![]() |
ರಾಜ ಭರತ ಮತ್ತು ಜಿಂಕೆ |
ಒಂದಾನೊಂದು ಕಾಲದಲ್ಲಿ, ಋಷಭದೇವ ಎಂಬ ರಾಜನಿದ್ದ. ಅವನಿಗೆ ನೂರು ಜನ ಮಕ್ಕಳಿದ್ದರು. ಅವರಲ್ಲಿ ಹಿರಿಯನಾದ ಭರತನು, ವಿಷ್ಣುವಿನ ಶ್ರೇಷ್ಠ ಭಕ್ತನಾಗಿದ್ದ. ಈ ಭರತನು ತನ್ನ ತಂದೆಯ ನಂತರ, ಇಡೀ ಜಗತ್ತನ್ನು ಆಳಲು ಆರಂಭಿಸಿದ.
ಇವನ ಆಳ್ವಿಕೆಯಲ್ಲಿ ಸಾಮ್ರಾಜ್ಯವು, ಸುಭಿಕ್ಷವಾಗಿತ್ತು. ಯಾವುದೇ ಕಳ್ಳಕಾಕರ ಭಯವಿಲ್ಲದೆ, ಪ್ರಜೆಗಳು ಹಾಯಾಗಿ ಬದುಕುತ್ತಿದ್ದರು. ಭರತ, ವಿಶ್ವರೂಪನ ಮಗಳಾದ ಪಾಂಚಜನಿ ಎಂಬಾಕೆಯನ್ನು ವಿವಾಹವಾದ. ಅವನಿಗೆ ಹಲವಾರು ಮಕ್ಕಳು ಜನಿಸಿದರು.
ತನ್ನ ಹತ್ತು ಸಾವಿರ ವರ್ಷಗಳ ಆಳ್ವಿಕೆಯಲ್ಲಿ ರಾಜನು, ವಿಷ್ಣುವಿಗಾಗಿ ಹಲವಾರು ಯಜ್ಞಗಳನ್ನು ಮಾಡಿದನು. ನಂತರ ಆಡಳಿತದಲ್ಲಿ ಆಸಕ್ತಿಯು ಕಡಿಮೆಯಾಗಿ, ತನ್ನ ಮಕ್ಕಳಿಗೆ ರಾಜ್ಯವನ್ನು ಹಸ್ತಾಂತರಿಸಿದನು.
ಈ ಕಥೆಯನ್ನು ಯೂ ಟ್ಯೂಬ್ ವೀಕ್ಷಿಸಿ.
ಇದಾದ ನಂತರ, ಗಂಡಕಿ ನದಿಯ ತಟದಲ್ಲಿರುವ, ಪುಲಸ ಆಶ್ರಮಕ್ಕೆ ಹೋಗಿ, ಸನ್ಯಾಸಿಗಳಂತೆ ನಾರು ಮಡಿಯನ್ನು ಉಟ್ಟುಕೊಂಡು, ಧ್ಯಾನವನ್ನು ಮಾಡಲು ಆರಂಭಿಸಿದನು. ಅದಲ್ಲದೆ, ಪ್ರತೀ ದಿನ ಕಾಡಿಗೆ ಹೋಗಿ, ಹುಲ್ಲು, ಹಣ್ಣು ಹಂಪಲು, ತುಳಸಿ ಎಲೆಗಳನ್ನು ಹಾಗೂ ನದಿಯ ನೀರನ್ನು, ದೇವರ ಪೂಜೆಗೆಂದು ಸಂಗ್ರಹಿಸುತ್ತಿದ್ದನು.
ವರುಷಗಳ ಉರುಳಿದಂತೆ, ಅವನ ಮನದಲ್ಲಿನ ಲೌಕಿಕ ಆಸೆಗಳು ಸಂಪೂರ್ಣವಾಗಿ ಮಾಯವಾಗಿದ್ದವು. ಕೇವಲ ಭಕ್ತಿ ಮತ್ತು ಸೇವೆಯು ಅವನ ಉದ್ದೇಶವಾಗಿತ್ತು. ಇವನ್ನೆಲ್ಲಾ ವೈಕುಂಠದಿಂದ ವಿಷ್ಣು ದೇವನು ಗಮನಿಸುತ್ತಿದ್ದನು. ಭರತನ ಭಕ್ತಿಯನ್ನು ಪರೀಕ್ಷೆ ಮಾಡಬೇಕೆಂದು ಸೂಕ್ತ ಸಮಯಕ್ಕಾಗಿ ಕಾಯುತಿದ್ದನು.
ಒಂದು ದಿನ ಭರತ ಎಂದಿನಂತೆ ಗಂಡಕಿ ನದಿಯಲ್ಲಿ ಸ್ನಾನವನ್ನ ಮುಗಿಸಿ,ಹೂವು ಹಣ್ಣು ಎಲೆಗಳನ್ನು ಸಂಗ್ರಹಿಸಿ, ದಡದಲ್ಲಿ ಕುಳಿತು, ಓಂಕಾರದಿಂದ ತನ್ನ ಮಂತ್ರವನ್ನು ಆರಂಭಿಸಿದನು. ಅವನ ಎದುರಲ್ಲೇ ಒಂದು ಗರ್ಭಿಣಿ ಜಿಂಕೆಯೂ ನದಿಯ ನೀರನ್ನು ಕುಡಿದು ಹೊರದ ಬೇಕೆಂದು ನಿಧಾನವಾಗಿ ಮೇಲೇಳುತ್ತಿತ್ತು. ಅಷ್ಟರಲ್ಲಿ ಸಮೀಪದ ಪೊದೆ ಒಂದರಲ್ಲಿ ಸಿಂಹವೊಂದು ಜೋರಾಗಿ ಗರ್ಜಿಸಿತ್ತು.
ಗರ್ಜನೆಯನ್ನು ಕೇಳಿದ ಇತರ ಪ್ರಾಣಿಗಳು ದಿಕ್ಕಾಪಾಲಾಗಿ ಓಡಿದವು. ಹಕ್ಕಿಗಳು ಆಕಾಶಕ್ಕೆ ಪಟಪಟನೆ ಹಾರಿದ್ದವು. ನದಿಯ ಬಳಿಯಲ್ಲಿದ್ದ ಜಿಂಕೆಯು ಬೆದರಿ ಹೋಗಿತ್ತು. ಸಿಂಹವೆಲ್ಲಿದೆ ಎಂದು ನೋಡುವ ಧೈರ್ಯವಿಲ್ಲದೆ, ನೇರವಾಗಿ ನದಿಯ ನೀರಿಗೆ ಹಾರಿತ್ತು. ಈಜುತ್ತಾ ಎದುರಿನ ದಡದ ಕಡೆಗೆ ಸಾಗಿತ್ತು. ಅದು ನೀರಿಗೆ ಹರಿದ ರಭಸಕ್ಕೆ ಅದರ ಗರ್ಭದಲ್ಲಿದ್ದ ಮರಿಯು ನೀರಿಗೆ ಬಿದ್ದಿತ್ತು. ನದಿಯ ಸೆಳೆತಕ್ಕೆ ಕೊಚ್ಚಿಕೊಂಡು ಹೋಗತೊಡಗಿತ್ತು.
ಇತ್ತ ಸಿಂಹದ ಗರ್ಜನೆಗೆ ಕಣ್ಣನ್ನು ತೆರೆದಿದ್ದ ಭರತನು, ತನ್ನ ಮಂತ್ರವನ್ನು ಅರ್ಧಕ್ಕೆ ನಿಲ್ಲಿಸಿ, ಕಣ್ಣ ಎದುರಲ್ಲೇ ಕೊಚ್ಚಿಕೊಂಡು ಹೋಗುತ್ತಿದ್ದ ಪುಟ್ಟ ಜಿಂಕೆಯ ಮರಿಯನ್ನು ಕಂಡ. ಅವನ ಕರುಳು ಚುರುಕ್ಕೆಂದಿತ್ತು. ಕುಳಿತಲ್ಲಿಂದ ಎದ್ದು ಹಿಂದುಮುಂದೆ ಯೋಚಿಸದೆ, ಓಡಿಬಂದು ನೀರಿಗೆ ಹಾರಿದ. ಬಹಳ ಪ್ರಯತ್ನದ ನಂತರ ಜಿಂಕೆ ಮರಿಯನ್ನು ರಕ್ಷಿಸಿ, ದಡಕ್ಕೆ ಎತ್ತಿಕೊಂಡು ಬಂದ. ಅದರ ತಾಯಿಗಾಗಿ ಎದುರಿನ ತಟದ ಕಡೆಗೆ ನೋಡಿದವನಿಗೆ ತಾಯಿ ಜಿಂಕೆಯ ಎಲ್ಲಿಯೂ ಕಾಣಿಸಲಿಲ್ಲ. ಬೇರೆ ದಾರಿ ಕಾಣದೆ, ಮರಿ ಜಿಂಕೆಯನ್ನು ತನ್ನ ಆಶ್ರಮಕ್ಕೆ ತೆಗೆದುಕೊಂಡು ಹೋದ.
ದಿನವೂ ಜಿಂಕೆಗೆ ಹುಲ್ಲು ಹಾಕುವುದು, ಮೈ ತಡವುದು, ನೀರನ್ನು ಕುಡಿಸುವುದು ಇತ್ಯಾದಿಗಳು ಅವನ ದಿನಚರಿಯಾಯಿತು. ಅದಲ್ಲದೆ, ಜಿಂಕೆಯ ಹೋದಲೆಲ್ಲಾ ಅದರ ಜೊತೆಗೆ ಹೋಗುವುದು, ಕಾಡುಪ್ರಾಣಿಗಳಿಂದ ಅದರ ರಕ್ಷಣೆಯನ್ನು ಮಾಡುವುದು, ಧ್ಯಾನದ ಮಧ್ಯೆ ಕಣ್ಣು ತೆರೆದು ಜಿಂಕೆ ಎಲ್ಲಿದೆ ಎಂದು ನೋಡುವುದು, ಇತ್ಯಾದಿಗಳನ್ನು ಅವನು ಮಾಡಬೇಕಾಯಿತು. ಹೀಗಾಗಿ ಅವನ ಜಪ-ತಪಗಳ ಅವಧಿಯು ಕಡಿಮೆ ಆಗಿತ್ತು. ಜಿಂಕೆಯ ಒಂದು ಕ್ಷಣ ಕಾಣದಿದ್ದರೂ ಅವನು ಚಡಪಡಿಸುತ್ತಿದ್ದ. ಹೀಗೆ, ಎಲ್ಲಾ ಲೌಕಿಕ ಆಸೆಗಳನ್ನು ತೊರೆದು ಕಾಡಿಗೆ ಬಂದಿದ್ದ ಭರತ, ಈಗ ಜಿಂಕೆಯ ಮೇಲೆ ತನ್ನ ವ್ಯಾಮೋಹವನ್ನು ಬೆಳೆಸಿಕೊಂಡಿದ್ದ. ತನ್ನ ಸ್ವಂತ ಮಗನಂತೆ ಅದರ ಮೇಲೆ ಕಾಳಜಿಯನ್ನು ತೋರಿಸುತ್ತಿದ್ದ.
ಕೆಲವು ವರ್ಷಗಳ ನಂತರ ಮುದುಕನಾಗಿದ್ದ ಭರತ, ತಾನು ಮಲಗಿದ್ದಲಿಂದ ಕಣ್ಣು ತೆರೆದ. ಆದರೆ ಮನಿಗೆ ಎದ್ದು ಕೂರಲು ಆಗಲಿಲ್ಲ. ಕಣ್ಣ ಎದುರಲ್ಲೇ ಜಿಂಕೆಯ ಕುಳಿತು ಕಣ್ಣೀರು ಸುರಿಸುತ್ತಿತ್ತು. ತನ್ನ ಜೀವ ಇನ್ನೇನು ಹೋಗಲಿದೆ ಎಂದು ಅವನಿಗೆ ಗೊತ್ತಾಗಿ, ಕಣ್ಣನ್ನು ಮುಚ್ಚಿದ.
ಅವನು ಪುನಃ ಕಣ್ಣನ್ನು ತೆರೆದಾಗ ಎದುರಿಗೆ ಜಿಂಕೆಯ ಕಾಣಲಿಲ್ಲ. ಎದ್ದು ನಿಲ್ಲಲು ಹೋದವನಿಗೆ ಎರಡು ಕಾಲುಗಳಲ್ಲಿ ನಿಲ್ಲಲಾಗಲಿಲ್ಲ. ಭರತನು ಸಂಪೂರ್ಣವಾಗಿ ಜಿಂಕೆಯಾಗಿ ಬದಲಾಗಿದ್ದ. ಆದರೆ ಅವನಿಗೆ ತನ್ನ ಹಿಂದಿನ ಜನ್ಮದ ಸಂಪೂರ್ಣ ನೆನಪು ಇತ್ತು. ತನ್ನ ಇಂದ್ರಿಯಗಳ ಆಸೆಯಿಂದ ಈ ಗತಿ ಬಂದಿರಬಹುದೆಂದು ಅವನು ಪಶ್ಚಾತ್ತಾಪ ಪಟ್ಟ. ಪುನಃ ಈ ತಪ್ಪು ಮಾಡಬಾರದೆಂದು ಶಪಥ ಮಾಡಿದ್ದ. ತನ್ನ ರಾಜ್ಯ, ಮಡದಿ ಮಕ್ಕಳನ್ನು ತೊರೆದು, ಇಂದ್ರಿಯ ಆಸೆಗಳನ್ನು ಬಿಟ್ಟು, ಆಶ್ರಮಕ್ಕೆ ಬಂದು ಅಷ್ಟೆಲ್ಲಾ ಜಪ ತಪಗಳನ್ನು ಮಾಡಿಯು ಕೊನೆಯಲ್ಲಿ ಜಿಂಕೆಯ ಮೇಲೆ ವ್ಯಾಮೋಹ ಪಟ್ಟು ದೇವರ ಸೇವೆಯನ್ನು ಸಂಪೂರ್ಣವಾಗಿ ಮರೆತನಲ್ಲಾ ನಾನೆಂತಾ ದಡ್ಡ ಎಂದು ಜಿಂಕೆಯ ರೂಪದ ಭರತ ದುಃಖಿಸಿದ.
ಕಾಲಂಜರ ಎಂಬ ಪರ್ವತದಲ್ಲಿ ನೆಲೆಸಿದ್ದ ತನ್ನ ತಾಯಿ ಜಿಂಕೆಯಿಂದ ಬೇರ್ಪಟ್ಟು, ಅಲ್ಲಿಂದ ಶಾಲಗ್ರಾಮ ಎಂಬ ಪ್ರದೇಶದ ಕಾಡಿಗೆ ಹೋಗಿ ಒಂಟಿಯಾಗಿ ನೆಲೆಸಿದ. ಅಲ್ಲಿಂದ ಪುಲಹ ಆಶ್ರಮಕ್ಕೆ ಹೋಗಿ, ಅಲ್ಲಿನ ಋಷಿಗಳ ನಡುವೆ ಕೇವಲ ತರಗೆಲೆಗಳನ್ನು ತಿನ್ನುತ್ತಾ, ಭಗವಂತನನ್ನು ಧ್ಯಾನಿಸುತ್ತಾ, ಅಂತಿಮವಾಗಿ ನದಿಯಲ್ಲಿ ಸ್ನಾನ ಮಾಡುತ್ತಾ ದೇಹತ್ಯಾಗವನ್ನು ಮಾಡಿದ.
Comments
Post a Comment