Skip to main content

Featured post

How to start a blog in 2025: Step by step guide for beginners.

" " " Learn how to start a blog in 2025  with step-by-step tips on goals,  niches ,  SEO , and  content strategy  to grow your audience and earn online."

ಭಾಗವತದ ಕಥೆಗಳು ಭಾಗ 21: ಯಯಾತಿ ಹಾಗೂ ದೇವಯಾನಿ




"ಚಂದ್ರ ರಾಜವಂಶದ ರಾಜ ಯಯಾತಿಯ ಕಥೆ - ಅವನು ಅಧಿಕಾರಕ್ಕೆ ಏರುವುದು, ದೇವಯಾನಿಯೊಂದಿಗಿನ ಮದುವೆ, ಶರ್ಮಿಷ್ಠೆಯೊಂದಿಗಿನ ರಹಸ್ಯ ಒಕ್ಕೂಟ, ಶುಕ್ರಾಚಾರ್ಯರ ವೃದ್ಧಾಪ್ಯದ ಶಾಪ, ಮತ್ತು ಅವನ ಮಗ ಪುರುವಿನ ತ್ಯಾಗವು ಅವನ ಯೌವನವನ್ನು ಹೇಗೆ ಮರಳಿಸಿತು ? ...ಬಯಕೆ, ಕರ್ತವ್ಯ ಮತ್ತು ವಿಮೋಚನೆ ಗಳ  ಒಂದು  ಕಾಲಾತೀತ ಕಥೆ."

Image of Yayati and devayani
ಯಯಾತಿ ಮತ್ತು ದೇವಯಾನಿ (Wikipedia)


ಯಯಾತಿಯ ಕಥೆಯಿಂದ ನಾವು ಏನನ್ನು ಕಲಿಯಬಹುದು?

ಚಂದ್ರ ವಂಶದ ರಾಜ ನಹುಷನಿಗೆ ಯತಿ, ಯಯಾತಿ, ಸಂಯಾತಿ, ಅಯಾತಿ, ವಿಯಾತಿ ಮತ್ತು ಕೃತಿ ಎಂಬ ಆರು ಮಕ್ಕಳಿದ್ದರು. ಅವನ ಹಿರಿಯ ಮಗನಾದ ಯತಿಯು ತನ್ನ ತಂದೆಯು ಅಧಿಕಾರವನ್ನು ನೀಡಿದ್ದರೂ ಸಹ ಅದನ್ನು ಸ್ವೀಕರಿಸದೆ ತಪಸ್ಸಿಗೆ ಹೋದನು. 
ಕೆಲವು ವರ್ಷಗಳ ನಂತರ ರಾಜ ನಹುಷನು ಇಂದ್ರನ ಹೆಂಡತಿಯಾದ ಶಚಿಗೆ ಕಿರುಕುಳ ನೀಡಿದ. ಆಗ ಅಗಸ್ತ್ಯ ಮತ್ತು ಇತರ ಋಷಿಗಳು ಅವನಿಗೆ ಹೆಬ್ಬಾವು ಆಗುವಂತೆ ಶಾಪ ನೀಡಿದರು. ಈಗ ಯಯಾತಿಯು ಸಾಮ್ರಾಜ್ಯದ ರಾಜನಾದನು. ಉಳಿದ ನಾಲ್ಕು ಜನ ತಮ್ಮಂದಿರು ಸಾಮ್ರಾಜ್ಯದ ನಾಲ್ಕು ದಿಕ್ಕುಗಳನ್ನು ಆಳಲು ಆರಂಭಿಸಿದರು.

ವೃಷಪರ್ವ ಎಂಬಾತ ಅಸುರರ ರಾಜನಾಗಿದ್ದ. ಅವನ ಮಗಳು ಶರ್ಮಿಷ್ಠೆ, ಶುಕ್ರಾಚಾರ್ಯರ ಮಗಳು ದೇವಯಾನಿ ಹಾಗೂ ಇತರೆ ಸ್ನೇಹಿತರೊಂದಿಗೆ ಅರಮನೆಯ ಪಕ್ಕದ ಕಾಡಿನಲ್ಲಿ ವಿಹರಿಸುತ್ತಿದ್ದಳು. ನಂತರ ತಮ್ಮ ಬಟ್ಟೆಗಳನ್ನು ಕಳಚಿ ಅಲ್ಲಿನ ಈಜುಕೊಳದಲ್ಲಿ ಸ್ನಾನಕ್ಕೆಂದು ಇಳಿದು, ನೀರನ್ನು ಪರಸ್ಪರ ಎರಚಿಕೊಂಡು ಆಟವಾಡತೊಡಗಿದ್ದರು. ಆಗ ಶಿವನು ತನ್ನ ಹೆಂಡತಿ ಪಾರ್ವತಿಯೊಂದಿಗೆ ಅವನ ಗೂಳಿ ನಂದಿಯ ಮೇಲೆ ಹೋಗುವುದನ್ನು ಅವರುಗಳು ನೋಡಿದರು. ತಕ್ಷಣ ಬೇಗನೆ ನೀರಿನಿಂದ ಹೊರಬಂದು ತಮ್ಮ ಬಟ್ಟೆಗಳನ್ನು ಧರಿಸಿಕೊಳ್ಳಲು ಆರಂಭಿಸಿದರು. ಆಗ ದೇವಯಾನಿಯು ತನಗೆ ಅರಿವಿಲ್ಲದೆ ಶರ್ಮಿಷ್ಠೆಯ ಬಟ್ಟೆಗಳನ್ನು ಹಾಕಿಕೊಂಡಳು. ಇದರಿಂದ ಶರ್ಮಿಷ್ಠೆಯು ಕೋಪಗೊಂಡು ದೇವಯಾನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಳ ಬಟ್ಟೆಗಳನ್ನು ಬಲವಂತವಾಗಿ ಬಿಚ್ಚಿಸಿ, ಅವಳನ್ನು ಬಾವಿಗೆ ನೂಕಿ, ಉಳಿದವರೊಂದಿಗೆ ಅರಮನೆಗೆ ಹೋದಳು.

ರಾಜ ಯಯಾತಿಯು ಬೇಟೆ ಆಡಲೆಂದು ಅದೇ ಕಾಡಿಗೆ ಬಂದಿದ್ದನು, ಬಾಯಾರಿಕೆಯಿಂದ ನೀರು ಕುಡಿಯಲೆಂದು ಬಾವಿಗೆ ಇಣುಕಿ, ಒಳಗಿದ್ದ ದೇವಯಾನಿಯನ್ನು ಕಂಡನು. ರಾಜ ಯಯಾತಿ ಕೂಡಲೆ ತನ್ನ ಮೈಮೇಲಿನ ಬಟ್ಟೆಯನ್ನು ಅವಳಿಗೆ ಕೊಟ್ಟು ಮೇಲಕ್ಕೆ ಕರೆದುಕೊಂಡನು.  ಆಗ ದೇವಯಾನಿಯು, "ನನ್ನನ್ನು ನಗ್ನವಾಗಿ ನೋಡಿದ ನೀನೆ ನನ್ನನ್ನು ವರಿಸಬೇಕೆಂದು" ಕೇಳಿಕೊಂಡಳು. ಅವಳ ಸೌಂದರ್ಯವನ್ನು ನೋಡಿ ಮರುಳಾಗಿದ್ದ ಯಯಾತಿ ತಕ್ಷಣ ಅದಕ್ಕೊಪ್ಪಿ, ಮದುವೆ ಆಗುವುದಾಗಿ ಮಾತು ಕೊಟ್ಟನು.

ನಂತರ ಮನೆಗೆ ಹಿಂದಿರುಗಿದ ದೇವಯಾನಿ ಅಳುತ್ತಾ ತಂದೆ ಶುಕ್ರಾಚಾರ್ಯರರಿಗೆ, ಶರ್ಮಿಷ್ಟೆಯು ತನ್ನನ್ನು ಬಾವಿಗೆ ಎಸೆದ ಘಟನೆಯನ್ನು ತಿಳಿಸಿದಳು. ಇದರಿಂದ ಶುಕ್ರಾಚಾರ್ಯರು ಕೋಪಗೊಂಡು, ವೃಶಪರ್ವ ರಾಜನನ್ನು ಕಾಣಲು ಅರಮನೆಗೆ ಹೋದರು.

***

ಈಗ, "ಶುಕ್ರಾಚಾರ್ಯರು ತನ್ನನ್ನು ಶಪಿಸಲು ಬರಬಹುದು." ಎಂದು ಅರಿತ ರಾಜ ವೃಷಪರ್ವ, ಅವರು ತನ್ನ ಅರಮನೆಯನ್ನು ತಲುಪುವ ಮೊದಲೇ ದಾರಿ ಮಧ್ಯೆ ಅವರನ್ನು ಭೇಟಿಯಾದ. ಅವರ ಪಾದಗಳಿಗೆ ಬಿದ್ದು ತನ್ನ ಮಗಳ ತಪ್ಪಿಗೆ ಕ್ಷಮೆ ಯಾಚಿಸಿ, ಪರಿಹಾರವನ್ನು ಕೇಳಿಕೊಂಡ.
ಆಗ ಶುಕ್ರಾಚಾರ್ಯರು, ರಾಜನ ಮಗಳು ಶರ್ಮಿಷ್ಠೆಯನ್ನು ದೇವಯಾನಿಯ ಸೇವಕಿಯನ್ನಾಗಿ ಮಾಡುವಂತೆ ವೃಷಪರ್ವನಲ್ಲಿ ಹೇಳಿದರು. ಅವರ ಶಾಪಕ್ಕೆ ಅಂಜಿದ ರಾಜನು ಅದಕ್ಕೆ ಒಪ್ಪಿದನು.

ನಂತರ ದೇವಯಾನಿಯ ವಿವಾಹವು ಯಯಾತಿಯೊಡನೆ ನಡೆಯಿತು. ಶರ್ಮಿಷ್ಠೆ ಹಾಗೂ ನೂರಾರು ಸ್ತ್ರೀಯರು ಅವಳ ಸೇವಕಿಯಾದರು. ಆಗ ಗುರು ಶುಕ್ರಾಚಾರ್ಯರು ಯಯಾತಿಯ ಬಳಿ ಶರ್ಮಿಷ್ಠೆಯಿಂದ ದೂರ ಇರುವಂತೆ ಎಚ್ಚರಿಕೆಯನ್ನು  ನೀಡಿದರು.
ವರುಷಗಳು ಉರುಳಿದವು. ಯಯಾತಿ ಹಾಗೂ ದೇವಯಾನಿಗೆ ಒಂದು ಗಂಡು ಮಗು ಜನಿಸಿತ್ತು. ನಂತರ ವೃಶಪರ್ವನ ಮಗಳು ಶರ್ಮಿಷ್ಠೆಯು, ಯಯಾತಿಯ ಒಬ್ಬನೇ ಇರುವಾಗ ಭೇಟಿಯಾಗಿ, ತಾನು ಯಾರೆಂಬುದನ್ನು ವಿವರಿಸಿ, ತನಗೊಂದು ಮಗುವನ್ನು ನೀಡುವಂತೆ ಅವನ ಮನ ಒಲಿಸಿದಳು. ಅವಳ ಸೌಂದರ್ಯಕ್ಕೆ ಮನಸೋತ ಯಯಾತಿಯ ತಕ್ಷಣ ಅದಕ್ಕೊಪ್ಪಿದನು.

ಕೆಲವು ವರುಷಗಳ ನಂತರ, ದೇವಯಾನಿಗೆ ಯದು ಹಾಗೂ ತುರ್ವಸು ಮತ್ತು ಶರ್ಮಿಷ್ಠೆಗೆ ದ್ರುಹ್ಯು, ಅನುದ್ರುಹ್ಯು ಹಾಗೂ ಪುರು ಎಂಬ ಮಕ್ಕಳು ಜನಿಸಿದರು. ಶರ್ಮಿಷ್ಠೆಯ ಮಕ್ಕಳಿಗೆ ತನ್ನ ಗಂಡ ಯಯಾತಿಯೇ ತಂದೆ ಎಂದರಿತ ದೇವಯಾನಿ ಕೋಪಗೊಂಡು, ತನ್ನ ತಂದೆಯ ಮನೆಗೆ ಹೋದಳು. ಯಯಾತಿ ಅವಳನ್ನು ಕಾಣದೆ ಹುಡುಕುತ್ತಾ ಅಲ್ಲಿಗೆ ಬಂದ. ಶುಕ್ರಾಚಾರ್ಯರು ಅವನ ಮೇಲೆ ಕೋಪಗೊಂಡು, "ನಿನಗೇ ಈ ಕ್ಷಣವೇ ವೃದ್ಧಾಪ್ಯವು ಬರಲಿ." ಎಂದು ಶಪಿಸಿದರು. ತಕ್ಷಣ ಅವರ ಕಾಲಿಗೆ ಬಿದ್ದ ಯಯಾತಿಯು, "ತನ್ನ ದೈಹಿಕ ಬಯಕೆಗಳು ಇನ್ನೂ ಈಡೇರಿಲ್ಲ; ಹಾಗಾಗಿ ಶಾಪದ ಉಪಶಮನ ನೀಡುವಂತೆ" ಪರಿ ಪರಿಯಾಗಿ ಬೇಡಿಕೊಂಡ. ಆಗ ಶುಕ್ರಾಚಾರ್ಯರು, ಯಾರಾದರೂ ನಿನ್ನ ವೃದ್ಧಾಪ್ಯವನ್ನು ಪಡೆದುಕೊಂಡು ತಮ್ಮ ಯೌವ್ವನವನ್ನು ನೀಡಿದರೆ, ನೀನು ಪುನಃ ಮೊದಲಿನಂತೆ ಆಗಬಹುದು ಎಂದರು.

ಅರಮನೆಗೆ ಹೋದ ಯಯಾತಿ ತನ್ನ ನಾಲ್ವರು ಮಕ್ಕಳ ಬಳಿ ಈ ವಿಷಯ ಹೇಳಿದಾಗ, ಮೊದಲು ಮೂರ್ವರು ಒಪ್ಪದೇ, ಕಿರಿಯನಾದ ಪುರು, ತನ್ನ ತಂದೆಯ ವೃದ್ಧಾಪ್ಯವನ್ನು ಸ್ವೀಕರಿಸಲು ಒಪ್ಪಿ, ಮುದುಕನಾಗಿ, ಅರಣ್ಯ ಸೇರಿದನು. ಯಯಾತಿ ತನ್ನ ಮಡದಿಯೊರಡನೆ ಸೇರಿ ಸಾವಿರ ವರುಷಗಳ ಕಾಲ ಸಂಸಾರದ ಸುಖವನ್ನು ಅನುಭವಿಸಿದನು. ಕೊನೆಗೊಂದು ದಿನ ತನ್ನ ಬಗ್ಗೆ ಪಶ್ಚಾತ್ತಾಪ ಹೊಂದಿ, ತನ್ನ ಮಗ ಪುರುವನ್ನು ಕರೆದು, ಅವನ ಯೌವ್ವನವನ್ನು ಅವನಿಗೆ ಹಿಂದಿರುಗಿಸಿ, ಇಡೀ ಭೂಮಂಡಲಕ್ಕೆ ರಾಜನನ್ನಾಗಿ ಮಾಡಿ, ತಾನು ಕಾಡನ್ನು ಸೇರಿ ತಪಸ್ಸು ಮಾಡಿದನು. ಕೊನೆಗೆ ಭಗವಂತನನ್ನು ಒಲಿಸಿ ಸಜೀವವಾಗಿ ಸ್ವರ್ಗಕ್ಕೆ ಪ್ರಯಾಣ ಮಾಡಿದನು.

(ಮುಕ್ತಾಯ)






Comments