Skip to main content

ಭಾಗವತದ ಕತೆಗಳು ಭಾಗ 6: ಸತಿಯ ಅಗ್ನಿ ಪ್ರವೇಶ





ಒಂದು ಸಲ ಬ್ರಹ್ಮ ದೇವರಿಗೆ ತನ್ನ ಸೃಷ್ಟಿ ಕಾರ್ಯಕ್ಕೆ ಶಿವನಿಂದ ಸಹಾಯ ಬೇಕು ಅಂತ ಅನ್ನಿಸುತ್ತೆ. ಅದಕ್ಕೋಸ್ಕರ, ಶಕ್ತಿ ದೇವಿಯನ್ನು ಒಂದು ಹೆಣ್ಣು ಮಗುವಿನ ರೂಪದಲ್ಲಿ, ತನ್ನ ಮಗನಾದ ದಕ್ಷ ಪ್ರಜಾಪತಿಯ ಮನೆಯಲ್ಲಿ ಸೃಷ್ಟಿ ಮಾಡ್ತಾರೆ. ದಕ್ಷ ಮತ್ತು ಪ್ರಸೂತಿಯ ಮಗಳಾಗಿ, ಸತಿ ಅಥವಾ ದಾಕ್ಷಾಯಿಣಿ ದೇವಿಯ ಜನನ ಉಂಟಾಗುತ್ತದೆ.

ಬ್ರಹ್ಮ ದೇವರು ದಕ್ಷನನ್ನು ಪ್ರಜೆಗಳ ಕಾನೂನು ಪಾಲಕನಾಗಿ ನೇಮಕ ಮಾಡಿರುತ್ತಾರೆ ಅಂದರೆ ಕಾನೂನು ವಿಚಾರದಲ್ಲಿ ದಕ್ಷನ ಮಾತೇ ಅಂತಿಮವಾಗಿರುತ್ತೆ. ಹಾಗಾಗಿ ಅವನಿಗೆ, "ತಾನೂ ಕೂಡಾ ತ್ರಿಮೂರ್ತಿಗಳಷ್ಟೇ ಸರಿ ಸಮನಾದವನು." ಅನ್ನೋ ಅಹಂಕಾರ ಉಂಟಾಗುತ್ತದೆ.
ಈ ದಕ್ಷನಿಗೆ ಶಿವ ಅಂದ್ರೆ ಆಗುತ್ತಾ ಇರಲಿಲ್ಲ. "ಅವನಿಗೆ ಶಿಸ್ತು ಇಲ್ಲ, ನಾಗರಿಕತೆ ಇಲ್ಲ, ಅವನನ್ನು ಕರೆಯಬೇಕು ಎಂದರೆ ನಾವು ಕೈಲಾಸಕ್ಕೇ ಹೋಗಬೇಕು. ಭಕ್ತರು ಕರೆದರೆ ಮಾತ್ರ ಅವನು ಬರೋದು. ಗುರುಹಿರಿಯರಿಗೆ ಅವನು ಗೌರವ ಕೊಡಲ್ಲ." ಹೀಗೆ ದಕ್ಷನ ಆರೋಪಗಳ ಪಟ್ಟಿಯು ಬೆಳೆಯುತ್ತಾ ಹೋಗುತ್ತದೆ.

ಸತಿಯು ಬೆಳೆದು ದೊಡ್ಡವಳಾದ ನಂತರ, ಅವಳಿಗೆ ಶಿವನ ಮೇಲೆ ಮೋಹ ಉಂಟಾಯಿತು. "ನಾನು ಮದುವೆಯಾದರೆ ಅವನನ್ನೇ ಆಗುವುದು." ಎಂದು ಹಠ ಹಿಡಿದು ಕುಳಿತುಕೊಳ್ಳುತ್ತಾಳೆ. ಇದರಿಂದ ಆತುರವಾಗಿ ಅವಳಿಗೆ ಒಂದು ಸ್ವಯಂವರವನ್ನು ದಕ್ಷ ಏರ್ಪಡಿಸುತ್ತಾನೆ. ಅದಕ್ಕೆ ಬೇಕಂತಲೇ ಶಿವನಿಗೆ ಆಹ್ವಾನವನ್ನು ನೀಡುವುದಿಲ್ಲ. ಅದಲ್ಲದೆ "ಶಿವನಿಗೆ ಅವಮಾನ ಆಗಲಿ." ಎಂದು, ಅವನ ಒಂದು ವಿಗ್ರಹವನ್ನು ನಿರ್ಮಿಸಿ, ಅದನ್ನು ದ್ವಾರಪಾಲಕನಂತೆ ಅರಮನೆಯ ದ್ವಾರದಲ್ಲಿ ಇರಿಸುತ್ತಾನೆ.
ಆದರೆ ಸ್ವಯಂವರಕ್ಕೆ ಬಂದ ಯಾರನ್ನೂ ಆರಿಸದೆ, ಸತಿಯು ನೇರವಾಗಿ ಅರಮನೆಯ ದ್ವಾರಕ್ಕೆ ಹೋಗಿ, ಶಿವನ ಮೂರ್ತಿಗೆ ಮಾಲೆಯನ್ನು ಹಾಕುತ್ತಾಳೆ. ಆ ತಕ್ಷಣ ಶಿವನು ಅಲ್ಲಿ ಪ್ರತ್ಯಕ್ಷನಾಗಿ ಅವಳನ್ನು ತನ್ನ ಮಡದಿಯಾಗಿ ಸ್ವೀಕರಿಸುತ್ತಾನೆ. ಈ ಘಟನೆಯ ನಂತರ ದಕ್ಷನು ಅವರಿಬ್ಬರ ಸಂಪರ್ಕವನ್ನು ಸಂಪೂರ್ಣವಾಗಿ ತೊರೆಯುತ್ತಾನೆ.

***

ಒಂದು ಸಲ ದಕ್ಷ ಒಂದು ಯಾಗವನ್ನು ಮಾಡಲು ತೀರ್ಮಾನ ಮಾಡಿ ಅದಕ್ಕೆ ದೇವಾದಿ ದೇವತೆಗಳನ್ನು ಆಹ್ವಾನಿಸುತ್ತಾನೆ ಆದರೆ ತನ್ನ ಮಗಳು ದಾಕ್ಷಾಯಿಣಿ ಹಾಗೂ ಶಿವನಿಗೆ ಆಹ್ವಾನವನ್ನು ನೀಡುವುದಿಲ್ಲ. ಈ ವಿಷಯ ಸತಿಗೆ ಗೊತ್ತಾಗಿ ತನ್ನ ಪತಿ ಹಾಗೂ ತಂದೆಯ ಮನಸ್ತಾಪವನ್ನು ಹೇಗಾದರೂ ಕೊನೆಗಾಣಿಸಬೇಕೆಂದು ತೀರ್ಮಾನಿಸಿ, ಯಾಗಕ್ಕೆ ಹೊರಟು ನಿಲ್ಲುತ್ತಾಳೆ. ಯಾಗಕ್ಕೆ ಅವಳು ಒಬ್ಬಳನ್ನೆ ಹೋಗಲು ಬಿಡದೆ, ಶಿವನು ಕೆಲವು ಪ್ರಮುಖ ಭೂತಗಣಗಳನ್ನು ಅವಳೊಡನೆ ಕಳುಹಿಸುತ್ತಾನೆ.

ಯಾಗ ಶಾಲೆಗೆ ಬಂದ ಸತಿಯನ್ನು, ದಕ್ಷನು ಮಾತನಾಡಿಸುವುದು ಇರಲಿ, ಅವಳ ಮುಖವನ್ನು ಸಹಾ ನೋಡುವುದಿಲ್ಲ. ಸತಿಯೇ ಅವನನ್ನು ಬಲವಂತದಿಂದ ಮಾತನಾಡಿಸಲು ಪ್ರಯತ್ನಿಸಿದಾಗ, ಅವನು ಪುನಃ ಶಿವನ ನಿಂದನೆಯನ್ನು ಪ್ರಾರಂಭಿಸುತ್ತಾನೆ.ತನ್ನ ಪತಿಯ ತೆಗಳಿಕೆಯನ್ನು ಸಹಿಸಲಾರದೆ, "ತಾನಿನ್ನೂ ಬದುಕಿದ್ದು ಪ್ರಯೋಜನವಿಲ್ಲ." ಎಂದುಕೊಂಡು ದಾಕ್ಷಾಯಿಣಿಯು ಅಲ್ಲೇ ಉರಿಯುತ್ತಿದ್ದ ಅಗ್ನಿಕುಂಡಕ್ಕೆ ಹಾರಿ ತನ್ನ ಪ್ರಾಣವನ್ನು ತ್ಯಾಗ ಮಾಡುತ್ತಾಳೆ.

ದಾಕ್ಷಾಯಿಣಿ ಜೊತೆಗೆ ಬಂದಿದ್ದ ಭೂತ ಗಣಗಳು ದಕ್ಷನನ್ನು ಕೊಲ್ಲಲು ತಮ್ಮ ಆಯುಧಗಳನ್ನು ಹೊರ ತೆಗೆಯುತ್ತಾರೆ. ಈಗ "ತಮಗೆ ಅಪಾಯವಿದೆ." ಎಂದು ಅರಿತ ಭೃಗು ಋಷಿಯು ತನ್ನ ಮಂತ್ರ ಶಕ್ತಿಯಿಂದ ರಿಭುಗಳು ಎಂಬ ದೇವತೆಗಳನ್ನು ಸೃಷ್ಟಿಸಿ ಶಿವಗಣಗಳನ್ನು ಯುದ್ಧದಲ್ಲಿ ಸೋಲಿಸುತ್ತಾರೆ. ಪರಾಜಯ ಹೊಂದಿದ ಗಣಗಳು ಕೈಲಾಸಕ್ಕೆ ಓಡುತ್ತಾರೆ.


ಸತಿಯ ಅಗ್ನಿಪ್ರವೇಶ

"ಈ ಘಟನೆಯನ್ನು ಹೇಗಾದರೂ ಶಿವನಿಗೆ ತಿಳಿಸಬೇಕೆಂದು" ನಾರದ ಮಹರ್ಷಿಗಳು ಕೈಲಾಸಕ್ಕೆ ಹೋಗಿ, ಈಶ್ವರನ ಬಳಿ ನಡೆದ ವಿಷಯವನ್ನು ತಿಳಿಸುತ್ತಾರೆ. ತನ್ನ ಮಡದಿಯ ಸಾವಿನ ಸುದ್ದಿಯನ್ನು ಕೇಳಿ, ಪರಶಿವನು ಕೋಪದಿಂದ ತನ್ನ ಹಲ್ಲು ಮುಟ್ಟೆಯನ್ನು ಕಚ್ಚಿ, ತನ್ನ ಒಂದು ಕೂದಲೆಳೆಯನ್ನು ಕಿತ್ತು ನೆಲದ ಮೇಲೆ ಇಟ್ಟ.ಅದು ಬೆಂಕಿಯಂತೆ ಪ್ರಜ್ವಲಿಸಿ, ಅದರಿಂದ ಒಂದು ವ್ಯಕ್ತಿಯ ಜನನ ಉಂಟಾಯಿತು, ಕಪ್ಪಗಿನ ರಾಕ್ಷಸನಂತೆ ಕಾಣುವ ಆ ವ್ಯಕ್ತಿ ಕೋರೆದಾಡೆಗಳನ್ನು ಹೊಂದಿದ್ದ. ಅವನು ಆಕಾಶದೆತ್ತರಕ್ಕೆ ಬೆಳೆದು ನಿಂತು ಪರ ಶಿವನಿಗೆ ಕೈಮುಗಿದ. "ಅಪ್ಪಣೆ ಕೊಡಿ ತಂದೆ." ಎಂದ. "ನೀನು ವೀರಭದ್ರ. ನನ್ನ ಭೂತ ಗಣಗಳ ನಾಯಕ. ನೀನು ಕೂಡಲೇ ದಕ್ಷ ಯಾಗವನ್ನು ನಡೆಸುವ ಜಾಗಕ್ಕೆ ಹೋಗಿ ಅವನನ್ನು ಕೊಲ್ಲು.” ಎಂದು ಶಿವ ಆಜ್ಞೆ ಮಾಡಿದ.

ವೀರಭದ್ರ ತಕ್ಷಣ ಉಳಿದ ಭೂತ ಗಣಗಳೊಡನೆ ಸೇರಿ, ಶೂಲ ಮುಂತಾದ ಭಯಂಕರ ಆಯುಧಗಳೊಂದಿಗೆ ಯಾಗ ಶಾಲೆಯ ಕಡೆಗೆ ಹೋದ. ದಕ್ಷನಿಗೆ ಇವರು ಯಾಗ ಶಾಲೆಯನ್ನು ತಲುಪುವ ಮೊದಲೇ ಅಪಶಕುನಗಳು ಎದುರಾಗಿದ್ದವು. ಕೆಲಕ್ಷಣದಲ್ಲೇ ವೀರಭದ್ರ ಹಾಗೂ ಸಂಗಡಿಗರು, ಯಾಗ ಶಾಲೆಯನ್ನು ತಲುಪಿ, ತಮ್ಮ ಮಾಯೆಯಿಂದ ಕತ್ತಲನ್ನು ಸೃಷ್ಟಿಸಿದರು. ಯಜ್ಞವನ್ನು ನಾಶ ಮಾಡಿ, ಅಲ್ಲಿನ ಕಂಬಗಳನ್ನು ಮುರಿದರು, ದೇವತೆಗಳನ್ನು ಸೆರೆ ಹಿಡಿದರು. ಪಾತ್ರೆ ಮಡಿಕೆಗಳನ್ನು ಒಡೆದರು. ಅಲ್ಲೆಲ್ಲಾ ಮೂತ್ರ ವಿಸರ್ಜನೆಯನ್ನು ಮಾಡಿದರು. ಹಾಗೂ ಯಾರೂ ತಪ್ಪಿಸಿಕೊಂಡು ಓಡದಂತೆ ಮುಖ್ಯದ್ವಾರವನ್ನು ಮುಚ್ಚಿದರು.

ಮಣಿಮಾನ ಎಂಬ ಶಿವಗಣ, ಭೃಗು ಋಷಿಯನ್ನು ಸೆರೆಹಿಡಿದನು. ದಕ್ಷನನ್ನು ಹಿಡಿದ ವೀರಭದ್ರ, ಅವನ ಹಲ್ಲುಗಳನ್ನು ಕಿತ್ತು, ಯಾಗಕ್ಕೆ ಮೇಕೆಯನ್ನು ಬಲಿಕೊಡುವ ಕತ್ತಿಯಿಂದ ಅವನ ರುಂಡವನ್ನು ಕತ್ತರಿಸಿ, ಯಜ್ಞದ ದಕ್ಷಿಣ ದಿಕ್ಕಿಗೆ ಎಸೆದ. ಅದಲ್ಲದೆ ಭೃಗು ಋಷಿಯ ಗಡ್ಡ-ಮೀಸೆಗಳನ್ನು ಕಿತ್ತು, ಭಗ ಎಂಬ ದೇವತೆಯ ಕಣ್ಣುಗಳನ್ನು ಕಿತ್ತು ಹಾಕಿದ. ನಂತರ ಯಾಗ ಶಾಲೆಯನ್ನು ಸಂಪೂರ್ಣವಾಗಿ ಬೆಂಕಿಗೆ ಆಹುತಿ ಮಾಡಿ, ಕೈಲಾಸಕ್ಕೆ ವೀರಭದ್ರ ಹಾಗೂ ಗಣಗಳು ಮರಳಿದರು.

ಇದಾದ ನಂತರ ಯಾಗ ಶಾಲೆಯಲ್ಲಿ ಅಳಿದುಳಿದ ದೇವತೆಗಳು ಹಾಗೂ ಋಷಿಗಳು ಸೀದಾ ಬ್ರಹ್ಮನ ಬಳಿಗೆ ಹೋದರು. ನಡುಗುತ್ತಿದ್ದ ದೇವತೆಗಳಿಗೆ ಸಮಾಧಾನ ಮಾಡಿ, "ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನಿಗೆ ಆಹ್ವಾನ ಕೊಡದೆ ಇರುವುದು, ಅವನಿಗೆ, ಹವಿಸ್ಸನ್ನು ಅರ್ಪಿಸದೆ ಇರುವುದು ದೊಡ್ಡ ತಪ್ಪು ಅವನಲ್ಲಿ ಕ್ಷಮೆ ಯಾಚಿಸಿ." ಎಂದ ಬ್ರಹ್ಮ, ಸೀದಾ ಅವರನ್ನು ಕೈಲಾಸಕ್ಕೆ ಕರೆದುಕೊಂಡು ಹೋಗ್ತಾರೆ.

ಹೀಗೆ ಕೈಲಾಸಕ್ಕೆ ಬಂದ ದೇವತೆಗಳಿಗೆ ಅಲ್ಲಿನ ಸೌಂದರ್ಯವನ್ನು ಕಂಡು ಆಶ್ಚರ್ಯ ಎನಿಸಿತ್ತು. ಇದು ಮಾಯಾಲೋಕ ವೇನೋ ಎಂಬಂತೆ ಭಾಸವಾಗಿತ್ತು. ಈ ಕೈಲಾಸ ಪರ್ವತವು ಅಪರೂಪದ ಗಿಡಮೂಲಿಕೆಗಳು, ವೃಕ್ಷಗಳು, ಪ್ರಾಣಿಪಕ್ಷಿಗಳು, ವಿಧವಿಧದ ಹಣ್ಣು ತರಕಾರಿಗಳು, ಖನಿಜ-ಲವಣಗಳು ಇತ್ಯಾದಿಗಳಿಂದ  ತುಂಬಿತ್ತು. ಅಲ್ಲಲ್ಲಿ ಭೋರ್ಗರೆವ ಜಲಪಾತಗಳು ಕಾಣ್ತಾ ಇದ್ದವು. ಈ ರೀತಿಯ ವಿಶಿಷ್ಟ ವಾತಾವರಣದ ಪರಿಣಾಮದಿಂದಾಗಿ ಇಲ್ಲಿ ಹುಟ್ಟುವವರು, ದೈವಿಕ ಶಕ್ತಿ ಉಳ್ಳವರು, ಗಂಧರ್ವರು, ಇಲ್ಲವೇ ಅಪ್ಸರೆಯರು ಆಗಿರುತಿದ್ದರು.ಇಲ್ಲಿ ಹರಿಯುವ ಅಲಕಾನಂದ ನದಿಯಲ್ಲಿ, ಸತಿಯು ಯಾವಾಗಲೂ ಸ್ನಾನ ಮಾಡುತಿದ್ದಳು.

ಇವುಗಳನೆಲ್ಲಾ ನೋಡಿದ ದೇವತೆಗಳು, ಕೊನೆಗೂ ಎಂಟು ನೂರು ಮೈಲಿ ಎತ್ತರ, ಹಾಗೂ ಆರುನೂರು ಮೈಲಿ ಅಗಲದ ದೊಡ್ಡ ಆಲದ ಮರದ ಕೆಳಗೆ ಕುಳಿತಿದ್ದ ಶಿವನನ್ನು ಕಂಡರು. ಶಿವನಿಗೆ ಬ್ರಹ್ಮ ಹಾಗೂ ಇತರೆ ದೇವತೆಗಳು ಕೈಮುಗಿದರು. ಆಗ ಧ್ಯಾನದಿಂದ ಎದ್ದ ಶಿವನು, "ಏನಾಯ್ತು ಬ್ರಹ್ಮ ದೇವರೇ?” ಎಂದು ಕೇಳಿದನು. ಬ್ರಹ್ಮ ನಡೆದ ವಿಷಯವನ್ನು ವಿವರಿಸಿದರು. ಎಲ್ಲರ ಮಾತನ್ನು ಆಲಿಸಿದ ನಂತರ, ಶಿವನು ಹೇಳಿದನು.

“ದೇವತೆಗಳು ಮಗುವಿನ ಸ್ವಭಾವದವರು, ಅವರನ್ನು ಬೇಕಾದರೆ ನಾನು ಕ್ಷಮಿಸುತ್ತೇನೆ. ಆದರೆ, ದಕ್ಷನಿಗೆ ಜೀವ ಬರಬೇಕು ಎಂದರೆ ಅವನಿಗೆ ಯಾಗಕ್ಕೆ ಬಲಿಕೊಡಲು ತಂದ ಆಡಿನ ತಲೆಯನ್ನು ಜೋಡಿಸಿ. ಭಗನು ಕಣ್ಣನ್ನು ಕಳೆದು ಕೊಂಡಿದ್ದಾನೆ. ಅವನು ಮಿತ್ರ ಎಂಬುವವನ ಸಹಾಯದಿಂದ ಇನ್ನು ಮುಂದೆ ನೋಡಬೇಕು. ಹಲ್ಲನ್ನು ಕಳೆದುಕೊಂಡ ಪೂಶನು ಇನ್ನುಮುಂದೆ ಹಿಟ್ಟನ್ನು ತಿನ್ನಬೇಕು. ಹಾಗೂ ಗಡ್ಡ ಮೀಸೆಗಳನ್ನು ಕಳೆದುಕೊಂಡ ಭೃಗು ಋಷಿಗೆ ಮೇಕೆಯ ಗಡ್ಡವನ್ನು ಜೋಡಿಸಿ.” ಎಂದನು.
ಶಿವನ ಮಾತಿನಿಂದ ಬಹಳಷ್ಟು ಸಮಾಧಾನವನ್ನು ಹೊಂದಿದ ದೇವತೆಗಳು “ಮುಂದಿನ ಯಾಗಕ್ಕೆ ತಾವು ಬರಬೇಕು.” ಎಂದು ಆಹ್ವಾನ ನೀಡಿ, ಅಲ್ಲಿಂದ ಹೋದರು.

***

ಭೃಗು ಋಷಿಯ ನೇತೃತ್ವದಲ್ಲಿ, ಶಿವನ ಮಾರ್ಗದರ್ಶನದಂತೆ ಒಂದು ಯಾಗವನ್ನು ಮಾಡಲಾಯಿತು. ಆ ಯಜ್ಞದ ಕೊನೆಯಲ್ಲಿ, ದಕ್ಷನಿಗೆ ಆಡಿನ ತಲೆಯನ್ನು ಜೋಡಿಸಲಾಯಿತು. ಅವನು ನಿದ್ದೆಯಿಂದ ಎದ್ದಂತೆ ಎದ್ದು ಕುಳಿತ. ಶಿವನಲ್ಲಿ ಕ್ಷಮೆ ಯಾಚಿಸಿ, ತನ್ನ ಅಗ್ನಿ ಪ್ರವೇಶವನ್ನು ಹೊಂದಿದ ಮಗಳ ಬಗ್ಗೆ ಯೋಚಿಸಿ, ಅಳತೊಡಗಿದ. ಸ್ವಲ್ಪ ಸಮಯದಲ್ಲಿ ಸಮಾಧಾನವನ್ನು ಹೊಂದಿ ಸುಮ್ಮನೆ ನಿಂತುಕೊಂಡ.

ಎಲ್ಲರೂ ಅಲ್ಲಿಂದ ವೀರಭದ್ರನು ನಾಶ ಮಾಡಿದ್ದ ಯಾಗ ಶಾಲೆಗೆ ಹೋಗಿ, ಅದನ್ನು ಶುದ್ಧಗೊಳಿಸಿ ಪುನಃ ಅರ್ಧಕ್ಕೆ ನಿಂತಿದ್ದ ಯಾಗವನ್ನು ಆರಂಭಿಸಿದರು. ಈಗ ದಕ್ಷನು ಮಂತ್ರವನ್ನು ಹೇಳುತ್ತಾ ಅಹುತಿಯನ್ನು ನೀಡಿದಾಗ, ಸ್ವತಃ ಮಹಾ ವಿಷ್ಣು ಯಜ್ಞದಲ್ಲಿ ಪ್ರತ್ಯಕ್ಷನಾದನು. ಎಲ್ಲರೂ ವಿಷ್ಣುವಿಗೆ ಕೈಮುಗಿದರು.






Comments