Skip to main content

ಭಾಗವತದ ಕಥೆಗಳು ಭಾಗ-4: ಮತ್ಸ್ಯ ಅವತಾರ


 English


ಮೀನಿನ ರೂಪದ  ಭಗವಂತ 

ಮ್ಮ ಹಿಂದಿನ ಸಂಚಿಕೆಯಲ್ಲಿ ನಾವು, ಬ್ರಹ್ಮನ ಸೃಷ್ಟಿ, ರುದ್ರದೇವರ ಜನನ, ಇತ್ಯಾದಿ ಕತೆಗಳನ್ನು ನಾವು ನೋಡಿದ್ದೇವೆ. 

ಇವತ್ತಿನ ಸಂಚಿಕೆಯಲ್ಲಿ ನಾವು, ವಿಷ್ಣು ಪರಮಾತ್ಮನ, ಮತ್ಸ್ಯ ಅವತಾರದ ಕಥೆಯನ್ನು ಕೇಳೋಣ. ಅವರು ಯಾಕೆ ಮೀನಿನ ರೂಪವನ್ನು ಧರಿಸಿದರು? ಅದರಿಂದ ಪ್ರಪಂಚಕ್ಕೆ ಏನಾಯಿತು? ತನ್ನ ಮತ್ಸ್ಯಾವತಾರದಲ್ಲಿ ಅವರು, ಯಾರಿಗೆ ಮೊದಲು ಕಾಣಿಸಿಕೊಂಡರು? ಇವೆಲ್ಲವನ್ನೂ ನಾವು, ಇವತ್ತಿನ ಸಂಚಿಕೆಯಲ್ಲಿ ನೋಡೋಣ.


ನಮಗೆಲ್ಲ ಗೊತ್ತಿರೋ ಹಾಗೆ, ಸೃಷ್ಟಿಕರ್ತ ಬ್ರಹ್ಮ. ಅವರು ಸದಾ ಎಚ್ಚರವಾಗಿದ್ದು ಸೃಷ್ಟಿಯ ಕಾರ್ಯದಲ್ಲಿ ತೊಡಗಿರುತ್ತಾರೆ. ಆದರೆ, ಅವರಿಗೂ ವಿಶ್ರಾಂತಿ ಬೇಕು. ಅವರಿಗೂ ನಿರ್ದಿಷ್ಟ ನಿದ್ದೆಯ ಅವಧಿ ಇರುತ್ತದೆ. ಬ್ರಹ್ಮನ ಒಂದು ಹಗಲನ್ನು, ಒಂದು ಕಲ್ಪ ಎನ್ನುವರು. 

ಪುರಾಣಗಳ ಪ್ರಕಾರ ಬ್ರಹ್ಮ ದೇವರ ಒಂದು ಹಗಲು 4.32 ಬಿಲಿಯನ್ ವರ್ಷಗಳ. ಅದೇ ರೀತಿ ಒಂದು ರಾತ್ರಿ ಕೂಡಾ 4.32 ಬಿಲಿಯನ್ ವರ್ಷಗಳು.

 ಅಂದರೆ, ಬ್ರಹ್ಮ ದೇವರ ಒಂದು ಹಗಲು ಒಂದು ರಾತ್ರಿ ಒಟ್ಟಾಗಿ 8.64 ಬಿಲಿಯನ್ ವರ್ಷಗಳ ಅವಧಿ. ಈ ನಮ್ಮ ವಿಶ್ವದ ಒಟ್ಟು ಆಯಸ್ಸನ್ನು ಒ ದು ಮಹಾಕಲ್ಪ ಅಂತ ಕರೀತಾರೆ. ಅದು ಮಹಾವಿಷ್ಣುವಿನ ಒಂದು ಉಸಿರಿನ ಅವಧಿ. ಅದು ಒಟ್ಟು 811.04 ಟ್ರಿಲಿಯನ್ ವರ್ಷಗಳು ಆಗುತ್ತೆ. ಹೀಗೆ ಒಂದು ದಿನ ಬ್ರಹ್ಮ ನಿದ್ದೆ ಹೋದರು. ಅವರು ನಿದ್ದೆ ಹೋದಾಗ ಪ್ರಪಂಚದಲ್ಲಿ ಯಾವ ಜೀವಿಯೂ ಬದುಕಿ ಉಳಿಯುವುದಿಲ್ಲ. ಯಾಕಂದರೆ, ಅವರು ನಿದ್ದೆ ಹೋದ ತಕ್ಷಣ ಸಮುದ್ರದ ನೀರು ಮೇಲೆ ಬಂದು ಮೂರೂ ಲೋಕಗಳಲ್ಲಿ ಪ್ರಳಯ ಉಂಟಾಗುತ್ತದೆ.

ಈ ಬಾರಿನೂ ಅದೇ ರೀತಿ ಆಯ್ತು. ಬ್ರಹ್ಮ ನಿದ್ದೆಗೆ ಜಾರಿದ್ರು. ಪ್ರಳಯ ಆರಂಭ ಆಯ್ತು. ಅದೇ ಸಮಯಕ್ಕೆ ಕಾಯ್ತಾ ಇದ್ದ ಹಯಗ್ರೀವ ಅನ್ನುವ ರಾಕ್ಷಸ, ಬ್ರಹ್ಮರ ಬಾಯಿಂದ ಹೊರ ಹೊಮ್ಮಿದ ನಾಲ್ಕು ವೇದಗಳನ್ನು ಕದ್ದು ಸಮುದ್ರದ ತಳದಲ್ಲಿ ಒಂದು ಶಂಖದ ಒಳಗೆ ಬಚ್ಚಿಟ್ಟುಕೊಂಡ. ಈ ವಿಷಯವನ್ನು ತಿಳಿದ ಮಹಾವಿಷ್ಣು, ಒಂದು ಚಿನ್ನದ ಮೀನಿನ ರೂಪವನ್ನು ಧರಿಸಿ, ಸಮುದ್ರದ ಒಳಕ್ಕೆ ಹೊಕ್ಕಿ, ಆ ಹಯಗ್ರೀವನನ್ನು ಸಾಯಿಸಿ, ವೇದಗಳನ್ನು ಬ್ರಹ್ಮ ದೇವರಿಗೆ ಹಿಂದಿರುಗಿಸಿದರು. ಆ ವೇದಗಳು ಬಾಲಕರ ರೂಪದಲ್ಲಿ ಇದ್ದವು ಅಂತ ಕೆಲವು ಕಥೆಗಳು ಹೇಳುತ್ತವೆ.



ಈಗ ನಾವು ಇನ್ನೊಂದು ಕತೆಯನ್ನು ನೋಡೋಣ.

ಅದು ಚಾಕ್ಷುಷ ಎಂಬ ಮನ್ವಂತರವಾಗಿತ್ತು. ಆ ಸಮಯದಲ್ಲಿ ಸತ್ಯವ್ರತ ಎಂಬ ರಾಜನು, ಭೂಮಿಯಲ್ಲಿ ಆಳ್ವಿಕೆ ಮಾಡುತಿದ್ದ. ಸತ್ಯವ್ರತನು ಒಂದು ಬಾರಿ, ಕೃತಮಾಲ ಎಂಬ ನದಿಯಲ್ಲಿ ಸ್ನಾನವನ್ನು ಮುಗಿಸಿ, ಅರ್ಘ್ಯವನ್ನು ಕೊಡುತಿದ್ದಾಗ, ಅವನ ಬೊಗಸೆಗೆ ಸಣ್ಣ ಮೀನೊಂದು ಬಂತು.  ಅದನ್ನು ಎಷ್ಟು ಬಾರಿ ನೀರಿಗೆ ಹಾಕಿದರೂ, ಮತ್ತೆ ಮತ್ತೆ ಅವನ ಅಂಗೈಗೆ ಬಂದು ಸೇರುತಿತ್ತು.

ಕೊನೆಗೂ ಆ ಮೀನು, ಮಾತಾಡಿತು. "ಮಹಾರಾಜ, ನನ್ನನ್ನು ನೀರಿಗೆ ಬಿಡಬೇಡ. ಇಲ್ಲಿರುವ ದೊಡ್ಡ ದೊಡ್ಡ ಜಲಚರಗಳು ನನ್ನನ್ನು ಕೊಲ್ಲುತ್ತವೆ. ದಯವಿಟ್ಟು ನಿನ್ನ ಅರಮನೆಯಲ್ಲಿ ಇರಿಸಿಕೊಂಡು, ನನಗೆ ಆಶ್ರಯ ಕೊಡು." ಎಂದಿತು.

ಈ ಪುಟ್ಟ ಮೀನಿನ ಬಗ್ಗೆ ಕನಿಕರ ಉಂಟಾದ ರಾಜನು, ತನ್ನ ಬಳಿಯಿದ್ದ ಪಾತ್ರೆಯಲ್ಲಿ ಮೀನನ್ನು ಹಾಕಿ, ಅರಮನೆಗೆ ಕೊಂಡೊಯ್ದ.

ಅಲ್ಲಿ ಒಂದು ನೀರಿನ ಮಡಕೆಗೆ ಅದನ್ನು ಹಾಕಿ, ನಿದ್ದೆ ಹೋದ.

ಮಾರನೆಯ ದಿನ ಎದ್ದು ನೋಡಿದಾಗ, ಮೀನು, ಮಡಕೆಯಷ್ಟೇ ದೊಡ್ಡದಾಗಿ ಬೆಳೆದಿತ್ತು. ತನಗೆ ಬೇರೆ ಜಾಗವನ್ನು ತೋರಿಸುವಂತೆ, ಮೀನು ರಾಜನನ್ನು ಬೇಡಿಕೊಂಡಿತು.

ರಾಜನು ಮೀನನ್ನು ಎತ್ತಿಕೊಂಡು ಹೋಗಿ, ಈಗ ಬಾವಿಗೆ ಹಾಕಿದ. ಆದರೆ ಐದು ನಿಮಿಷಗಳಲ್ಲೇ ಮೀನು ದೊಡ್ಡದಾಗಿ ಬೆಳೆದು, ಅದರ ತಲೆಯು ಬಾವಿಯ ಕಟ್ಟೆಯಿಂದ ಹೊರಗೆ ಕಾಣಿಸುತಿತ್ತು. ಮೀನು ಮತ್ತೊಮ್ಮೆ ರಾಜನನ್ನು ಕೂಗಿ ಕರೆಯಿತು. ರಾಜನಿಗೆ ಕಿರಿಕಿರಿ ಉಂಟಾಗಿ, ಸೈನಿಕರೊಡನೆ ಸೇರಿ, ಮೀನನ್ನು ಸಮುದ್ರಕ್ಕೆ ಹಾಕಿದ.

ಕ್ಷಣಗಳಲ್ಲಿ ಮೀನು ಸಮುದ್ರದಷ್ಟೆ ದೊಡ್ಡದಾಗಿ ಬೆಳೆಯಿತು, ಮತ್ತು ರಾಜನನ್ನು ಕರೆದು, ತನ್ನನ್ನು ಬೇರೆಡೆಗೆ ಸಾಗಿಸುವಂತೆ ಕೇಳಿಕೊಂಡಿತು.


ಈಗ ರಾಜನಿಗೆ, ಈ ಮೀನು ಯಾರೆಂಬುದು ಖಚಿತವಾಗಿ ಗೊತ್ತಾಯಿತು. "ಮತ್ಸ್ಯ ರಾಜ, ನೀನು ಸಾಮಾನ್ಯ ಮೀನಲ್ಲ. ನೀನು ಮಹಾವಿಷ್ಣುವೇ ಆಗಿರಬೇಕು ಎಂಬುದು ನನ್ನ ಅನುಮಾನ. ದಯಮಾಡಿ ನೀನು ಯಾರೆಂಬುದು ಕೂಡಲೇ ತಿಳಿಸು." ಎಂದು ರಾಜನು ಮೀನಿಗೆ ಕೈಮುಗಿದನು.

ಮೀನು ಮಾತನಾಡಲಾರಂಭಿಸಿತು.

"ಮಗನೇ ಸತ್ಯವ್ರತ, ನಿನ್ನ ಊಹೆ ನಿಜ. ನಾನು ಮೀನಿನ ರೂಪದಲ್ಲಿರುವ ಮಹಾವಿಷ್ಣು. ನಾನು ನಿನಗೆ ಇನ್ನೂ ಏಳು ದಿನಗಳಲ್ಲಿ ಉಂಟಾಗುವ, ಪ್ರಳಯದ ಬಗ್ಗೆ ಎಚ್ಚರಿಸಲು ಬಂದೆ. ಏಳನೆಯ ದಿನ, ಒಂದು ಬೃಹತ್ ಗಾತ್ರದ ಹಡಗು ಸಮುದ್ರದಲ್ಲಿ ಪ್ರತ್ಯಕ್ಷವಾಗುತ್ತದೆ. ನೀನು ವಾಸುಕಿಯನ್ನು ಪ್ರಾರ್ಥಿಸಿ, ಆ ಹಡಗಿಗೆ ಹಗ್ಗವಾಗಲು ಹೇಳು. ನಾನು ಬಂದು ಆ ಹಡಗನ್ನು ಪ್ರಳಯ ಮುಗಿಯುವವರೆಗೂ ಎಳೆದುಕೊಂಡು ಹೋಗುತ್ತೇನೆ." ಎಂದು ತಿಳಿಸಿ, ಮೀನಿನ ರೂಪದಲ್ಲಿದ್ದ ವಿಷ್ಣು ದೇವರು, ಅಲ್ಲಿಂದ ಮರೆಯಾದರು.


ಜಗತ್ತಿನಲ್ಲಿ ಪ್ರಳಯ ಆರಂಭವಾಯಿತು. ಆಕಾಶವು ತೂತಾಗಿದೆಯೇನೋ ಎನ್ನುವಂತೆ, ಮೋಡಗಳು ಒಡೆದು ಮಳೆಯು ಸುರಿಯಲಾರಂಭಿಸಿತು. ಎಲ್ಲಿ ನೋಡಿದರೂ ಮಿಂಚು ಸಿಡಿಲು. ಜಗತ್ತಿನಾದ್ಯಂತ ಜನರ ಹಾಹಾಕಾರ. ಭಗವಂತನ ಸೃಷ್ಟಿಯ ಪ್ರತಿಯೊಂದು ಜೀವಿಯೂ ದಿಕ್ಕಾಪಾಲಾಗಿ ಓಡಾಡುತ್ತಿತ್ತು. ಒಂದೊಂದಾಗಿ ಅವುಗಳು ನಾಶ ಹೊಂದುತಿದ್ದವು. ಹೀಗೆ ಆರು ದಿನಗಳು ಕಳೆದು ಹೋಗಿ, ಏಳನೆಯ ದಿನ ಬಂತು.


ರಾಜ ಸತ್ಯವ್ರತನು, ಭಗವಂತನ ಆಜ್ಞೆಯಂತೆ, ಸಪ್ತರ್ಷಿಗಳನ್ನು, ಅಮೂಲ್ಯವಾದ ಗಿಡಮೂಲಿಕೆಗಳನ್ನು, ಗೋವುಗಳನ್ನು, ಇತರೆ ಪ್ರಾಣಿ ಪಕ್ಷಿಗಳನ್ನು, ಹಾಗೂ ಜನಸಾಮಾನ್ಯರನ್ನು, ಸಮುದ್ರದ ತಟದಲ್ಲಿ ಸೇರಿಸಿದನು.

ಸ್ವಲ್ಪ ಸಮಯದ ನಂತರ, ಸಮುದ್ರದಲ್ಲಿ ಬೃಹತ್ ಹಡಗೊಂದು ಕಾಣಿಸಿತು. ನಂತರ ರಾಜನು ವಾಸುಕಿಯನ್ನು ಪ್ರಾರ್ಥಿಸಿದಾಗ, ಅವನು ಪ್ರತ್ಯಕ್ಷವಾಗಿ, ಹಡಗಿಗೆ ತನ್ನ ಬಾಲವನ್ನು ಸುತ್ತಿಕೊಂಡನು. ರಾಜನು ಎಲ್ಲರನ್ನೂ ಹಡಗಿಗೆ ಹತ್ತಿಸಿ, ತಾನೂ ಕೊನೆಯಲ್ಲಿ ಹತ್ತಿಕೊಂಡನು. ಆದರೆ ಮೀನಿನ ರೂಪದ ಮಹಾವಿಷ್ಣು, ಎಲ್ಲಿಯೂ ಕಾಣಿಸಲಿಲ್ಲ. 

ರಾಜನು ಈಗ ಶುದ್ಧ ಮನಸ್ಸಿನಿಂದ, ಸಹಾಯ ಮಾಡುವಂತೆ ಭಗವಂತನನ್ನು ಪ್ರಾರ್ಥಿಸಲು ಆರಂಭಿಸಿದನು. ಸುಮಾರು ಮೈಲುಗಳಷ್ಟು ಉದ್ದವಿದ್ದ ,ಭಾರೀ ಗಾತ್ರದ ನೀನೊಂದು ಹಡಗಿನ ಕಡೆಗೆ ಈಜುತ್ತಾ ಬಂತು, ತನ್ನ ಬಾಲಕ್ಕೆ ವಾಸುಕಿಯನ್ನು ಸುತ್ತಿಕೊಳ್ಳಲು ಹೇಳಿತು. ಆನಂತರ ನಿಧಾನವಾಗಿ ಹಡಗನ್ನು ಎಳೆಯಲು ಶುರುಮಾಡಿತು.


ಬೃಹತ್ ಮೀನಿನ ರೂಪದಲ್ಲಿ ಮಹಾವಿಷ್ಣು 

ಮೀನು ಪ್ರಪಂಚವನ್ನು ಸುತ್ತತೊಡಗಿತ್ತು. ಹೀಗೆ ಸಾಗುವಾಗ, ಅವರಿಗೆ, ಮಳೆ, ಸಿಡಿಲು, ಬಿರುಗಾಳಿ ಇತ್ಯಾದಿಗಳು ಎದುರಾದವು. ಎಲ್ಲಿ ನೋಡಿದರೂ ಬರೀ ನೀರೇ ಕಾಣಿಸುತಿತ್ತು. ಹೀಗೆ ಎಷ್ಟು ಸಮಯ ಸಾಗಿತು? ಎಂದು ಯಾರಿಗೂ ಗೊತ್ತಾಗಲಿಲ್ಲ. 


***


ಕೊನೆಗೂ ಬ್ರಹ್ಮದೇವರು 4.32, ಬಿಲಿಯನ್ ವರ್ಷಗಳ ನಂತರ, ನಿದ್ದೆಯಿಂದ ಎಚ್ಚರ ಗೊಂಡರು. ಮಹಾಪ್ರಳಯವು ನೋಡನೋಡುತ್ತಿದ್ದಂತೆ ಇಳಿಮುಖವಾಗ ತೊಡಗಿತ್ತು. 

ಹೀಗೆ, ತಾನು ಕೊಟ್ಟ ಮಾತಿನಂತೆ, ಜಗತ್ತಿನ ರಕ್ಷಣೆಗಾಗಿ, ಮಹಾವಿಷ್ಣು ದೇವರು, ಒಂದು ಬೃಹತ್ ಮೀನಿನ ರೂಪವನ್ನು ಧರಿಸಿದರು.

ವಿಷ್ಣು ದೇವರ ಈ ಅವತಾರವನ್ನು "ಮತ್ಸ್ಯ ಅವತಾರ" ಎಂದು ಕರೆಯುತ್ತಾರೆ. ಇದು ಭಗವಂತನ ದಶಾವತಾರಗಳಲ್ಲಿ, ಮೊದಲನೆಯದು.

ಈ ಘಟನೆಯು ನಡೆದಿದ್ದು, "ಚಾಕ್ಷುಷ" ಎಂಬ ಮನ್ವಂತರದಲ್ಲಿ. ಸತ್ಯವ್ರತ ರಾಜನು ಆ ಮನ್ವಂತರದ ಮನುವಾಗಿದ್ದ. 

ಈಗ ನಾವಿರುವುದು,  ವೈವಸ್ವತ ಮನ್ವಂತರದಲ್ಲಿ. ಈ ಮನ್ವಂತರದಲ್ಲಿ, ರಾಜ ಸತ್ಯವ್ರತನು, ಸ್ವಾಯಂಭು ಮನು ಎಂದು ಜನ್ಮ ತಾಳಿದ್ದ. 


ಮೇಲಿನ ಕಥೆಯನ್ನು ಕೆಳಗಿನ ವಿಡಿಯೋದಲ್ಲಿ ವೀಕ್ಷಿಸಿ.

Comments