Skip to main content

ಭಾಗವತದ ಕತೆಗಳು ಭಾಗ 8: ಪೃಥು ರಾಜನ ಕತೆ




ವೇನ ರಾಜನ ಮೃತ ದೇಹವನ್ನು ಪಡೆದುಕೊಂಡ ಋಷಿಗಳು, ಈಗ ತೋಳುಗಳನ್ನು ಕಡೆದರು. ಒಂದು ಸ್ತ್ರೀ ಮತ್ತು ಪುರುಷನ ಜನನವಾಯಿತು. ಇವರಿಬ್ಬರೂ ಸಾಕ್ಷಾತ್ ವಿಷ್ಣು ಹಾಗೂ, ಲಕ್ಷ್ಮಿಯ ಅವತಾರಗಳು ಎಂದು, ಆ ಋಷಿಗಳು ನಂಬಿದರು. ಪುರುಷನಿಗೆ ಪೃಥು ಎಂದೂ, ಸ್ತ್ರೀಗೆ ಅರ್ಚಿ ಎಂದೂ, ಹೆಸರಿಡಲಾಯಿತು. ಪೃಥುವಿಗಾಗಿ, ಆಕಾಶದಿಂದ ಬಿಲ್ಲುಬಾಣ ಮತ್ತು ಕವಚಗಳು ಬಿದ್ದವು.ಇವನ ಜನನದಿಂದಾಗಿ, ವೇನ ರಾಜನಿಗೆ ಸ್ವರ್ಗವು ಪ್ರಾಪ್ತಿಯಾಗಿತ್ತು. ಇವರಿಬ್ಬರೂ ತಕ್ಷಣ ವಿವಾಹವಾಗಿ, ಅವರಿಂದ ವಂಶವು ಮುಂದುವರಿಯುವುದು, ಎಂದು ತೀರ್ಮಾನಿಸಲಾಯಿತು. 

ಈಗ ಋಷಿಗಳು ಪೃಥುವನ್ನು ಕೊಂಡಾಡಿದರು. ಗಂಧರ್ವರು ಗಾಯನವನ್ನು ಮಾಡಿದರು. ಸ್ವರ್ಗದಿಂದ ಈ ಜೋಡಿಗೆ ಪುಷ್ಪವೃಷ್ಟಿಯಾಯಿತು. ಹಾಗೂ ಅಪ್ಸರೆಯರ ನರ್ತನವು, ಇನ್ನಷ್ಟು ಮೆರಗು ನೀಡಿತ್ತು. ಪ್ರಪಂಚದ ಪ್ರತಿಯೊಂದು ಜೀವಿಯೂ ಈ ಜೋಡಿಗೆ, ಉಡುಗೊರೆಯನ್ನ ನೀಡಿತ್ತು.
 
ವರುಷಗಳು ಉರುಳಿದವು. ಒಂದು ಬಾರಿ ತೀವ್ರ ಬರಗಾಲ ಉಂಟಾಗಿತ್ತು. ಜನಸಾಮಾನ್ಯರಿಗೆ, ಒಂದು ಹೊತ್ತಿನ ಊಟಕ್ಕೂ ಧವಸ ಧಾನ್ಯಗಳ ಕೊರತೆ ಉಂಟಾಗಿತ್ತು. ಪ್ರಜೆಗಳ ಈ ಸ್ಥಿತಿಗೆ ನೋವು ಪಟ್ಟ ರಾಜನು, ಭೂಮಿಯನ್ನೇ ನಾಶ ಪಡಿಸಬೇಕೆಂದು ತೀರ್ಮಾನಿಸಿ, ತನ್ನ ರಥವೇರಿ ಹೊರಟನು.ಅವನಿಗೆ ಹೆದರಿದ ಭೂದೇವಿಯು, ಒಂದು ಹಸುವಿನ ವೇಷವನ್ನು ಧರಿಸಿ, ಅಲ್ಲಿಂದ ಓಡ ತೊಡಗಿದಳು.ಅವಳು ಯಾವ ಲೋಕಕ್ಕೆ ಓಡಿದರೂ, ರಾಜನು ಅವಳನ್ನು ಹಿಂಬಾಲಿಸಿ ಹೋಗುತ್ತಿದ್ದ.

ಹಸುವಿನ ರೂಪದ ಭೂದೇವಿಯನ್ನು ಬೆನ್ನಟ್ಟುತ್ತಿರುವ ಪೃಥು ರಾಜ 


ಕೊನೆಗೆ, ತಾನು ಓಡುವುದನ್ನು ನಿಲ್ಲಿಸಿದ ಭೂದೇವಿ, ಅವನಿಗೆ ಶರಣಾಗಿ, ತನ್ನನ್ನು ಕೊಲ್ಲಲು ಕಾರಣವೇನೆಂದು ಕೇಳಿದಳು.
"ನಮಗೆ ಸಾಕಷ್ಟು ಅಹಾರವು ದೊರೆಯುತ್ತಿಲ್ಲ. ನಾವು ನಿನಗೆ, ನೀರು-ಗೊಬ್ಬರ ನೀಡಿದ್ದೇವೆ. ಪ್ರಜೆಗಳು ಆಹಾರವಿಲ್ಲದೆ ಸಾಯುತ್ತಿದ್ದಾರೆ. ನಿನ್ನನ್ನು ಕೊಂದು ನಿನ್ನ ಮಾಂಸವನ್ನು ಹಸಿದ ಜನರಿಗೆ ಹಂಚುತ್ತೇನೆಂದ ರಾಜ.
ಹಸುವಿನ ರೂಪದಲ್ಲಿನ ಭೂದೇವಿಯು, "ನನ್ನನ್ನು ಕೊಲ್ಲುವುದರಿಂದ ಜನರೂ ನಾಶ ಹೊಂದುತ್ತಾರೆ. ನಾನು ಎಲ್ಲಾ ಸಸ್ಯಗಳ ಬೀಜಗಳನ್ನು ನನ್ನೊಳಗಡೆ ಹುದುಗಿಸಿ ಇಟ್ಟಿದ್ದೇನೆ. ನನ್ನ ಹಾಲಿನಿಂದ ಅವುಗಳನ್ನು ಪೋಷಿಸಿ." ಎಂದಳು. ಅದಲ್ಲದೆ, ಅದಕ್ಕಾಗಿ ಕರುವನ್ನು ಹಾಗೂ, ಹಾಲನ್ನು ಸಂಗ್ರಹಿಸಲು ಒಂದು ಮಡಕೆಯನ್ನು ತರುವಂತೆ ಕೇಳಿಕೊಂಡಳು.

ಸ್ವಯಂಭುವ ಮನುವನ್ನು ಕರುವಾಗಿ ಮಾಡಿ, ರಾಜ ಪೃಥುವು ಕರೆದುಕೊಂಡು ಬಂದನು. ಹಾಗೂ ತನ್ನ ಬೊಗಸೆಯಿಂದಲೇ ಹಾಲನ್ನು ತೆಗೆದು, ಎಲ್ಲಾ ಸಸ್ಯಗಳಿಗೂ ಎರೆದನು.ಅದೇ ರೀತಿ ಋಷಿಗಳು ಬೃಹಸ್ಪತಿಯನ್ನ ಕರುವಾಗಿಸಿ, ಇಂದ್ರಿಯಗಳನ್ನು ಮಡಕೆಯಾಗಿಸಿದರು. ದೇವರಾಜ ಇಂದ್ರನು ದೇವತೆಗಳ ಕರುವಾದನು. ರಾಕ್ಷಸರು, ಹಿರಣ್ಯ ಕಷಿಪುವಿನ ಮಗ ಪ್ರಹ್ಲಾದನನ್ನು, ಕರುವನ್ನಾಗಿ ಮಾಡಿದರು, ಮದ್ಯವನ್ನು ಪಡೆದು ಕಬ್ಬಿಣದ ಮಡಿಕೆಗೆ ಹಾಕಿದರು. ಅದೇ ರೀತಿ ರುದ್ರದೇವನು, ಅಸುರರು ಭೂತಗಳ ಕರುವಾಗಿ, ರಕ್ತದ ಪಾನೀಯಗಳನ್ನು ಅವರಿಗೆ ನೀಡಿದನು. ಅದನ್ನವರು ತಲೆಬುರುಡೆಯ ಮಡಿಕೆಯಲ್ಲಿ ಶೇಖರಿಸಿದರು. ಈ ಪ್ರಕ್ರಿಯೆಯಲ್ಲಿ ಬೇರೆ ಬೇರೆ ಜೀವಿಗಳು ನಿರ್ದಿಷ್ಟ ಪಾತ್ರೆಗಳನ್ನು ತಂದು, ತಮಗೆ ಬೇಕಾದನ್ನು ಪಡೆದರು.

ಹೀಗೆ ಎಲ್ಲರ ಬಯಕೆಗಳನ್ನು ಈಡೇರಿಸಿದ ರಾಜನು, ಭೂಮಿಯ ಕಡೆಗೆ ನೋಡಿದನು. ಬಾಣಗಳನ್ನು ಹೂಡಿ, ಬೆಟ್ಟ ಬಂಡೆಗಳನ್ನು ಚೂರು ಚೂರು ಮಾಡಿ ಸಮತಟ್ಟು ಗೊಳಿಸಿದನು. ಬೇರೆ ಬೇರೆ ಸಮುದಾಯಗಳಿಗೆ ಸಹಕಾರಿಯಾಗುವಂತೆ, ಹಳ್ಳಿ ಪಟ್ಟಣಗಳನ್ನು ರಾಜನು ರಚಿಸಿದನು. ಈ ರೀತಿ ಸಾಮ್ರಾಜ್ಯದ ಸುಭಿಕ್ಷಕ್ಕೆ ಕಾರಣನಾದನು. ಹಾಗೂ ಅವನಿಂದ ಮರುಜನ್ಮ ಸಿಕ್ಕಿ, ಮಗಳ ಸ್ಥಾನವನ್ನು ಹೊಂದಿದ ಭೂದೇವಿಯು, ಪೃಥ್ವಿ ಎಂಬ ಹೆಸರನ್ನು ಪಡೆದಳು.

***

ಒಂದು ಬಾರಿ ಪೃಥುರಾಜನು, ಸರಸ್ವತಿ ನದಿಯ ಪೂರ್ವಭಾಗದ, ಬ್ರಹ್ಮಾವರ್ತ ಎಂಬ ಪ್ರದೇಶದಲ್ಲಿ, ನೂರನೆಯ ಅಶ್ವಮೇಧ ಯಾಗವನ್ನು ಆರಂಭಿಸಿದನು. ಅದಕ್ಕೆ ಸನಕಾದಿ ಋಷಿ ಕುಮಾರರು ಬಂದಿದ್ದರು.ಈ ಯಾಗವು ನಡೆದರೆ, ಪೃಥುವು ತನಗಿಂತ ಬಲಶಾಲಿಯಾಗುತ್ತಾನೆ, ಎಂದು ಭಯಗೊಂಡ ಇಂದ್ರನು, ಯಜ್ಞದ ಕುದುರೆಯನ್ನು ಕದ್ದೊಯ್ದನು.ಅದನ್ನು ಕಂಡ ಅತ್ರಿ ಮುನಿಯು ರಾಜನಿಗೆ ವಿಷಯ ಮುಟ್ಟಿಸಿದನು. ಇಂದ್ರನನ್ನು ಕೊಲ್ಲುವಂತೆ ಪೃಥುವು ತನ್ನ ಮಗ ವಿಜಿತಾಷ್ವನಿಗೆ ತಿಳಿಸಿದನು.ಅವನನ್ನು ಹಿಂಬಾಲಿಸಿಕೊಂಡು ರಾಜಕುಮಾರನು ಹೊರಟನು. ಇಂದ್ರನು ತಕ್ಷಣ ಸನ್ಯಾಸಿಯ ವೇಷ ಧರಿಸಿದನು. ಅವನನ್ನು ಪುನಃ ಗುರುತಿಸಿದ ಅತ್ರಿ ಋಷಿಯು ಮತ್ತೊಮ್ಮೆ ಹಿಂಬಾಲಿಸಲು ಹೇಳಿದನು. ಈ ಬಾರಿ ವಿಜಿತಾಷ್ವನು ಬಾಣವನ್ನು ಹೂಡಿಯೇ ಬಿಟ್ಟನು. 
ಬಾಣಕ್ಕೆ ಹೆದರಿದ ಇಂದ್ರನು, ರಾಜನ ಯಾಗ ಶಾಲೆಗೆ ಬಂದು, ಕುದುರೆಯನ್ನು ಹಿಂದಿರುಗಿಸಿ, ಪೃಥು ರಾಜನ ಕಾಲಿಗೆ ಬಿದ್ದು ಕ್ಷಮೆಯನ್ನು ಯಾಚಿಸಿದನು.
ಆದರೆ ಬ್ರಹ್ಮನು ಅಲ್ಲಿ ಪ್ರತ್ಯಕ್ಷನಾಗಿ, "ಯಜ್ಞದ ಹವಿಸ್ಸನ್ನು ಇಂದ್ರ ಹಾಗೂ ದೇವತೆಗಳೇ ಸ್ವೀಕರಿಸುವುದು. ಇಂದ್ರನನ್ನು ಕೊಲ್ಲುವುದು ನ್ಯಾಯ ಸಮ್ಮತವಲ್ಲ. ನೀನು ಕೂಡಲೇ, ಈ ನೂರನೆಯ ಯಜ್ಞವನ್ನು ನಿಲ್ಲಿಸು." ಎಂದನು. ಹಾಗೂ ರಾಜನು, ಅದಕ್ಕೆ ತಕ್ಷಣ ಸಮ್ಮತಿಸಿದನು.
ಕೆಲವು ವರುಶಗಳಲ್ಲಿ ರಾಜನು, ತನ್ನ ಮಗನನ್ನು ಪಟ್ಟಕ್ಕೇರಿಸಿ, ವಿಷ್ಣುವನ್ನು ಧ್ಯಾನಿಸುತ್ತಾ ತನ್ನ ದೇಹತ್ಯಾಗವನ್ನು ಮಾಡಿದನು.



Comments