ಮಹರ್ಷಿ ಅಂಗೀರಸನ ವಂಶದಲ್ಲಿ ಒಬ್ಬ ಬ್ರಾಹ್ಮಣ ಇದ್ದ. ಅವನಿಗೆ ಹತ್ತು ಜನ ಮಕ್ಕಳಿದ್ದರು. ಅವರಲ್ಲಿ ಕಿರಿಯವ ಭರತ. ತನ್ನ, ಮೂರನೆಯ ಜನ್ಮದಲ್ಲಿಯಾದರೂ, ಮೋಕ್ಷವನ್ನು ಪಡೆಯಬೇಕೆಂದು ಪಣ ತೊಟ್ಟಿದ್ದ ಭರತ, ಬಾಲ್ಯದಿಂದಲೇ ಯಾರೊಡನೆಯೂ ಸೇರದೆ, ಹೆಚ್ಚು ಮಾತನಾಡದೆ, ಕಿವಿಯು ಕೇಳಿಸಿದರೂ ಕಿವುಡನಂತೆ ನಟಿಸುತ್ತಿದ್ದ. ಅಲ್ಲದೆ ಯಾವುದೇ ಮನುಷ್ಯ, ಜೀವಿಗೆ ಸ್ವಲ್ಪವೂ ನೋವು ಮಾಡಬಾರದೆಂದು ಅಹಿಂಸೆಯನ್ನು ಪಾಲಿಸುತಿದ್ದ. .
ಅವನ ಕೊಳಕು ಬಟ್ಟೆ ಮತ್ತು ವರ್ತನೆಯನ್ನು ಕಂಡು ಜನರು ಅವನನ್ನು ಹುಚ್ಚ ಎನ್ನುತ್ತಿದ್ದರು. ಆದರೂ ಮನಸ್ಸಿನಲ್ಲಿ ಸದಾ ವಿಷ್ಣುವಿನ ಧ್ಯಾನವನ್ನು ಮಾಡುತ್ತಾ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಭರತನು ಮುಂದುವರೆಯುತಿದ್ದ. ಅವನ ಹೆಚ್ಚು ಕಾಲ ಕುಳಿತಲ್ಲೇ ಕೂರುವ, ನಿಂತಲ್ಲೇ ನಿಲ್ಲುವ ವರ್ತನೆಯನ್ನು ಕಂಡು, ಅವನನ್ನು ಜನರು “ಜಡ ಭರತ” ಎನ್ನತೊಡಗಿದ್ದರು.
ಆದರೂ ಪಟ್ಟು ಬಿಡದೆ ಅವನ ತಂದೆಯು, ಅವನನ್ನ ಗುರುಕುಲಕ್ಕೆ ಸೇರಿಸಿ, ವಿದ್ಯೆಯನ್ನು ಕಲಿಸುವ ಪ್ರಯತ್ನ ಮಾಡಿದನು. ಆದರೆ ತುಸುಸಮಯದಲ್ಲೇ ಅವನ ತಂದೆಯ ಮರಣವಾಯಿತು.
ನಂತರ ಅವನನ್ನು ದಡ್ಡನೆಂದು ಗುರುಕುಲದಿಂದ ಹೊರಗಟ್ಟಲಾಯಿತು. ಮನೆಗೆ ಬಂದ ಭರತನಿಗೆ ಅವನ ಒಂಬತ್ತು ಮಂದಿ ಅಣ್ಣಂದಿರು ಹಿಂಸೆಯನ್ನು ಕೊಡತೊಡಗಿದರು. ಅವರು ಆಗಾಗ ಅವನಿಗೆ ಹೊಡೆಯುತ್ತಿದ್ದರು, ಹಳಸಿದ ಆಹಾರವನ್ನು ನೀಡುತ್ತಿದ್ದರು. ಇವೆಲ್ಲವನ್ನೂ ಯಾವುದೇ ಪ್ರತಿಭಟನೆಯನ್ನು ಮಾಡದೆ, ಮೌನವಾಗಿದ್ದು ಭರತನು ಸಹಿಸಿಕೊಂಡ.
ಕೆಲವೊಮ್ಮೆ ಊಟವೇ ಸಿಗದೇ, ಭಿಕ್ಷೆಯನ್ನು ಬೇಡುವುದು, ಎಸೆದ ಆಹಾರವನ್ನು ತಿನ್ನುವುದು, ಇತ್ಯಾದಿಗಳನ್ನು ಮಾಡುತ್ತಾ ಭರತ ಹೇಗೋ ಜೀವನ ಸಾಗಿಸುತ್ತಿದ್ದ. ನೆಲದ ಮೇಲೆ ಮಲಗುವುದು, ಸ್ನಾನವೇ ಇಲ್ಲದೆ ತಿಂಗಳು ಗಟ್ಟಲೇ ಕಳೆಯುವುದು ಈಗ ಅವನಿಗೆ ರೂಢಿಯಾಗಿತ್ತು.
ಆದರೆ ಯಾವ ಮಳೆ-ಚಳಿಗಳೂ ಅವನಿಗೆ ಏನೂ ಹಾನಿಯನ್ನು ಮಾಡಲಿಲ್ಲ. ಜನರೂ ಕೂಡ ಅವನು ಕಂಡಲ್ಲಿ ಕಲ್ಲು ಹೊಡೆಯುತ್ತಿದ್ದರು, ಗೇಲಿ ಮಾಡುತ್ತಿದ್ದರು. “ಇವನಿಗೆ ಬಿಟ್ಟಿ ಊಟವನ್ನು ಕೊಡುವುದೇಕೆ?” ಎಂದು ಯೋಚಿಸಿದ ಅಣ್ಣಂದಿರು ಅವನನ್ನು ನೊಗಕ್ಕೆ ಎತ್ತಿನಂತೆ ಕಟ್ಟಿ ತಮ್ಮ ಹೊಲದಲ್ಲಿ ಉಳುಮೆ ಮಾಡಿಸುತ್ತಿದ್ದರು ಅದಕ್ಕೆ ಪ್ರತಿಯಾಗಿ ಊಟವನ್ನು ನೀಡುತ್ತಿದ್ದರು. ಅಣ್ಣಂದಿರು ಇಷ್ಟೆಲ್ಲಾ ಮಾಡಿದರೂ, ಕಷ್ಟವನ್ನು ನೀಡಿದರೂ ಏನನ್ನೂ ಹೇಳದೆ, ಇದೆಲ್ಲಾ ದೇವರ ಪರೀಕ್ಷೆ ಎಂದುಕೊಂಡು ಜಡ ಭರತ ದಿನ ದೂಡುತ್ತಿದ್ದ.
ಈ ಕಥೆಯನ್ನು ಯೂಟ್ಯೂಬ್ ನಲ್ಲಿ ವೀಕ್ಷಿಸಿ :
ಆ ಊರಿನ ಕುಖ್ಯಾತ ಡಕಾಯಿತರ ಮುಖಂಡನಿಗೆ ಮಕ್ಕಳಿರಲಿಲ್ಲ. ಅದಕ್ಕಾಗಿ ಏನು ಮಾಡಬೇಕೆಂದು ಅವನು ಒಬ್ಬ ಮಾಂತ್ರಿಕನ ಬಳಿ ಕೇಳಿದಾಗ, ಕಾಳಿ ಮಾತೆಗೆ ಒಬ್ಬ ಪೆದ್ದ ಮನುಷ್ಯನನ್ನು ಬಲಿ ಕೊಡುವಂತೆ ಮಂತ್ರವಾದಿಯು ಹೇಳಿದನು. ಅಂತಹ ಒಬ್ಬ ವ್ಯಕ್ತಿಯನ್ನು ಹುಡುಕಿಕೊಂಡು ಬರಲು, ತನ್ನ ಸಹಚರರನ್ನು ಮುಖಂಡ ಕಳಿಸಿದನು.
ಅದು ಮಧ್ಯರಾತ್ರಿಯಾಗಿತ್ತು. ಬಲಿಕೊಡಲು ಯೋಗ್ಯವಾದ ವ್ಯಕ್ತಿಯನ್ನು ಹುಡುಕಿ ಸುಸ್ತಾಗಿದ್ದ ಸಹಚರರು, ಗದ್ದೆಯ ಬದುವೊಂದರಲ್ಲಿ ಕುಳಿತರು. ಆಗ, ಅನತಿ ದೂರದಲ್ಲಿ ಗದ್ದೆಯನ್ನು ಕಾಯುತ್ತಾ ಕುಳಿತಿದ್ದ ಜಡಭರತ ಅವರಿಗೆ ಕಾಣಿಸಿದ್ದ. ಅವನ ಬಗ್ಗೆ ಮೊದಲೇ ಗೊತ್ತಿದ್ದ ಈ ಡಕಾಯಿತರು, ಸದ್ದು ಮಾಡದೆ, ಅವನ ಹಿಂದಿನಿಂದ ಹೋಗಿ, ಕಾಲನ್ನು ಹಿಡಿದು ನೆಲಕ್ಕೆ ಕೆಡವಿದರು. ನಂತರ ಅವನ ಕೈಕಾಲುಗಳನ್ನು ಕಟ್ಟಿ, ಗೋಣಿಚೀಲದಲ್ಲಿ ತುಂಬಿದರು. ಅಲ್ಲಿಂದ ಕಾಳಿ ಮಾತೆಯ ದೇವಾಲಯಕ್ಕೆ ಆತುರವಾಗಿ ಹೊತ್ತುಕೊಂಡು ಬಂದರು.
ಅವರು ಅಲ್ಲಿಗೆ ತಲುಪಿದಾಗ, ಮಂತ್ರವಾದಿಯು ಭಯಂಕರವಾಗಿ ವೇಷವನ್ನು ತೊಟ್ಟುಕೊಂಡು, ಜೋರಾಗಿ ಮಂತ್ರವನ್ನು ಹೇಳುತ್ತಾ, ಹೂಂಕರಿಸುತಿದ್ದ. ಅವನ ಮುಂದೆ ಕೈಯನ್ನು ಮುಗಿದುಕೊಂಡು, ಡಕಾಯಿತರ ಮುಖಂಡ ಕುಳಿತಿದ್ದ.
ಜಡ ಭರತನನ್ನು ಗೋಣಿಚೀಲದಿಂದ ಹೊರತೆಗೆದ ಸಹಚರರು, ಈಗ ಅವನಿಗೆ ಸಮೀಪದ ಕೊಳದ ನೀರನ್ನು ತಂದು ಸ್ನಾನವನ್ನು ಮಾಡಿಸಿದರು. ಹೊಸ ಬಟ್ಟೆ ಹಾಗೂ ಪಂಚೆಯನ್ನು ತೊಡಿಸಿದರು. ಅವನಿಗೆ ಆಭರಣಗಳನ್ನು ತೊಡಿಸಿ, ಮೈಗೆಲ್ಲಾ ಸುಗಂಧ ದ್ರವ್ಯಗಳನ್ನು ಲೇಪಿಸಿದರು. ಅವನ ಹಣೆಗೆ ಕೆಂಪನೆಯ ತಿಲಕವನ್ನು ಇಟ್ಟರು. ತಿನ್ನಲು ವಿವಿಧ ಭಕ್ಷ್ಯಗಳನ್ನು ಇಟ್ಟರು. ಅವನು ಎಲ್ಲವನ್ನೂ ಗಬಗಬನೆ ತಿಂದು ಮುಗಿಸಿದ್ದ.
ಈಗ ಮಂತ್ರವಾದಿ ಕೈಯಲ್ಲೊಂದು ಹರಿತದ ಕತ್ತಿಯನ್ನು ಹಿಡಿದು ನರ್ತಿಸತೊಡಗಿದ್ದ. ಬಾಯಿಗೆ ಬಂದ ವಿಚಿತ್ರ ಮಂತ್ರಗಳ ಪಠನೆಯನ್ನು ಮಾಡತೊಡಗಿದ್ದ. ಧಕಾಯಿತರು ಎಲ್ಲರೂ ಸೇರಿ ಭರತನನ್ನು ಕಾಳಿಯ ವಿಗ್ರಹದ ಎದುರು ಬಗ್ಗಿಸಿ ಹಿಡಿದಿದ್ದರು. ಮಂತ್ರವಾದಿಯ ಅವನ ತಲೆಯನ್ನು ಕಡಿಯಲು ತನ್ನ ಕತ್ತಿಯನ್ನು ಎತ್ತಿದ. ಜಡಭರತ ಮನದಲ್ಲಿಯೇ ಭಗವಂತನ ಧ್ಯಾನವನ್ನು ಮಾಡತೊಡಗಿದ್ದ.
ದೈವಭಕ್ತ ನೊಬ್ಬನನ್ನು ಬಲಿ ಕೊಡಲು ಹೊರಟಿರುವ ಧಕಾಯಿತರನ್ನು ಕಂಡ ಕಾಳಿ ಮಾತೆಯು ಬಹಳ ಕೋಪಿಸಿಕೊಂಡಿದ್ದಳು. ಅವನನ್ನು ಉಳಿಸಬೇಕೆಂದು ಯೋಚಿಸಿ ತಕ್ಷಣ ಮೂರ್ತಿಯನ್ನೊಡೆದು, ಅಲ್ಲಿ ಪ್ರತ್ಯಕ್ಷವಾಗಿದ್ದಳು. ಆಗ ಅಲ್ಲಿ ಭೀಕರ ಶಬ್ಧ ಮತ್ತು ಪ್ರಖರವಾದ ಬೆಳಕು ಉಂಟಾಗಿತ್ತು.
ಕತ್ತಿಯನ್ನು ಬೀಸಲು ಹೊರಟಿದ್ದ ಮಂತ್ರವಾದಿಯು ನಡುಗಿ ಹೋಗಿದ್ದ. ಕಾಳಿ ಮಾತೆಯ ಉಗ್ರ ರೂಪ, ಕೆಂಡದಂತೆ ಕೆಂಪಗಿರುವ ಕಣ್ಣುಗಳು, ಹರಿತ ಆಯುಧಗಳನ್ನು ಹಿಡಿದಿರುವ ಹಲವಾರು ಕೈಗಳನ್ನು ಕಂಡ ಢಕಾಯಿತರು, ಅಲ್ಲಿಂದ ಓಡಲು ಆರಂಭಿಸಿದರು.
ಕ್ಷಣಮಾತ್ರದಲ್ಲಿ ಅವರೆಲ್ಲರ ತಲೆಗಳನ್ನು ಕಡಿದು, ಅವುಗಳಿಂದ ರಕ್ತವನ್ನು ಹೀರಿದ ಕಾಳಿ ಮಾತೆ, ಹಾಡು ಹಾಗೂ ನರ್ತನವನ್ನು ಆರಂಭಿಸಿದಳು. ಜೋರಾಗಿ ಕಿರುಚಾಡತೊಡಗಿದ್ದಳು.
ಅವಳ ಉಗ್ರರೂಪವನ್ನು ನೋಡಿದ ಜಡಭರತನು ನಡುಗುತ್ತಾ, ತನ್ನ ಕೈ ಮುಗಿದುಕೊಂಡು, ಅವಳು ಅದೃಶ್ಯ ಆಗುವವರೆಗೂ ಒಂದು ಮೂಲೆಯಲ್ಲಿ ಮುದುಡಿ ಕುಳಿತಿದ್ದ.
***
ಒಂದು ಸಾರಿ ಸಿಂಧು ಹಾಗೂ ಸೌವೀರ ರಾಜ್ಯಗಳ ರಾಜನಾದ ರಾಹುಗಣ ಎಂಬಾತ, ತನ್ನ ಪಲ್ಲಕ್ಕಿಯಲ್ಲಿ ಕುಳಿತು, ಕಪಿಲಾಶ್ರಮಕ್ಕೆ ಹೋಗುತ್ತಿದ್ದ. ಅವನನ್ನು ಹೊತ್ತ ಸೇವಕರು ಇಕ್ಷುಮತಿ ನದಿಯ ತೀರಕ್ಕೆ ತಲುಪಿದರು. ಅದೇಕೋ ಪಲ್ಲಕ್ಕಿಯು ಸ್ವಲ್ಪ ಭಾರ ಎಂದೆನಿಸಿ, ಅದನ್ನು ಹೊರಲು ಇನ್ನೊಬ್ಬ ವ್ಯಕ್ತಿ ಬೇಕೆಂದು ಯೋಚಿಸಿದ ಸೇವಕರು ಸುತ್ತಲೂ ನೋಡುತಿದ್ದರು.
ಅದೇ ನದಿಯ ದಂಡೆಯಲ್ಲಿ, ಎತ್ತಲೋ ನೋಡುತ್ತಾ ಕುಳಿತಿದ್ದ ಜಡಭರತ ಅವರ ಕಣ್ಣಿಗೆ ಕಾಣಿಸಿದ. ತಕ್ಷಣ ಅವನ ಬಳಿಗೆ ಓಡಿದ ರಾಜ ಸೇವಕರು, ಅವನಿಗೆ ಏನನ್ನೂ ಹೇಳದೆ, ಬಲವಂತವಾಗಿ ಕುಳಿತಲ್ಲಿಂದ ಎಬ್ಬಿಸಿ, ಎಳೆದುಕೊಂಡು ಬಂದರು. ಪಲ್ಲಕ್ಕಿಯನ್ನು ಎತ್ತಿ ಒಂದು ಬದಿಯಲ್ಲಿ ಹೆಗಲನ್ನು ಕೊಡುವಂತೆ ದೂಡಿದರು.
ತಾನು ಪಲ್ಲಕ್ಕಿಯನ್ನು ಹೊತ್ತು ನಡೆಯುವಾಗ, ಇರುವೆಯನ್ನೋ ಅಥವಾ ಉಳಿದ ಕೀಟಗಳನ್ನೋ ತುಳಿಯಬಾರದೆಂದು ಯೋಚಿಸಿ, ನಿಧಾನವಾಗಿ ಪ್ರತೀ ಹೆಜ್ಜೆಯನ್ನೂ ಗಮನದಿಂದ ಇಡುತ್ತಾ, ಜಡಭರತ ಹೋಗುತ್ತಿದ್ದ. ಹಾಗಾಗಿ ಉಳಿದವರ ನಡಿಗೆಯ ವೇಗಕ್ಕೆ ಇವನು ಹೆಜ್ಜೆಯನ್ನು ಹೊಂದಿಸಲಾಗಲಿಲ್ಲ. ಪರಿಣಾಮವಾಗಿ ಪಲ್ಲಕ್ಕಿಯು ಒಂದು ಬದಿಗೆ ಹೊಯ್ದಾಡ ತೊಡಗಿತು. "ಸರಿಯಾಗಿ ಹೆಜ್ಜೆ ಹಾಕಿ ಸೇವಕರೆ" ಎಂದು ರಾಜ ಸಮಾಧನದಿಂದಲೇ ನುಡಿದಿದ್ದ. ಇದು ಇನ್ನೆರಡು ಬಾರಿ ಪುನರಾವರ್ತನೆಯಾದಾಗ ರಾಜನು ಕೋಪಗೊಂಡು, "ಮೂರ್ಖರೇ ಸರಿಯಾಗಿ ಹೊರದಿದ್ದರೆ, ನಿಮಗೆಲ್ಲಾ ನೂರು ಛಡಿಯೇಟು ಕೊಡಿಸುತ್ತೇನೆ. " ಎಂದು ಕಿರುಚಿದ್ದ .
ಆಗ ಸೇವಕರಲ್ಲೊಬ್ಬ ಧೈರ್ಯವನ್ನು ತಂದುಕೊಂಡು, "ಮಹಾರಾಜ, ಇದರಲ್ಲಿ ನಮ್ಮದೇನೂ ತಪ್ಪಿಲ್ಲ. ಇವತ್ತು ಕೆಲಸಕ್ಕೆ ಸೇರಿದ ಈ ವ್ಯಕ್ತಿಯು ಸರಿಯಾಗಿ ಹೆಜ್ಜೆ ಹಾಕುತ್ತಿಲ್ಲ. ಅದರಿಂದಲೇ ನಿಮ್ಮ ಪ್ರಯಾಣಕ್ಕೆ ತೊಂದರೆ ಆಗುತ್ತಿದೆ." ಎಂದು ತಲೆ ತಗ್ಗಿಸುತ್ತಾ ನುಡಿದ.
"ಇವನಿಗೆ ನಾನು ಬುದ್ಧಿ ಹೇಳುತ್ತೇನೆ" ಎಂದು ರಾಜ, ಜಡ ಭರತನನ್ನು ದುರುಗುಟ್ಟಿ ನೋಡುತ್ತಾ "ಈ ಸಾಮ್ರಾಜ್ಯದ ಮಹಾರಾಜನಾದ ನನ್ನ ಎಚ್ಚರಿಕೆಯ ಮಾತುಗಳನ್ನು ಕೇಳಿಯೂ, ನೀನು ಪಲ್ಲಕ್ಕಿಯನ್ನು ಸರಿಯಾಗಿ ಹೊರುತ್ತಿಲ್ಲವಲ್ಲಾ . ನಿನ್ನ ಇಂತಹ ಮೊಂಡು ಧೈರ್ಯಕ್ಕೆ ನಾನು ನಿನಗೆ ಉಗ್ರವಾದ ಶಿಕ್ಷೆಯನ್ನೇ ನೀಡುತ್ತೇನೆ. ಆಗ ನೀನು ಸ್ವಲ್ಪ ನೆಟ್ಟಗಾಗಬಹುದು" ಎಂದು ಕಿರುಚಿದ.
ರಾಜ ರಾಹುಗಣನ ಮಾತುಗಳು ಜಡ ಭರತ ಮೇಲೆ ಯಾವುದೇ ಪರಿಣಾಮ ಉಂಟು ಮಾಡಲಿಲ್ಲ. ಅವನು ಮುಗುಳುನಗುತ್ತಾ "ರಾಜನೆ ನೀನು ಹೇಳಿದ್ದೆಲ್ಲವೂ ನಿಜ. ನೀನು ಬೇಕಿದ್ದರೆ ನನ್ನ ಜೀವವನ್ನೇ ತೆಗೆಯಬಹುದು. ಅದರ ಬಗ್ಗೆ ನನಗೆ ಸ್ವಲ್ಪವೂ ಭಯವಿಲ್ಲ. ನಾಳೆ ಹೋಗುವ ಜೀವವು ಇಂದೇ ಹೋಗುತ್ತದೆ ಅಷ್ಟೇ. ಆಗ ಸಾವು ಕೇವಲ ನನ್ನ ದೇಹಕ್ಕೆ. ಆದರೆ ನೀನು ನನ್ನ ಆತ್ಮವನ್ನು ಕೊಲ್ಲಲು ಸಾಧ್ಯವಿಲ್ಲ. ಅದು ಎಂದೋ ಭಗವಂತನನ್ನು ಸೇರಿದೆ. ಅದೇ ರೀತಿ ನೀನು ಇಂದು ಮಹಾರಾಜ ಎಂದು ಬೀಗಬೇಡ. ನಾಳೆ ನೀನು ನನ್ನಂತೆ ಭಿಕಾರಿಯಾಗಬಹುದು. ಎಲ್ಲಾವು ದೇವರಿಚ್ಚೆ" ಎಂದು ಆಕಾಶಕ್ಕೆ ಕೈ ತೋರಿ, ಅವನ ಮುಖವನ್ನೇ ನೋಡುತ್ತಾ ನಿಂತುಕೊಂಡ.
ಅವನ ಮಾತುಗಳನ್ನು ಕೇಳಿದ ರಾಜ ರಾಹುಗಣನು, ಒಂದು ಬಾರಿ ಜಡಭರತನ ಕಣ್ಣುಗಳನ್ನು ನೋಡಿದ. ಅವುಗಳಲ್ಲಿ ಒಂದು ರೀತಿಯ ಹೊಳಪನ್ನು ಕಂಡ. ತನಗರಿವಿಲ್ಲದಂತೆ ರಾಜನ ಕಣ್ಣುಗಳು ತುಂಬಿಬಂದಿದ್ದವು. ಕಾಲುಗಳು ಬಲವನ್ನು ಕಳೆದುಕೊಂಡವು. ಜಡಭರತನ ಎದುರು ಮಂಡಿಯೂರಿದ ರಾಜನು ಕೈಗಳನ್ನು ಮುಗಿದ. ಅವನ ಗಂಟಲು ಕಟ್ಟಿ ಹೋಗಿತ್ತು. ಅವನ ಅಹಂಕಾರವು ಮಾಯವಾಗಿ ಅಲ್ಲಿ ಭಕ್ತಿಯು ಮೂಡಿತ್ತು. "ಮಹಾತ್ಮಾ, ಮಾರು ವೇಷದಲ್ಲಿರುವ ತಾವು ಯಾರು? ದಯಮಾಡಿ ತಮ್ಮ ಪರಿಚಯವನ್ನು ಮಾಡಿಕೊಳ್ಳಿ." ಎಂದು ರಾಹುಗಣ ರಾಜ ಅವನಲ್ಲಿ ವಿನಂತಿಸಿಕೊಂಡ.
ಜಡಭರತ ಅವನನ್ನು ಹಿಡಿದು ಎಬ್ಬಿಸಿ, ತನ್ನ ಎರಡೂ ಪೂರ್ವಜನ್ಮ ಗಳ ಬಗ್ಗೆ ಅವನಿಗೆ ತಿಳಿಸಿದ. ನಂತರ ಆಡಳಿತವನ್ನು ಹೇಗೆ ನಡೆಸಬೇಕು, ಪ್ರಜೆಗಳನ್ನು ಹೇಗೆ ನೋಡಿಕೊಳ್ಳಬೇಕು, ಎಂಬುದನ್ನು ಅವನಿಗೆ ತಿಳಿಹೇಳಿದ. ಅದಾದ ನಂತರ, ಜಡಭರತನು ರಾಜನ ಅರಮನೆಗೆ ಹೋಗಿ ಅವನ ಆಶ್ರಯದಲ್ಲಿ ಜೀವನವನ್ನು ನಡೆಸತೊಡಗಿದ. ಭಗವಂತನ ಸೇವೆಯಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡು ಮೋಕ್ಷವನ್ನು ಪಡೆದುಕೊಂಡ.
Comments
Post a Comment