Skip to main content

ಭಾಗವತದ ಕಥೆಗಳು ಭಾಗ 7 : ವೇನ ರಾಜನ ಕಥೆ






ವಿಷ್ಣುವಿನ ವರಪಡೆದು ನಕ್ಷತ್ರವಾದ, ಮಹಾರಾಜ ಧ್ರುವನ ವಂಶಸ್ಥರಲ್ಲಿ ಅಂಗ ರಾಜನೂ ಒಬ್ಬ. ಸುನೀತ ಇವನ ಪತ್ನಿ.
ಒಮ್ಮೆ ಮಹಾರಾಜ ಅಂಗನು ಅಶ್ವಮೇಧ ಯಾಗವನ್ನು ಆರಂಭಿಸಿದನು. ಆದರೆ, ಎಷ್ಟು ಬಾರಿ ಆಹ್ವಾನ ನೀಡಿದರೂ, ಯಜ್ಞದ ಹವಿಸ್ಸನ್ನು ಸ್ವೀಕರಿಸಲು ದೇವತೆಗಳು ಬರುವುದಿಲ್ಲ. ನೊಂದ ಅಂಗರಾಜನು, ಇದಕ್ಕೆ ಕಾರಣವನ್ನು ಕಂಡುಹಿಡಿಯುವಂತೆ, ತನ್ನ ಪುರೋಹಿತರಲ್ಲಿ ಕೇಳಿಕೊಂಡ.

ಇತರ ಪುರೋಹಿತರೊಂದಿಗೆ ಚರ್ಚೆಯನ್ನು ನಡೆಸಿದ ನಂತರ ಮುಖ್ಯ ಪುರೋಹಿತರು ರಾಜನಿಗೆ ಕಾರಣವನ್ನು ತಿಳಿಸಿದರು.ಅವರ ಪ್ರಕಾರ,ಅಂಗರಾಜನು ತನ್ನ ಪೂರ್ವಜನ್ಮದಲ್ಲಿ ಮಾಡಿದ ಪಾಪದ ಫಲವೇ, ದೇವತೆಗಳು ಹವಿಸ್ಸನ್ನು ಸ್ವೀಕರಿಸದಿರಲು ಹಾಗೂ ರಾಜನಿಗೆ ಸಂತಾನ ಇಲ್ಲದಿರಲು ಕಾರಣ ಎಂದರು. ಸಂತಾನವನ್ನು ಪಡೆಯಲು ಏನು ಮಾಡಬೇಕೆಂದು ರಾಜನು ಮರುಪ್ರಶ್ನೆ ಮಾಡಿದಾಗ, ವಿಷ್ಣುವಿನ ಮೊರೆಯನ್ನು ಹೋಗುವಂತೆ, ಅವರು ಉತ್ತರಿಸಿದರು.

ಅತೀ ಶೀಘ್ರದಲ್ಲೇ ರಾಜನೂ ಪುತ್ರನನ್ನು ಪಡೆಯುವ ಬಯಕೆಯಿಂದ, ವಿಷ್ಣುವನ್ನು ಒಲಿಸಲು ಒಂದು ಯಾಗವನ್ನು ಮಾಡಿದನು. ಪೂರ್ಣಾಹುತಿಯ ಸಮಯದಲ್ಲಿ ಬಂಗಾರದ ಮಾಲೆ, ಬಿಳಿ ಬಣ್ಣದ ವಸ್ತ್ರಗಳನ್ನು ಧರಿಸಿದ ಒಬ್ಬ ಪುರುಷನು ಯಜನದಲ್ಲಿ ಪ್ರತ್ಯಕ್ಷ ನಾದನು. ಅವನ ಕೈಯಲ್ಲಿನ ಮಡಕೆಯಲ್ಲಿ ಹಾಲನ್ನದ ಪಾಯಸವಿತ್ತು. ಅದನ್ನು ರಾಜನಿಗೆ ನೀಡಿದ ವ್ಯಕ್ತಿಯು, ಅಲ್ಲಿಂದ ಮರೆಯಾದನು.

ಆ ಪಾತ್ರೆಯನ್ನು ರಾಜನೂ ತಕ್ಷಣ ತನ್ನ ಮಡದಿಯಾದ ಸುನೀತಗೆ ನೀಡಿದನು. ಬಹಳ ಭಕ್ತಿಯಿಂದ ಅದಕ್ಕೆ ನಮಸ್ಕರಿಸಿ ರಾಣಿಯು ಪಾಯಸದ ಸೇವನೆಯನ್ನು ಮಾಡಿದಳು. ಸ್ವಲ್ಪ ದಿನಗಳಲ್ಲಿಯೇ ಅವಳು ಗರ್ಭವತಿಯಾದಳು.

ನವಮಾಸಗಳ ನಂತರ ಮಹಾರಾಣಿ ಸುನೀತಾ ಒಂದು ಸುಂದರ ಗಂಡುಮಗುವಿನ ತಾಯಿಯಾದಳು. ಈಗ ರಾಜ ದಂಪತಿಗಳು ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು.

ಆದರೆ ಆ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ರಾಜಕುಮಾರ ವೇನನು, ಬಹಳ ಕ್ರೂರಿಯಾಗಿದ್ದ. ಯಾವಾಗಲೂ ಕಾಡಿಗೆ ಹೋಗಿ ಸಿಕ್ಕ ಸಿಕ್ಕ ಪ್ರಾಣಿಗಳನ್ನು ಬೇಟೆಯಾಡುವುದು, ಜನರಿಗೆ ಹಿಂಸೆ ಕೊಡುವುದು ಇತ್ಯಾದಿಗಳನ್ನು ಅವನು ಮಾಡತೊಡಗಿದ. ಒಂದು ಬಾರಿ ಆಟದಲ್ಲಿ ತನ್ನನ್ನು ಸೋಲಿಸಿದ ಗೆಳೆಯನನ್ನೂ ಸಹಾ ಅವನು ಕೊಲ್ಲಲು ಹೊರಟಿದ್ದ!

ತನ್ನ ಮಗನ ಸ್ವಭಾವವನ್ನು ತಿದ್ದಲು ರಾಜ ಅಂಗನು ಮೊದಲಿಗೆ ಅವನಿಗೆ ಬುದ್ಧಿವಾದ, ನಂತರ ಅನೇಕ ಕಠಿಣ ಶಿಕ್ಷೆಗಳನ್ನು ನೀಡಿದನು. ಆದರೆ ಬಾಲಕ ವೇನನ ಸ್ವಭಾವವು ಬದಲಾಗಲೇ ಇಲ್ಲ.
ಒಂದು ರಾತ್ರಿ ರಾಜ ಅಂಗನು, ತನ್ನ ಮಗನ ಬಗ್ಗೆಯೇ ಚಿಂತಿಸುತ್ತಾ ಮಲಗಿದ್ದನು. ಅವನಿಗೆ ಎಷ್ಟು ಹೊತ್ತಾದರೂ ನಿದ್ದೆಯು ಬರಲಿಲ್ಲ. ಬಹಳವಾಗಿ ನೊಂದು ಹೋಗಿದ್ದ ರಾಜನು, ಮಲಗಿದ್ದಲ್ಲಿಂದ ಎದ್ದು ಶಬ್ದ ಮಾಡದೇ, ತಲೆಗೆ ಮುಸುಕು ಹಾಕಿಕೊಂಡು, ಕಾಡಿನ ಕಡೆಗೆ ಹೋದನು.

ಮಾರನೆಯ ದಿನದಿಂದ ಎಲ್ಲರೂ ರಾಜನನ್ನು ಹುಡುಕಲು ಅರಂಭಿಸಿದರು. ಎಷ್ಟೇ ಪ್ರಯತ್ನಿಸಿದರೂ ಅಂಗ ರಾಜನ ಸುಳಿವು ಎಲ್ಲಿಯೂ ಸಿಗಲಿಲ್ಲ.

***

ಈಗ ಅರಸನಿಲ್ಲದ ಸಾಮ್ರಾಜ್ಯದಲ್ಲಿ ಅರಾಜಕತೆಯು ಉಂಟಾಗಿತ್ತು. ಅಡಷ್ಟು ಬೇಗ ಇನ್ನೊಬ್ಬ ರಾಜನನ್ನು ಸಿಂಹಾಸನದಲ್ಲಿ ಕೂರಿಸಬೇಕಿತ್ತು. ಭೃಗು ಋಷಿಯ ನೇತೃತ್ವದಲ್ಲಿ ಮಂತ್ರಿಗಳು ತುರ್ತು ಸಭೆಯನ್ನು ಕರೆದರು. ಮಹಾರಾಣಿ ಸುನೀತಾಳೊಂದಿಗೆ ಚರ್ಚಿಸಿ, ವೇನನನ್ನು ರಾಜನನ್ನಾಗಿ ಮಾಡಲಾಯಿತು. ಇದಕ್ಕೆ ಹಲವು ಆಸ್ಥಾನಿಕರು ಆಕ್ಷೇಪಣೆಯನ್ನು ವ್ಯಕ್ತ ಪಡಿಸಿದರು.

ಅರಸನಾದ ವೇನನು, ತುಸುದಿನಗಳಲ್ಲಿಯೇ, “ಪುರೋಹಿತರು ಯಾರೂ ತನ್ನ ಸಾಮ್ರಾಜ್ಯದಲ್ಲಿ ದೇವರ ಪೂಜೆಯನ್ನು ಮಾಡಬಾರದು. ಎಲ್ಲರಿಗಿಂತ ರಾಜನೇ ಸರ್ವ ಶ್ರೇಷ್ಟ. ನೀವೆಲ್ಲರೂ ನನ್ನ ಪೂಜೆ ಮಾಡಿ.” ಎಂದನು. ನಂತರ “ರಾಜ್ಯದಲ್ಲಿ ಎಲ್ಲಾ ಧಾರ್ಮಿಕ ಆಚರಣೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ” ಎಂದು ಡಂಗೂರ ಸಾರಿಸಿದನು.

King vena
ವೇನ ರಾಜ



ಹೀಗೆ ರಾಜನು ಅಧರ್ಮಿಯಾದ ತಕ್ಷಣ ರಾಜ್ಯದಲ್ಲಿ ಕಳ್ಳ ಕಾಕರ, ರಾಕ್ಷಸರ ಸಮಸ್ಯೆಯು ಆರಂಭವಾಗಿತ್ತು. ಹೀಗಾಗಿ ಪ್ರಜೆಗಳು ಭಯಭೀತರಾಗಿ ಬದುಕತೊಡಗಿದ್ದರು.

ಎಲ್ಲಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಮ್ರಾಜ್ಯದಲ್ಲಿ ನಿಷೇಧ ಹೇರಿದ್ದರೂ ಸಹಾ, ಪುರೋಹಿತರು, ಋಷಿಗಳು ಗೌಪ್ಯ ಸ್ಥಳಗಳಲ್ಲಿ ತಮ್ಮ ಪೂಜೆಗಳನ್ನೂ, ಯಜ್ಞಗಳನ್ನು ನಡೆಸುತ್ತಲೇ ಬರುತಿದ್ದರು. ಅದಲ್ಲದೆ ಆಗಾಗ ಗುಟ್ಟಾಗಿ ಸೇರಿ ಸಭೆಗಳನ್ನು ಕರೆಯುತ್ತಿದ್ದರು. ಆದರೆ ಬರುಬರುತ್ತಾ ಸಾಮ್ರಾಜ್ಯದ ಪರಿಸ್ಥಿತಿಯು ಹದ ಗೆಟ್ಟಿತೇ ಹೊರತು ಸುಧಾರಿಸಲಿಲ್ಲ!.
ಹೀಗೆ ಬಿಟ್ಟರೆ ಅಪಾಯವೂ ತಪ್ಪಿದ್ದಲ್ಲ ಎಂದು, ಎಲ್ಲಾ ಋಷಿಗಳು ಹಾಗೂ ಪ್ರಮುಖ ಅಸ್ಥಾನಿಕರು ಒಟ್ಟಾಗಿ ಸೇರಿ ರಾಜನಿಗೆ ಕೊನೆಯ ಬಾರಿ ಬುದ್ಧಿವಾದವನ್ನು ಹೇಳುವ ತೀರ್ಮಾನವನ್ನು ಮಾಡಿದರು.

ಮಾರನೆಯ ದಿನವೇ ರಾಜ ವೇನನ ಆಸ್ಥಾನಕ್ಕೆ ಹೋಗಿ, “ರಾಜನಾದವನು ಧರ್ಮವನ್ನು ಕಾಪಾಡಬೇಕು. ಪ್ರಜೆಗಳ ರಕ್ಷಣೆ ಮಾಡಬೇಕು ಹಾಗೂ ಯಜ್ಞ ಯಾಗಾದಿಗಳ ಮೂಲಕ ದೇವತೆಗಳನ್ನು ಸಂತೋಷ ಪಡಿಸಿ, ರಾಜ್ಯದಲ್ಲಿ ಸುಭಿಕ್ಷ ನೆಲೆಸುವಂತೆ ಮಾಡಬೇಕು. ಇದು ನಿಮ್ಮ ಕರ್ತವ್ಯ.” ಎಂದು ಋಷಿಗಳು ರಾಜನಿಗೆ ತಿಳಿ ಹೇಳಿದರು.

ಆದರೆ, ರಾಜನು ತನ್ನ ಅಹಂಕಾರವನ್ನು ಬಿಡಲಿಲ್ಲ. “ನನ್ನನ್ನು ಪೂಜಿಸಿ ಸಾಕು. ಯಜ್ಞದ ಹವಿಸ್ಸನ್ನು ದೇವತೆಗಳ ಬದಲು, ನನಗೆ ಅರ್ಪಿಸಿ, ಹಾಗೂ ದೇವರಿಗೆ ಕೊಡುವ ವಸ್ತುಗಳನ್ನು ನನ್ನ ಪಾದಕ್ಕೆ ಹಾಕಿ. ನಿಮ್ಮ ಎಲ್ಲಾ ಕೋರಿಕೆಗಳು ಈಡೇರುತ್ತವೆ.” ಎಂದನು.

ಇನ್ನು ಇವನನ್ನು ಸುಮ್ಮನೆ ಬಿಟ್ಟರೆ ಜಗತ್ತಿಗೆ ಉಳಿವಿಲ್ಲ ಎಂದು ಕೋಪಗೊಂಡ ಋಷಿಮುನಿಗಳು, “ಮೂರ್ಖ! ನೀನು ರಾಜನಾಗಲು ಲಾಯಕ್ಕಲ್ಲ; ಈ ಕೂಡಲೇ ನೀನು ಸತ್ತು ಹೋಗು.” ಎಂದು ಶಪಿಸಿದರು.

ಮರುಕ್ಷಣದಲ್ಲೇ ರಾಜ ವೇನನು, ನಿಂತಲ್ಲೇ ಕುಸಿದು ಮರಣ ಹೊಂದಿದನು. ನಂತರ ಆ ಋಷಿಗಳು ಅಲ್ಲಿ ಒಂದು ಕ್ಷಣವೂ ನಿಲ್ಲದೆ, ತಮ್ಮ ತಮ್ಮ ಜಾಗಗಳಿಗೆ ಹೊರಟು ಹೋದರು.

ವೇನನ ತಾಯಿ ಸುನೀತಾ, ಮಗನ ಸಾವಿನಿಂದ ಬಹಳ ನೊಂದು ಹೋದಳು. ಕಡೆ ಪಕ್ಷ ತನ್ನ ಮಗನ ದೇಹವನ್ನಾದರೂ ಸಂರಕ್ಷಿಸಬೇಕು ಎಂದು ಯೋಚಿಸಿ ಅರಮನೆಯ ಒಂದು ಕೋಣೆಯಲ್ಲಿ ಮೃತದೇಹವನ್ನು ವಿವಿಧ ಹುಲ್ಲುಗಳಿಂದ ಸುತ್ತಿ ಇಟ್ಟಳು. ಹೀಗೆ ಹಲವು ವರ್ಷಗಳು ಕಳೆದವು.
***

ಇತ್ತಕಡೆ ವೇನನ ಸಾವಿಗೆ ಕಾರಣರಾದ ಮುನಿಗಳು ಸರಸ್ವತಿ ನದಿಯಲ್ಲಿ ಸ್ನಾನ ಮಾಡುತಿದ್ದರು. ಈಗ ರಾಜನಿಲ್ಲದೆ ದರೋಡೆ ಕೋರರ ಹಾವಳಿ ಮಿತಿ ಮೀರಿದೆ. ಅಂಗ ರಾಜನ ವಂಶವನ್ನು ಪುನಃ ಮುಂದುವರೆಸಬೇಕು ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಂಡು, ಸ್ನಾನವನ್ನು ಮುಗಿಸಿ, ನೇರವಾಗಿ ಅರಮನೆಯ ಕಡೆಗೆ ಹೊರಟರು.
ಹೀಗೆ ಅರಮನೆಗೆ ಬಂದ ಋಷಿಗಳು ರಾಜಮಾತೆ ಸುನೀತಗೆ ವಂದಿಸಿ, ರಾಜ ವೇನನ ದೇಹವನ್ನು ತಮಗೆ ನೀಡುವಂತೆ ಕೇಳಿ ಪಡೆದರು. ನಂತರ ನದಿಯ ತೀರಕ್ಕೆ ಹೋಗಿ, ಒಂದು ಗುಡಿಸಲಿನಲ್ಲಿ ಅವನ ದೇಹವನ್ನು ಇಟ್ಟು, ವಿಶೇಷ ಉಪಕರಣಗಳನ್ನು ಬಳಸಿ ತಮ್ಮ ಮಂತ್ರಬಲದಿಂದ ವೇನ ರಾಜನ ತೊಡೆಯನ್ನು ಮಂಥನ ಮಾಡಿದರು.

ಈ ವಿಧಾನವು ಮುಗಿದ ನಂತರ ಅವನ ತೊಡೆಯಿಂದ ಒಂದು ಕಪ್ಪಗಿನ ಕುಬ್ಜ ವ್ಯಕ್ತಿಯ ಜನನ ಉಂಟಾಯಿತು. ಅವನ ಅಂಗಾಂಗಗಳು ಸಣ್ಣಗಿದ್ದವು. ಮೂಗು ಚಪ್ಪಟೆಯಾಗಿತ್ತು. ಅವನಿಗೆ “ಬಾಹುಕ” ಎಂದು ಹೆಸರನ್ನು ಇಟ್ಟರು. ಅವನಿಗೆ ವೇನ ರಾಜನು ಮಾಡುತ್ತಿದ್ದ ಎಲ್ಲಾ ಪಾಪ ಕಾರ್ಯಗಳ ಜವಾಬ್ದಾರಿಯನ್ನು ವಹಿಸಿದರು. ಹಾಗೂ ಅವನ ಸಮುದಾಯಕ್ಕೆ 'ನಿಷಾಧರು' ಎಂದು ಕರೆಯಲಾಯಿತು. ಈ ನಿಷಾಧರು ತಮ್ಮ ಕಳ್ಳತನ, ಬೇಟೆ ಇತ್ಯಾದಿ ಕಾರ್ಯಗಳಿಂದಾಗಿ ಕೇವಲ ಕಾಡು, ಬೆಟ್ಟಗಳಲ್ಲಿ ವಾಸ ಮಾಡತೊಡಗಿದರು.

ರಾಣಿ ಸುನೀತಾ, ಮೃತ್ಯುವಿನ (ಸಾವಿನ) ಮಗಳು ಎಂದು ಪದ್ಮ ಪುರಾಣವು  ಹೇಳುತ್ತದೆ. ಆದ್ದರಿಂದ, ರಾಜ ವೇನ ತನ್ನ ಅಜ್ಜನ ವಂಶವಾಹಿಗಳಿಂದ ಎಲ್ಲಾ ಕ್ರೌರ್ಯ ಮತ್ತು ದುಷ್ಟತನವನ್ನು ಪಡೆದುಕೊಂಡನು.























Comments