Skip to main content

ಭಾಗವತದ ಕಥೆಗಳು ಭಾಗ 5: ವರಾಹ ಅವತಾರ


English


ದು ಸ್ವಾಯಂಭುವ ಮನ್ವಂತರದ ಸತ್ಯಯುಗವಾಗಿತ್ತು. ನಾವು ನಮ್ಮ ಹಿಂದಿನ ಸಂಚಿಕೆಗಳಲ್ಲಿ ಹೇಳಿದಂತೆ, ಸನಕ, ಸನಂದ, ಸನಾತನ ಹಾಗೂ ಸನತ್ಕುಮಾರರು ಬ್ರಹ್ಮನ ಮನಸ್ಸಿನಿಂದ ಮೊದಲು ಜನಿಸಿದ ವ್ಯಕ್ತಿಗಳು. ಎಷ್ಟೇ ವಯಸ್ಸಾದರೂ ಅವರು ಇನ್ನೂ ಆರು ವರ್ಷದ ಬಾಲಕರಂತೆ ಕಾಣುತ್ತಿದ್ದರು. ಈ ಸತ್ಯಯುಗದಲ್ಲಿ ಒಬ್ಬ ಮಾನವನ ಸರಾಸರಿ ಆಯಸ್ಸು ಒಂದು ಲಕ್ಷ ವರ್ಷಗಳು.

ಈ ಬಾಲಕರು ಒಮ್ಮೆ ಮಹಾವಿಷ್ಣುವನ್ನು ಭೇಟಿಯಾಗುವ ಆಸೆಯಿಂದ, ವೈಕುಂಠಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಆರುದ್ವಾರಗಳನ್ನು ದಾಟಿ ಏಳನೆಯ ದ್ವಾರದ ಬಳಿ ಬಂದಾಗ, ಈ ಬಾಲಕರನ್ನು ಜಯ-ವಿಜಯರೆಂಬ ದ್ವಾರಪಾಲಕರು ತಡೆದು ನಿಲ್ಲಿಸಿದರು. ಈ ಜಯ-ವಿಜಯ ಇಬ್ಬರೂ ಕಲಿಯ ಮಕ್ಕಳು. ಅವರು ಈ ಬಾಲಕರ ವೇಷಭೂಷಣಗಳನ್ನು ಕಂಡು ತಮಾಷೆ ಮಾಡಿದ್ದರು, ಮರಳಿ ಹೋಗುವಂತೆ ಒತ್ತಾಯಿಸಿದ್ದರು. ತಮ್ಮನ್ನು ಒಳಗೆ ಬಿಡುವಂತೆ ಋಷಿಕುಮಾರರು ಎಷ್ಟು ಬಾರಿ ಕೇಳಿಕೊಂಡರೂ, ಜಯವಿಜಯರು ತಮ್ಮ ಮನಸ್ಸನ್ನು ಬದಲಿಸಲೇ ಇಲ್ಲ. 


ಅಲ್ಲದೆ, ಈ ಬಾಲಕರಿಗೆ ಅವರು ಬೈಯ್ಯಲು ಆರಂಭಿಸಿದರು. ಇದರಿಂದ ಕೋಪಗೊಂಡ ಸನಕಾದಿ ಕುಮಾರರು, "ನಿಮ್ಮಂಥ ನೀಚರು ವೈಕುಂಠದಲ್ಲಿ ಇರಲು ಯೋಗ್ಯರಲ್ಲ. ನೀವು ಭೂಲೋಕದಲ್ಲಿ ಜನ್ಮ ಎತ್ತುವಂತಾಗಲಿ." ಎಂದು ಶಪಿಸಿದರು. ಈ ವಿಷಯವನ್ನು ತಿಳಿದ ಮಹಾವಿಷ್ಣು, ಕೂಡಲೇ ಮಧ್ಯೆ ಪ್ರವೇಶಿಸಿ, ಋಷಿಕುಮಾರರ ಹಿನ್ನೆಲೆಯ ಬಗ್ಗೆ ಜಯ ವಿಜಯರಿಗೆ ತಿಳಿಸಿ, ಅವರಲ್ಲಿ ಕ್ಷಮೆಯನ್ನು ಯಾಚಿಸಲು ಹೇಳಿದರು.


ಅದಷ್ಟೇ ಅಲ್ಲದೇ, ಶಾಪದಿಂದ ಬೇಗನೆ ಮುಕ್ತ ಗೊಳಿಸಲು ಸಹಕಾರಿ ಆಗುವಂತೆ, ತನ್ನ ದ್ವಾರ ಪಾಲಕರಿಗೆ ಎರಡು ಆಯ್ಕೆಗಳನ್ನು ನೀಡಿದರು. ಅದೇನೆಂದರೆ, ತನ್ನ ಭಕ್ತರಾಗಿ ಭೂಲೋಕದಲ್ಲಿ ಏಳು ಜನ್ಮಗಳನ್ನು ಎತ್ತುವದು. ಇಲ್ಲವೇ, ವೈರಿಗಳಾಗಿ ಮೂರು ಜನ್ಮಗಳನ್ನೆತ್ತಿ, ತನ್ನ ಅವತಾರಗಳ ಕೈಗಳಿಂದಲೇ ಹತರಾಗಿ, ಶಾಪ ವಿಮೋಚನೆಯನ್ನು ಮಾಡಿಕೊಳ್ಳುವುದು. ಭಗವಂತನನ್ನು ಬಿಟ್ಟು ಹೆಚ್ಚು ಕಾಲ ಇರುವುದನ್ನು ಊಹಿಸಿಕೊಳ್ಳಲೂ ಸಾಧ್ಯವಾಗದೆ, ಸಹೋದರರಿಬ್ಬರು ಎರಡನೆಯ ಆಯ್ಕೆಯನ್ನು ಒಪ್ಪಿಕೊಂಡರು.


***


ಬ್ರಹ್ಮರ ಮಾನಸ ಪುತ್ರ ಮರೀಚಿ, ಕಶ್ಯಪ ಮುನಿಯು ಮರೀಚಿಯ ಮಗ. ಇವನ ಪತ್ನಿಯರಲ್ಲಿ ಒಬ್ಬಳಾದ ದಿತಿಯು, ದಕ್ಷನ ಮಗಳು. ಒಂದು ಮುಸ್ಸಂಜೆಯ ಸಮಯದಲ್ಲಿ, ಕಶ್ಯಪ ಮುನಿಯು ಧ್ಯಾನದಲ್ಲಿ ತೊಡಗಿದ್ದರು. ಪರಶಿವನು ತನ್ನ ಭೂತಗಣಗಳೊಂದಿಗೆ ಸ್ಮಶಾನದಲ್ಲಿ ತಿರುಗುವ ಆ ಸಮಯದಲ್ಲಿ ದಿತಿಗೆ, ಸಂತಾನವನ್ನು ಪಡೆಯುವ ಬಯಕೆಯು ಹೆಚ್ಚಾಗಿತ್ತು. 


ತನ್ನ ಧ್ಯಾನಮಗ್ನ ಪತಿಯನ್ನು ಬಲವಂತವಾಗಿ ಎಬ್ಬಿಸಿ, ಅವರ ಬಳಿ ತನ್ನ ಇಚ್ಛೆಯನ್ನು, ದಿತಿಯು ತೋಡಿಕೊಂಡಳು. 


"ತಾನು ಮಾಡಲು ಹೊರಟಿದ್ದು ಅಧರ್ಮದ ಕಾರ್ಯ." ಎಂದು ಗೊತ್ತಿದ್ದರೂ ಸಹ, ತನ್ನ ಪತ್ನಿಯ ಮಾತಿಗೆ ಇಲ್ಲವೆನ್ನಲಾಗದೆ, ಕಶ್ಯಪ ಮುನಿಯು ಒಪ್ಪಿಗೆಯನ್ನು ನೀಡಿದರು. ಆ ಅಮಂಗಳ ಘಳಿಗೆಯಲ್ಲಿ, ಪತಿ-ಪತ್ನಿಯರು ಒಂದಾದರು. 


ಕಾಲ ಉರುಳಿತು. ದಿತಿಯು ಗರ್ಭಿಣಿಯಾದಳು. ಹಾಗೂ ನವಮಾಸಗಳ ನಂತರ, ಇಬ್ಬರು ಗಂಡು ಮಕ್ಕಳಿಗೆ ಜನ್ಮವನ್ನು ನೀಡಿದಳು. ಅವರೇ ಹಿರಣ್ಯ ಕಶಿಪು ಮತ್ತು ಹಿರಣ್ಯಾಕ್ಷ. ಇದು ಸತ್ಯಯುಗದಲ್ಲಿ ನಡೆದ ಘಟನೆ.


***


ದಿತಿಯ ಮಕ್ಕಳಿಬ್ಬರೂ ಬೆಳೆದು ದೊಡ್ಡವರಾದರು. "ತಾನು ಶಕ್ತಿಶಾಲಿ ಆಗಬೇಕೆಂದು" ಬಯಸಿದ ಹಿರಣ್ಯಾಕ್ಷನು,  ಉಗ್ರ ತಪಸ್ಸಿನ ಮೂಲಕ, ಬ್ರಹ್ಮ ದೇವರನ್ನು ಒಲಿಸಿ, ಯಾವುದೇ ದೇವ-ದೇವತೆಗಳಿಂದ, ಅಸುರರಿಂದ, ಪ್ರಾಣಿಗಳಿಂದ, ಹಾಗೂ ಮಾನವರಿಂದ, ತನಗೆ ಮರಣ ಬರದಂತೆ ವರವನ್ನು ಪಡೆದು ಕೊಂಡನು. ಮತ್ತು ಈ ವರದ ಪರಿಣಾಮವಾಗಿ, ಮೂರು ಲೋಕಗಳಲ್ಲಿ ಆಗಾಗ ದಾಳಿ ನಡೆಸುತಿದ್ದನು. ಹೀಗೆ ಒಂದು ಬಾರಿ ಭೂಮಿಯನ್ನು ಅಪಹರಿಸಿ, ಕ್ಷೀರ ಸಾಗರದ ಆಳದಲ್ಲಿ ಬಚ್ಚಿಟ್ಟನು. ಹಿಂದೂ ಪುರಾಣಗಳಲ್ಲಿ ಬರುವ ಈ ಕ್ಷೀರ ಸಾಗರವು, ಸಪ್ತ ಸಾಗರಗಳಲ್ಲಿ ಒಂದು. ಮಹಾವಿಷ್ಣುವಿನ ವಾಸಸ್ಥಾನವಾದ ವೈಕುಂಠವು, ಇದೇ ಕ್ಷೀರಸಾಗರದಲ್ಲಿದೆ. 


ಈಗ ದೇವತೆಗಳೆಲ್ಲ ಒಟ್ಟಾಗಿ ಸೇರಿ ವಿಷ್ಣುವನ್ನು ಪ್ರಾರ್ಥಿಸಿ, ಹಿರಣ್ಯಾಕ್ಷನ ಸಮಸ್ಯೆಗೆ ಪರಿಹಾರವನ್ನು ಕೊಡುವಂತೆ ಬೇಡಿಕೊಂಡರು. ಬ್ರಹ್ಮದೇವರ ಮಗನಾದ ಯಜ್ಞನು, ಆ ಮನ್ವಂತರದ ಮನುವಾಗಿದ್ದ. "ತನ್ನ ಸಂತತಿಯನ್ನು ಎಲ್ಲಿಂದ ಆರಂಭಿಸಲಿ?" ಎಂದು ಅವನು ಬ್ರಹ್ಮರನ್ನು ಕೇಳಿದ. ಅವರು ಭೂಲೋಕದಲ್ಲಿ ಆರಂಭಿಸಲು ಹೇಳಿದರು. ಆದರೆ ಈಗ ಭೂದೇವಿಯನ್ನು ಮರಳಿ ಕರೆ ತರುವ ಚಿಂತೆಯು ಬ್ರಹ್ಮ ಹಾಗೂ ಇತರೆ ದೇವತೆಗಳಿಗೆ ಉಂಟಾಯಿತು. ಎಲ್ಲರೂ ಸಹಾಯ ಮಾಡುವಂತೆ, ಮಹಾ ವಿಷ್ಣುವಿನ ಮೊರೆ ಹೋದರು. ಅತ್ತ ಕಡೆ ಭೂಮಾತೆಯು ತನ್ನನ್ನು ಕಾಪಾಡುವಂತೆ ದೇವರ ಮೊರೆ ಹೋದಳು. 


ಸ್ವಲ್ಪ ಸಮಯದ ನಂತರ, ಬ್ರಹ್ಮರ ಮೂಗಿನ ಹೊಳ್ಳೆಯಿಂದ, ಹೆಬ್ಬೆರಳಿನ ತುದಿಯ ಗಾತ್ರದ ಪುಟ್ಟ ಹಂದಿಯೊಂದು ಹೊರಗೆ ಬಂತು. ಅದನ್ನು ನೆಲದ ಮೇಲೆ ಇಟ್ಟ ತಕ್ಷಣ, ಅದು ದಂತಗಳನ್ನು ಹೊಂದಿ ಬೆಳೆಯುತ್ತಲೇ ಹೋಯ್ತು. ಕೊನೆಗೆ ಆಕಾಶದ ಎತ್ತರಕ್ಕೆ ಬೆಳೆದು ನಿಂತಿತ್ತು. "ಇದೂ ಕೂಡ ವಿಷ್ಣುವಿನ ಅವತಾರವೇ ಇರಬೇಕು." ಎಂದುಕೊಂಡು ಬ್ರಹ್ಮಾದಿ ದೇವತೆಗಳು, ಹಾಗೂ ಋಷಿ ಮುನಿಗಳು, ಆ ಹಂದಿಗೆ ನಮಸ್ಕರಿಸಿ, ಅನೇಕ ಸ್ತೋತ್ರಗಳನ್ನು ಹಾಡಿದರು. 


ಎಲ್ಲರ ಕಡೆಗೂ ಒಮ್ಮೆ ನೋಡಿದ ವರಾಹ ಸ್ವಾಮಿಯು, ಜೋರಾಗಿ ಘರ್ಜಿಸಿ, ಸೀದಾ ಸಮುದ್ರಕ್ಕೆ ಧುಮುಕಿದರು. ಸಮುದ್ರವನ್ನು ವಿಭಜಿಸಿ ಭೂದೇವಿಯನ್ನು ಹುಡುಕಲು ಆರಂಭಿಸಿದರು.  ಸ್ವಲ್ಪ ಸಮಯದಲ್ಲೇ ಸಾಗರದ ಆಳದಲ್ಲಿ ಹಿರಣ್ಯಾಕ್ಷ ನಿಂದ ಸುತ್ತುವರೆಯಲ್ಪಟ್ಟ ಭೂಮಿಯು ಕಾಣಿಸಿತು. ತನ್ನ ದಂತಗಳಲ್ಲಿ ಭೂಮಿಯನ್ನು ಎತ್ತಿ ಹಿಡಿದ ವರಾಹ ಸ್ವಾಮಿಯು, ತನ್ನ ಮೇಲೆ ಆಕ್ರಮಣ ಮಾಡಿದ ಅಸುರನೊಡನೆ ಕೆಲಕಾಲ ಸೆಣಸಿ, ಅವನನ್ನು ತನ್ನ ದಾಡೆಗಳಿಂದ ತಿವಿದು ಕೊಂದರು. ಭೂಮಿಯನ್ನು ದಾಡೆಗಳಲ್ಲಿ ಎತ್ತಿಕೊಂಡು ಬಂದು ಭೂಮಿಯ ಮೇಲ್ಮೈ ನಲ್ಲಿ ಮೊದಲಿನಂತೆ ತೇಲಿ ಬಿಟ್ಟರು.  ಅವರು ಸಮುದ್ರದಿಂದ ಮೇಲಕ್ಕೆದ್ದು ಬಂದಾಗ ದಂತಗಳು ರಕ್ತಮಯವಾಗಿದ್ದವು. ದೇವ ದೇವತೆಗಳು ನೋಡುನೋಡುತ್ತಿದ್ದಂತೆ ತನ್ನ ವೈಕುಂಠಕ್ಕೆ ಪ್ರಯಾಣ ಬೆಳೆಸಿದರು.


Varaha avatar


ಹೀಗೆ, ಭೂದೇವಿಯನ್ನು ರಾಕ್ಷಸನ ಬಂಧನದಿಂದ ಬಿಡುಗಡೆ ಗೊಳಿಸಲು, ಮಹಾವಿಷ್ಣು ದೇವರು ಒಂದು ಮನುಷ್ಯ ದೇಹದ ಹಂದಿಯ ಮುಖದ ಅವತಾರವನ್ನು ಎತ್ತಿದರು. ಕೆಲವು ಕತೆಗಳು, "ಭಗವಂತ ಸಂಪೂರ್ಣವಾಗಿ ಕಾಡು ಹಂದಿಯ ರೂಪದಲ್ಲಿ ಇದ್ದರು." ಎಂದು ಹೇಳುತ್ತವೆ. ಹಾಗೂ ಮೂರ್ತಿಗಳಲ್ಲಿ ಸಾಮಾನ್ಯವಾಗಿ ನಾಲ್ಕು ಕೈ ಎರಡು ಕಾಲುಗಳು, ಕೈಗಳಲ್ಲಿ ಕೌಮೋದಕಿ ಎಂಬ ಗದೆ, ಸುದರ್ಶನ ಚಕ್ರ, ಕಮಲ ಹಾಗೂ ಪಾಂಚಜನ್ಯ ಎಂಬ ಶಂಖಗಳು ಇರುತ್ತವೆ.


 ಕಥೆಯನ್ನು youtubeನಲ್ಲಿ ವೀಕ್ಷಿಸಿ:





Comments