![]() |
ಬ್ರಹ್ಮ, ಪ್ರಚೇತರು ಹಾಗೂ ಮಾರೀಶಾ |
ಮಹಾರಾಜ ಪೃಥು ಹಾಗೂ ಮಗ ವಿಜಿತಾಶ್ವನ ಕಥೆಯನ್ನು, ಹಿಂದಿನ ಸಂಚಿಕೆಗಳಲ್ಲಿ ನಾವು ನೋಡಿದೆವು. ಇವತ್ತಿನ ಸಂಚಿಕೆಯಲ್ಲಿ ನಾವು, ಪ್ರಚೇತರ ಕಥೆಯನ್ನ ನೋಡೋಣ.
ವಿಜಿತಾಷ್ವನ ವಂಶದಲ್ಲಿ ಬರ್ಹಿಷತ ಎನ್ನುವ ಅತ್ಯಂತ ಶಕ್ತಿಶಾಲಿಯಾದ ರಾಜನು ಹುಟ್ಟಿದನು. ಅವನಿಗೆ, ಪ್ರಾಚೀನಬರ್ಹಿ ಎನ್ನುವ ಇನ್ನೊಂದು ಹೆಸರಿತ್ತು. ಶತದೃತಿ ಎಂಬ ಹೆಸರಿನ, ಸಾಗರ ರಾಜನ ಮಗಳನ್ನು ಮದುವೆಯಾಗುವಂತೆ, ಬ್ರಹ್ಮನು ಬಹಿರ್ಶತನಿಗೆ ಆದೇಶವನ್ನು ಮಾಡಿದನು. ಹಾಗೂ ರಾಜ ಕೂಡಾ ಅದಕ್ಕೆ ತಕ್ಷಣ ಒಪ್ಪಿಗೆಯನ್ನ ನೀಡಿದನು.
ಹೀಗೆ ವಿವಾಹವಾದ ಈ ಜೋಡಿಗೆ, ಆಶೀರ್ವಾದವನ್ನು ಮಾಡಲು, ದೇವಾದಿ ದೇವತೆಗಳು, ಯಕ್ಷರು, ಕಿನ್ನರರು, ಹಾಗೂ ಋಷಿಗಳು ಸೇರಿದರು. ಈಗ ಬ್ರಹ್ಮನು, ಬರೀ ಕಾಡುಗಳಿಂದಲೇ ತುಂಬಿ ಹೋಗಿದ್ದ ಭೂಮಿಯಲ್ಲಿ, ಮಾನವ ಸಂತತಿಯನ್ನು ಬೆಳೆಸುವ ಜವಾಬ್ದಾರಿಯನ್ನು, ರಾಜನಿಗೆ ನೀಡಿದನು.
ಕೆಲವು ವರುಷಗಳ ನಂತರ ರಾಜನು, ಶತದೃತಿಯಿಂದ ಹತ್ತು ಗಂಡು ಮಕ್ಕಳನ್ನು ಪಡೆದನು. ಅವರಿಗೆ ಒಟ್ಟಾಗಿ "ಪ್ರಚೇತರು" ಎಂದು ಕರೆಯಲಾಯಿತು. ಈ ಎಲ್ಲಾ ಪ್ರಚೇತರು, ಬಿಲ್ವಿದ್ಯೆಯಲ್ಲಿ ಪರಿಣತರಾಗಿದ್ದರು.
ಸಮಯವು ಉರುಳಿತ್ತು. ತನ್ನ ಮಕ್ಕಳಿಗೆ ವಿವಾಹವನ್ನು ಮಾಡಿ, ಬ್ರಹ್ಮನ ಜವಾಬ್ದಾರಿಯನ್ನು ಈಡೇರಿಸಬೇಕು ಎಂದಿದ್ದ ರಾಜನಿಗೆ, ಲೌಕಿಕ ಆಸೆಯನ್ನೇ ತ್ಯಜಿಸಿದ್ದ ತನ್ನ ಗಂಡು ಮಕ್ಕಳಿಂದ, ಆಘಾತವಾಗಿತ್ತು. ಅವರೆಲ್ಲರೂ ಮದುವೆಯ ಬದಲು, ಸಮುದ್ರಕ್ಕೆ ಹೋಗಿ ವಿಷ್ಣುವನ್ನು ಕುರಿತು, ತಪಸ್ಸು ಮಾಡುವುದಾಗಿ ತಿಳಿಸಿ, ಅಲ್ಲಿಂದ ತೆರಳಿದರು.
ಹೀಗೆ ಸಾಗಿದ ಪ್ರಚೇತರು, ಮಾರ್ಗದ ಮಧ್ಯದಲ್ಲಿ ಶಿವನನ್ನು ಭೇಟಿಯಾಗಿ, ತಮ್ಮ ಕೈಗಳನ್ನು ಮುಗಿದು, ಅವನಿಂದ ಮಾರ್ಗದರ್ಶನವನ್ನು ಪಡೆದರು. ಅಲ್ಲಿಂದ ಸಮುದ್ರಕ್ಕೆ ತೆರಳಿ, ಶಿವನು ನೀಡಿದ ಮಂತ್ರಗಳನ್ನು ಪಠಿಸುತ್ತಾ, ವಿಷ್ಣುವಿನ ಧ್ಯಾನವನ್ನು ಮಾಡಿದರು.
ಹೀಗೆ, ಹತ್ತು ಸಾವಿರ ವರ್ಷಗಳ ಕಠೋರವಾದ ತಪಸ್ಸಿನ ಕೊನೆಯಲ್ಲಿ, ವಿಷ್ಣುವು ಪ್ರತ್ಯಕ್ಷನಾಗಿ, ವರವನ್ನು ಕೇಳುವಂತೆ ಹೇಳಿದನು. ತಮಗೆ ಭೂಮಿಯಲ್ಲಿ ಮಾನವರ ಸಂತತಿಯನ್ನು ಹೆಚ್ಚಿಸಲು, ಸಹಾಯವನ್ನು ಮಾಡುವಂತೆ ಪ್ರಚೇತರು ಕೇಳಿಕೊಂಡರು. ಆಗ ವಿಷ್ಣುವು, "ನಿಮಗೆ ಬ್ರಹ್ಮನಿಗೆ ಸಮನಾದ ಒಬ್ಬ ಮಗನನ್ನು ನಾನು, ಕರುಣಿಸುತ್ತೇನೆ. ಆದರೆ, ನೀವು ನಾನು ಹೇಳಿದ ಹುಡುಗಿಯನ್ನ, ವಿವಾಹವಾಗಲು ಒಪ್ಪಬೇಕು. ಅವಳ ಹಿನ್ನೆಲೆಯ ಬಗ್ಗೆ ಒಂದು ಕತೆಯನ್ನು, ನಾನು ಈಗ ಹೇಳುತ್ತೇನೆ." ಎಂದು ಮುಂದುವರೆದನು.
ಒಮ್ಮೆ, ಕಂಡು ಎಂಬ ಋಷಿಯು, ಕಾಡಿನ ಮಧ್ಯೆ ಘೋರ ತಪಸ್ಸನ್ನು ಮಾಡುತಿದ್ದನು. ಅವನ ತಪಸ್ಸಿಗೆ ಹೆದರಿದ ಇಂದ್ರನು, ಕೂಡಲೇ ತಪ ಭಂಗ ಮಾಡಬೇಕೆಂದು, ತನ್ನ ದೇವಲೋಕದ ಅಪ್ಸರೆಯರಲ್ಲಿ ಒಬ್ಬಳಾದ, ಪ್ರಮಲೋಚಾ ಎಂಬಾಕೆಯನ್ನು, ಅವನ ಬಳಿಗೆ ಕಳುಹಿಸಿದನು.
ಭೂಮಿಗೆ ಬಂದ ಪ್ರಮಲೋಚ, ತನ್ನ ಹಾವ -ಭಾವ ನೃತ್ಯಗಳಿಂದ, ಕಂಡುವಿನ ತಪಸ್ಸನ್ನು ಕೆಡಿಸಿದಳು. ತಾನು ಋಷಿ ಎಂಬುದನ್ನೇ ಮರೆತ ಕಂಡುವು, ಅವಳನ್ನು ವಿವಾಹವಾಗಿ, ಮಂದಾರ ಪರ್ವತದ ಬಳಿಯ ಒಂದು ಕಣಿವೆಯಲ್ಲಿ, ಒಂದು ಗುಡಿಸಲಿನಲ್ಲಿ, ಅವಳೊಂದಿಗೆ ದಾಂಪತ್ಯ ಜೀವನವನ್ನು ನಡೆಸಿದನು.
"ತಾನು ಮರಳಿ ಸ್ವರ್ಗಕ್ಕೆ ಹೋಗಬೇಕು." ಎಂದು ಅವಳು ಎಷ್ಟು ಬಾರಿ ಕೇಳಿಕೊಂಡರೂ, ಕಂಡುವು ಅವಳನ್ನು ಬಿಡಲು ಮನಸ್ಸಿಲ್ಲದೆ "ಇನ್ನೂ ಸ್ವಲ್ಪ ಕಾಲ ಇಲ್ಲೇ ಇರು." ಎಂದು ಅವಳನ್ನು ತಡೆಯುತಿದ್ದ.
ಹೀಗೆ, 967 ವರ್ಷ, 6ತಿಂಗಳು, 3ದಿನಗಳು ಸರಿದವು. ಅಪ್ಸರೆ ಪ್ರಮಲೋಚಾ, ತನ್ನ ದೇಹದ ಬೆವರಿನಿಂದ ಮಗುವನ್ನು ಸೃಷ್ಟಿಸಿ, ನಂತರ ಕಂಡು ಋಷಿಯನ್ನು ತೊರೆದು, ಆ ಹೆಣ್ಣು ಮಗುವನ್ನು ಕಾಡಿನ ಮರಗಳ ನಡುವೆ ಇರಿಸಿ ಸ್ವರ್ಗಕ್ಕೆ ಹೋದಳು. ಲೌಕಿಕ ಜೀವನವನ್ನು ನಡೆಸಿ, ತನ್ನ ತಪಶಕ್ತಿಯನ್ನು ಕಳೆದುಕೊಂಡಿದ್ದ ಕಂಡು ಋಷಿಯು ಬೇಸರದಿಂದ ಪುನಃ ತಪಸ್ಸನ್ನು ಮಾಡಲು ಅರಣ್ಯದ ಕಡೆಗೆ ನಡೆದನು.
ಇತ್ತಕಡೆ, ಸಸ್ಯಗಳ ರಾಜನಾದ ಚಂದ್ರನು, ಕಾಡಿನಲ್ಲಿ ಜೋರಾಗಿ ಅಳುತ್ತಿದ್ದ ಆ ಮಗುವನ್ನು ಕಂಡು ತನ್ನ ಸ್ವಂತ ಮಗಳಂತೆ ಬೆಳೆಸಿದನು. ಅವಳಿಗೆ "ಮಾರೀಶ" ಎಂದು ಹೆಸರಿಟ್ಟನು. ಅವಳ ಮುಂದಿನ ಆರೈಕೆಯನ್ನು ಮಾಡುವಂತೆ ವೃಕ್ಷ ರಾಜನಿಗೆ ತಿಳಿಸಿದನು.
ಹೀಗೆ ಮಾರೀಶಳ ಕತೆಯನ್ನು ಹೇಳಿದ ವಿಷ್ಣುವು, "ನೀವು ಹತ್ತು ಜನರೂ ಈ ಕೂಡಲೇ ಕಾಡಿಗೆ ಹೋಗಿ, ಅರಣ್ಯ ರಾಜನ ಸಾಕು ಮಗಳಾದ ಮರೀಶಳನ್ನು ವಿವಾಹವಾಗಿ, ನಿಮ್ಮ ತಂದೆಯ ಇಚ್ಛೆಯನ್ನು ನಿಮಗೆ ಹುಟ್ಟುವ ಮಗನೇ ಈಡೆರಿಸುತ್ತಾನೆ." ಎಂದು ಅದೃಶ್ಯನಾದನು. ಆ ತಕ್ಷಣ ಹತ್ತು ಮಂದಿ ಪ್ರಚೆತರು, ತಾವು ತಪಸ್ಸು ಮಾಡುತ್ತಿದ್ದ ಸಮುದ್ರದಿಂದ ಮೇಲಕ್ಕೆ ಬಂದು, ದಟ್ಟ ಅಡವಿಯನ್ನು ಹೊಕ್ಕಿದರು.
ನಂತರ, ವೃಕ್ಷ ರಾಜನನ್ನು ಹೇಗೆ ಭೇಟಿ ಮಾಡುವುದು? ಎಂದು ತಿಳಿಯದೇ, ಕಾಡಿನ ಮರಗಳ ಬಳಿ ತಮ್ಮ ಮಗಳನ್ನು ಕೊಡುವಂತೆ ಕೇಳಿಕೊಳ್ಳುತ್ತಾರೆ. ಆದರೆ ಪ್ರಚೇತರಿಗೆ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಹೀಗೆ ಬಹಳ ಸಮಯವು ವ್ಯರ್ಥವಾಗಿ ಹೋಗುತ್ತದೆ. ತಮ್ಮ ಸಹನೆಯನ್ನು ಕಳೆದುಕೊಂಡ ಪ್ರಚೆತರು, ಈಗ ಕೋಪಗೊಂಡು, ತಮ್ಮ ಬಾಯಿಂದ ಬಿರುಗಾಳಿ ಮತ್ತು ಬೆಂಕಿಯನ್ನು ಉಗುಳಿ, ಅರ್ಧದಷ್ಟು ಕಾಡನ್ನು ಸುಟ್ಟು ಭಸ್ಮ ಮಾಡಿದರು.
ಹೀಗೆ, ಉಗ್ರ ಬೆಂಕಿಯ ಜ್ವಾಲೆಯಿಂದ ಸುಟ್ಟು ಕರಕಲಾಗುತಿದ್ದ ಕಾಡನ್ನು ಕಂಡು, ತಕ್ಷಣ ಪ್ರತ್ಯಕ್ಷನಾದ ಬ್ರಹ್ಮ, "ಭೂಮಿಯ ಉಳಿವಿಗೆ ಮರಗಳು ಅವಶ್ಯಕ. ಈ ವನ ದಹನ ಕಾರ್ಯವನ್ನು ಇಲ್ಲಿಗೆ ನಿಲ್ಲಿಸಿ." ಎಂದು ಆದೇಶಿಸಿ, ವೃಕ್ಷ ರಾಜನನ್ನು ತಕ್ಷಣ ಕರೆದು, ಅವನ ಸಾಕು ಮಗಳಾದ ಮಾರೀಶಳನ್ನು ಕೊಟ್ಟು, ವಿವಾಹ ಮಾಡಿಕೊಡಲು ಹೇಳುತ್ತಾನೆ.
ತನ್ನ ಹಿಂದಿನ ಜನ್ಮದಲ್ಲಿ, ಅತೀ ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡು, ನೊಂದು ಹೋಗಿದ್ದ ಮಾರಿಶ, ಮುಂದಿನ ಜನ್ಮದಲ್ಲಿ ದೀರ್ಘಾಯುಷಿ ಪತಿಯು ಬೇಕೆಂದು ತಪಸ್ಸನ್ನು ಮಾಡಿ, ವಿಷ್ಣುವಿನ ವರವನ್ನು ಪಡೆದಿರುತ್ತಾಳೆ. "ನಿನಗೆ ಹತ್ತು ಜನ ಪತಿಯರು, ಮತ್ತು ಒಬ್ಬ ಬ್ರಹ್ಮನಿಗೆ ಸಮಾನವಾದ ಮಗ ಹುಟ್ಟುತ್ತಾನೆ." ಎಂದು ವರವನ್ನು ನೀಡಿದ್ದ ಮಹಾವಿಷ್ಣು, ಈ ರೀತಿ ತನ್ನ ಭಕ್ತೆಯ ಆಸೆಯನ್ನು ಈಡೆರಿಸುತ್ತಾನೆ. ಹೀಗೆ ಮಾರೀಶ, ಹತ್ತು ಜನ ಪ್ರಚೆತರ, ಪತ್ನಿ ಆಗುತ್ತಾಳೆ.
ದಕ್ಷನು ಅವಳ ಗರ್ಭದಲ್ಲಿ, ಮಗನಾಗಿ ಜನಿಸುತ್ತಾನೆ. ಶಿವನಿಗೆ ಈ ಹಿಂದೆ ಮಾಡಿದ್ದ, ಅವಮಾನದ ಫಲವಾಗಿ ಅವನು, ತನ್ನ ಹಳೆಯ ದೇಹವನ್ನು ತ್ಯಜಿಸಬೇಕಾಗಿತ್ತು. ಹೀಗೆ, ಮತ್ತೊಮ್ಮೆ ಅವನು, ಪ್ರಜಾಪತಿಯಾಗುತ್ತಾನೆ.
ಯೂಟ್ಯೂಬ್ ನಲ್ಲಿ ಈ ಕಥೆಯನ್ನು ಆಲಿಸಿ:
Comments
Post a Comment