ಯಜ್ಞದ ಸಮಯದಲ್ಲಿ, ಮನುವಿನ ಹೆಂಡತಿ ಶ್ರದ್ಧಾ ಎಂಬಾಕೆ ಮುಖ್ಯ ಪುರೋಹಿತರ ಬಳಿಗೆ ಬಂದು, ತನಗೆ ಒಬ್ಬಳು ಮಗಳನ್ನು ದೊರಕಿಸುವಂತೆ ಬೇಡಿಕೊಂಡಳು. "ಹಾಗೇ ಆಗಲಿ" ಎಂದ ಪುರೋಹಿತರು ಯಜ್ಞವನ್ನು ಆರಂಭಿಸಿದರು.

ನಂತರ ಗರ್ಭಿಣಿಯಾದ ರಾಣಿಗೆ ಇಳಾ ಎಂಬ ಮಗಳು ಜನಿಸಿದಳು. ಇದರಿಂದ ರಾಜ ಮನು ಬೇಸರಗೊಂಡು, ಗುರು ವಸಿಷ್ಠರಲ್ಲಿ ಇದಕ್ಕೆ ಕಾರಣವೇನೆಂದು ಕೇಳಿ, ಮಗನನ್ನು ನೀಡಲು ಹೇಳಿದನು. ವಸಿಷ್ಠರಿಗೆ ಕೂಡಲೇ ತಮ್ಮ ಪುರೋಹಿತರ ತಪ್ಪಿನ ಅರಿವಾಗಿ, ಮಗಳನ್ನೇ ಮಗನಾಗಿ ಬದಲಾಯಿಸಿ ಕೊಡುವುದಾಗಿ ಮನುವಿಗೆ ಭಾಷೆ ಇತ್ತರು. ನಂತರ ವಿಷ್ಣುವನ್ನು ಪ್ರಾರ್ಥಿಸಿ, ತನ್ನ ಮಂತ್ರಗಳ ಬಲದಿಂದ ಆ ಹೆಣ್ಣು ಮಗುವನ್ನು ಗಂಡಾಗಿಸಿ, ಸುದ್ಯುಮ್ನ ಎಂಬ ಹೆಸರಿಡಲಾಯಿತು.
***
ವರುಷಗಳು ಉರುಳಿದವು. ಒಂದು ದಿನ ರಾಜ ಸುದ್ಯುಮ್ನನು ಬಿಲ್ಲು ಬಾಣಗಳ ಸಹಿತ,ತನ್ನ ಕುದುರೆ ಏರಿ ಬೇಟೆಯಾಡಲು ಕಾಡಿಗೆ ಹೋದನು. ಮಂತ್ರಿ ಹಾಗೂ ಸೈನಿಕರು ಅವನ ಜೊತೆ ಹೊರಟರು. ಜಿಂಕೆ ಮೊಲಗಳನ್ನು ಹಿಂಬಾಲಿಸುತ್ತಾ ದಟ್ಟ ಅಡವಿಯನ್ನು ಅವರುಗಳು ಸೇರಿದರು. ತಕ್ಷಣ ಕುದುರೆಗಳ ಸಮೇತ ಎಲ್ಲಾ ಪುರುಷರೂ ಸ್ತ್ರೀಯರಾಗಿ ಬದಲಾವಣೆಗೊಂಡರು.

ಅದು ಮೇರು ಪರ್ವತದ ಕೆಳಭಾಗದಲ್ಲಿನ ಸುಕುಮಾರ ಎಂಬ ಕಾಡಾಗಿತ್ತು. ಅಲ್ಲಿ ಶಿವಪಾರ್ವತಿಯರು ಆಗಾಗ ಬರುತ್ತಿದ್ದರು. ಒಂದು ಬಾರಿ ಆ ಕಾಡಿಗೆ ಋಷಿಯೊಬ್ಬರು ಶಿವನನ್ನು ಭೇಟಿಯಾಗಲು ಬಂದರು. ಆಗ ಶಿವ ಪಾರ್ವತಿಯರಿಬ್ಬರೂ ಪ್ರಣಯದಲ್ಲಿ ತೊಡಗಿದ್ದರು. ಋಷಿಯನ್ನು ನೋಡಿದ ದಂಪತಿಗಳಿಬ್ಬರೂ ನಾಚಿಕೆಯಿಂದ ತಮ್ಮ ದೇಹಗಳನ್ನು ಬಟ್ಟೆಗಳಿಂದ ಮುಚ್ಚಿಕೊಳ್ಳಲು ಪ್ರಯತ್ನಿಸಿದರು. ಋಷಿಗಳು ತಕ್ಷಣವೇ ಅಲ್ಲಿಂದ ಹಿಂದಿರುಗಿ ಸಮೀಪದ ಆಶ್ರಮಕ್ಕೆ ಹೋದರು.

ಪರಮೇಶ್ವರನು ಮಂಕಾಗಿದ್ದ ಪಾರ್ವತಿ ದೇವಿಗೆ ಸಮಾಧಾನವನ್ನು ಪಡಿಸಲು, "ಈ ಕಾಡಿಗೆ ಯಾವ ಗಂಡು ಜೀವಿ ಬಂದರೂ ಕೂಡಾ, ತಕ್ಷಣವೇ ಅದು ಹೆಣ್ಣಾಗಲಿ" ಎಂದು ಶಪಿಸಿದನು. ಅಂದಿನಿಂದ ಆ ಕಾಡನ್ನು ಪ್ರವೇಶಿಸಿದ ಎಲ್ಲಾ ಗಂಡು ಜೀವಿಗಳೂ ಹೆಣ್ಣಾಗುತ್ತಿದ್ದವು.

ರಾಜ ಸುದ್ಯುಮ್ನನು ಅರಣ್ಯವನ್ನು ಪ್ರವೇಶಿಸಿದ ತಕ್ಷಣ ಅವನು ಹೆಣ್ಣಾಗಿ ಬದಲಾದನು. ಮಂತ್ರಿ ಸೈನಿಕರ ಜೊತೆಗೆ ಕುದುರೆಯೂ ಹೆಣ್ಣಾಗಿತ್ತು. ತಕ್ಷಣ ಅವರೆಲ್ಲರಿಗೂ ಹಿಂದಿನ ನೆನಪುಗಳು ಮರೆತುಹೋದವು. "ತಾವು ಏನು ಮಾಡುತ್ತಿದ್ದೇವೆ?" ಎಂದು ತಿಳಿಯದೇ, ಕಾಡಿನಿಂದ ಕಾಡಿಗೆ ಅವರು ಅಡ್ಡಾಡತೊಡಗಿದ್ದರು.

ಚಂದ್ರನ ಮಗನಾದ ಬುಧನು ಅಲ್ಲೇ ಸಮೀಪದಲ್ಲಿ ಆಶ್ರಮವನ್ನು ಕಟ್ಟಿಕೊಂಡಿದ್ದ. ಹೆಣ್ಣಾಗಿ ಪುನಃ ಇಳಾ ಎಂಬ ಹೆಸರನ್ನು ಪಡೆದುಕೊಂಡಿದ್ದ ಸುದ್ಯುಮ್ನನ ಮನವೊಲಿಸಿ, ಅವಳನ್ನು ವಿವಾಹವಾದ. ಕೆಲವು ವರ್ಷಗಳಲ್ಲಿ ಪುರೂರವ ಎಂಬ ಸುಂದರ ಗಂಡುಮಗುವಿಗೆ ಇಳಾ ಜನ್ಮ ನೀಡಿದಳು. ನಂತರ ಅವಳು ಗುರು ವಸಿಷ್ಠರನ್ನು ನೆನಪಿಸಿಕೊಂಡಳು. ಸುದ್ಯುಮ್ನನ ಈ ಸ್ಥಿತಿಯನ್ನು ನೋಡಿ ನೊಂದ ವಸಿಷ್ಠರು, ಶಿವನ ಪ್ರಾರ್ಥನೆಯನ್ನು ಮಾಡಿಕೊಂಡರು. ಪಾರ್ವತಿಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಲು ಶಿವನು, "ಸುದ್ಯುಮ್ನನು  ಒಂದು ತಿಂಗಳು ಹೆಣ್ಣು ಮತ್ತು ಒಂದು ತಿಂಗಳು ಗಂಡಾಗುತ್ತಾನೆ. " ಎಂದನು.

ಸುದ್ಯುಮ್ನನು ಈ ರೀತಿ ಆಡಳಿತವನ್ನು ನಡೆಸಿದಾಗ, ಪ್ರಜೆಗಳು ಅಷ್ಟು ಸಮಾಧಾನಗೊಳ್ಳಲಿಲ್ಲ. ನಂತರ ಪುರೂರವನು ಆ  ರಾಜ್ಯದ ಅರಸನಾದ. ಸುದ್ಯುಮ್ನನು ಅಲ್ಲಿಂದ ಅರಣ್ಯವನ್ನು ಸೇರಿ ತಪಸ್ಸಿಗೆ ಕುಳಿತುಕೊಂಡ. ನಾರದ ಮುನಿ ಅಲ್ಲಿಗೆ ಬಂದು ನವಾಕ್ಷರ ಎಂಬ ಮಂತ್ರವನ್ನು ಅವನಿಗೆ ಬೋಧಿಸಿದರು. ಸುದ್ಯುಮ್ನನು ಆ ಮಂತ್ರವನ್ನು ಪಠಿಸಿ, ಶಕ್ತಿ ದೇವಿಯನ್ನು ಸಂತುಷ್ಟಗೊಳಿಸಿದ್ದ. ದೇವಿಯು ಸುದ್ಯುಮ್ನನಿಗೆ ಮೋಕ್ಷವನ್ನು ಕರುಣಿಸಿದಳು. ರಾಣಿ ಇಳಾಳ ಗರ್ಭದಲ್ಲಿ ಹುಟ್ಟಿದ ವಂಶವನ್ನು ಚಂದ್ರವಂಶ ಎಂದು ಕರೆಯಲಾಗುತ್ತದೆ. ಹಾಗೂ ಇವಳ ಸಹೋದರ ಇಕ್ಷ್ವಾಕುವಿನಿಂದ ಸೂರ್ಯವಂಶವು ಆರಂಭವಾಯಿತು. ಚಂದ್ರ ವಂಶವು ಮುಂದೆ ಕವಲೊಡೆದು, ಯಾದವರು, ಕೌರವರು ಹಾಗೂ ಪಾಂಡವರು ಹುಟ್ಟಿಕೊಂಡರು.

***

ಬ್ರಹ್ಮದೇವರ ಮಗನಾದ ಅತ್ರಿಯ ಆನಂದದ ಕಣ್ಣೀರಿನಿಂದ,ಸೋಮ ಎಂಬ ಮಗನು ಜನಿಸಿದನು. ಶೀತಲ ಕಿರಣಗಳನ್ನು ಹೊಂದಿದ್ದ ಅವನಿಗೆ ಚಂದ್ರನೆಂಬ ಇನ್ನೊಂದು ಹೆಸರಿತ್ತು. ಭಗವಾನ್ ಬ್ರಹ್ಮನು ಅವನನ್ನು ಬ್ರಾಹ್ಮಣರು, ಔಷಧಗಳು ಮತ್ತು ವಿದ್ವಾಂಸರ ನಿರ್ದೇಶಕರನ್ನಾಗಿ ನೇಮಿಸಿದನು. ಚಂದ್ರನು ಒಮ್ಮೆ ರಾಜಸೂಯ ಯಾಗವನ್ನು ಆರಂಭಿಸಿದನು. ಹಾಗೂ ಗುರು ಬೃಹಸ್ಪತಿಯ ಮಡದಿ ತಾರೆಯನ್ನು ಅಪಹರಿಸಿ, ತನ್ನ ಅರಮನೆಯಲ್ಲಿರಿಸಿಕೊಂಡನು.

ಬೃಹಸ್ಪತಿ ಎಷ್ಟು ಬಾರಿ ವಿನಂತಿಸಿಕೊಂಡರೂ ಚಂದ್ರನು ತಾರಾಳನ್ನು ಹಿಂದಿರುಗಿಸಲಿಲ್ಲ. ವೃದ್ಧ ಬೃಹಸ್ಪತಿಗಿಂತ ಇನ್ನೂ ಯುವಕನಂತಿದ್ದ ಸೋಮನ ಮೇಲೆ ತಾರಾಳಿಗೂ ಪ್ರೀತಿ ಉಂಟಾಗಿತ್ತು. ಇದರಿಂದ ದೇವತೆಗಳಲ್ಲೇ ಎರಡು ಬಣಗಳು ಹುಟ್ಟಿಕೊಂಡವು. ಶಿವ ಹಾಗೂ ಇಂದ್ರರು ಗುರು ಬೃಹಸ್ಪತಿಯ ಪಕ್ಷ ಸೇರಿದರು. ಶುಕ್ರಾಚಾರ್ಯರು ಬೃಹಸ್ಪತಿಯ ಬಗ್ಗೆ ಒಳ್ಳೆಯ ಭಾವನೆ ಇಲ್ಲದ ಕಾರಣ, ರಾಕ್ಷಸರೊಡನೆ ಸೇರಿಕೊಂಡು ಚಂದ್ರನ ಬಣವನ್ನು ಸೇರಿದರು. ಋಷಿ ಅಂಗೀರರಿಂದ ವಿಷಯ ತಿಳಿದು, ಬ್ರಹ್ಮನು ಮಧ್ಯಸ್ಥಿಕೆ ವಹಿಸುವವರೆಗೂ ಅಲ್ಲಿ ಯುದ್ಧವು ನಡೆದಿತ್ತು. ಚಂದ್ರನು ತನ್ನ ತಪ್ಪನ್ನು ಒಪ್ಪಿಕೊಂಡು ಗರ್ಭಿಣಿಯಾಗಿದ್ದ ತಾರಾಳನ್ನು ಬೃಹಸ್ಪತಿಗೆ ಒಪ್ಪಿಸಿದನು. ಈ ಮಗು ಯಾರದೆಂದು ಅವರು ಎಷ್ಟು ಕೇಳಿದರೂ, ಅವಳು ನಾಚುತ್ತಾ ಏನನ್ನೂ ಹೇಳಲಿಲ್ಲ.

ಗರ್ಭಿಣಿ ತಾರೆ ನವಮಾಸಗಳಲ್ಲಿ ಒಂದು ಚಿನ್ನದಂತೆ ಹೊಳೆಯುತ್ತಿದ್ದ ಮಗುವಿಗೆ ಜನ್ಮ ನೀಡಿದಳು. ಮಗುವು ಯಾರಿಗೆ ಸೇರಬೇಕು? ಎಂದು ಚಂದ್ರ ಮತ್ತು ಬೃಹಸ್ಪತಿಯ ಗುಂಪುಗಳ ಮಧ್ಯೆ ಪುನಹ ಯುದ್ಧ ನಡೆಯಿತು. ದೇವತೆಗಳು ಹಾಗೂ ಋಷಿಗಳು ಮಗು ಯಾರದ್ದೆಂದು ಒತ್ತಾಯಿಸಿದರೂ ತಾರ ಮಾತನಾಡಲಿಲ್ಲ. ಆಗ ಮಗುವು ತಾಯಿಯೇ ಸತ್ಯವನ್ನು ಹೇಳು. ನೀನು ಅದಾಗಲೇ ತಪ್ಪು ಮಾಡಿದ್ದೀಯ. ಇನ್ನು ಸುಮ್ಮನಿರಬೇಡ ಎಂದು ಗದರಿತ್ತು. ನಂತರ ಬ್ರಹ್ಮನ ಬಳಿ ಈ ಮಗುವು ಚಂದ್ರನದ್ದು ಎಂದು ತಾರ ಮೆಲ್ಲಗೆ ನುಡಿದಿದ್ದಳು. ಹುಟ್ಟಿನಿಂದಲೇ ಬಹಳ ಬುದ್ಧಿವಂತಿಕೆಯನ್ನು ತೋರಿಸುತ್ತಿದ್ದ ಆ ಮಗುವಿಗೆ,ಬ್ರಹ್ಮ ದೇವರು ಬುಧ ಎಂದು ಹೆಸರಿಟ್ಟರು.

ಈಗ ಅರಣ್ಯದಲ್ಲಿ ತಪಸ್ಸಿಗೆ ಬಂದಿದ್ದ ಬುಧ ಹಾಗೂ ಇಳಾ ಇಬ್ಬರ ಸಂಯೋಗದಿಂದ ಪುರೂರವ ಜನಿಸಿದ್ದ. ನಾರದರು ಸ್ವರ್ಗಕ್ಕೆ ಹೋದಾಗ ಪುರೂರವನ ರೂಪ ಪೌರುಷಗಳನ್ನು ಹೊಗಳಿದರು. ಅಪ್ಸರೆ ಊರ್ವಶಿ ಇದರಿಂದ ಪೂರುರವನನ್ನು ನೋಡುವ ಬಯಕೆಯಾಯಿತು. ಅವಳು ಎರಡು ಕುರಿಮರಿಗಳೊಡನೆ ಭೂಮಿಗೆ ಬಂದು, ಪೂರೂರವನನ್ನು ಆಕರ್ಷಿಸಿ, ಅವನ ರಾಣಿಯಾಗಿ ಅರಮನೆಯಲ್ಲಿ ವಾಸಿಸತೊಡಗಿದ್ದಳು. ಆದರೆ ಅವಳು ಏಕಾಂತವನ್ನು ಬಿಟ್ಟು ಬೇರೆ ಸಮಯದಲ್ಲಿ ಬಟ್ಟೆಗಳಿಲ್ಲದೆ ಅವನನ್ನು ಕಂಡ ತಕ್ಷಣ ಅವನನ್ನು ತೊರೆಯುವುದಾಗಿ ಎಚ್ಚರಿಸಿದ್ದಳು.

ವರುಷಗಳು ಉರುಳಿದವು. ಸ್ವರ್ಗದ ರಾಜ ಇಂದ್ರನಿಗೆ ಊರ್ವಶಿಯ ನೃತ್ಯವನ್ನು ಕಾಣದೆ ಬೇಸರವಾಗಿತ್ತು. ಅವಳನ್ನು ಹೇಗಾದರೂ ಕರೆ ತರುವಂತೆ ಕೆಲವು ಗಂಧರ್ವರಿಗೆ ಸೂಚಿಸಿದನು. ಒಂದು ಮಧ್ಯರಾತ್ರಿ ಅರಮನೆಯಲ್ಲಿ ಪ್ರತ್ಯಕ್ಷವಾದ ಗಂಧರ್ವರು ಕುರಿಮರಿಗಳನ್ನು ಅಲ್ಲಿಂದ ಅಪಹರಿಸಿದ್ದರು. ಊರ್ವಶಿ ಆಗ ಜೋರಾಗಿ ಅಳಲು ಆರಂಭಿಸಿದಳು. ತಕ್ಷಣ ತನ್ನ ಮಂಚದಿಂದ ಎದ್ದ ಪೂರ್ವುರವ ವಸ್ತ್ರಗಳನ್ನೇಧರಿಸದೆ ಕೈಯಲ್ಲಿ ಖಡ್ಗವನ್ನು ಹಿಡಿದು ಗಂಧರ್ವರು ಬೆನ್ನಟ್ಟಿದನು. ಗಂಧರ್ವರು ತಮ್ಮ ಉಪಾಯವು ಫಲಿಸಿತು ಎಂದುಕೊಂಡು ಬಹಳದೂರದವರೆಗೂ ಅವನನ್ನು ಹಿಂಬಲಿಸುವಂತೆ ಮಾಡಿ ಒಂದು ಅರಣ್ಯದ ಬದಿಯಲ್ಲಿ ಕುರಿಮರಿಗಳನ್ನು ಬಿಟ್ಟು ಅದೃಷ್ಯರಾದರು.

ಆಗ ಕುರಿಮರಿಗಳನ್ನು ತೆಗೆದುಕೊಂಡು ಪುರೂರ್ವನು ಅರಮನೆಗೆ ಹಿಂದಿರುಗಿದ. ಅದಾಗ ಸೂರ್ಯೋದಯವಗಿತ್ತು. ಊರ್ವಶಿ ಅಲಕರಭೋಷಿತಲಾಗಿ ಕುಳಿತಿದ್ದಳು. ಬಟ್ಟೆಗಳೇ ಇಲ್ಲದ ಪುರೂರವನನ್ನು ನೋಡಿ, ತಾನು ಅಂದು ಹೇಳಿದ್ದ ಮಾತಿನಂತೆ, ಅವನನ್ನು ತೊರೆದು ಸ್ವರ್ಗಕ್ಕೆ ಹೋದಳು.

ಅಂದಿನಿಂದ ಪುರೂರವ ಅವಳನ್ನೇ ನೆನೆದುಕೊಂಡು ಅಳುತ್ತಾ ಹುಚ್ಚನಂತೆ ಭೂಮಿಯುದ್ದಕ್ಕೂ ಅಲೆಯತೊಡಗಿದ್ದ. ಕುರುಕ್ಷೇತ್ರದ ಸರಸ್ವತಿ ನದಿಯ ತೀರದಲ್ಲಿ ಊರ್ವಶಿಯನ್ನು ತನ್ನ ಸಹಚರರೊಂದಿಗೆ ಕಂಡು, ನೀನಿಲ್ಲದೆ ಬದುಕಲಾರೆ ದಯವಿಟ್ಟು ನನ್ನೊಡನೆ ಬಾ, ನನ್ನ ಮಕ್ಕಳಿಗೆ ತಾಯಿಯಾಗು ಎಂದು ಎಂದು ಪರಿಪರಿಯಾಗಿ ಬೇಡಿಕೊಂಡನು. ಆಗ ಊರ್ವಶಿಯು ಕರುಣೆಯಿಂದ ಪ್ರತೀ ವರ್ಷದ ಕೊನೆಯಲ್ಲಿ ಒಂದು ದಿನ ನಿನ್ನೊಡನೆ ಇರಲು ಬರುತ್ತೇನೆ ಎಂದು ಭಾಷೆಕೊಟ್ಟಳು.

ಆ ವರ್ಷದ ಕೊನೆಯಲ್ಲಿ ಊರ್ವಶಿ ತನ್ನ ಮಾತಿನಂತೆ, ಪೂರೂರವನ ಅರಮನೆಗೆ ಬಂದು, ಒಂದು ರಾತ್ರಿಯನ್ನು ಕಳೆದು, ಮಾರನೆಯ ದಿನ ಸ್ವರ್ಗಕ್ಕೆ ಹೊರಟು ಹೋದಳು. ಅಲ್ಲಿ ಗರ್ಭವನ್ನು ಧರಿಸಿ,ನವಮಾಸ ನಂತರ, ಒಬ್ಬ ಮಗನನ್ನು ಹೆತ್ತು ಅವನಿಗೆ ನೀಡಿ ಹೋದಳು.

ಮಾರನೆಯ ವರುಷವೂ ಊರ್ವಶಿ ಇದೇ ರೀತಿ ಅವನ ಅಂತಹಪುರವನ್ನು ತೊರೆದಾಗ, ಪುರೂರವ ದುಃಖದಿಂದ ಅವಳನ್ನು ಅಲ್ಲೇ ಶಾಶ್ವತವಾಗಿ ಇರಲು ಕೇಳಿಕೊಂಡನು. ಊರ್ವಶಿ ಕರುಣೆಯಿಂದ ಅವನಿಗೆ ಈ ಬಗ್ಗೆ ತನ್ನ ಗಂಧರ್ವ ಕುಟುಂಬದವರ ಬಳಿ ಮಾತನಾಡಲು ಹೇಳಿ ತನ್ನ ಲೋಕಕ್ಕೆ ಹಾರಿದಳು.

ನಂತರ  ಕಾಡಿಗೆ ಹೋದ ರಾಜನು, ಕೈಗಳನ್ನು ಮುಗಿದು ಪ್ರಾರ್ಥಿಸಿದಾಗ ಗಂಧರ್ವರು ಅಲ್ಲಿ ಪ್ರತ್ಯಕ್ಷರಾದರು. ಅವನ ಮೊರೆಯನ್ನು ಆಲಿಸಿ, ಊರ್ವಶಿಯಂತೆ ಕಾಣುವ ಅಗ್ನಿಸ್ಥಳಿ ಎಂಬ ಸ್ತ್ರೀಯನ್ನು ಸೃಷ್ಟಿಸಿ, ಅದೃಶ್ಯರಾದರು.

ಅವಳೊಂದಿಗೆ ಸ್ವಲ್ಪ ದೂರ ನಡೆದ ರಾಜನಿಗೆ ಅದು ಊರ್ವಶಿಯಲ್ಲ ಎಂದು ತಿಳಿದು ಅವಳನ್ನು ಅಲ್ಲೇ ಬಿಟ್ಟು ಅರಮನೆಗೆ ಹೋದನು. ಆ ರಾತ್ರಿಯಿಡೀ ಊರ್ವಶಿಯ ಯೋಚನೆಯಲ್ಲೇ ಕಳೆದ. ಅವನು ಪುನಹ ಎಚ್ಚರ ಗೊಂಡಾಗ ತ್ರೇತಾಯುಗವು ಆರಂಭವಾಗಿತ್ತು. ಅವನಿಗೆ ವೇದ ಮಂತ್ರಗಳು ತನ್ನಿಂದ ತಾನೇ ಕರಗತ ಆಗಿದ್ದವು.

ರಾಜನು  ಪುನಃ  ಅಗ್ನಿಸ್ಥಳಿಯನ್ನು ಬಿಟ್ಟ ಜಾಗಕ್ಕೆ ಹೋದಾಗ, ಅಲ್ಲೊಂದು ಶಮೀ ವೃಕ್ಷವನ್ನು ಕಂಡನು. ಅದರ ಟೊಂಗೆಯನ್ನು ಕತ್ತರಿಸಿ ಎರಡು ತುಂಡುಗಳನ್ನಾಗಿ ಮಾಡಿ, ಗಂಧರ್ವ ಲೋಕವನ್ನೇ ನೆನೆಸಿಕೊಂಡು ಆ ತುಂಡುಗಳನ್ನು ಉಜ್ಜತೊಡಗಿದ್ದನು. ಆಗ ಅಲ್ಲಿ ಬೆಂಕಿಯು ಉಂಟಾಗಿತ್ತು. ಇದರಿಂದ ಅಗ್ನಿದೇವನು ಪೂರೂರವನ ಮಗ ಎನಿಸಿಕೊಂಡನು. ಅದೇ ಅಗ್ನಿಯಿಂದ ಯಜ್ಞವನ್ನು ಮಾಡಿದ ರಾಜನು ಶ್ರೀಹರಿಯನ್ನು ತೃಪ್ತಿ ಪಡಿಸಿದ್ದನು. ನಂತರ ರಾಜನು ಭಗವಂತನ ಸಹಾಯದಿಂದ ಗಂಧರ್ವ ಲೋಕಕ್ಕೆ ಹೋದನು.
< ಭಾಗ 19 | ಭಾಗ 21 >

Comments