Skip to main content

ಭಾಗವತದ ಕಥೆಗಳು ಭಾಗ 10 : ರಾಜ ಪ್ರಿಯವ್ರತ


English

ಬ್ರಹ್ಮ, ಮನು, ಪ್ರಿಯವ್ರತ ಮತ್ತು ನಾರದ. 



ಸ್ವಯಂಭುವ ಮನುವಿನ ಎರಡನೇಯ ಮಗ ಪ್ರಿಯವೃತ. ರಾಜಕುಮಾರ ಪ್ರಿಯವ್ರತ ವಿಷ್ಣುವಿನ ಮಹಾನ್ ಭಕ್ತನಾಗಿದ್ದ. ಇವನ ಗುರು, ನಾರದ ಮಹರ್ಷಿ.
ಪ್ರಿಯವ್ರತ ಯಾವಾಗಲೂ, ವಿಷ್ಣುವಿನ ಭಜನೆ ಹಾಗೂ, ಸೇವಾ ಕಾರ್ಯ ಮಾಡುತ್ತಾ ಕಾಲ ಕಳೆಯುತ್ತಿದ್ದ.

ಒಂದು ಸಲ ರಾಜ ಮನು, ತನ್ನ ನಂತರ ಜಗತ್ತನ್ನು ಆಳುವ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ, ಮಗನಾದ ಪ್ರಿಯವ್ರತನ ಬಳಿ ಕೇಳಿಕೊಂಡ.

ತಂದೆಯ ಆದೇಶವನ್ನು ನೇರವಾಗಿ ತಿರಸ್ಕರಿಸಲಾಗದಿದ್ದರೂ, ಪ್ರಿಯವ್ರತನು ಆಡಳಿತದಲ್ಲಿ ಸ್ವಲ್ಪವೂ ಆಸಕ್ತಿಯನ್ನು ತೋರಲಿಲ್ಲ. ಬದಲಾಗಿ ಪುನಃ ಧ್ಯಾನವನ್ನು ಮಾಡಲು ಅವನು ಹೊರಟ. ಮನು ಮತ್ತು ನಾರದರು ಅವನನ್ನ ಹಿಂಬಾಲಿಸಿದರು.

ಕೆಳಗೆ ಭೂಮಂಡಲದಲ್ಲಿ ನಡೆಯುತಿದ್ದ ಘಟನೆಗಳನ್ನು, ತಾನು ಕುಳಿತಲ್ಲಿಂದಲೇ ಗಮನಿಸುತ್ತಿದ್ದ ಬ್ರಹ್ಮ ದೇವನು, ಭಗವಂತನ ನಿಯಮದಂತೆ, ಪ್ರಿಯವ್ರತನನ್ನು ಭೂಮಿಯ ಅರಸನಾಗುವಂತೆ ಮಾಡಬೇಕೆಂದು ಯೋಚಿಸಿದ. ತಕ್ಷಣ ತನ್ನ ದಿವ್ಯವಾದ ಹಂಸವನ್ನೇರಿ, ಇತರ ದೇವತೆಗಳನ್ನೂ ಕರೆದುಕೊಂಡು, ಭೂಮಂಡಲದ ಕಡೆಗೆ ಪ್ರಯಾಣವನ್ನು ಬೆಳೆಸಿದ.

ಹೀಗೆ ಬ್ರಹ್ಮನು ಸಿದ್ಧಲೋಕ, ಗಂಧರ್ವಲೋಕ, ಸಾಧ್ಯಲೋಕ ಮತ್ತು ಚರಣಲೋಕಗಳನ್ನು ದಾಟಿ ಭೂಮಿಯ ಕಡೆಗೆ ಬರುತ್ತಿರುವಾಗ, ಆ ಲೋಕಗಳಲ್ಲಿನ ದೇವತೆಗಳು, ಹಾಗೂ ಋಷಿಗಳು, ತಮ್ಮದೇ ಆದ ವಿಚಿತ್ರ ವಿಮಾನಗಳಲ್ಲಿ ಹಾರುತ್ತಿದ್ದರು.ಅವರೆಲ್ಲಾ ಕ್ಷಣಕಾಲ ನಿಂತು ಸೃಷ್ಟಿಕರ್ತನಿಗೆ ಪ್ರಣಾಮಗಳನ್ನು ಸಲ್ಲಿಸಿದರು. ಅವನಿಗೆ ವಿವಿಧ ಆಚಾರಗಳನ್ನು ನೀಡಿದರು.

ಬ್ರಮ್ಹನು ಅಂತಿಮವಾಗಿ ಭೂಮಂಡಲವನ್ನು ಪ್ರವೇಶಿಸಿದ. ಆಗ ಪ್ರೀಯವೃತ ಗಂಧಮಾದನ ಎಂಬ ಪರ್ವತದಲ್ಲಿ ಧ್ಯಾನವನ್ನು ಮಾಡುತ್ತಿದ್ದ. ಆ ಕಡೆಗೆ ಬ್ರಹ್ಮ ಹೊರಟ. ತನ್ನ ವಿಶಾಲ ರೆಕ್ಕೆಗಳಿಂದ ಧೂಳನ್ನೆಬ್ಬಿಸುತ್ತಾ, ಹಂಸವು ಇಳಿದಿತ್ತು.

ಪ್ರಿಯವ್ರತನ ಸಮೀಪದಲ್ಲೇ ಅಸೀನನಾಗಿದ್ದ ನಾರದ ಮುನಿಯು, ಬ್ರಹ್ಮನನ್ನು ಕಂಡ ತಕ್ಷಣ ಅವಸರದಿಂದ ಕುಳಿತಲ್ಲಿಂದ ಮೇಲಕ್ಕೆದ್ದು, ನಮಸ್ಕಾರವನ್ನು ಮಾಡಿದ. ರಾಜಕುಮಾರ ಪ್ರಿಯವ್ರತ ಮತ್ತು, ಸ್ವಯಂಭುವ ಮನುವು ಅವನ ಜೊತೆಗೆ ಮೇಲಕ್ಕೆದ್ದು ನಿಂತರು. ನಂತರ ವೈದಿಕ ಶಿಷ್ಟಾಚಾರದಂತೆ ಅವನನ್ನು ಗೌರವಿಸಿದರು.

ಉಭಯ ಕುಶಲೋಪರಿ ವಿಚಾರಿಸಿಕೊಂಡು ನಂತರ, ಮನುವಿನ ಆಸೆಯಂತೆ ಪ್ರಪಂಚವನ್ನು ಆಳ್ವಿಕೆ ಮಾಡುವಂತೆ ರಾಜಕುಮಾರನಿಗೆ ಬ್ರಹ್ಮನು, "ನಾವೆಲ್ಲರೂ ಭಗವಂತನ ನಿಯಮದಂತೆ ನಡೆಯಬೇಕು, ಅವನೇ ನಮ್ಮ ಜೀವನವನ್ನು ನಿರ್ಧಾರ ಮಾಡುತ್ತಾನೆ. ನೀನು ಭೂಮಿಯನ್ನು ಆಳಬೇಕೆಂಬುದು ವಿಧಿ ಲಿಖಿತ. ಇದರಿಂದ ನುಣುಚಿಕೊಳ್ಳುವ ಪ್ರಯತ್ನವು ಸಲ್ಲದು." ಎಂದು ಅವನಿಗೆ ಬುದ್ಧಿವಾದವನ್ನು ಹೇಳಿದನು. ಹೀಗೆ ಬಹಳಷ್ಟು ಓಲೈಕೆಯ ನಂತರ, ಪ್ರಿಯವ್ರತ ವಿಶ್ವವನ್ನಾಳಲು ಒಪ್ಪಿದನು.

ಹೀಗೆ, ಸ್ವಯಂಭುವ ಮನು, ಬ್ರಹ್ಮನ ಸಹಾಯದಿಂದ ತನ್ನ ಆಸೆಗಳನ್ನು ಪೂರೈಸಿಕೊಂಡನು. ಋಷಿ ನಾರದನ ಅನುಮತಿಯೊಂದಿಗೆ, ಅವನು ಬ್ರಹ್ಮಾಂಡದ ಎಲ್ಲಾ ಗ್ರಹಗಳನ್ನು ನಿರ್ವಹಿಸುವ ಮತ್ತು ರಕ್ಷಿಸುವ ಜವಾಬ್ದಾರಿಯನ್ನು ತಮ್ಮ ಮಗನಿಗೆ ವಹಿಸಿದರು.

***

ಮಹಾರಾಜ ಪ್ರಿಯವ್ರತನು, ಲೌಕಿಕ ವ್ಯವಹಾರಗಳಲ್ಲಿ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡನು. ಆದರೂ, ಅವನ ಮನಸ್ಸು ಸಂಪೂರ್ಣವಾಗಿ ಭಗವಂತನ ಯೋಚನೆಯಲ್ಲೇ ಮುಳುಗಿತ್ತು.

ಅದಾದ ನಂತರ, ಪ್ರಿಯವ್ರತನು ವಿಶ್ವಕರ್ಮ ಎಂಬ ಪ್ರಜಾಪತಿಯ ಮಗಳು ಬರ್ಹಿಷ್ಮತಿಯನ್ನು ಮದುವೆಯಾದನು. ಅವಳ ಸೌಂದರ್ಯ ಹಾಗೂ ತನ್ನ ಗುಣ, ಪರಾಕ್ರಮಗಳಿಗೆ ಸಮಾನವಾದ ಅಗ್ನೀಧ್ರ, ಇಧ್ಮಜಿಹ್ವ, ಯಜ್ಞಬಾಹು, ಮಹಾವೀರ, ಹಿರಣ್ಯರೇತ, ಘೃತಪೃಷ್ಠ, ಸವನ, ಮೇಧಾತಿಥಿ, ವಿತಿಹೋತ್ರ ಮತ್ತು ಕವಿ ಎಂಬ ಹತ್ತು ಗಂಡು ಮಕ್ಕಳನ್ನು ಹಾಗೂ ಋಜಸ್ವತಿ ಎಂಬ ಮಗಳನ್ನು ಸಹ ಪಡೆದನು.

ರಾಜನು ತಮ್ಮ ಪತ್ನಿ ಬರ್ಹಿಷ್ಮತಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದನು, ದಿನಗಳು ಕಳೆದಂತೆ ಈ ಮೋಹವು ಇನ್ನಷ್ಟು ಹೆಚ್ಚಾಗಿತ್ತು. ಅವನಲ್ಲಿ ಮೊದಲಿದ್ದ ಒಬ್ಬ ಭಕ್ತನ ಮನಸ್ಸಿಗಿಂತ ಒಬ್ಬ ಸಂಸಾರಿಯ ಯೋಚನೆಗಳು ಹೆಚ್ಚಾಗಿತ್ತು. ಅವನು ತನ್ನ ಸಾಮ್ರಾಜ್ಯದ ಇತರೆ ಸಾಮಾನ್ಯ ಮನುಷ್ಯನಂತೆ ಬದಲಾದನು.

ಒಂದು ದಿನ ವಾಯುವಿಹಾರ ಮಾಡುತ್ತಿದ್ದ ರಾಜ, ಆಗಸದಲ್ಲಿ ಸೂರ್ಯನ ಕಡೆಗೆ ಗಮನಿಸಿದ.ನನ್ನ ಸಾಮ್ರಾಜ್ಯವಾದ ಇಡೀ ಭೂಮಂಡಲದಲ್ಲಿ, ಒಂದೇ ಸಮಯದಲ್ಲಿ, ಒಂದು ಭಾಗ ಹಗಲು ಹಾಗೂ ಇನ್ನೊಂದು ಭಾಗದಲ್ಲಿ ರಾತ್ರಿಯಾಗುವುದು. ಈ ತಾರತಮ್ಯವನ್ನು ಹೋಗಲಾಡಿಸಲು ರಾಜನು ತಕ್ಷಣ ತನ್ನ ರಥವೇರಿದನು. ಸೂರ್ಯನ ಪಾಠವನ್ನು ಹಿಂಬಾಲಿಸುತ್ತಾ ಸಾಗಿದನು. ಅವನ ರಥದಿಂದ ಹೊರಹೊಮ್ಮಿದ ಬೆಳಕು ಕತ್ತಲಾದ ಭೂಭಾಗಗಳಿಗೆ ಪಸರಿಸಿತು. ಹೀಗೆ ಇಡೀ ಭೂಮಂಡಲದಲ್ಲಿ ರಾಜನು ಒಂದೇ ಸಮಯದಲ್ಲಿ ಹಗಲನ್ನು ಉಂಟುಮಾಡಿದ್ದ.

ಈ ಕಾರ್ಯವನ್ನು ಮಾಡುವ ಮುನ್ನ, ತನ್ನ ರಥವನ್ನು ಒಂದು ಸಮತಟ್ಟಾದ ಜಾಗಕ್ಕೆ ತೆಗೆದುಕೊಂಡು ಹೋದ. ಅಲ್ಲಿಂದ ಕುದುರೆಗಳನ್ನು ವೇಗವಾಗಿ ಓದುವಂತೆ ಚಾಟಿ ಬೀಸಿದ. ಅಶ್ವಗಳು ಜೋರಾಗಿ ಕೆನೆಯುತ್ತಾ ಶರವೇಗದಲ್ಲಿ ಓಡತೊಡಗಿದ್ದವು. ರಥದ ಚಕ್ರಗಳಿಂದ ಕಿಡಿಗಳು ಹೊರಹೊಮ್ಮತೊಡಗಿದವು. ಭೂಮಿಯು ಕಂಪಿಸತೊಡಗಿತ್ತು, ಅಲ್ಲಲ್ಲಿ ಸೀಳು ಬಿಡಲಾರಂಭಿಸಿತು. ಕೊನೆಗೂ ಭೂಮಿಯಿಂದ ರಥವು ಆಕಾಶಕ್ಕೆ ಹರಿತ್ತು. ತುಂಡು ತುಂಡಾಗಿದ್ದ ಇಳೆಯು ಏಳು ಖಂಡಗಳಾಗಿ ವಿಭಜನೆಗೊಂಡಿತ್ತು. ಈ ದ್ವೀಪಗಳ ಹೆಸರುಗಳು ಜಂಬೂ, ಪ್ಲಾಕ್ಷ, ಸಲ್ಮಲಿ, ಕುಶ, ಕ್ರೌಂಚ, ಶಕ ಮತ್ತು ಪುಷ್ಕರ. ಪ್ರತಿಯೊಂದು ದ್ವೀಪವು ಅದರ ಹಿಂದಿನದಕ್ಕಿಂತ ಎರಡು ಪಟ್ಟು ದೊಡ್ಡದಾಗಿತ್ತು ಮತ್ತು ಪ್ರತಿಯೊಂದೂ ದ್ವೀಪವೂ ಈ ದ್ರವ ಪದಾರ್ಥಗಳಿಂದ ಸುತ್ತುವರೆದಿರುತ್ತೆ. ಅದರಾಚೆಗೆ ಮುಂದಿನ ದ್ವೀಪವಿದೆ.

ಸಮುದ್ರವು ಸಪ್ತ ಸಾಗರಗಳಾಗಿ ಬದಲಾಗಿತ್ತು. ಏಳು ಸಾಗರಗಳು ಕ್ರಮವಾಗಿ ಉಪ್ಪು ನೀರು, ಕಬ್ಬಿನ ರಸ, ಮದ್ಯ, ಬೆಣ್ಣೆ, ಹಾಲು, ಮೊಸರು ಮತ್ತು ಸಿಹಿ ನೀರನ್ನು ಒಳಗೊಂಡಿರುತ್ತವೆ. ಎಲ್ಲಾ ದ್ವೀಪಗಳು ಈ ಸಾಗರಗಳಿಂದ ಸಂಪೂರ್ಣವಾಗಿ ಸುತ್ತುವರೆದಿವೆ ಮತ್ತು ಪ್ರತಿಯೊಂದು ಸಾಗರವು ಸುತ್ತುವರೆದಿರುವ ದ್ವೀಪಕ್ಕೆ ಸಮಾನವಾಗಿರುತ್ತದೆ. ಜಂಬೂ ದ್ವೀಪವೆ ಇಂದಿನ ಏಷ್ಯಾ ಖಂಡ.

ರಾಣಿ ಬರ್ಹಿಷ್ಮತಿಯ ಪತಿಯಾದ ಮಹಾರಾಜ ಪ್ರಿಯವ್ರತನು ತನ್ನ ಪುತ್ರರಿಗೆ ಈ ದ್ವೀಪಗಳ ಮೇಲೆ ಸಾರ್ವಭೌಮತ್ವವನ್ನು ನೀಡಿದನು. ಹೀಗೆ ಅವರೆಲ್ಲ ತಂದೆಯ ಅಪ್ಪಣೆಯಿಂದ ರಾಜರಾದರು. ನಂತರ ರಾಜ ಪ್ರಿಯವ್ರತನು ತನ್ನ ಮಗಳಾದ ಋಜಸ್ವತಿಯನ್ನು ಅಸುರರ ಗುರು ಶುಕ್ರಾಚಾರ್ಯನಿಗೆ ಮದುವೆ ಮಾಡಿಕೊಟ್ಟನು, ಅವಳಿಗೆ ದೇವಯಾನಿ ಎಂಬ ಮಗಳು ಜನಿಸಿದಳು.

ಕಾಲಾಂತರದಲ್ಲಿ ರಾಜನು ಆಡಳಿತವನ್ನು ಮಕ್ಕಳಿಗೆ ಒಪ್ಪಿಸಿ, ಮಡದಿಯನ್ನು ತ್ಯಜಿಸಿ ಭಗವಂತನ ಧ್ಯಾನ ಹಾಗೂ ಸೇವೆಯಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ.


ಈ ಕಥೆಯನ್ನು ಯೂಟ್ಯೂಬ್ ನಲ್ಲಿ ವೀಕ್ಷಿಸಿ: 


Comments